ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿ ಸಾವು, ರಸ್ತೆತಡೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
KSRTC Bus Accident; ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಕಾಮಗೆರೆಯಲ್ಲಿ 3 ತಿಂಗಳ ಗರ್ಭಿಣಿಯೊಬ್ಬರು ರಸ್ತೆ ದಾಟುತ್ತಿದ್ದಾಗ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದು ಮೃತಪಟ್ಟ ಹೃದಯವಿದ್ರಾವಕ ಘಟನೆ ಬುಧವಾರ ಸಂಜೆ ನಡೆಯಿತು.
ಚಾಮರಾಜನಗರ: ಬೆಂಗಳೂರಿನ ನೆಲಮಂಗಲದಲ್ಲಿ ಗರ್ಭಿಣಿಯೊಬ್ಬರು ರಸ್ತೆ ದುರಂತದಲ್ಲಿ ದುರ್ಮರಣಕ್ಕೀಡಾದ ಸುದ್ದಿ ಮನ ಕಲಕಿರುವಾಗಲೇ ಕೊಳ್ಳೇಗಾಲ ತಾಲೂಕು ಕಾಮಗೆರೆಯಲ್ಲಿ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿಯಾಗಿ 3 ತಿಂಗಳ ಗರ್ಭಿಣಿಯೊಬ್ಬರು ಮೃತಪಟ್ಟ ಘಟನೆ ಬುಧವಾರ (ಆಗಸ್ಟ್ 7) ಸಂಜೆ ನಡೆಯಿತು. ಮಹಿಳೆ ರಸ್ತೆ ದಾಟುತ್ತಿದ್ದ ವೇಳೆ ಈ ದುರಂತ ಸಂಭವಿಸಿದೆ. ಇದರಿಂದ ರೊಚ್ಚಿಗೆದ್ದ ಸ್ಥಳೀಯರು ಮತ್ತು ಮಹಿಳೆಯ ಸಂಬಂಧಿಕರು ಸ್ಥಳದಲ್ಲೇ ರಸ್ತೆ ತಡೆ ನಡೆಸಿ ಪ್ರತಿಭಟನೆ ವ್ಯಕ್ತಪಡಿಸಿದರು.
ಮೃತ ಮಹಿಳೆಯನ್ನು ಹನೂರು ಸಮೀಪದ ಅಜ್ಜಿಪುರ ಗ್ರಾಮದ ನಮಿತಾ (22) ಎಂದು ಗುರುತಿಸಲಾಗಿದೆ. ಅವರು ಕಾಮಗೆರೆಯ ಹೋಲಿಕ್ರಾಸ್ ಆಸ್ಪತ್ರೆಗೆ ಚಿಕಿತ್ಸೆಗೆ ಬಂದಿದ್ದರು. ಚಿಕಿತ್ಸೆ ಪಡೆದ ನಮಿತಾ ಅವರು ವಾಪಸ್ ಮನೆಗೆ ಹೋಗುವುದಕ್ಕಾಗಿ ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಕೆಎಸ್‌ಆರ್‌ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಘಟನೆ ನಡೆದ ಕೂಡಲೇ ಅವರನ್ನು ಸ್ಥಳೀಯ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಪ್ರಯೋಜವಾಗಲಿಲ್ಲ ಎಂದು ಸ್ಥಳೀಯರು ತಿಳಿಸಿದ್ದಾರೆ.
ರಸ್ತೆತಡೆ ಪ್ರತಿಭಟನೆ ನಡೆಸಿದ ಗ್ರಾಮಸ್ಥರು
ಈ ದುರಂತ ಸಂಭವಿಸಿದ ಬೆನ್ನಿಗೆ ಆಕ್ರೋಶಗೊಂಡ ಗ್ರಾಮಸ್ಥರು ಆಸ್ಪತ್ರೆ ಸಮೀಪ ರಸ್ತೆ ಉಬ್ಬು ನಿರ್ಮಿಸಿ ವಾಹನಗಳ ವೇಗ ತಗ್ಗಿಸುವಂತೆ ಆಗ್ರಹಿಸಿದರು. ಗ್ರಾಮಸ್ಥರು, ಮೃತ ಮಹಿಳೆಯ ಕುಟುಂಬದವರು ರಸ್ತೆ ತಡೆ ಮಾಡಿ ಪ್ರತಿಭಟನೆ ನಡೆಸಿದರು. ಇದರಿಂದಾಗ ಆ ರಸ್ತೆಯಲ್ಲಿ ಸ್ವಲ್ಪ ಹೊತ್ತು ಸಂಚಾರ ದಟ್ಟಣೆ ಉಂಟಾಯಿತು.
ಬ್ಯಾರಿಕೇಡ್ ಅಥವಾ ರಸ್ತೆ ಉಬ್ಬು ಹಾಕಿಸಬೇಕು ಎಂದು ಗ್ರಾಮಸ್ಥರು ಅಧಿಕಾರಿಗಳಲ್ಲಿ ಕಳೆದ 4 ತಿಂಗಳಿಂದ ಮನವಿ ಮಾಡುತ್ತ ಬಂದಿದ್ದರೂ ಅವರು ಅದನ್ನು ನಿರ್ಲಕ್ಷಿಸಿದ್ದರು. ಪೊಲೀಸ್ ಇಲಾಖೆ ಅಥವಾ ಸಾರಿಗೆ ಇಲಾಖೆ ಈ ಬಗ್ಗೆ ಗಮನಹರಿಸಿರಲಿಲ್ಲ. ಇದರಿಂದ ಬೇಸತ್ತಿದ್ದ ಗ್ರಾಮಸ್ಥರ ಆಕ್ರೋಶ, ಅಪಘಾತವಾಗಿ ಮಹಿಳೆ ಮೃತಪಟ್ಟ ಕೂಡಲೇ ಪ್ರತಿಭಟನೆಯ ರೂಪದಲ್ಲಿ ಹೊರಹೊಮ್ಮಿತು.
ಸಾರಿಗೆ ಇಲಾಖೆ ಚಾಲಕರ ವಿರುದ್ಧ ಆಕ್ರೋಶ
ಗರ್ಭಿಣಿ ದುರ್ಮರಣಕ್ಕೀಡಾಗಿರುವುದು ಮತ್ತು ಗ್ರಾಮಸ್ಥರು ರಸ್ತೆ ತಡೆ ಪ್ರತಿಭಟನೆ ಶುರುಮಾಡಿದ ಮಾಹಿತಿ ಸಿಕ್ಕ ಕೂಡಲೇ ಸ್ಥಳಕ್ಕಾಗಮಿಸಿದ ಕೊಳ್ಳೇಗಾಲ ಗ್ರಾಮಾಂತರ ಪೊಲೀಸ್ ಠಾಣೆ ಅಧಿಕಾರಿಗಳು ಕೇಸ್ ದಾಖಲಿಸಿಕೊಂಡರು. ಸ್ಥಳ ಮಹಜರು ನಡೆಸಿದ ಬಳಿಕ ರಸ್ತೆ ತಡೆ ಮಾಡುತ್ತಿದ್ದ ಗ್ರಾಮಸ್ಥರ ಮನವೊಲಿಸಲು ಪ್ರಯತ್ನಿಸಿದರು.
ಇದರ ಭಾಗವಾಗಿ ಕೊಳ್ಳೇಗಾಲ ಬಸ್ ಡಿಪೋ ವ್ಯವಸ್ಥಾಪಕ ಶಂಕರ್ ಘಟನಾ ಸ್ಥಳಕ್ಕೆ ಆಗಮಿಸಿದರಲ್ಲದೆ, ಯುವತಿಯ ಸಾವಿಗೆ ಸಂತಾಪ ಸೂಚಿಸಿ ಅಂತ್ಯಸಂಸ್ಕಾರಕ್ಕೆ ಪರಿಹಾರದ ಹಣವಾಗಿ 25 ಸಾವಿರ ರೂಪಾಯಿ ನೀಡಿದರು. ಚಾರ್ಜ್‌ಶೀಟ್ ಆದ ಬಳಿಕ 25 ಸಾವಿರ ರೂಪಾಯಿ ನೀಡುವುದಾಗಿ, ಅದೇ ರೀತಿ ಕೋರ್ಟ್ ಮೂಲಕ ಉಳಿದ ಪರಿಹಾರ ಮೊತ್ತ ಒದಗಿಸುವುದಾಗಿ ಭರವಸೆ ನೀಡಿದರು. ಇಷ್ಟಾದ ಬಳಿಕ ಗ್ರಾಮಸ್ಥರು, ಮಹಿಳೆಯ ಕುಟುಂಬಸ್ಥರು ಪ್ರತಿಭಟನೆ ಹಿಂಪಡೆದರು.