ಕಸ್ತೂರಿ ರಂಗನ್ ವರದಿ ವಿರುದ್ಧ ದಕ್ಷಿಣ ಕನ್ನಡದಲ್ಲಿ ತೀವ್ರಗೊಂಡ ಹೋರಾಟ: ಪ್ರತಿಭಟಿಸಿದ ಸುಳ್ಯ, ಬೈಂದೂರು ಶಾಸಕರ ವಿರುದ್ಧ ಕೇಸ್
Kasturirangan Report: ಕಸ್ತೂರಿ ರಂಗನ್ ವರದಿ ವಿರುದ್ಧ ದಕ್ಷಿಣ ಕನ್ನಡದಲ್ಲಿ ಹೋರಾಟ ತೀವ್ರಗೊಂಡಿದೆ. ಆದರೆ, ಪ್ರತಿಭಟನೆ ನಡೆಸಿದ ಸುಳ್ಯ, ಬೈಂದೂರು ಶಾಸಕರ ವಿರುದ್ಧ ಪ್ರಕರಣ ದಾಖಲಾಗಿದೆ.
ಮಂಗಳೂರು: ಕಸ್ತೂರಿ ರಂಗನ್ ವರದಿ ವಿರೋಧಿಸಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಹೋರಾಟ ತೀವ್ರಗೊಂಡಿದ್ದು, ನವೆಂಬರ್ 15ರಂದು ಈ ಕುರಿತು ಮಲೆನಾಡು ಜನಹಿತ ರಕ್ಷಣಾ ವೇದಿಕೆಯ ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗವಹಿಸಿದ ಬೈಂದೂರು ಶಾಸಕ ಗುರುರಾಜ ಗಂಟಿಹೊಳಿ ಹಾಗೂ ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಸಹಿತ 15 ಮಂದಿ ವಿರುದ್ಧ ಪ್ರಕರಣ ದಾಖಲಾಗಿದೆ. ಉಪ್ಪಿನಂಗಡಿ ಠಾಣಾ ಎಸ್ಐ ಅವಿನಾಶ್ ಅವರ ದೂರಿನಂತೆ ಈ ಕೇಸು ದಾಖಲಾಗಿದೆ.
ನವೆಂಬರ್ 15ರಂದು ಸಿರಿಬಾಗಿಲು ಗ್ರಾಮದ ಲಕ್ಷ್ಮೀ ವೆಂಕಟೇಶ್ ದೇವಸ್ಥಾನದ ಮಾಡ ಮೈದಾನದಲ್ಲಿ ಮಲೆನಾಡು ಜನಹಿತ ರಕ್ಷಣಾ ವೇದಿಕೆ ವತಿಯಿಂದ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆ ನಡೆದಿತ್ತು. ಪ್ರತಿಭಟನಾ ಸಭೆಯಲ್ಲಿದ್ದವರು ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ ಅವರ ನೇತೃತ್ವದಲ್ಲಿ ಪ್ರತಿಭಟನಾ ಸಭೆಯ ಸ್ಥಳದಿಂದ ಸುಮಾರು 1 ಕಿಲೋಮೀಟರ್ ದೂರದ ರಾಷ್ಟ್ರೀಯ ಹೆದ್ದಾರಿ 75ರ ಕಡಬ ತಾಲೂಕು ಶಿರಾಡಿ ಗ್ರಾಮದ ಗುಂಡ್ಯ ಪೇಟೆಗೆ ಬಂದು ಮದ್ಯಾಹ್ನ 2.30 ಗಂಟೆಗೆ ರಸ್ತೆತಡೆಯನ್ನು ಪ್ರಾರಂಭಿಸಿತ್ತು.
ಯಾರೆಲ್ಲಾ ಪ್ರತಿಭಟನೆಯಲ್ಲಿದ್ದರು?
ರಸ್ತೆಯ ಮಧ್ಯದಲ್ಲಿಯೇ ಶಾಸಕರಾದ ಭಾಗೀರಥಿ ಮುರುಳ್ಯ, ಗುರುರಾಜ್ ಗಂಟಿಹೊಳೆ, ಮಲೆನಾಡು ಜನಹಿತ ರಕ್ಷಣಾ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಪ್ರತಿಭಟನಾಕಾರರಾದ ಸುಧೀರ್ ಶೆಟ್ಟಿ, ನವೀನ್ ನೆರಿಯಾ, ಸತೀಶ್ ಶೆಟ್ಟಿ ಬಲ್ಯ, ಉಮೇಶ್ ಸಾಯಿರಾಮ್, ವೆಂಕಟ ಒಳಲಂಬೆ, ಪ್ರಕಾಶ್ ಗುಂಡ್ಯ, ಪ್ರಸಾದ್ ನೆಟ್ಟಣ, ಸೈಯದ್ ಮೀರಾನ್ ಸಾಹೇಬ್, ಉಮೇಶ್ ಬಲ್ಯ, ನವೀನ್ ರೆಖ್ಯಾ, ಯತೀಶ್ ಗುಂಡ್ಯ, ಗಣೇಶ್ ಮತ್ತು ಇತರರು ಅಕ್ರಮಕೂಟ ಸೇರಿಕೊಂಡು ಅಕ್ರಮ ರಸ್ತೆ ತಡೆ ಮಾಡಿ ಪ್ರತಿಭಟನೆಯನ್ನು ಮಾಡಿದ್ದಾರೆ.
ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮಾಡದಂತೆ ಹಾಗೂ ಸಾರ್ವಜನಿಕ ರಸ್ತೆಗೆ ಅಡ್ಡಿಪಡಿಸದಂತೆ ತಿಳಿಸಿದರೂ ಇವರು ಕೇಳದೆ ಪ್ರತಿಭಟನೆಯನ್ನು ಮುಂದುವರಿಸಿ ಕಸ್ತೂರಿ ರಂಗನ್ ವರದಿ ವಿರೋಧಿಸಿ ಸರ್ಕಾರ ಮತ್ತು ಕಂದಾಯ ಇಲಾಖೆಯ ಅಧಿಕಾರಿಗಳ ವಿರುದ್ದ ಘೋಷಣೆ ಕೂಗಿದ್ದಾರೆ. ಈ ರೀತಿ ಅಕ್ರಮ ಕೂಟ ಸೇರಿಕೊಂಡು ರಸ್ತೆ ತಡೆ ಮಾಡಿ ಸಾರ್ವಜನಿಕ ಸಂಚಾರಕ್ಕೆ ಅಡ್ಡಿಪಡಿಸುತ್ತಿರುವುದು ಕಾನೂನು ಬಾಹಿರ ಎಂದು ತಿಳಿಸಿದರೂ ಗಣನೆಗೆ ತೆಗೆದುಕೊಳ್ಳದೆ ಮಧ್ಯಾಹ್ನ 3.30 ಗಂಟೆಯ ತನಕ ರಸ್ತೆ ತಡೆಮಾಡಿ ಸಾರ್ಜಜನಿಕರ ಮತ್ತು ವಾಹನ ಸಂಚಾರಕ್ಕೆ ಅಡಚಣೆ ಉಂಟು ಮಾಡಿರುತ್ತಾರೆ ಎಂದು ನೀಡಿದ ದೂರಿನಂತೆ ಪ್ರಕರಣ ದಾಖಲಾಗಿದೆ.
ಯಾಕಿಷ್ಟು ಹೋರಾಟ? ವರದಿ ಅನುಷ್ಠಾನವಾದರೆ ಏನಾಗಲಿದೆ?
ಕಸ್ತೂರಿ ರಂಗನ್ ವರದಿ ಅನುಷ್ಠಾನವಾದರೆ ಪಶ್ಚಿಮ ಘಟ್ಟ ಹಾಗೂ ಮಲೆನಾಡು ಅತಿ ಸೂಕ್ಷ್ಮ ಪರಿಸರ ವಲಯವಾಗಿ ಪರಿವರ್ತನೆಯಾಗುತ್ತದೆ. ಹೀಗಾದರು ತೊಂದರೆ ಇಲ್ಲ ಆದರೆ ರಂಗನ್ ವರದಿ ಪ್ರಕಾರ, ಈ ಭಾಗದಲ್ಲಿ. ಮಾನವ ಹಸ್ತಕ್ಷೇಪವನ್ನು ಮಾಡುವಂತೆ ಇಲ್ಲ. ರಾಜ್ಯದ ನಿಯಂತ್ರಣವನ್ನು ಕಳೆದುಕೊಂಡು ಕೇಂದ್ರದ ಸುಪರ್ದಿಗೆ ಈ ಭೂಮಿ ಬರುತ್ತದೆ. ಮುಖ್ಯವಾಗಿ ಇಲ್ಲಿರುವ ಆದಿವಾಸಿಗಳನ್ನು ಒಕ್ಕಲೆಬ್ಬಿಸಬೇಕಾಗುತ್ತದೆ. ವಿದ್ಯುತ್, ನೀರಾವರಿ ಸೇರಿದಂತೆ ಯಾವುದೇ ಸಣ್ಣ ಪ್ರಮಾಣದ ಕೈಗಾರಿಕೆಯನ್ನೂ ನಡೆಸಲು ಕಷ್ಟವಾಗಬಹುದು.
ಈಗಾಗಲೇ ಕಾಡು ಪ್ರಾಣಿಗಳ ಹಾವಳಿ ಮಿತಿ ಮೀರಿದ್ದು, ರೈತರು ತಾವು ಬೆಳೆದ ಕೃಷಿ ಬೆಳೆಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಿದೆ. ಯೋಜನೆ ಜಾರಿಯಾದರೆ ಭೂಮಿ ಕಳೆದುಕೊಳ್ಳುವ ರೈತರು ಹೋಗುವುದಾದರೂ ಎಲ್ಲಿಗೆ ಎಂಬುದು ಪ್ರತಿಭಟನಾಕಾರರ ವಾದ. ಕೇಂದ್ರ ಸರ್ಕಾರದ ಅಧಿಸೂಚನೆ ಪ್ರಕಾರ ರಾಜ್ಯದ 1,553ಕ್ಕೂ ಹೆಚ್ಚು ಹಳ್ಳಿಗಳು ಈ ವ್ಯಾಪ್ತಿಗೆ ಬರುತ್ತದೆ. ಆದ್ರೆ, ಕೇಂದ್ರ ಸರ್ಕಾರದ ಮೊದಲ ಎರಡು ಬಾರಿಯ ಅಧಿಸೂಚನೆಯಲ್ಲಿ ಕೇರಳ ರಾಜ್ಯವೂ ಇತ್ತು. ಮೂರನೇ ಬಾರಿ ಹೊರಡಿಸಿರುವ ಅಧಿಸೂಚನೆಯಲ್ಲಿ ಕೇರಳದ ಹೆಸರೇ ಕಾಣಿಸಲಿಲ್ಲ.