Indian Railways: ಬೆಂಗಳೂರು- ವಿಜಯಪುರ ವಂದೇ ಭಾರತ್‌ ರೈಲಿಗೆ ಏನು ಅಡ್ಡಿ, ಕರ್ನಾಟಕದ 15ಕ್ಕೂ ರೈಲ್ವೆ ಮಾರ್ಗಗಳ ಸ್ಥಿತಿ ಹೇಗಿದೆ
ಕನ್ನಡ ಸುದ್ದಿ  /  ಕರ್ನಾಟಕ  /  Indian Railways: ಬೆಂಗಳೂರು- ವಿಜಯಪುರ ವಂದೇ ಭಾರತ್‌ ರೈಲಿಗೆ ಏನು ಅಡ್ಡಿ, ಕರ್ನಾಟಕದ 15ಕ್ಕೂ ರೈಲ್ವೆ ಮಾರ್ಗಗಳ ಸ್ಥಿತಿ ಹೇಗಿದೆ

Indian Railways: ಬೆಂಗಳೂರು- ವಿಜಯಪುರ ವಂದೇ ಭಾರತ್‌ ರೈಲಿಗೆ ಏನು ಅಡ್ಡಿ, ಕರ್ನಾಟಕದ 15ಕ್ಕೂ ರೈಲ್ವೆ ಮಾರ್ಗಗಳ ಸ್ಥಿತಿ ಹೇಗಿದೆ

Karnataka Railway Development ಕರ್ನಾಟಕದಲ್ಲಿ ರೈಲ್ವೆ ಮಾರ್ಗಗಳ ಕಾಮಗಾರಿ ವಿಳಂಬದಿಂದಾಗಿ ಹಲವಾರು ಮಾರ್ಗಗಳಲ್ಲಿ ಇನ್ನೂ ರೈಲು ಸಂಚಾರವೇ ಶುರುವಾಗಿಲ್ಲ.

ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ರೈಲ್ವೆ ಮಾರ್ಗಗಳ ಕಾಮಗಾರಿ ಬಾಕಿಯಿದೆ.
ಕರ್ನಾಟಕದಲ್ಲಿ ಹತ್ತಕ್ಕೂ ಹೆಚ್ಚು ರೈಲ್ವೆ ಮಾರ್ಗಗಳ ಕಾಮಗಾರಿ ಬಾಕಿಯಿದೆ.

ಬೆಂಗಳೂರು: ಕರ್ನಾಟಕದಲ್ಲಿ ರೈಲ್ವೆ ಜಾಲವನ್ನು ಬಲಪಡಿಸುವ ಕಾರ್ಯ ದಶಕದಿಂದ ನಡೆದಿದ್ದರೂ ಇನ್ನೂ ಹಲವಾರು ಯೋಜನೆಗಳು ಪೂರ್ಣಗೊಳ್ಳದೇ ವಿಳಂಬವಾಗುತ್ತಿದೆ. ಅದರಲ್ಲೂ ಬೆಂಗಳೂರು - ವಿಜಯಪುರ ನಗರದ ನಡುವೆ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ಆರಂಭಿಸುವ ಆಸಕ್ತಿಯಿದ್ದರೂ ಮಾರ್ಗದಲ್ಲಿನ ಅಡೆತಡೆಗಳು ಅನೇಕ ಇವೆ. ಇದನ್ನು ಹಂತ ಹಂತವಾಗಿ ಸರಿಪಡಿಸುವ ಕೆಲಸ ಆರಂಭಗೊಂಡಿವೆ. ರೈಲ್ವೆ ಜತೆ ವೆಚ್ಚ ಹಂಚಿಕೆ ಆಧಾರದಲ್ಲಿ ಕೈಗೊಂಡಿರುವ ರಾಜ್ಯದ ಗದಗ- ವಾಡಿ, ಧಾರವಾಡ-ಬೆಳಗಾವಿ, ತುಮಕೂರು- ದಾವಣಗೆರೆ, ತುಮಕೂರು-ರಾಯದುರ್ಗ ಸೇರಿದಂತೆ ಹಲವಾರು ರೈಲ್ವೆ ಯೋಜನೆಗಳಿಗೆ ಎದುರಾಗಿರುವ ಭೂಸ್ವಾಧೀನ ಅಡೆತಡೆ ಸೇರಿದಂತೆ ವಿವಿಧ ಸಮಸ್ಯೆಗಳ ಕುರಿತು ಮತ್ತು ಯೋಜನೆಗಳ ತ್ವರಿತ ಕಾಮಗಾರಿಗೆ ಸಂಬಂಧಿಸಿದಂತೆ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಪ್ರಯತ್ನಗಳು ಶುರುವಾಗಿವೆ.

ಮೂಲಸೌಕರ್ಯ ಅಭಿವೃದ್ಧಿ ಸಚಿವರೂ ಆಗಿರುವ ಬೃಹತ್‌ ಮತ್ತು ಮಧ್ಯಮ ಕೈಗಾರಿಕಾ ಸಚಿವ ಎಂ ಬಿ ಪಾಟೀಲ ಅವರು ಸಚಿವರು,ಜನಪ್ರತಿನಿಧಿಗಳ ಸಮ್ಮುಖದಲ್ಲಿ ನೈರುತ್ಯ ರೈಲ್ವೆ ಅಧಿಕಾರಿಗಳ ಜತೆ ಮಹತ್ತ್ವದ ಪ್ರಗತಿ ಪರಿಶೀಲನಾ ಸಭೆ ನಡೆಸಿದಾಗ ವಿವಿಧ ರೈಲ್ವೆ ಯೋಜನೆಗಳ ಸ್ಥಿತಿಗತಿ ತಿಳಿಯಿತು.

ಬೆಂಗಳೂರು- ವಿಜಯಪುರ ನಡುವೆ 10 ಗಂಟೆ ಪಯಣ

ಗದಗ- ಹುಟಗಿ ನಡುವೆ 242 ಕಿ.ಮೀ. ನಡುವಿನ ಜೋಡಿ ಹಳಿ ಅಭಿವೃದ್ಧಿ ಕಾರ್ಯ ಬಹುತೇಕ ಮುಗಿದಿದೆ. ಆದರೆ, ಬಾಗಲಕೋಟೆ- ವಂಡಾಲ್ ನಡುವೆ 45 ಕಿ.ಮೀ ಜೋಡಿ ರೈಲು ಕಾಮಗಾರಿ ಬಾಕಿ‌ ಇದೆ. ಈ ಕಾಮಗಾರಿ ಡಿಸೆಂಬರ್ ವೇಳೆಗೆ ಮುಗಿಯಬೇಕು. ವಿಳಂಬ ಅಂದರೂ ಮಾರ್ಚ್ ಹೊತ್ತಿಗೆ ಮುಗಿಯಲಿದೆ. ಜತೆಗೆ ಆಲಮಟ್ಟಿ ಪ್ರದೇಶದಲ್ಲಿ ಕೂಡ ಕೆಲವು ಕಿರು ಸೇತುವೆಗಳ ನಿರ್ಮಾಣ ಬಾಕಿ‌ ಇದೆ. ಇದರಿಂದಾಗಿ ಬೆಂಗಳೂರು- ವಿಜಯಪುರ ರೈಲು ಪಯಣಕ್ಕೆ ಈಗ 14-15 ಗಂಟೆ ಹಿಡಿಯುತ್ತಿದೆ. ಈ ಸಮಸ್ಯೆಯಿಂದಾಗಿ ವಂದೇ ಭಾರತ್ ಎಕ್ಸ್ ಪ್ರೆಸ್ ಸೇವೆ ಆರಂಭಕ್ಕೂ ವಿಘ್ನ ಎದುರಾಗಿದೆ. ಇದನ್ನು ಸರಿಪಡಿಸಿದರೆ ಬೆಂಗಳೂರು- ವಿಜಯಪುರ ಪಯಣ 10-11 ಗಂಟೆಗಳಿಗೆ ಇಳಿಯಲಿದೆ. ಈ ನಿಟ್ಟಿನಲ್ಲಿ ತ್ವರಿತವಾಗಿ ಕಾಮಗಾರಿ ಮುಗಿಸಬೇಕು ಎನ್ನುವ ಸೂಚನೆ ನೀಡಲಾಯಿತು.,

ಈಗ ಬೆಂಗಳೂರಿನಿಂದ ಉತ್ತರ ಕರ್ನಾಟಕಕ್ಕೆ ಬರುತ್ತಿರುವ ಗೂಡ್ಸ್ ರೈಲುಗಳು ಹುಬ್ಬಳ್ಳಿ ದಕ್ಷಿಣ ನಿಲ್ದಾಣದ ಸಮೀಪದ ಬೈಪಾಸ್ ಮೂಲಕ ಗದಗದ ಕಡೆಗೆ ತಿರುಗುತ್ತಿವೆ. ಅಲ್ಲೂ ಸಹ ಗದಗ ಮುಖ್ಯ ನಿಲ್ದಾಣಕ್ಕೆ ಹೋಗದೆ ಬೈಪಾಸ್ ನಲ್ಲೇ ವಿಜಯಪುರ, ಸೊಲ್ಲಾಪುರದ ಕಡೆಗೆ ಹೋಗುತ್ತಿವೆ. ಹುಬ್ಬಳ್ಳಿ ದಕ್ಷಿಣ ರೈಲು ನಿಲ್ದಾಣದಲ್ಲಿ ಮೂಲಸೌಕರ್ಯಗಳ ಕೊರತೆ ಇರುವುದರಿಂದ ಪ್ರಯಾಣಿಕ ರೈಲುಗಳು ಈಗ ಹುಬ್ಬಳ್ಳಿ ಮುಖ್ಯ ನಿಲ್ದಾಣಕ್ಕೆ ಹೋಗಿ, ಎಂಜಿನ್ ಬದಲಿಸಿಕೊಂಡು ಬರುತ್ತಿವೆ. ಇದರಿಂದಾಗಿ ಗಂಟೆಗಟ್ಟಲೆ ಸಮಯ ವ್ಯರ್ಥವಾಗುತ್ತಿವೆ. ಆದ್ದರಿಂದ ನೈರುತ್ಯ ರೈಲ್ವೆಯು ಹುಬ್ಬಳ್ಳಿ ದಕ್ಷಿಣ ನಿಲ್ದಾಣವನ್ನು ಪ್ರಯಾಣಿಕ ಸ್ನೇಹಿಯಾಗಿ ಆದಷ್ಟು ಬೇಗ ಅಭಿವೃದ್ಧಿಪಡಿಸಿ, ವಿಜಯಪುರ ಕಡೆ‌ ಹೋಗುವ ರೈಲುಗಳನ್ನು ಅಲ್ಲಿಂದಲೇ ಗದಗದ ಕಡೆ ತಿರುಗಿಸುವ ಕೆಲಸ ಆಗಬೇಕು. ಅದೇ ರೀತಿ ಗದಗದಲ್ಲಿಯೂ ಬೈಪಾಸ್ ಮೂಲಕ ವಿಜಯಪುರದ ಕಡೆಗೆ ಹೋಗುವ ಹಾಗೆ ಆಗಬೇಕು.‌ ಇದರಿಂದ ಸಾಕಷ್ಟು ಸಮಯವನ್ನು ಉಳಿಸಬಹುದು ಎನ್ನುವ ಸಲಹೆಯೂ ವ್ಯಕ್ತವಾಯಿತು.

ಗದಗ ವಾಡಿ ಯೋಜನೆ

ಗದಗ-ವಾಡಿ ಯೋಜನೆಯಲ್ಲಿ ಶಹಾಪುರ-ಬಿರಾಲ್ ಬುಜೂರು ಬಳಿ ಇರುವ ಹಳಕಟ್ಟಾ ಬಳಿ 11 ಎಕರೆ ಭೂಸ್ವಾಧೀನದ ಸಮಸ್ಯೆ ಎದುರಾಗಿದೆ. ಇದರಿಂದಾಗಿ 26 ಕಿ.ಮೀ. ಕಾಮಗಾರಿ ನಿಂತಿದೆ. ಹಿಂದೆಯೇ ಕಲಬುರಗಿ ಜಿಲ್ಲಾಧಿಕಾರಿಗೆ ಇದನ್ನು ಗಮನಕ್ಕೆ ತರಲಾಗಿತ್ತು. ಆದರೂ ಸಮಸ್ಯೆ ಹಾಗೆಯೇ ಇದೆ. ಈ ಕಾಮಗಾರಿಯನ್ನು 2025ರ ಜೂನ್ ಒಳಗೆ ಮುಗಿಸಬೇಕು ಎನ್ನುವ ಸೂಚನೆ ನೀಡಲಾಗಿದೆ.

ಗದಗ-ವಾಡಿ ಯೋಜನೆ 2028ರೊಳಗೆ, ಬಾಗಲಕೋಟೆ-ಕುಡಚಿ ಯೋಜನೆ 2026ರ ಡಿಸೆಂಬರ್ ಹೊತ್ತಿಗೆ ಪೂರ್ಣವಾಗಬೇಕು. ತುಮಕೂರು- ದಾವಣಗೆರೆ ಯೋಜನೆಯಲ್ಲಿ ದಾವಣಗೆರೆ ಜಿಲ್ಲಾ ವ್ಯಾಪ್ತಿಯಲ್ಲಿ 300 ಎಕರೆ ಕೊಡಬೇಕಾಗಿದೆ. ಜತೆಗೆ ವಸಂತ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಗ್ಯಾಸ್ ಪೈಪ್ ಲೈನ್, ವಿದ್ಯುತ್ ಕಂಬಗಳು ಎಲ್ಲವನ್ನೂ ಬದಲಿಸಬೇಕಾಗಿದೆ.

ತುಮಕೂರು- ರಾಯದುರ್ಗ ಯೋಜನೆ

ಗಿಣಿಗೇರಾ-ರಾಯಚೂರು ಯೋಜನೆ 2027ರ ಫೆಬ್ರವರಿ ಹೊತ್ತಿಗೆ ಸಂಪೂರ್ಣವಾಗಬೇಕು. ತುಮಕೂರು- ರಾಯದುರ್ಗ ಯೋಜನೆಗೆ ಈಗ ವೇಗ ಬಂದಿದೆ. ಕೊರಟಗರೆ- ಮಧುಗಿರಿ ನಡುವಿನ ಕಾಮಗಾರಿಗೆ ಈ ತಿಂಗಳಲ್ಲಿ ಟೆಂಡರ್ ಕರೆಯಲಾಗಿದೆ. ಮಧುಗಿರಿ-ಮಡಕಶಿರಾ ನಡುವಿನ ಕಾಮಗಾರಿಗೆ ಸೆಪ್ಟೆಂಬರಿನಲ್ಲಿ ಟೆಂಡರ್ ಕರೆಯಲಾಗುವುದು. ತುಮಕೂರು- ಕೊರಟಗೆರೆ ನಡುವಿನ 29 ಕಿ.ಮೀ. ಕಾಮಗಾರಿಗೆ ಈಗಾಗಲೇ ಟೆಂಡರ್ ಆಹ್ವಾನಿಸಲಾಗಿದೆ. ಇದು ಅಂತರರಾಜ್ಯ ಯೋಜನೆಯಾಗಿದ್ದು, 2027ರ ಜನವರಿಗೆ ಮುಕ್ತಾಯವಾಗಬೇಕು. ಮಧುಗಿರಿ-ಮಡಕಶಿರಾ ನಡುವೆ 63 ಎಕರೆ, ಕೊರಟಗೆರೆ-ಮಧುಗಿರಿ ಮಧ್ಯೆ 43 ಎಕರೆ ಮಾತ್ರ ಭೂಸ್ವಾಧೀನ ಬಾಕಿ ಇದೆ. ಇವುಗಳ ಯೋಜನೆಗಳನ್ನು ತ್ವರಿತಗೊಳಿಸಲು ಸೂಚಿಸಲಾಗಿದೆ.

ಚಿಕ್ಕಮಗಳೂರು ಬೇಲೂರು ಮಾರ್ಗ

ಚಿಕ್ಕಮಗಳೂರು-ಹಾಡಿಹಳ್ಳಿ, ಹಾಡಿಹಳ್ಳಿ-ಬೇಲೂರು ಯೋಜನೆಗೆ ನೂರಕ್ಕೆ ನೂರರಷ್ಟು ಭೂಸ್ವಾಧೀನವಾಗಿದೆ. ಈ ಪೈಕಿ ಚಿಕ್ಕಮಗಳೂರು-ಹಾಡಿಹಳ್ಳಿ ನಡುವೆ ಕಾಮಗಾರಿ ಮುಗಿದಿದೆ. ಹಾಡಿಹಳ್ಳಿ-ಬೇಲೂರು ನಡುವಿನ 12 ಕಿ.ಮೀ. ಯೋಜನೆ ಒಂದು ವರ್ಷದಲ್ಲಿ ಮುಗಿಯಬೇಕು. ಹಾಗೆಯೇ ಹಾಸನ-ಬೇಲೂರು ಯೋಜನೆಗೆ 509 ಎಕರೆ ಬೇಕಾಗಿದೆ. ಭೂಸ್ವಾಧೀನ ಮುಗಿಸಿ, ತ್ವರಿತವಾಗಿ ಟೆಂಡರ್ ಕರೆಯಬೇಕು. ಶಿವಮೊಗ್ಗ-ಶಿಕಾರಿಪುರ-ರಾಣೆಬೆನ್ನೂರು ಯೋಜನೆಗೆ ಸಂಬಂಧಿಸಿದಂತೆ ಭೂಸ್ವಾಧೀನ ಮುಗಿಸಲಾಗಿದೆ. ಆದರೆ, ರೈಲ್ವೆ ಇಲಾಖೆಗೆ ದಾಖಲಾತಿ ಹಸ್ತಾಂತರವಾಗದೆ ಸಮಸ್ಯೆ ಬಗೆಹರಿಸಬೇಕು

ಧಾರವಾಡ-ಬೆಳಗಾವಿ ಯೋಜನೆ

ಈಗ ಧಾರವಾಡ-ಬೆಳಗಾವಿ ನಡುವೆ ಈಗಿನ ರೈಲು ಪಯಣ ಈಗ ಪ್ರಯಾಸಕರವಾಗಿದೆ. ಇದಕ್ಕಾಗಿ 888 ಎಕರೆ ಭೂಮಿ ಬೇಕಾಗಿದೆ. ಇದು ಮುಗಿಯದೆ ಕಾಮಗಾರಿ ಆರಂಭ ಸಾಧ್ಯವಿಲ್ಲ. ಭೂಮಿ ಹಸ್ತಾಂತರವಾದರೆ 2027ರ ಕೊನೆಯ ವೇಳೆಗೆ ಕಾಮಗಾರಿ ಮುಗಿಸಬಹುದು ಎನ್ನುವ ಅಭಿಪ್ರಾಯ ವ್ಯಕ್ತವಾಯಿತು.

Whats_app_banner