ಕಾಲಿಯಾ ಹೇಳಿಕೆ ವಿವಾದ ಎಬ್ಬಿಸಿದ ವಕ್ಫ್‌ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌
ಕನ್ನಡ ಸುದ್ದಿ  /  ಕರ್ನಾಟಕ  /  ಕಾಲಿಯಾ ಹೇಳಿಕೆ ವಿವಾದ ಎಬ್ಬಿಸಿದ ವಕ್ಫ್‌ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌

ಕಾಲಿಯಾ ಹೇಳಿಕೆ ವಿವಾದ ಎಬ್ಬಿಸಿದ ವಕ್ಫ್‌ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌

ಚನ್ನಪಟ್ಟಣ ಚುನಾವಣಾ ಕಣದಲ್ಲಿ ಕೇಂದ್ರ ಸಚಿವ ಎಚ್‌ ಡಿ ಕುಮಾರಸ್ವಾಮಿ ಅವರನ್ನು ಕಾಲಿಯಾ ಎಂದು ಸಂಬೋಧಿಸಿ ವಿವಾದ ಎಬ್ಬಿಸಿದ ವಕ್ಫ್ ಸಚಿವ ಜಮೀರ್ ಅಹ್ಮದ್ ಖಾನ್‌ ಅವರಿಗೆ ಲೋಕಾಯುಕ್ತ ನೋಟಿಸ್ ಜಾರಿಯಾಗಿದೆ. ಇದನ್ನು ಸ್ವತಃ ಅವರೇ ಬಹಿರಂಗಪಡಿಸಿದ್ದು, ವಿವರ ಇಲ್ಲಿದೆ.

ಕಾಲಿಯಾ ವಿವಾದ ಎಬ್ಬಿಸಿದ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌ ಜಾರಿಯಾಗಿದೆ. (ಕಡತ ಚಿತ್ರ)
ಕಾಲಿಯಾ ವಿವಾದ ಎಬ್ಬಿಸಿದ ಸಚಿವ ಜಮೀರ್ ಅಹ್ಮದ್‌ಗೆ ಆದಾಯ ಮೀರಿದ ಆಸ್ತಿ ಕೇಸ್‌ನಲ್ಲಿ ಲೋಕಾಯುಕ್ತ ನೋಟಿಸ್‌ ಜಾರಿಯಾಗಿದೆ. (ಕಡತ ಚಿತ್ರ) (HT News)

ಬೆಂಗಳೂರು: ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿ ವಕ್ಫ್‌ ಸಚಿವ ಬಿ ಝೆಡ್ ಜಮೀರ್ ಅಹ್ಮದ್ ಖಾನ್‌ಗೆ ಲೋಕಾಯುಕ್ತ ಪೊಲೀಸರಿಂದ ಸಮನ್ಸ್ ಜಾರಿಯಾಗಿದೆ. ಈ ವಿಷಯವನ್ನು ಖುದ್ದು ಅವರೇ ಶನಿವಾರ ಬಹಿರಂಗಪಡಿಸಿದ್ದಾರೆ ಎಂದು ಪಿಟಿಐ ವರದಿ ಮಾಡಿದೆ. ಅಕ್ರಮ ಆಸ್ತಿಗೆ ಸಂಬಂಧಿಸಿ ಜಾರಿ ನಿರ್ದೇಶನಾಲಯ ದಾಳಿ ನಡೆಸಿತು. ಅದಾಗಿ, ಅದು ಹೆಚ್ಚಿನ ತನಿಖೆಗಾಗಿ ಈ ಕೇಸ್ ಅನ್ನು ಭ್ರಷ್ಟಾಚಾರ ನಿಗ್ರಹ ದಳಕ್ಕೆ ವರ್ಗಾಯಿಸಿದೆ. ಭ್ರಷ್ಟಾಚಾರ ನಿಗ್ರಹ ದಳ ಅದನ್ನು ಹೆಚ್ಚಿನ ತನಿಖೆಗಾಗಿ ಲೋಕಾಯುಕ್ತಕ್ಕೆ ವರ್ಗಾವಣೆ ಮಾಡಿದೆ. ಇದೇ ಕಾರಣಕ್ಕೆ ಲೋಕಾಯುಕ್ತದಿಂದ ಸಮನ್ಸ್ ಜಾರಿಯಾಗಿದೆ ಎಂದು ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾಗಿ ವರದಿ ಹೇಳಿದೆ.

ಆದಾಯ ಮೀರಿದ ಆಸ್ತಿ ಪ್ರಕರಣ; ಲೋಕಾಯುಕ್ತ ನೋಟಿಸ್ ಬಗ್ಗೆ ಜಮೀರ್ ಹೇಳಿದ್ದೇನು

ಆದಾಯ ಮೀರಿದ ಆಸ್ತಿ ಗಳಿಕೆಗೆ ಸಂಬಂಧಿಸಿ ಬಂದಿರುವ ನೋಟಿಸ್‌ನಲ್ಲಿ ಹೊಸದೇನೂ ಇಲ್ಲ. ಅದು ಸಾಮಾನ್ಯ ನೋಟಿಸ್ ಎಂದು ವಕ್ಫ್‌ ಸಚಿವ ಜಮೀರ್ ಅಹ್ಮದ್ ಖಾನ್ ಹೇಳಿದ್ದಾಗಿ ಪಿಟಿಐ ವರದಿ ಮಾಡಿದೆ.

ಐಎಂಎ ಪೊಂಜಿ ಹಗರಣದ ತನಿಖೆ ನಡೆಸುತ್ತಿರುವಾಗ, 2021ರ ಆಗಸ್ಟ್‌ನಲ್ಲಿ ಜಾರಿ ನಿರ್ದೇಶನಾಲಯವು ಜಮೀರ್ ಅಹ್ಮದ್‌ ಖಾನ್ ಮನೆ, ಕಚೇರಿಗಳಿಗೆ ದಾಳಿ ನಡೆಸಿತ್ತು ಎಂದು ಮೂಲಗಳು ತಿಳಿಸಿವೆ.

ಅಕ್ರಮ ಆಸ್ತಿ ಗಳಿಕೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಅಂಶಗಳನ್ನು ಇಡಿ ನಂತರ ಎಸಿಬಿಯೊಂದಿಗೆ ಹಂಚಿಕೊಂಡಿದೆ. ಎಸಿಬಿ ನಿಷ್ಕ್ರಿಯಗೊಂಡ ನಂತರ, ಮುಂದಿನ ತನಿಖೆಗಾಗಿ ಪ್ರಕರಣವನ್ನು ಲೋಕಾಯುಕ್ತಕ್ಕೆ ವರ್ಗಾಯಿಸಲಾಯಿತು ಎಂದು ಮೂಲಗಳು ಹೇಳಿದ್ದಾಗಿ ವರದಿ ವಿವರಿಸಿದೆ.

ಚನ್ನಪಟ್ಟಣ ಉಪಚುನಾವಣೆ; ಕಾಲಿಯಾ ಕುಮಾರಸ್ವಾಮಿ ವಿವಾದ

ಚನ್ನಪಟ್ಟಣ ಉಪಚುನಾವಣೆ ಪ್ರಚಾರದ ವೇಳೆ ಕಾಂಗ್ರೆಸ್ ಅಭ್ಯರ್ಥಿ ಸಿ ಪಿ ಯೋಗೇಶ್ವರ ಪರ ಪ್ರಚಾರ ಮಾಡಿದ ವಕ್ಫ್‌ ಸಚಿವ ಜಮೀರ್ ಅಹ್ಮದ್ ಖಾನ್‌, ಕೇಂದ್ರ ಸಚಿವ ಎಚ್ ಡಿ ಕುಮಾರಸ್ವಾಮಿ ಅವರನ್ನು ಕಾಲಿಯಾ ಎಂದು ಸಂಬೋಧಿಸಿದ್ದು ವಿವಾದಕ್ಕೀಡಾಗಿದೆ. ಕುಮಾರಸ್ವಾಮಿ ಅವರ ಮೈ ಬಣ್ಣವನ್ನು ಉಲ್ಲೇಖಿಸಿ ಲೇವಡಿ ಮಾಡಿದ್ದು ವ್ಯಾಪಕ ಟೀಕೆಗೆ ಒಳಗಾಯಿತು. ರಾಮನಗರದಲ್ಲಿ ಅಲ್ಪಸಂಖ್ಯಾರನ್ನು ಉದ್ದೇಶಿಸಿ ಪ್ರಚಾರ ಮಾಡುತ್ತಿದ್ದ ವೇಳೆ ಸಚಿವ ಜಮೀರ್ ಅಹ್ಮದ್ ಖಾನ್ ಈ ಹೇಳಿಕೆ ನೀಡಿದ್ದರು.

ಇದ ಬೆನ್ನಿಗೆ ತನ್ನ ಹೇಳಿಕೆ ಸಮರ್ಥಿಸಿಕೊಂಡ ಜಮೀರ್ ಅಹ್ಮದ್ ಖಾನ್, ತಾವಿಬ್ಬರೂ ಗೆಳೆಯರು. ಅವರು ತನ್ನನ್ನು ಕುಳ್ಳ ಎಂದು ಕರೆಯುತ್ತಾರೆ. ಹಾಗೆ ತಾನು ಅವರನ್ನು ಕರಿಯ ಎಂದು ಹೇಳುತ್ತೇನೆ ಎಂದಿದ್ದರು. ಆದರೆ, ಉಪಚುನಾವಣೆ ಸಂದರ್ಭವಾದ ಕಾರಣ ಈ ಹೇಳಿಕೆ ವ್ಯತಿರಿಕ್ತ ಪರಿಣಾಮ ಬೀರಿದೆ. ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಕೂಡ ಜಮೀರ್ ಅಹ್ಮದ್ ಹೇಳಿಕೆ ತಪ್ಪು. ಆಂತರಿಕವಾಗಿ ಅವರನ್ನು ಎಚ್ಚರಿಸುವ ಕೆಲಸ ಮಾಡತ್ತೇವೆ ಎಂದು ಹೇಳಿದ್ದಾರೆ.

ಆದರೆ ಜಮೀರ್ ಅಹ್ಮದ್ ಖಾನ್ ಅವರು ಇನ್ನೂ ತಮ್ಮ ಹೇಳಿಕೆ ಸರಿ ಎಂದೇ ವಾದಿಸುತ್ತಿದ್ದು, ಕೆಪಿಸಿಸಿ ಅಧ್ಯಕ್ಷರು ಅವರ ಅಭಿಪ್ರಾಯ ಹೇಳಿದ್ದಾರೆ. ನಾನು ನನ್ನ ಅಭಿಪ್ರಾಯ ವ್ಯಕ್ತಪಡಿಸಿದ್ದೇನೆ. ಅದನ್ನು ತಡೆಯೋ ಅಧಿಕಾರ ಯಾರಿಗೂ ಇಲ್ಲ ಎಂದಿದ್ದಾರೆ.

"ನಮ್ಮ ಪಕ್ಷದಲ್ಲಿ (ಕಾಂಗ್ರೆಸ್) ಕೆಲವು ಭಿನ್ನಾಭಿಪ್ರಾಯಗಳಿಂದ ಅವರು (ಸಿಪಿ ಯೋಗೇಶ್ವರ) ಸ್ವತಂತ್ರವಾಗಿ ಸ್ಪರ್ಧಿಸಿದರು. ಅವರಿಗೆ ಬಿಜೆಪಿ ಸೇರುವುದನ್ನು ಬಿಟ್ಟು ಬೇರೆ ಆಯ್ಕೆ ಇರಲಿಲ್ಲ. ಅವರು ಜೆಡಿಎಸ್‌ಗೆ ಸೇರಲು ಸಿದ್ಧರಿಲ್ಲ ಏಕೆಂದರೆ 'ಕಾಲಿಯಾ ಕುಮಾರಸ್ವಾಮಿ' ಬಿಜೆಪಿಗಿಂತ ಅಪಾಯಕಾರಿ. ಈಗ ಅವರು (ಯೋಗೀಶ್ವರ) ಮನೆಗೆ ಮರಳಿದ್ದಾರೆ" ಎಂದು ಸಚಿವ ಜಮೀರ್‌ ಪ್ರಚಾರದ ವೇಳೆ ಹೇಳಿದ್ದರು.

Whats_app_banner