ನೀರು ಚೆಲ್ಲಿದ್ದಕ್ಕೆ ವಿದ್ಯಾರ್ಥಿ ಹಲ್ಲು ಮುರಿದ ಹಿಂದಿ ಶಿಕ್ಷಕಿ ವಿರುದ್ಧ ದೂರು; ಇದೀಗ ಬಾಲಕನ ತಂದೆಯ ವಿರುದ್ಧ ಪ್ರತಿದೂರು
Bengaluru Crime News: ಜಯನಗರದ ಹೋಲಿ ಕ್ರೈಸ್ಟ್ ಶಾಲೆಯಲ್ಲಿ ಹಿಂದಿ ಶಿಕ್ಷಕಿಯೊಬ್ಬರು 11 ವರ್ಷದ ಬಾಲಕನಿಗೆ ಕೋಲಿನಿಂದ ಹೊಡೆದ ಪರಿಣಾಮ ಹಲ್ಲು ಮುರಿದಿದೆ. ಇದೀಗ ಬಾಲಕನ ತಂದೆ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.
ಬೆಂಗಳೂರು: ಖಾಸಗಿ ಶಾಲೆಯಲ್ಲಿ ಆರನೇ ತರಗತಿಯ ವಿದ್ಯಾರ್ಥಿಯೊಬ್ಬರ ಹಲ್ಲು ಮುರಿದಿದ್ದ ಶಿಕ್ಷಕಿಯೊಬ್ಬರ ವಿರುದ್ಧ ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಯನಗರದ ನಿವಾಸಿ ಬಾಲಕ ಅಶ್ವಿನ್ (11) ಹಲ್ಲು ಮುರಿದಿದೆ. ಈ ವಿದ್ಯಾರ್ಥಿ ತಂದೆ ಅನಿಲ್ ಕುಮಾರ್ ವಿಪೈ ದೂರು ನೀಡಿದವರು. ಜಯನಗರದ ಹೋಲಿ ಕ್ರೈಸ್ಟ್ ಶಾಲೆಯಲ್ಲಿ ಹಿಂದಿ ತರಗತಿ ನಡೆಯುತ್ತಿದ್ದಾಗ 11 ವರ್ಷದ ವಿದ್ಯಾರ್ಥಿಯ ಮುಖಕ್ಕೆ ಮರದ ಕೋಲಿನಿಂದ ಹೊಡೆದಾಗ ಹಲ್ಲು ಮುರಿದಿದೆ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ.
ಘಟನೆಗೆ ಕಾರಣವೇನು?
ಶಾಲೆಯಲ್ಲಿ ಅಶ್ವಿನ್ ನವೆಂಬರ್ 7ರಂದು ಸ್ನೇಹಿತರೊಂದಿಗೆ ತರಗತಿಯಲ್ಲಿ ನೀರಿನ ಬಾಟಲಿ ಹಿಡಿದು ಆಟವಾಡುತ್ತಿದ್ದರು. ಈ ವೇಳೆ ನೀರು ಚೆಲ್ಲಿದ್ದರು. ಈ ಬಗ್ಗೆ ಹಿಂದಿ ಶಿಕ್ಷಕಿಗೆ ತಿಳಿಸಿದ್ದಾನೆ. ಆದರೆ ಹಿಂದಿ ಶಿಕ್ಷಕಿ ಅಜ್ರತ್ ಎಂಬವರು ಕೋಲಿನಿಂದ ಮಖಕ್ಕೆ ಹೊಡೆದಾಗ ಹಲ್ಲು ಮುರಿದು ಬಿತ್ತು. ಶಾಲೆ ಸಿಬ್ಬಂದಿ, ಬಾಲಕನ ಪೋಷಕರೊಂದಿಗೆ ರಾಜಿ ಸಂಧಾನಕ್ಕೆ ಯತ್ನಿಸಿದ್ದಾರೆ. ಅದಕ್ಕೊಪ್ಪದ ತಂದೆ, ಜಯನಗರದ ಜನರಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದರು. ನಂತರ ಶಿಕ್ಷಕಿ ವಿರುದ್ಧ ದೂರು ದಾಖಲಿಸಿದ್ದಾರೆ.
ನನ್ನ ಮಗ ಸಹಪಾಠಿಗಳ ನಡವಳಿಕೆ ಕುರಿತು ಶಿಕ್ಷಕಿಗೆ ದೂರು ಕೊಡಲು ಹೋಗಿದ್ಧಾನೆ. ಆದರೆ ಶಿಕ್ಷಕಿ ಆತನನ್ನೇ ಹೊಡೆದು ಹಲ್ಲು ಉದುರಿಸಿದ್ದಾರೆ. ದೂರನ್ನು ಪರಿಹರಿಸುವ ಬದಲಿಗೆ, ಶಿಕ್ಷಕರು ಅವನನ್ನು ಹೊಡೆದಿರುವುದು ಎಷ್ಟು ಸರಿ? ಇದರಿಂದಾಗಿ ಅವನ ಹಲ್ಲು ಮುರಿದಿದೆ ಎಂದು ಆರೋಪಿಸಿದ್ದಾರೆ. ಪೊಲೀಸರಿಗೆ ದೂರು ಸಲ್ಲಿಸುವುದನ್ನು ತಪ್ಪಿಸಲು ಶಾಲಾ ಆಡಳಿತ ಮಂಡಳಿಯು ಈ ವಿಷಯವನ್ನು ಖಾಸಗಿಯಾಗಿ ಇತ್ಯರ್ಥಪಡಿಸಲು ಪ್ರಯತ್ನಿಸಿದೆ ಎಂದು ತಂದೆ ಆರೋಪಿಸಿದ್ದಾರೆ.
ಶಿಕ್ಷಕಿಯ ಸ್ಪಷ್ಟನೆ ಏನು?
ಬಾಲಾಪರಾಧಿ ನ್ಯಾಯ ಕಾಯ್ದೆ ಮತ್ತು ಬಿಎನ್ಎಸ್ನ ಸೆಕ್ಷನ್ 122 (2) ಅಡಿಯಲ್ಲಿ ಎಫ್ಐಆರ್ ದಾಖಲಿಸಲಾಗಿದೆ. ಪೊಲೀಸರು ಶಿಕ್ಷಕನನ್ನು ಕರೆಸಿ, ಕೋಲನ್ನು ವಶಪಡಿಸಿಕೊಂಡಿದ್ದಾರೆ. ಮುರಿದು ಬಿದ್ದ ಹಲ್ಲನ್ನು ಸಾಕ್ಷ್ಯವಾಗಿ ಸಂಗ್ರಹಿಸಿದ್ದಾರೆ. ಉದ್ದೇಶಪೂರ್ವಕವಾಗಿ ನಾನು ಹೊಡೆದಿಲ್ಲ ಎಂದು ಶಿಕ್ಷಕಿ, ಪೊಲೀಸರಿಗೆ ಹೇಳಿದ್ದಾರೆ. ಹುಡುಗನನ್ನು ಹೊಡೆಯುವ ಉದ್ದೇಶವನ್ನು ಹೊಂದಿರಲಿಲ್ಲ. ಆದರೆ ತರಗತಿಯನ್ನು ನಿಯಂತ್ರಿಸಲು ಕೋಲನ್ನು ಎತ್ತಿದಾಗ ಆಕಸ್ಮಿಕವಾಗಿ ಆತ ಮುಖಕ್ಕೆ ಬಿತ್ತು ಎಂದು ಶಿಕ್ಷಕಿ ಹೇಳಿದ್ದಾರೆ.
ಬಾಲಕನ ತಂದೆಯ ವಿರುದ್ಧವೇ ದೂರು ದಾಖಲು
ಇದೀಗ ಶಾಲಾ ಆಡಳಿತ ಮಂಡಳಿಯೇ ಬಾಲಕನ ತಂದೆಯ ವಿರುದ್ಧವೇ ಪ್ರತಿ ದೂರು ದಾಖಲಿಸಿದೆ. ಘಟನೆಯ ನಂತರ ವಿದ್ಯಾರ್ಥಿಯ ತಂದೆಯು ಶಿಕ್ಷಕಿಯನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಶಾಲಾ ಆವರಣದಲ್ಲಿ ಗಲಾಟೆ ಮಾಡಿದ್ದಾರೆ ಎಂದು ಆಡಳಿತ ಮಂಡಳಿ ಆರೋಪಿಸಿದೆ.