ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು; ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಡಿಸಿಎಂ ಶಿವಕುಮಾರ್‌ ನಿರ್ಧಾರ; ಸಹೋದರ ಸುರೇಶ್‌ ಗೆ ಕನಕಪುರ ತ್ಯಾಗ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು; ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಡಿಸಿಎಂ ಶಿವಕುಮಾರ್‌ ನಿರ್ಧಾರ; ಸಹೋದರ ಸುರೇಶ್‌ ಗೆ ಕನಕಪುರ ತ್ಯಾಗ

ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು; ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಡಿಸಿಎಂ ಶಿವಕುಮಾರ್‌ ನಿರ್ಧಾರ; ಸಹೋದರ ಸುರೇಶ್‌ ಗೆ ಕನಕಪುರ ತ್ಯಾಗ

ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು ತೀರಿಸಲು ಮುಂದಾಗಿರುವ ಡಿಸಿಎಂ ಶಿವಕುಮಾರ್‌ ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ನಿರ್ಧಾರ ಮಾಡಿದಂತೆ ಇದೆ. ಸಹೋದರ ಸುರೇಶ್‌ಗಾಗಿ ಕನಕಪುರ ತ್ಯಾಗ ಮಾಡಿ, ಒಂದೇ ಕಲ್ಲಿನಲ್ಲಿ ಎರಡು ಹಕ್ಕಿ ಹೊಡೆಯುವ ನಿರ್ಧಾರ ಬಂದಿರುವಂತೆ ಇದೆ. (ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು; ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಡಿಸಿಎಂ ಶಿವಕುಮಾರ್‌ ನಿರ್ಧಾರ; ಸಹೋದರ ಸುರೇಶ್‌ ಗೆ ಕನಕಪುರ ತ್ಯಾಗ ಸಾಧ್ಯತೆ.
ಬೆಂಗಳೂರು ಗ್ರಾಮಾಂತರ ಸೋಲಿನ ಸೇಡು; ಚನ್ನಪಟ್ಟಣ ಕ್ಷೇತ್ರದಲ್ಲಿ ಸ್ಪರ್ಧೆಗೆ ಡಿಸಿಎಂ ಶಿವಕುಮಾರ್‌ ನಿರ್ಧಾರ; ಸಹೋದರ ಸುರೇಶ್‌ ಗೆ ಕನಕಪುರ ತ್ಯಾಗ ಸಾಧ್ಯತೆ.

ಬೆಂಗಳೂರು: ಇತ್ತೀಚೆಗೆ ಮುಗಿದ ಲೋಕಸಭಾ ಚುನಾವಣೆಯಲ್ಲ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಹೋದರ ಡಿ.ಕೆ. ಸುರೇಶ್‌ ಸೋಲಿನ ಆಘಾತದಿಂದ ಕಂಗೆಟ್ಟಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ತಮ್ಮ ಸಹೋದರನಿಗೆ ನೆಲೆಯನ್ನು ಕಲ್ಪಿಸಲು ಸೂತ್ರವೊಂದನ್ನು ಹೆಣೆದಿದ್ದಾರೆ. ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಗೆದ್ದು ಸಚಿವರಾಗಿರುವ ಎಚ್.ಡಿ.ಕುಮಾರಸ್ವಾಮಿ ಅವರ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ತಾನು ಸ್ಪರ್ಧಿಸಿ ಕನಕಪುರ ಕ್ಷೇತ್ರವನ್ನು ತಮ್ಮನಿಗೆ ಧಾರೆಯೆರೆದು ನೆಲೆ ಕಲ್ಪಿಸುವುದು ಶಿವಕುಮಾರ್‌ ಅವರ ಯೋಜನೆ. ಇತ್ತೀಚಿನ ಅವರ ಹೇಳಿಕೆಗಳು, ಚನ್ನಪಟ್ಟಣದಲ್ಲಿ ಬಿರುಸುಗೊಂಡಿರುವ ಸಂಚಾರ ಈ ಸುದ್ದಿಗೆ ಇಂಬು ನೀಡುತ್ತಿವೆ.

ಮತದಾರ,ರು ಬಯಸಿದರೆ ಪಕ್ಷ ತೀರ್ಮಾನಿಸಿದರೆ ಸ್ಪರ್ಧಿಸದೆ ನನಗೆ ಅನ್ಯ ದಾರಿಯೇ ಇಲ್ಲ ಎಂದು ಹೇಳುವ ಮೂಲಕ ಚನ್ನಪಟ್ಟಣ ಕ್ಷೇತ್ರದ ಉಪಚುನಾವಣೆಯಲ್ಲಿ ಕಣಕ್ಕಿಳಿಯುವ ಮುನ್ಸೂಚನೆ ನೀಡಿದ್ದಾರೆ.

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಮಾಜಿ ಪ್ರಧಾನಿ ದೇವೇಗೌಡರ ಅಳಿಯ ಖ್ಯಾತ ಹೃದ್ರೋಗ ತಜ್ಞ ಡಾ.ಸಿ.ಎನ್.ಮಂಜುನಾಥ್‌ ತಮ್ಮ ಚೊಚ್ಚಲ ಪ್ರಯತ್ನದಲ್ಲೇ ಸುರೇಶ್‌ ಅವರ ನಾಲ್ಕನೇ ಗೆಲುವುಗೆ ತಡೆಯೊಡ್ಡಿ 2.69 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

ರಾಜ್ಯದಲ್ಲಿ ತಮ್ಮದೇ ಸರಕಾರವಿದ್ದರೂ, ಒಕ್ಕಲಿಗ ಮುಖಂಡರಾಗಿದ್ದರೂ, ಬೆಂಗಳೂರು ಮತ್ತು ಗ್ರಾಮಾಂತರ ಜಿಲ್ಲೆಯ ಮೇಲೆ ಹಿಡಿತವಿದ್ದರೂ ಗೆಲುವು ಮರೀಚಿಕೆಯಾಗಿ, ತಮ್ಮ ರಾಜಕೀಯ ವೈರಿ ದೇವೇಗೌಡ ಅವರ ಕುಟುಂಬ ಮೇಲುಗೈ ಸಾಧಿಸಿರುವುದು ಅರಗಿಸಿಕೊಳ್ಳಲಾಗದ ಡಿಕೆಶಿ ಅವರಿಗೆ ನುಂಗಲಾರದ ತುತ್ತಾಗಿದೆ.

ಚನ್ನಪಟ್ಟಣದಲ್ಲಿ ಗೆಲುವು ಸಾಧಿಸಿ ಕ್ಷೇತ್ರವನ್ನು ತಮ್ಮ ವಶ ಮಾಡಿಕೊಳ್ಳುವುದು ಮತ್ತು ಜಿಲ್ಲೆಯಲ್ಲಿ ಹಿಡಿತ ಸಾಧಿಸಿ ಸೋಲಿನ ಸೇಡು ತೀರಿಸಿಕೊಳ್ಳುವುದು ಮೊದಲನೆಯ ಗುರಿಯಾದರೆ ಇಡೀ ಜಿಲ್ಲೆಯಲ್ಲಿ ಜೆಡಿಎಸ್‌ ಪಕ್ಷವನ್ನೇ ಇಲ್ಲವಾಗಿಸುವುದು ಮತ್ತೊಂದು ಗುರಿ. ಈ ಎರಡೂ ಗುರಿಗಳನ್ನು ಒಂದೇ ಕಲ್ಲಿನಿಂದ ಹೊಡೆಯುವುದು ಶಿವಕುಮಾರ್‌ ರಣತಂತ್ರ ಎಂದು ಅವರ ಆಪ್ತರು ಹೇಳುತ್ತಾರೆ.

ಶಿವಕುಮಾರ್‌ ಅವರ ಸ್ಪರ್ಧೆ ಏಕೆ?

ಸುರೇಶ್‌ ಅವರೇ ಸ್ಪರ್ಧೆ ಮಾಡಬಹುದುಲ್ಲವೇ ಎಂಬ ಪ್ರಶ್ನೆ ಮೂಡಬಹುದು. ಆದರೆ ಚನ್ನಪಟ್ಟಣದಲ್ಲಿ ಜೆಡಿಎಸ್‌ ನಿಂದ ನಿಖಿಲ್‌ ಕುಮಾರಸ್ವಾಮಿ ಕಣಕ್ಕಿಳಿಯುವುದು ಬಹುತೇಕ ಖಚಿತವಾಗಿದೆ. ಅವರ ವಿರುದ್ಧ ಸುರೇಶ್‌ ಹಾದಿ ಸುಗಮವಲ್ಲ ಎನ್ನುವುದು ಶಿವಕುಮಾರ್‌ ಅವರ ಭಾವನೆ. ಹಾಗಾಗಿ ತಾನೇ ಸ್ಪರ್ಧಿಸಿದರೆ ಗೆಲುವು ಸುಲಭ ಎನ್ನುವುದು ಡಿಕೆಶಿ ಅವರ ಚಿಂತನೆ.

ಭವಿಷ್ಯದಲ್ಲಿ ಉಪ ಮುಖ್ಯಮಂತ್ರಿಯಾಗುತ್ತಾರೆ ಎಂಬ ನಿರೀಕ್ಷೆಯಲ್ಲಿ ಒಕ್ಕಲಿಗ ಮತಗಳು, ಹಿಂದುಳಿದ ಮತ್ತು ಅಲ್ಪಸಂಖ್ಯಾತ ಮತಗಳು ಕೈ ಹಿಡಿಯುತ್ತವೆ ಎನ್ನುವುದು ಸಹೋದರರ ಆಪೇಕ್ಷೆಯಾಗಿದೆ. ಆ ನಿಟ್ಟಿನಲ್ಲಿ ಕ್ಷೇತ್ರ ಪ್ರದಕ್ಷಿಣೆ ಹಮ್ಮಿಕೊಳ್ಳುವ ಮೂಲಕ ಮತದಾರರರ ನಾಡಿಮಿಡಿತವನ್ನು ಒರೆಗೆ ಹಚ್ಚಿದ್ದಾರೆ. ಚನ್ನಪಟ್ಟಣದಲ್ಲಿ ತಾನು ಗೆದ್ದರೆ ಕನಕಪುರದಲ್ಲಿ ಸುರೇಶ್‌ ನಿರಾಯಾಸವಾಗಿ ಗೆಲ್ಲಬಹುದು ಎನ್ನುವುದು ಇವರ ಲೆಕ್ಕಾಚಾರ.

ಚನ್ನಪಟ್ಟಣದಲ್ಲಿ ಹಿಡಿತ ಹೊಂದಿರುವ ಸಹೋದರರು

ಚನ್ನಪಟ್ಟಣದ ಮೇಲೆ ಡಿ.ಕೆ. ಸಹೋದರರ ಕುಟುಂಬಕ್ಕೆ ಪ್ರಬಲವಾದ ಹಿಡಿತವಿದೆ. ಲೋಕಸಭಾ ಚುನಾವನೆಯಲ್ಲಿ ಸೋತ ಮಾತ್ರಕ್ಕೆ ಅಲ್ಲಿ ರಾಜಕೀಯ ಭವಿಷ್ಯ ಮುಗಿದೇ ಹೋಗಿದೆ ಎಂದು ಭಾವಿಸಬೇಕಿಲ್ಲ. ಒಂದು ವರ್ಷದ ಹಿಂದೆ ನಡೆದ ವಿಧಾನಸಭಾ ಚುನಾವಣೆಯಲ್ಲಿ ಚನ್ನಪಟ್ಟಣದಲ್ಲಿ ಕುಮಾರಸ್ವಾಮಿ 15,915 ಮತಗಳ ಅಂತರದಿಂದ ಗೆದ್ದಿದ್ದರು. ಅವರು 96,915, ಬಿಜೆಪಿ ಅಭ್ಯರ್ಥಿ ಸಿಪಿ.ಯೋಗೇಶ್ವರ್‌ 80,677 ಮತ್ತು ಕಾಂಗ್ರೆಸ್‌ ಅಭ್ಯರ್ಥಿ ಗಂಗಾಧರ್‌ ಕೇವಲ 15,374 ಮತಗಳನ್ನು ಮಾತ್ರ ಪಡೆದಿದ್ದರು.

ನಂತರ ನಡೆದ ಲೋಕಸಭಾ ಚುನಾವಣೆಯಲ್ಲಿ ಸುರೇಶ್‌ 85,357 ಮತಗಳನ್ನು ಪಡೆದಿದ್ದರೆ ಬಿಜೆಪಿ ಜೆಡಿಎಸ್‌ ಮೈತ್ರಿ ಸಾಧಿಸಿಯೂ ಮಂಜುನಾಥ್‌ 1,06,971 ಮತಗಳನ್ನು ಮಾತ್ರ ಪಡೆದು 21,614 ಮತಗಳ ಮುನ್ನೆಡೆ ಸಾಧಿಸಿದ್ದರು. 69,000 ಮತಗಳ ವೃದ್ಧಿಯಾಗಿದ್ದು ಗೆಲುವು ಸುಲಭ ಎನ್ನುವುದು ಇವರ ಲೆಕ್ಕಾಚಾರ.

ಎರಡನೆಯದಾಗಿ ಚನ್ನಪಟ್ಟಣ ಕ್ಷೇತ್ರದ ವ್ಯಾಪ್ತಿಯ ವಿರುಪಾಕ್ಷಿಪುರ ಹೋಬಳಿ ಸೇರಿದಂತೆ ಅನೇಕ ಗ್ರಾಮಗಳು ಈ ಹಿಂದೆ ಶಿವಕುಂಆರ್‌ ಸ್ಪರ್ಧಿಸುತ್ತಿದ್ದ ಸಾತನೂರು ಕ್ಷೇತ್ರಕ್ಕೆ ಸೇರಿದ್ದವು. ಈಗಲೂ ಅವರ ಹಿಡಿತ ಈ ಹೋಬಳಿ ಮೇಲಿದೆ. ಜೊತೆಗೆ ಡಿಕೆ ಸೋದರರ ತಂಗಿಯನ್ನು ಚನ್ನಪಟ್ಟಣಕ್ಕೆ ವಿವಾಹ ಮಾಡಿಕೊಟ್ಟಿದ್ದು ಬಂಧು ಬಳಗದವರ ಸಂಖ್ಯೆ ಹೆಚ್ಚು. ಯಾವುದೇ ಕೋನದಿಂದ ನೋಡಿದರೂ ಚನ್ನಪಟ್ಟಣದಲ್ಲಿ ಕಪ್‌ ನಮ್ಮದೇ ಎನ್ನುವುದು ಶಿವಕುಮಾರ್‌ ಲೆಕ್ಕಾಚಾರ.

(ರಾಜಕೀಯ ವಿಶ್ಲೇಷಣೆ- ಎಚ್.ಮಾರುತಿ, ಬೆಂಗಳೂರು)

Whats_app_banner