ಎಲ್ಲರೂ ನಿದ್ದೆ ಬಿಟ್ಟು ದುಡ್ಡು ದುಡಿದರೆ, ಬೆಂಗಳೂರಿನ ಈ ಯುವತಿ ನಿದ್ದೆ ಮಾಡಿಯೇ 9 ಲಕ್ಷ ಗೆದ್ದವ್ರೆ! ಈ ಸ್ಪರ್ಧೆಗೆ ಮತ್ತೆ ಅರ್ಜಿ ಆಹ್ವಾನ
Sleep Champion: ಬೆಂಗಳೂರಿನ ಸ್ಟಾರ್ಟಪ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್‌ಷಿಪ್ ಕಾರ್ಯಕ್ರಮದ 3ನೇ ಆವೃತ್ತಿಯಲ್ಲಿ ಇನ್ವೆಸ್ಟ್‌ಮೆಂಟ್ ಬ್ಯಾಂಕರ್, ಬೆಂಗಳೂರಿನ ಸಾಯಿಶ್ವರಿ ಪಾಟೀಲ್ ಅವರು ಸ್ಲೀಪ್ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅಲ್ಲದೆ, 9 ಲಕ್ಷ ರೂಪಾಯಿ ಬಹುಮಾನವನ್ನೂ ಪಡೆದಿದ್ದಾರೆ. ಇದೀಗ ಈ ಸಂಸ್ಥೆ ನಾಲ್ಕನೇ ಆವೃತ್ತಿಗೂ ಅರ್ಜಿ ಆಹ್ವಾನಿಸಿದೆ.
ಬೆಂಗಳೂರು: ಎಷ್ಟೋ ಮಂದಿ ದುಡ್ಡು ದುಡಿಯಲೆಂದು ನಿದ್ದೆ ಬಿಟ್ಟು ಹಗಲು-ರಾತ್ರಿ ಕಷ್ಟಪಡುತ್ತಾರೆ, ಕೆಲಸ ಮಾಡುತ್ತಾರೆ. ಸರಿಯಾಗಿ ನಿದ್ದೆ ಮಾಡದೆ ಆರೋಗ್ಯವನ್ನೂ ಹಾಳು ಮಾಡಿಕೊಂಡು ಹಣದ ಹಿಂದೆ ಓಡುತ್ತಾರೆ! ಆದರೆ, ಇಲ್ಲೊಂದು ಸ್ಪರ್ಧೆ ನಿದ್ದೆ ಮಾಡಲೆಂದೇ ಇದೆ. ಗೆದ್ದರೆ ಕೈ ತುಂಬಾ ಹಣವೂ ಸಿಗಲಿದೆ ಎಂಬುದು ನಿಮಗೆ ಗೊತ್ತಾ? ಹೀಗಾಗಿ ನಿದ್ದೆ ಮಾಡಿದರೆ ದುಡ್ಡು ಕೊಡ್ತಾರಾ? ಇದಕ್ಕೆ ಸ್ಪರ್ಧೆಯೂ ಇದೆಯಾ? ಹೀಗೋಂದು ಪ್ರಶ್ನೆ ಎಲ್ಲರನ್ನೂ ಕಾಡುವಂತೆ ಮಾಡಿದೆ.
ಬೆಂಗಳೂರು ಮೂಲದ ಸ್ಟಾರ್ಟ್‌ಅಪ್ ವೇಕ್‌ಫಿಟ್‌ನ ಸ್ಲೀಪ್ ಇಂಟರ್ನ್ಶಿಪ್ ಕಾರ್ಯಕ್ರಮದ 3ನೇ ಆವೃತ್ತಿಯ 'ಸ್ಲೀಪ್ ಚಾಂಪಿಯನ್' (Sleep Champion) ಎಂಬ ಸ್ಪರ್ಧೆ ಆಯೋಜಿಸಿದೆ. ಸ್ಪರ್ಧೆಯಲ್ಲಿ ಬೆಂಗಳೂರಿನ ಯುವತಿಯೊಬ್ಬರು ಸ್ಲೀಪ್ ಚಾಂಪಿಯನ್ ಪ್ರಶಸ್ತಿ ಗೆಲ್ಲುವ ಮೂಲಕ ಗಮನ ಸೆಳೆದಿದ್ದಾರೆ. ಅಲ್ಲದೆ, ಪ್ರಶಸ್ತಿಯೊಂದಿಗೆ 9 ಲಕ್ಷ ಗೆದ್ದುಕೊಂಡಿದ್ದಾರೆ. ನಿದ್ದೆಯಲ್ಲಿ ತಮ್ಮನ್ನು ಮೀರಿಸುವವರಿಲ್ಲ ಎಂದು ಸಾಬೀತುಪಡಿಸಿದ ಯುವತಿ ಹೆಸರು ಸಾಯಿಶ್ವರಿ ಪಾಟೀಲ್ (Saishwari Patil). ಇವರು ಇನ್ವೆಸ್ಟ್‌ಮೆಂಟ್ ಬ್ಯಾಂಕರ್.
ಉತ್ತಮ ನಿದ್ರೆಯ ಅಭ್ಯಾಸವನ್ನು ಉತ್ತೇಜಿಸುವ ಈ ಕಾರ್ಯಕ್ರಮ ಸ್ಲೀಪ್ ಚಾಂಪಿಯನ್ನಲ್ಲಿ 9 ಲಕ್ಷ ಗೆದ್ದ ಸಾಯಿಶ್ವರಿ ಪಾಟೀಲ್ ಸೇರಿ 12 ಇಂಟರ್ನ್‌ಗಳು ಸ್ಪರ್ಧೆಯಲ್ಲಿ ಸ್ಪರ್ಧಿಸಿದ್ದರು. ಪ್ರತಿ ರಾತ್ರಿ 8 ರಿಂದ 9 ಗಂಟೆಗಳ ನಿದ್ರೆ ಮತ್ತು ಹಗಲೊತ್ತಿನಲ್ಲಿ 20-ನಿಮಿಷಗಳ ಪವರ್ ನ್ಯಾಪ್ ಅಂದರೆ ಕಿರು ನಿದ್ರೆಗೆ ಪ್ರೋತ್ಸಾಹಿಸುತ್ತದೆ. ಸ್ಪರ್ಧಿಗಳಿಗೆ ಪ್ರೀಮಿಯಂ ಹಾಸಿಗೆ ಮತ್ತು ನಿದ್ರೆಯ ಗುಣಮಟ್ಟ ಮೇಲ್ವಿಚಾರಣೆಗೆ ಮತ್ತು ಸುಧಾರಿಸಲು ಸಂಪರ್ಕವಿಲ್ಲದ ಟ್ರ್ಯಾಕರ್ ಅನ್ನು ಕಂಪನಿ ನೀಡಿತ್ತು.
ಬರೋಬ್ಬರಿ 10 ಲಕ್ಷ ಅರ್ಜಿ
ಇಂಟರ್ನ್‌ಗಳು ಉತ್ತಮ ನಿದ್ರೆ ಅಭ್ಯಾಸಗಳನ್ನು ಅಭಿವೃದ್ಧಿಪಡಿಸಲು ಮತ್ತು 'ಸ್ಲೀಪ್ ಚಾಂಪಿಯನ್' ಪ್ರಶಸ್ತಿ ಗೆಲ್ಲುವ ಸಾಧ್ಯತೆಗಳನ್ನು ಹೆಚ್ಚಿಸಲು ತಜ್ಞರ ನೇತೃತ್ವದಲ್ಲಿ ಕಾರ್ಯಾಗಾರಗಳಿಗೆ ಹಾಜರಾಗಿದ್ದರು. ಮೂರು ಸೀಸನ್‌ಗಳಲ್ಲಿ ಕಾಂಪಿಟೇಷನ್ಗೆ 1 ಮಿಲಿಯನ್ ಅಂದರೆ 10 ಲಕ್ಷಕ್ಕಿಂತಲೂ ಹೆಚ್ಚು ಅರ್ಜಿಗಳು ಬಂದಿವೆ. ಈ ಪೈಕಿ 51 ಇಂಟರ್ನ್ಗಳನ್ನ ಆಯ್ಕೆ ಮಾಡಿತ್ತು. ಒಟ್ಟು 63 ಲಕ್ಷ ರೂಪಾಯಿಗಳನ್ನು ಸ್ಟೈಪೆಂಡ್ ಪಾವತಿಸಲಾಗಿದೆ ಎಂದು ವೇಕ್‌ಫಿಟ್ ಹಂಚಿಕೊಂಡಿದೆ.
ನಾಲ್ಕನೇ ಆವೃತ್ತಿಗೆ ಅರ್ಜಿ ಆಹ್ವಾನ
ವೇಕ್‌ಫಿಟ್‌ನ ಸೀಸನ್-3 ಸ್ಲೀಪ್ ಇಂಟರ್ನ್‌ಶಿಪ್‌ನ ಸ್ಲೀಪ್ ಚಾಂಪಿಯನ್ ಸಾಯಿಶ್ವರಿ ಅವರು ಗೆದ್ದ ನಂತರ ಸಾಮಾಜಿಕ ಮಾಧ್ಯಮದಲ್ಲಿ ತಮ್ಮ ಕೃತಜ್ಞತೆ ಹಂಚಿಕೊಂಡಿದ್ದಾರೆ. ಇದನ್ನು 'ಅತ್ಯುತ್ತಮ ಉದ್ಯೋಗದ ಹಂತ' ಎಂದು ಕರೆದಿದ್ದಾರೆ. ನಾಲ್ಕನೇ ಆವೃತ್ತಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಯ್ದ ಇಂಟರ್ನ್‌ಗಳಿಗೆ 1 ಲಕ್ಷ ರೂಪಾಯಿ ಸ್ಟೈಫಂಡ್ ಮತ್ತು ಮುಂದಿನ ಸ್ಲೀಪ್ ಚಾಂಪಿಯನ್ ಆಗುವ ಮೂಲಕ 10 ರೂ ಲಕ್ಷ ಬಹುಮಾನ ಗೆಲ್ಲಬಹುದು ಎಂದು ಕಂಪನಿ ತಿಳಿಸಿದೆ.