ಮಳೆ ಬರುವಾಗ ಅಪಾಯ ತಂದೊಡ್ಡುವ ಬೆಂಗಳೂರು ಅಂಡರ್‌ಪಾಸ್‌ಗಳು; ಈ 5 ಅಪಾಯಕಾರಿ ಕೆಳಸೇತುವೆಗಳತ್ತ ಹೋಗಲೇ ಬೇಡಿ
ಬೆಂಗಳೂರಲ್ಲಿ ಮಳೆ ನಿಂತಿಲ್ಲ. ಸಂಚಾರ ದಟ್ಟಣೆಯೂ ಕಡಿಮೆಯಾಗಿಲ್ಲ. ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸುಗಮ ಸಂಚಾರಕ್ಕೆ ಸಂಕಷ್ಟ ಉಂಟಾಗಿರುವ ಘಟನೆ ವರದಿಯಾಗಿದೆ. ಮಳೆ ಬರುವಾಗ ಅಪಾಯ ತಂದೊಡ್ಡುವ ಬೆಂಗಳೂರು ಅಂಡರ್‌ಪಾಸ್‌ಗಳು ಕೆಲವು ಇವೆ. ಈ ಪೈಕಿ 5 ಅಪಾಯಕಾರಿ ಕೆಳಸೇತುವೆಗಳ ವಿವರ ಇಲ್ಲಿದೆ.
ಬೆಂಗಳೂರು: ಸಣ್ಣ ಪುಟ್ಟ ಮಳೆಗೆ ಬೆಂಗಳೂರಿಗರು ಹೆದರಲ್ಲ. ಆದರೆ, ಧಾರಾಕಾರ ಮಳೆ ಸುರಿಯತೊಡಗಿದರೆ ಎಲ್ಲರಿಗೂ ಭಯ. ಕಚೇರಿ, ಮಾರುಕಟ್ಟೆ, ಶಾಲೆ, ಕಾಲೇಜುಗಳಿಗೆ ಹೊರಟವರು ವಾಪಸ್ ಸರಿಯಾದ ಸಮಯಕ್ಕೆ ಮನೆ ತಲುಪುತ್ತೇವೋ ಇಲ್ಲವೋ ಎಂಬ ಆತಂಕ. ಕಾರಣ ಇಷ್ಟೆ ಮೂಲ ಸೌಕರ್ಯಗಳ ಕೊರತೆ ಕಾರಣ ನೀರು ರಸ್ತೆ ಮೇಲೆ ಹರಿಯುತ್ತಿರುತ್ತದೆ. ವಾಹನ ಸಂಚಾರ ನಿಧಾನಗತಿಯಲ್ಲಿರುತ್ತವೆ. ಈಗ ಮತ್ತೆ ಅಂಥದ್ದೇ ಸನ್ನಿವೇಶ. ಕಳೆದ ಎರಡು ದಿನಗಳಿಂದ ಬೆಂಗಳೂರಿನಲ್ಲಿ ಮಳೆಯಾಗುತ್ತಿದೆ. ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ ಇನ್ನೂ ಎರಡು ದಿನ ಮಳೆ ಇರಲಿದೆ. ಈಗಾಗಲೇ ಬೆಂಗಳೂರು ನಗರದಲ್ಲಿ ಸುರಿದ ಮಳೆಯಿಂದಾಗಿ ವಿವಿಧ ರಸ್ತೆಗಳು ನೀರಿನಿಂದ ತುಂಬಿ ಹೋಗಿವೆ. ಮುಂದಿನ ಕೆಲವು ದಿನಗಳು ಮಳೆ ಮುಂದುವರಿಯುವ ಸಾಧ್ಯತೆಯಿರುವುದರಿಂದ, ನೀರು ತುಂಬಿರುವ ಅಂಡರ್‌ಪಾಸ್‌ಗಳು ಜೀವಕ್ಕೆ ಅಪಾಯವನ್ನುಂಟುಮಾಡುವ ಸಾಧ್ಯತೆ ಇದೆ. ಇದನ್ನು ಮನಗಂಡಿರುವ ಬೆಂಗಳೂರು ಸಂಚಾರ ಪೊಲೀಸರು ಅಂಡರ್‌ಪಾಸ್ (ಕೆಳಸೇತುವೆ) ಬಳಸದಂತೆ ವಾಹನ ಸವಾರರಿಗೆ ಮನವಿ ಮಾಡುತ್ತಿದ್ದಾರೆ.
ಮಳೆ ಬರುವಾಗ ಬೆಂಗಳೂರು ಅಂಡರ್‌ಪಾಸ್ ಸಂಚಾರ ಅಪಾಯಕಾರಿ; ಈ 5ರಲ್ಲಿ ಹೋಗಲೇ ಬೇಡಿ
ಮಳೆ ಬರುವಾಗ ಬೆಂಗಳೂರು ಸಂಚಾರ ಸಂಕಷ್ಟ ಸಾಮಾನ್ಯ. ವಿಶೇಷವಾಗಿ ರಸ್ತೆಗಳಲ್ಲಿ, ಅಂಡರ್‌ಪಾಸ್‌ಗಳಲ್ಲಿ ನೀರು ನಿಂತು ಸಂಚಾರ ನಿಧಾನಗತಿಗೆ ತಿರುವುದು ವಾಡಿಕೆ. ಈ ಪೈಕಿ ಅತ್ಯಂತ ಅಪಾಯಕಾರಿಯಾಗಿರುವ 5 ಅಂಡರ್‌ಪಾಸ್‌ಗಳ ವಿವರ ಇಲ್ಲಿದೆ.
1) ಪಣತ್ತೂರು ಅಂಡರ್‌ಪಾಸ್: ಪೂರ್ವ ಬೆಂಗಳೂರಿನಲ್ಲಿರುವ ಪಣತ್ತೂರು ಅಂಡರ್‌ಪಾಸ್, ಮಳೆ ಬರುವಾಗ ವಾಹನ ಸವಾರರ ಪಾಲಿಗೆ ದೊಡ್ಡ ಸಂಕಷ್ಟ ಒಡ್ಡುವ ಕೆಳಸೇತುವೆ. ಸಣ್ಣ ಮಳೆ ಬಂದರೂ ಸಾಕು. ಇಲ್ಲಿ ಸಂಚಾರ ಕಷ್ಟಸಾಧ್ಯ. ಕೆಳಸೇತುವೆಯಲ್ಲಿ ನೀರು ತುಂಬಿ ವಾಹನ ಸಂಚಾರ ಸಾಧ್ಯವಾಗದ ಪರಿಸ್ಥಿತಿ ತಲುಪುತ್ತದೆ. ವಿಶೇಷ ಎಂದರೆ ಈ ಅಂಡರ್‌ಪಾಸ್ ಹೊರ ವರ್ತುಲ ರಸ್ತೆಯ ಪ್ರಮುಖ ಐಟಿ ಪಾರ್ಕ್‌ಗಳಿಗೆ ಸಂಪರ್ಕ ಕಲ್ಪಿಸುವ ಮುಖ್ಯ ರಸ್ತೆಯಲ್ಲೇ ಇದೆ. ವೈಟ್‌ಫೀಲ್ಡ್ ಪ್ರದೇಶದಿಂದ ಬೆಳ್ಳಂದೂರು ಮತ್ತು ಮಾರತ್ತಹಳ್ಳಿ ಭಾಗಕ್ಕೆ ಹತ್ತಿರದ ದಾರಿ ಇದುವೆ.
ನಿನ್ನೆ (ಅಕ್ಟೋಬರ್ 15) ಮಳೆಗೆ ಪಣತ್ತೂರು ಅಂಡರ್‌ಪಾಸ್‌ನ ಸ್ಥಿತಿ ಹೀಗಿತ್ತು ನೋಡಿ
2) ಮಡಿವಾಳ ಅಯ್ಯಪ್ಪ ಅಂಡರ್‌ಪಾಸ್: ಮಳೆ ಬಂದಾಗ ಬೆಂಗಳೂರಿನ ಮಡಿವಾಳ ಅಯ್ಯಪ್ಪ ಅಂಡರ್‌ಪಾಸ್ ಕೂಡ ನೀರು ತುಂಬಿಕೊಂಡು ಕೊಳದಂತಾಗಿಬಿಡುತ್ತದೆ. ಇಲ್ಲಿ ಭಾರಿ ಗಾತ್ರದ ವಾಹನ ಸಂಚಾರ ಸಾಮಾನ್ಯ. ಈ ಭಾಗದಲ್ಲಿ ನಿರಂತರ ಕಟ್ಟಡ ನಿರ್ಮಾಣ, ವಿವಿಧ ಕೈಗಾರಿಕಾ ಸಂಸ್ಥೆಗಳೂ ಇವೆ. ಹೀಗಾಗಿ ಹೊಸೂರು ರಸ್ತೆಯ ಈ ಭಾಗದಲ್ಲಿ ಸಂಚಾರ ದಟ್ಟಣೆ ಸಾಮಾನ್ಯ. ಹೀಗಾಗಿ ಅಂಡರ್ ಪಾಸ್ ಬಳಸದಂತೆ ಸಂಚಾರ ಪೊಲೀಸರು ಸಲಹೆ ನೀಡಿದ್ಧಾರೆ.
3) ದೇವಿನಗರ ರೈಲ್ವೆ ಬ್ರಿಜ್ ಅಂಡರ್‌ಪಾಸ್: ಉತ್ತರ ಬೆಂಗಳೂರಿನ ಅಪಾಯಕಾರಿ ಅಂಡರ್‌ಪಾಸ್ ಇದು. ಇಲ್ಲಿ ಕೂಡ ಮಳೆ ಬಂದರೆ ಇದು ಜಲಾವೃತವಾಗುತ್ತದೆ. ಹೀಗಾಗಿ ಸಂಚಾರ ಪೊಲೀಸರು ಈ ಅಂಡರ್‌ಪಾಸ್‌ನಲ್ಲಿ ಸಂಚರಿಸದಂತೆ ಸಲಹೆ ನೀಡುತ್ತಾರೆ. ಸದ್ಯ ಮಳೆ ಇರುವ ಕಾರಣ ಬುಧವಾರ ಅಂಡರ್‌ಪಾಸ್ ಬಳಿ ನಿಧಾನಗತಿಯ ಸಂಚಾರ ಇರುವುದಾಗಿ ಪೊಲೀಸರು ಎಚ್ಚರಿಸಿದ್ದಾರೆ.
4) ಕೆಆರ್ ಸರ್ಕಲ್ ಅಂಡರ್‌ಪಾಸ್: ಇದು ಪ್ರಾಣ ತೆಗೆದ ಕುಖ್ಯಾತಿ ಇರುವ ಅಂಡರ್‌ಪಾಸ್. 2023ರ ಮಳೆಗೆ 23 ವರ್ಷದ ಯುವತಿಯೊಬ್ಬರು ಕಾರಿನಲ್ಲಿ ಮುಳುಗಿ ಮೃತಪಟ್ಟಿದ್ದರು. ಕಳೆದ ವರ್ಷ ಮೇ ತಿಂಗಳಲ್ಲಿ ಈ ದುರಂತ ಸಂಭವಿಸಿತ್ತು. ಈ ಘಟನೆಯ ಬಳಿಕ ಮಳೆ ಬಂದಾಗೆಲ್ಲ ಬಿಬಿಎಂಪಿ ಸಿಬ್ಬಂದಿ, ಕೆಆರ್ ಸರ್ಕಲ್ ಅಂಡರ್‌ಪಾಸ್ ಅನ್ನು ಮುಚ್ಚುತ್ತಿದ್ದಾರೆ.
5) ಹೆಣ್ಣೂರು ಅಂಡರ್‌ಪಾಸ್: ಬೆಂಗಳೂರು ವಿಮಾನ ನಿಲ್ಧಾಣಕ್ಕೆ ಪ್ರಯಾಣಿಸುವವರಿಗೆ ಸಿಗುವ ಉತ್ತರ ಬೆಂಗಳೂರಿನ ಕೆಳಸೇತುವೆ ಇದು. ಹೆಣ್ಣೂರು ಅಂಡರ್‌ಪಾಸ್ ಮಳೆ ಬಂದರೆ ನೀರು ತುಂಬಿ ಸಂಚಾರಕ್ಕೆ ಅಡ್ಡಿ ಉಂಟುಮಾಡುತ್ತದೆ. ಮಾನ್ಯತಾ ಟೆಕ್ ಪಾರ್ಕ್ ಜನರಿಗೆ ಸಂಚಾರಕ್ಕೆ ದೊಡ್ಡ ಅಡ್ಡಿ ಇಲ್ಲಿಂದಲೇ ಶುರುವಾಗುತ್ತದೆ.
ನಿನ್ನೆ ಮಳೆಗೆ ಹೆಣ್ಣೂರು ರೈಲ್ವೆ ಅಂಡರ್ ಪಾಸ್ ಹೀಗಿತ್ತು ಎಂದು ಸಿಟಿಜೆನ್ಸ್ ಮೂವ್‌ಮೆಂಟ್ ಈಸ್ಟ್ ಬೆಂಗಳೂರು ಟ್ವೀಟ್ ಮಾಡಿದೆ.