ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ; ಇಬ್ಬರ ಬಂಧನ, ಮತ್ತೊಬ್ಬರಿಗಾಗಿ ಶೋಧ
ಕನ್ನಡ ಸುದ್ದಿ  /  ಕರ್ನಾಟಕ  /  ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ; ಇಬ್ಬರ ಬಂಧನ, ಮತ್ತೊಬ್ಬರಿಗಾಗಿ ಶೋಧ

ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ; ಇಬ್ಬರ ಬಂಧನ, ಮತ್ತೊಬ್ಬರಿಗಾಗಿ ಶೋಧ

ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಡಾಬಸ್‌ ಪೇಟೆ ಸಮೀಪದ ಸೋಂಪುರ ಕೈಗಾರಿಕಾ ಪ್ರದೇಶದ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣ. ಈ ದುರಂತಕ್ಕೆ ಸಂಬಂಧಿಸಿ ಇಬ್ಬರ ಬಂಧನವಾಗಿದೆ. ಮತ್ತೊಬ್ಬರಿಗಾಗಿ ಪೊಲೀಸರು ಶೋಧ ಮುಂದುವರಿಸಿದ್ದಾರೆ.

ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ)
ಬೆಂಗಳೂರು ಆಶಾ ಸ್ವೀಟ್‌ ಸೆಂಟರ್‌ನ ಫ್ಯಾಕ್ಟರಿಯಲ್ಲಿ ಕಾರ್ಮಿಕರಿಬ್ಬರ ದುರ್ಮರಣವಾಗಿದೆ. (ಸಾಂಕೇತಿಕ ಚಿತ್ರ) (HT News)

ಬೆಂಗಳೂರು: ಯುವ ಕಾರ್ಮಿಕರಿಬ್ಬರ ದುರ್ಮರಣದ ಕಾರಣ ಬೆಂಗಳೂರು ಆಶಾ ಸ್ವೀಟ್ ಸೆಂಟರ್‌ ವಿರುದ್ಧ ತೀವ್ರ ಆಕ್ರೋಶ, ಅಸಮಾಧಾನ ವ್ಯಕ್ತವಾಗಿದೆ. ಬೆಂಗಳೂರಿನ ಪ್ರಸಿದ್ಧ ಸಿಹಿ ತಿಂಡಿ ತಯಾರಕ ಕಂಪನಿಯಾಗಿರುವ ಆಶಾ ಸ್ವೀಟ್ ಸೆಂಟರ್‌ ನಗರದಾದ್ಯಂತ ಒಟ್ಟು 18 ಮಳಿಗೆಗಳನ್ನು ಹೊಂದಿದೆ. ಈ ಸ್ವೀಟ್‌ ಸೆಂಟರ್‌ಗೆ ಸಿಹಿ ತಿಂಡಿ ಪೂರೈಸುವ ದಾಬಸ್‌ಪೇಟೆಯ ಸೋಮ್‌ಪುರ ಇಂಡಸ್ಟ್ರಿಯಲ್ ಏರಿಯಾದ ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ಇಬ್ಬರು ಕಾರ್ಮಿಕರು ಇತ್ತೀಚೆಗೆ ದುರ್ಮರಣಕ್ಕೀಡಾಗಿದ್ದರು. ಈ ದುರಂತದ ಬಳಿಕ ಸ್ವೀಟ್ ಸೆಂಟರ್ ವಿರುದ್ಧ ಗಂಭೀರ ಆರೋಪಗಳು ವ್ಯಕ್ತವಾಗಿದೆ. ಈ ದುರಂತಕ್ಕೆ ಸಂಬಂಧಿಸಿ ಸ್ವೀಟ್ ಸೆಂಡರ್ ಮಾಲೀಕರ ವಿರುದ್ಧ ಕೇಸ್ ದಾಖಲಾಗಿದ್ದು, ಇಬ್ಬರನ್ನು ಬಂಧಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.

ಸೋಂಪುರ ಕೈಗಾರಿಕಾ ಪ್ರದೇಶದಲ್ಲಿ ಗುರುವಾರ ಸಂಜೆ ನಡೆದ ದುರಂತ

ಡಾಬಸ್‌ಪೇಟೆ ಸಮೀಪದ ಸೋಂಪುರ ಕೈಗಾರಿಕಾ ಪ್ರದೇಶದಲ್ಲಿರುವ ಆಶಾ ಸ್ವೀಟ್ ಸೆಂಟರ್‌ನ ಕಾರ್ಖಾನೆ ಘಟಕದಲ್ಲಿ ಗುರುವಾರ ಸಂಜೆ ಈ ದುರಂತ ಸಂಭವಿಸಿದೆ. ತುಮಕೂರು ಭಾಗದ ಲಿಂಗರಾಜು ಮತ್ತು ಅನಂತಪುರದ ನವೀನ್‌ ಎಂಬುವವರು ಮೃತ ಕಾರ್ಮಿಕರು. ಇಬ್ಬರೂ 26 ವರ್ಷದವರು ಎಂದು ವರದಿ ಹೇಳಿದೆ.

ದುರಂತದ ಹಿನ್ನೆಲೆಯಲ್ಲಿ, ಬೆಂಗಳೂರು ಪೊಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಸೈಟ್ ಉಸ್ತುವಾರಿ ಸಂತೋಷ್ ಮತ್ತು ಕಾರ್ಖಾನೆಯ ಒಳಚರಂಡಿ ಸಂಸ್ಕರಣಾ ಘಟಕದ (ಎಸ್‌ಟಿಪಿ) ಜವಾಬ್ದಾರಿ ಹೊತ್ತಿದ್ದ ಉಪಗುತ್ತಿಗೆದಾರ ಜೆಆರ್‌ಆರ್ ಆಕ್ವಾ ಪ್ರೈವೇಟ್ ಲಿಮಿಟೆಡ್ ಮಾಲೀಕ ರಮೇಶ್ ಬಂಧಿತು. ಪ್ರಥಮ ಮಾಹಿತಿ ವರದಿಯಲ್ಲಿ (ಎಫ್‌ಐಆರ್‌) ಎರಡನೇ ಆರೋಪಿ ಎಂದು ಹೆಸರಿಸಲಾಗಿರುವ ಆಶಾ ಸ್ವೀಟ್‌ ಸೆಂಟರ್‌ನ ಮಾಲೀಕ ಮಯೂರ್‌ಗಾಗಿಯೂ ಅಧಿಕಾರಿಗಳು ಹುಡುಕಾಟ ನಡೆಸುತ್ತಿದ್ದಾರೆ ಎಂದು ವರದಿ ತಿಳಿಸಿದೆ.

ಭಾರತೀಯ ನ್ಯಾಯ ಸಂಹಿತಾ (ಬಿಎನ್‌ಎಸ್‌), ಮ್ಯಾನುಯಲ್ ಸ್ಕ್ಯಾವೆಂಜರ್‌ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆ, 2013 ರ ಸೆಕ್ಷನ್ 105 ರ ಅಡಿಯಲ್ಲಿ ಅಪರಾಧಿಕ ನರಹತ್ಯೆಯ ಪ್ರಕರಣವನ್ನು ದಾಖಲಿಸಲಾಗಿದೆ. ಪೊಲೀಸ್ ತನಿಖೆಯ ಪ್ರಕಾರ, ಲಿಂಗರಾಜು ಮತ್ತು ನವೀನ್ ಅವರು ಜೆಆರ್‌ಆರ್ ಆಕ್ವಾ ಪ್ರೈವೇಟ್ ಲಿಮಿಟೆಡ್‌ನ ಕೆಲಸಗಾರರು. ಅವರು ಒಳಚರಂಡಿ ಸಂಸ್ಕರಣಾ ಘಟಕದ ಗುಂಡಿಗೆ ಇಳಿದು ಕೆಲಸ ಮಾಡುತ್ತಿದ್ದಾಗ ದುರಂತ ಸಂಭವಿಸಿದೆ. ಗುಂಡಿಯೊಳಗೆ ಉಸಿರಾಟದ ಸಮಸ್ಯೆ ಅನುಭವಿಸಿ ಅವರು ಮೃತರಾಗಿರುವ ಶಂಕೆ ವ್ಯಕ್ತವಾಗಿದೆ.

ಕಾನೂನು ಹೇಳುವುದೇನು?

ಮ್ಯಾನುಯಲ್ ಸ್ಕ್ಯಾವೆಂಜರ್‌ ಉದ್ಯೋಗ ನಿಷೇಧ ಮತ್ತು ಅವರ ಪುನರ್ವಸತಿ ಕಾಯಿದೆಯ ಪ್ರಕಾರ, ಯಾವುದೇ ವ್ಯಕ್ತಿ ಅಥವಾ ಏಜೆನ್ಸಿ ಯಾವುದೇ ವ್ಯಕ್ತಿಯನ್ನು ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ಗೆ ತೊಡಗಿಸುವಂತಿಲ್ಲ ಅಥವಾ ನೇಮಿಸಿಕೊಳ್ಳುವಂತಿಲ್ಲ ಮತ್ತು ಯಾವುದೇ ವ್ಯಕ್ತಿ ಅಥವಾ ಏಜೆನ್ಸಿ ಮ್ಯಾನುಯಲ್ ಸ್ಕ್ಯಾವೆಂಜಿಂಗ್‌ನಲ್ಲಿ ತೊಡಗಿದರೆ 2 ವರ್ಷಗಳವರೆಗೆ ಜೈಲು ಶಿಕ್ಷೆ ಅಥವಾ ಒಂದು ಲಕ್ಷ ರೂಪಾಯಿವರೆಗೆ ದಂಡ ವಿಧಿಸಲಾಗುತ್ತದೆ ಅಥವಾ ಎರಡೂ ಶಿಕ್ಷೆ ವಿಧಿಸಬಹುದು. ಈ ಕಾಯಿದೆಯು ನೈರ್ಮಲ್ಯ ಕಾರ್ಮಿಕರ ಸುರಕ್ಷತೆ ಮತ್ತು ಘನತೆಯನ್ನು ಖಚಿತಪಡಿಸಿಕೊಳ್ಳಲು ಬರಿಗೈಯಲ್ಲೇ ಅಪಾಯಕಾರಿ ಶುಚಿಗೊಳಿಸುವಿಕೆ ಮತ್ತು ನೈರ್ಮಲ್ಯ ಸ್ವಚ್ಛಗೊಳಿಸುವುದನ್ನು ನಿಷೇಧಿಸಿರುವುದನ್ನು ನಿರ್ದಿಷ್ಟ ಪದಗಳಲ್ಲಿ ವ್ಯಾಖ್ಯಾನಿಸುತ್ತದೆ.

ಕಳೆದ ಆಗಸ್ಟ್‌ನಲ್ಲಿ, ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು 2014 ರಿಂದೀಚೆಗೆ ಸುಮಾರು 453 ಜನರು ಒಳಚರಂಡಿ ಮತ್ತು ಸೆಪ್ಟಿಕ್ ಟ್ಯಾಂಕ್‌ಗಳನ್ನು ಸ್ವಚ್ಛಗೊಳಿಸುವ ಸಂದರ್ಭದಲ್ಲಿ ಸಾವನ್ನಪ್ಪಿದ್ದಾರೆ ಎಂದು ತಿಳಿಸಿದ್ದು, ಭಾರತದ 766 ಜಿಲ್ಲೆಗಳ ಪೈಕಿ 732 ಜಿಲ್ಲೆಗಳು ಬರಿಗೈನಲ್ಲಿ ನೈರ್ಮಲ್ಯ ಸ್ವಚ್ಛಗೊಳಿಸುವುದರಿಂದ ಮುಕ್ತವಾಗಿವೆ ಎಂದು ಘೋಷಿಸಿಕೊಂಡಿವೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವ ರಾಮದಾಸ್ ಅಠವಳೆ ಲೋಕಸಭೆಯಲ್ಲಿ ಲಿಖಿತ ಉತ್ತರದಲ್ಲಿ ರಾಜ್ಯಗಳ ಸಾಧನೆಗಳನ್ನು ವಿವರಿಸಿದ್ದರು.

Whats_app_banner