Karnataka Rains:ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌
ಕನ್ನಡ ಸುದ್ದಿ  /  ಕರ್ನಾಟಕ  /  Karnataka Rains:ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌

Karnataka Rains:ಉತ್ತರ ಕನ್ನಡ, ಉಡುಪಿ, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಯಲ್ಲಿ ಭಾರೀ ಮಳೆ ಮುನ್ಸೂಚನೆ, 7 ಜಿಲ್ಲೆಗಳಲ್ಲಿ ಅಲರ್ಟ್‌

Karntaka Weather Update ಕರ್ನಾಟಕದ ಕರಾವಳಿ, ಮಲೆನಾಡು ಭಾಗದಲ್ಲಿ( Karntaka Rains) ಬುಧವಾರ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಬೆಂಗಳೂರಿನಲ್ಲಿ ಸಾಧಾರಣ ಮಳೆ( Bangalore Rains) ಇರಲಿದೆ.

ಮೈಸೂರಿನಲ್ಲಿ ಕಂಡು ಬಂದ ಮೋಡದ ನೋಟ. (ಚಿತ್ರ: ರವಿಕೀರ್ತಿ ಗೌಡ ಮೈಸೂರು)
ಮೈಸೂರಿನಲ್ಲಿ ಕಂಡು ಬಂದ ಮೋಡದ ನೋಟ. (ಚಿತ್ರ: ರವಿಕೀರ್ತಿ ಗೌಡ ಮೈಸೂರು)

ಬೆಂಗಳೂರು: ಕರ್ನಾಟಕದಲ್ಲಿ ಕೆಲ ದಿನಗಳ ಬಿಡುವಿನ ಬಳಿಕ ಮಳೆ ಮತ್ತೆ( Karnataka Rains)ಚುರುಕುಗೊಂಡಿದೆ. ಅದರಲ್ಲೂ ಕರಾವಳಿ ಭಾಗದಲ್ಲಿ ಮಳೆ ಜೋರಾಗಿದೆ. ಮಲೆನಾಡು ಭಾಗದಲ್ಲೂ ಭಾರೀ ಮಳೆಯಾಗುತ್ತಿದ್ದು, ಉತ್ತರ ಹಾಗೂ ದಕ್ಷಿಣ ಒಳನಾಡಿನಲ್ಲೂ ನೈರುತ್ಯ ಮುಂಗಾರು ಪ್ರಭಾವವು ಹೆಚ್ಚಾಗಿದೆ. ಮುಂದಿನ ಮೂರ್ನಾಲ್ಕು ದಿನ ಕರಾವಳಿ, ಮಲೆನಾಡು ಸೇರಿದಂತೆ ಹಲವು ಜಿಲ್ಲೆಗಳಲ್ಲಿ ಭಾರೀ ಮಳೆ ಮುನ್ಸೂಚನೆ ನೀಡಲಾಗಿದೆ. ಆಗಸ್ಟ್‌ 28ರ ಬುಧವಾರದಂದು ಏಳು ಜಿಲ್ಲೆಗಳಿಗೆ ಭಾರತೀಯ ಹವಾಮಾನ ಇಲಾಖೆ ಅಲರ್ಟ್‌ ಘೋಷಿಸಿದೆ. ಇದರಲ್ಲ ಕರಾವಳಿಯ ಉಡುಪಿ, ಉತ್ತರ ಕನ್ನಡ ಹಾಗೂ ಮಲೆನಾಡಿನ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಯಲ್ಲಿ ಅತೀ ಭಾರೀ ಮಳೆಯ ಆರೆಂಜ್‌ ಅಲರ್ಟ್‌ ಘೋಷಣೆಯಾಗಿದೆ. ಬೆಳಗಾವಿ, ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆಯಿದ್ದು, ಯಲ್ಲೊ ಅಲರ್ಟ್‌ ಘೋಷಿಸಲಾಗಿದೆ. ಮಂಗಳವಾರವೂ ಕರಾವಳಿ ಸಹಿತ ವಿವಿಧ ಭಾಗಗಳಲ್ಲಿ ಉತ್ತಮ ಮಳೆಯಾಗಿದೆ. ಬೆಂಗಳೂರು ಹಾಗೂ ಸುತ್ತಮುತ್ತಲ ಪ್ರದೇಶದಲ್ಲಿ ಹಗುರ ಮಳೆಯಾಗುವ ಸಾಧ್ಯತೆಗಳಿವೆ.

CTA icon
ನಿಮ್ಮ ನಗರದ ಹವಾಮಾನ ತಿಳಿಯಲು ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಬುಧವಾರದಂದು ಪ್ರತ್ಯೇಕವಾದ ಭಾರೀ ಹಾಗೂ ಅತೀ ಭಾರೀ ಮಳೆ ಬಹುತೇಕ ಎಲ್ಲಾ ಕಡೆಗಳಲ್ಲಿ ಆಗಬಹದು. ಈ ಭಾಗದಲ್ಲಿ ಗಾಳಿ ಪ್ರಮಾಣವೂ ಅಧಿಕವಾಗಿರಬಹುದು. ಗಾಳಿ ವೇಗವು ಎರಡೂ ಜಿಲ್ಲೆಗಳಲ್ಲಿ ಗಂಟೆಗೆ 40-50 ಕಿ.ಮಿ ಇರಬಹುದು. ಅದೇ ರೀತಿ ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಭಾರೀಯಿಂದ ಅತೀ ಭಾರೀ ಮಳೆ ಸುರಿಯುವ ಮುನ್ಸೂಚನೆಯಿದೆ. ಈ ಜಿಲ್ಲೆಗಳಲ್ಲಿ ಗಾಳಿ ಪ್ರಮಾಣವು ಗಂಟೆಗೆ 30-40 ಕಿ.ಮೀ ಇರಲಿದೆ. ದಕ್ಷಿಣ ಹಾಗೂ ಕೊಡಗು ಜಿಲ್ಲೆಗಳಲ್ಲೂ ಭಾರೀ ಮಳೆ ಸುರಿಯುವ ಸಾಧ್ಯತೆಗಳು ಅಧಿಕವಾಗಿವೆ. ಈ ಭಾಗದಲ್ಲೂ ಗಾಳಿಯ ವೇಗ ಹೆಚ್ಚೇ ಇರಲಿದೆ. ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲೂ ಭಾರೀ ಮಳೆಯಾಗುವ ಸೂಚನೆಯನ್ನು ನೀಡಲಾಗಿದೆ. ಉತ್ತರ ಒಳನಾಡಿನ ಹಲವಾರು ಜಿಲ್ಲೆಗಳಲ್ಲಿ ಲಘುವಾಗಿ ಮಳೆಯಾಗಬಹುದು. ಅಲ್ಲದೇ ಗಾಳಿ ವೇಗವೂ ಕೂಡ ಹೆಚ್ಚು ಇರುವ ಸಂಭವವಿದೆ. ದಕ್ಷಿಣ ಒಳನಾಡಿನ ಕೆಲವು ಸ್ಥಳಗಳಲ್ಲಿ ಸಾಧಾರಣ ಮಳೆಯಾಗಲಿದೆ ಎಂದು ಭಾರತೀಯ ಹವಾಮಾನ ಇಲಾಖೆ ಬೆಂಗಳೂರು ಕೇಂದ್ರವು ತನ್ನ ದೈನಂದಿನ ಹವಾಮಾನ ವರದಿಯಲ್ಲಿ ತಿಳಿಸಿದೆ.

ಕರಾವಳಿ ಭಾಗದಲ್ಲಿ ಭಾರೀಯಿಂದ ಅತೀ ಭಾರಿ ಮಳೆ ಹಾಗೂ ಗಾಳಿಯ ವೇಗವು ಅಧಿಕವಾಗಿರುವುದರಿಂದ ಮೀನುಗಾರರು ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದೆ.

ಬೆಂಗಳೂರು ಹವಾಮಾನ

ರಾಜಧಾನಿ ಬೆಂಗಳೂರು ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಮುಂದಿನ 48 ಗಂಟೆಗಳ ಕಾಲ ಮೋಡ ಕವಿದ ವಾತಾವರಣವೇ ಹೆಚ್ಚು ಕಂಡು ಬರಲಿದೆ. ಆಗಾಗ ಹಗುರವಾಗಿ ಮಳೆಯಾಗಬಹುದು. ನಿರಂತರ ಗಾಳಿಯ ವೇಗವು ಗಂಟೆಗೆ 30-40 ಕಿ.ಮೀ ನಷ್ಟು ಇರಬಹುದು. ಬೆಂಗಳೂರು ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಗರಿಷ್ಠ ಉಷ್ಣಾಂಶವು 28 ಡಿಗ್ರಿ ಸೆಲ್ಸಿಯಸ್‌ ಹಾಗೂ ಕನಿಷ್ಠ ಉಷ್ಣಾಂಶವು 20 ಡಿಗ್ರಿ ಸೆಲ್ಸಿಯಸ್‌ ಇರಬಹುದು.

ಕ್ಯಾಸಲ್‌ ರಾಕ್‌ ನಲ್ಲಿ ಅಧಿಕ ಮಳೆ

ಸೋಮವಾರ ಸಂಜೆ ಹಾಗೂ ಮಂಗಳವಾರಂದು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಉತ್ತಮ ಮಳೆಯಾಗಿದೆ. ಉತ್ತರ ಕನ್ನಡದ ಕ್ಯಾಸಲ್‌ ರಾಕ್‌ ನಲ್ಲಿ ಅತ್ಯಧಿಕ 16 ಸೆ.ಮೀ ಮಳೆ ಸುರಿದಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಟ್ಟಿಗೆಹಾರದಲ್ಲಿ 11 ಸೆ.ಮೀ, ಪುತ್ತೂರಿನಲ್ಲಿ 10 ಸೆ.ಮೀ, ಶಿವಮೊಗ್ಗ ಜಿಲ್ಲೆ ಆಗುಂಬೆ ಹಾಗೂ ಕೊಡಗಿನ ಭಾಗಮಂಡಲದಲ್ಲಿ ತಲಾ 8 ಸೆ.ಮೀ ಹಾಗೂ ಬೆಳಗಾವಿ ಜಿಲ್ಲೆ ಲೋಂಡಾದಲ್ಲಿ 7 ಸೆ.ಮೀ ಮಳೆಯಾಗಿದೆ.

ಉತ್ತರ ಕನ್ನಡದ ಮಂಕಿ, ಶಿರಾಲಿ, ಗೇರುಸೊಪ್ಪ, ಹೊನ್ನಾವರ, ಕುಮಟಾ, ಜೋಯಿಡಾ, ಬನವಾಸಿ, ಸಿದ್ದಾಪುರ, ಕಿರವತ್ತಿ, ಗೋಕರ್ಣ, ಕಾರವಾರ, ಮುಂಡಗೋಡ, ಅಂಕೋಲಾ, ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ, ಕಮ್ಮರಡಿ, ಜಯಪುರ, ಮೂಡಿಗೆರೆ, ಕೊಪ್ಪ, ಎನ್‌ಆರ್‌ ಪುರ, ಬಾಳೆ ಹೊನ್ನೂರು, ಕೊಡಗಿನ ಪೊನ್ನಂಪೇಟೆ, ನಾಪೊಕ್ಲು, ಸೋಮವಾರಪೇಟೆ, ದಕ್ಷಿಣ ಕನ್ನಡದ ಮಾಣಿ, ಧರ್ಮಸ್ಥಳ, ಬೆಳ್ತಂಗಡಿ, ಸುಳ್ಯ, ಪಣಂಬೃು, ಮಂಗಳೂರು, ಮೂಲ್ಕಿ, ಧಾರವಾಡ, ಶಿವಮೊಗ್ಗದ ಹುಂಚದಕಟ್ಟೆ, ಲಿಂಗನಮಕ್ಕಿ, ತ್ಯಾಗರ್ತಿ, ಉಡುಪಿ, ಸಿದ್ದಾಪುರ, ಕುಂದಾಪುರ, ಬೆಳಗಾವಿಯ ನಿಪ್ಪಾಣಿ, ಹುಕ್ಕೇರಿ, ಸಂಕೇಶ್ವರ, ಬೈಲಹೊಂಗಲ, ಹಿಡಕಲ್‌ ಜಲಾಶಯ, ರಾಯಚೂರು, ಮಾನ್ವಿ, ಮಸ್ಕಿಯಲ್ಲಿ ಉತ್ತಮ ಮಳೆಯಾಗಿದೆ.

Whats_app_banner