ಬೆಂಗಳೂರಿನಲ್ಲಿಂದು ಹಗುರ ಮಳೆ ಸಾಧ್ಯತೆ, ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಒಣಹವೆ ಮುಂದುವರಿಕೆ; ನ.7ರ ಹವಾಮಾನ ವರದಿ ಹೀಗಿದೆ
ರಾಜ್ಯದಾದ್ಯಂತ ಮಳೆಯ ಪ್ರಮಾಣ ತಗ್ಗಿದ್ದು, ಕೆಲವೆಡೆ ಚಳಿ ಶುರುವಾಗಿದೆ. ಕರಾವಳಿ ಹಾಗೂ ಉತ್ತರ ಒಳನಾಡಿನ ಬಹುತೇಕ ಕಡೆ ಒಣಹವೆ ಇರಲಿದೆ. ದಕ್ಷಿಣ ಒಳನಾಡಿನಲ್ಲಿ ಬೆಂಗಳೂರು ಸೇರಿದಂತೆ ಕೆಲವೆಡೆ ಹಗುರ ಮಳೆಯಾಗಲಿದೆ. ನಾಳೆಯಿಂದ (ನವೆಂಬರ್ 8) ಬಹುತೇಕ ಕಡೆ ಮತ್ತೆ ಮಳೆಯಾಗುವ ಮುನ್ಸೂಚನೆ ಇದೆ. ನವೆಂಬರ್ 7ರ ಕರ್ನಾಟಕ ಹವಾಮಾನ ಹೇಗಿದೆ ತಿಳಿಯಿರಿ.
ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ಹವಾಮಾನ ವೈಪರೀತ್ಯ ಸಾಮಾನ್ಯವಾಗಿದೆ. ಚಳಿಗಾಲದಲ್ಲಿ ಮಳೆ, ಮಳೆಗಾಲದಲ್ಲಿ ಬಿಸಿಲು ಸಹಜವಾಗಿದೆ. ಇದೀಗ ಮಳೆಗಾಲ ಮುಗಿದು ಚಳಿಗಾಲ ಆರಂಭವಾಗಿದ್ದರೂ ರಾಜಧಾನಿ ಬೆಂಗಳೂರು, ಕರಾವಳಿ ಜಿಲ್ಲೆಗಳು ಸೇರಿದಂತೆ ಬಹುತೇಕ ಕಡೆಗಳಲ್ಲಿ ಮಳೆಯ ಪ್ರಮಾಣ ಜೋರಿತ್ತು. ಆದರೆ ಕಳೆದ ಎರಡು ದಿನಗಳಿಂದ ವರುಣರಾಯ ಬಿಡುವು ಪಡೆದಿದ್ದಾನೆ. ಇಂದು (ನವೆಂಬರ್ 7) ಕೂಡ ಮಳೆಯ ಪ್ರಮಾಣ ಕಡಿಮೆ ಇರಲಿದ್ದು, ಮತ್ತೊಂದು ಚಂಡಮಾರುತದ ಮುನ್ಸೂಚನೆ ಇರುವ ಕಾರಣ ನಾಳೆಯಿಂದ (ನವೆಂಬರ್ 8) ಪುನಃ ರಾಜ್ಯದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ ಎನ್ನಲಾಗುತ್ತಿದೆ.
ಕರ್ನಾಟಕದ ಕರಾವಳಿ ಜಿಲ್ಲೆಗಳು ಹಾಗೂ ದಕ್ಷಿಣ ಒಳನಾಡಿನಲ್ಲಿ ಒಣ ಹವೆ ಇರಲಿದ್ದು, ಕೆಲವೆಡೆ ಚಳಿಯು ಶುರುವಾಗಿದೆ. ದಕ್ಷಿಣ ಒಳನಾಡಿನ ಕೆಲವು ಜಿಲ್ಲೆಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಸೂಚಿಸಿದೆ. ಹಾಗಾದರೆ ರಾಜ್ಯದ ಯಾವೆಲ್ಲಾ ಜಿಲ್ಲೆಗಳಲ್ಲಿ ಮಳೆ ಇದೆ, ಎಲ್ಲೆಲ್ಲಾ ಒಣಹವೆ ಮುಂದುವರಿಯಲಿದೆ ನೋಡೋಣ.
ಭಾರತೀಯ ಹವಾಮಾನ ಇಲಾಖೆಯ ಬೆಂಗಳೂರು ಪ್ರಾದೇಶಿಕ ಹವಾಮಾನ ಕೇಂದ್ರ ಪ್ರಕಟಿಸಿದ ಹವಾಮಾನ ಮುನ್ಸೂಚನೆ ವರದಿ ಪ್ರಕಾರ, ಇಂದು ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡದಲ್ಲಿ ಒಣಹವೆ ಮುಂದುವರಿಯಲಿದೆ.
ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಬೀದರ್, ಧಾರವಾಡ, ಗದಗ, ಹಾವೇರಿ, ಕಲಬುರ್ಗಿ, ಕೊಪ್ಪಳ, ರಾಯಚೂರು, ವಿಜಯಪುರ, ಯಾದಗಿರಿ ಜಿಲ್ಲೆಗಳಲ್ಲೂ ಒಣಹವೆ ಮುಂದುವರಿಯಲಿದೆ.
ಬೆಂಗಳೂರಿನಲ್ಲಿ ಮಳೆ ಸಾಧ್ಯತೆ
ದಕ್ಷಿಣ ಒಳನಾಡಿನ ಮರ್ನ್ಕಾಲು ಜಿಲ್ಲೆಗಳಲ್ಲಿ ಇಂದು ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಬಳ್ಳಾಪುರ ಹಾಗೂ ಕೊಡಗು ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ. ಚಾಮರಾಜ ನಗರ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ಮೈಸೂರು, ರಾಮನಗರ, ಶಿವಮೊಗ್ಗ, ತುಮಕೂರು, ವಿಜಯನಗರದಲ್ಲಿ ಒಣಹವೆ ಮುಂದುವರಿಯಲಿದೆ.
ನವೆಂಬರ್ 7 ರಂದು ಬೆಂಗಳೂರಿನಲ್ಲಿ ಗರಿಷ್ಠ ತಾಪಮಾನ 28 ಡಿಗ್ರಿ ಸೆಲ್ಸಿಯಸ್ ಇದ್ದರೆ, ಕನಿಷ್ಠ ತಾಪಮಾನ 19 ಡಿಗ್ರಿ ಸೆಲ್ಸಿಯಸ್ ಇರಲಿದೆ.
ನವೆಂಬರ್ 8 ರಿಂದ ಮತ್ತೆ ಮಳೆ ಸುರಿಯುವ ಮುನ್ಸೂಚನೆ
ಗುರುವಾರದ ಹವಾಮಾನ ವರದಿ ನೋಡಿ ಮಳೆ ಬಿಟ್ಟಿದೆ ಎಂದು ಸಂತೋಷ ಪಡುವ ಹಾಗಿಲ್ಲ. ಯಾಕೆಂದರೆ ನವೆಂಬರ್ 8 ರಿಂದ ಪುನಃ ರಾಜ್ಯದಲ್ಲಿ ಮಳೆ ಶುರುವಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಕರಾವಳಿ, ಮಲೆನಾಡು ಭಾಗಗಳಲ್ಲಿ ಭಾರಿ ಮಳೆಯೊಂದಿಗೆ ಗುಡುಗು, ಸಿಡಿಲು ಕೂಡ ಇರಲಿದೆ ಎಂಬ ಮುನ್ಸೂಚನೆ ಇದೆ.
ದಕ್ಷಿಣ, ಉತ್ತರ ಒಳನಾಡಿನಲ್ಲೂ ನಾಳೆಯಿಂದ ಮಳೆಯಾಗುವ ಸಾಧ್ಯತೆ ಇದ್ದು ನವೆಂಬರ್ 10ರವರೆಗೆ ಮಳೆ ಜೊತೆ ಗುಡುಗು, ಸಿಡಿಲು ಬರುವ ಮುನ್ಸೂಚನೆ ಇದೆ.