Vijayapura News: ಹಂಪಿ ಉತ್ಸವ ಆಗಬಹುದು, ನವರಸಪುರ ಉತ್ಸವವೇಕೆ ಬೇಡ; ತಾತ್ಸಾರಕ್ಕೆ ವಿಜಯಪುರ ಜನ ಬೇಸರ
Navarasapura Utsav 9 ವರ್ಷಗಳಿಂದ ನೆನೆಗುದ್ದಿಗೆ ಬಿದ್ದಿರುವ ವಿಜಯಪುರದ ನವರಸಪುರ ಉತ್ಸವವನ್ನು ಈ ಬಾರಿಯಾದರು ಉತ್ಸವ ಆಚರಣೆಗೆ ಇಚ್ಛೆ ತೋರಿಸುತ್ತಾರಾ ಜನಪ್ರತಿನಿಧಿಗಳು, ಜಿಲ್ಲಾಡಳಿತ ಎನ್ನುವ ಪ್ರಶ್ನೆ ಕೇಳಿ ಬಂದಿದೆ.ವರದಿ: ಸಮೀವುಲ್ಲಾ ಉಸ್ತಾದ್ ವಿಜಯಪುರ
ವಿಜಯಪುರ: ವಿಜಯಪುರದ ಭವ್ಯ ಇತಿಹಾಸ, ಪರಂಪರೆಯ ಕೊಡುಗೆಯ ಪ್ರತೀಕವಾಗಿ ಆಚರಣೆಯಾಗುವ ನವರಸಪುರ ಉತ್ಸವ ಆಚರಣೆಗೆ ತಾತ್ಸಾರ ಪುನರಾವರ್ತಿತವಾಗುತ್ತಲೇ ಇದೆ. ಕಳೆದ 9 ವರ್ಷಗಳಿಂದ ನೆನೆಗುದಿಗೆ ಬಿದ್ದಿರುವ ನವರಸಪುರ ಉತ್ಸವಕ್ಕೆ ಆಚರಣೆಗೆ ಈ ಬಾರಿಯಾದರು ಸರ್ಕಾರ, ಜಿಲ್ಲಾಡಳಿತ ಮುಂದಾಗಬೇಕು ಎನ್ನುವ ಒತ್ತಾಯ ವಿಜಯಪುರ ಸಂಸ್ಕೃತಿಪ್ರಿಯರಿಂದ ಕೇಳಿ ಬಂದಿದೆ. ಳೆದ ಹಲವು ವರ್ಷಗಳಿಂದ ಸತತ ನೆರೆ ಮತ್ತು ಬರ ಎಂದು ನೆಪ ಹೇಳುತ್ತ ಮುಂದುಡೂತ್ತಾ ಬಂದಿರುವ ನವರಸಪುರ ಉತ್ಸವ ಆಚರಣೆಗೆ ಈ ಬಾರಿಯಾದರು ಆಚರಿಸಬೇಕೆಂದು ಸಾರ್ವಜನಿಕ ವಲಯದಿಂದ ತೀವ್ರ ಒತ್ತಾಯಗಳು ಕೇಳಿಬರುತ್ತಿವೆ.
ಮೊನ್ನೆಯಷ್ಟೆ ಹಂಪಿ ಉತ್ಸವವನ್ನು ಭರ್ಜರಿಯಾಗಿಯೇ ಆಚರಿಸಲಾಗಿದೆ. ಇದೇ ಮಾದರಿಯಲ್ಲಿ ವಿಜಯಪುರದ ಭವ್ಯ ಇತಿಹಾಸವನ್ನು ಸಾರುವ ನವರಸಪುರ ಉತ್ಸವವನ್ನು ಆಚರಿಸಬೇಕೆಂದು ಇಲ್ಲಿನ ಜನರ ಒತ್ತಾಸೆಯಾಗಿದೆ. ಹೀಗಾಗಿ ವಿಜಯಪುರ ಜಿಲ್ಲಾ ಉಸ್ತುವಾರಿ ಸಚಿವರಾಗಿರುವ ಎಂ.ಬಿ.ಪಾಟೀಲರು ನವರಸಪುರ ಉತ್ಸವ ಆಚರಣೆಗೆ ಮುತುವರ್ಜಿ ವಹಿಸಿ ನವರಸಪುರ ಉತ್ಸವ ಆಚರಣೆಗೆ ಮುನ್ನುಡಿ ಬರೆಯಬೇಕಾಗಿದೆ.
ಯತ್ನಾಳರೂ ಹೇಳಿದ್ದರು
ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ ಯತ್ನಾಳ ಸಹ ಮುಂದಿನ ಬಾರಿ ಅದ್ದೂರಿಯಾಗಿ ನವರಸಪುರ ಉತ್ಸವ ಆಯೋಜಿಸಲಾಗುವುದು ಎಂದು ಈ ಹಿಂದೆ ಅವರು ಹೇಳಿದ್ದನ್ನು ಸಹ ಇಲ್ಲಿ ಸ್ಮರಿಸಬಹುದಾಗಿದೆ. ಸದ್ಯ ಅವರೇ ಶಾಸಕರು ಇರುವುದರಿಂದ ಈ ಬಾರಿಯಾದರೂ ನವರಸಪುರ ಉತ್ಸವ ಆಯೋಜನೆಗೆ ಇಚ್ಛೆ ತೋರಿಸಿ ಸರ್ಕಾರ ಹಾಗೂ ಜಿಲ್ಲಾಡಳಿತದ ಮೇಲೆ ಒತ್ತಡ ಹೇರುತ್ತಾರಾ ನೋಡಬೇಕಿದೆ ಎನ್ನುತ್ತಾರೆ ವಿಜಯಪುರದ ಜನತೆ.
ದಸರಾ, ಹಂಪಿ ಸೇರಿದಂತೆ ರಾಜ್ಯಾದ್ಯಂತ ಪ್ರತಿವರ್ಷವು ಉತ್ಸವಗಳನ್ನು ಆಚರಿಸುತ್ತಲೇ ಬರಲಾಗುತ್ತಿದೆ. ಆದರೆ ಪ್ರತಿವರ್ಷವು ನವರಸಪುರ ಉತ್ಸವವನ್ನು ಕಡೆಗಣಿಸಲಾಗುತ್ತಿದೆ. ಇಲ್ಲಿನ ಜನಪ್ರತಿನಿಧಿಗಳು, ಅಧಿಕಾರಿಗಳ ಇಚ್ಛಾಶಕ್ತಿ ಕೊರತೆಯಿಂದ ವಿಜಯಪುರದ ಈ ಹಬ್ಬವನ್ನು ಸಾರ್ವಜನಿಕರು ಕಣ್ತುಂಬಿಕೊಳ್ಳದಂತಾಗಿದೆ.
ಎಂಬಿಪಾಟೀಲರ ಪ್ರಯತ್ನ
2015ರಲ್ಲಿ ಅಂದಿನ ಜಿಲ್ಲಾ ಉಸ್ತುವಾರಿ ಸಚಿವರಾಗಿದ್ದ ಎಂ.ಬಿ.ಪಾಟೀಲರ ನೇತೃತ್ವದಲ್ಲಿ ಹಾಗೂ ಅಂದಿನ ವಿಜಯಪುರ ನಗರ ಶಾಸಕ ಡಾ.ಮಕ್ಬೂಲ್ ಬಾಗವಾನ ಅವರ ಅಧ್ಯಕ್ಷತೆಯಲ್ಲಿ ನವರಸಪುರ ಉತ್ಸವ ಅದ್ದೂರಿಯಾಗಿ ಆಯೋಜಿಸಲಾಗಿತ್ತು. ಪ್ಯಾರಾಗೈಡಿಂಗ್, ಪ್ಯಾರಾಸೆಲ್ಲಿಂಗ್, ಹೆಲಿಕಾಪ್ಟರ್ ರೈಡ್, ಬೋಟಿಂಗ್, ಸೈಕ್ಲಿಂಗ್ ಸ್ಪರ್ಧೆ ಸೇರಿಂದಂತೆ ಮುಂತಾದ ಕ್ರೀಡಾ ಚಟುವಟಿಕೆಗಳು ನಡೆದಿದ್ದವು. ಇಷ್ಟೆಅಲ್ಲದೆ ನವರಸಪುರದ ಸಂಗೀತ ಮಹಲ್, ಗಗನ ಮಹಲ್, ಗೋಳಗುಮ್ಮಟ ಆವರಣದಲ್ಲಿ ಬೃಹತ್ ವೇದಿಕೆ ನಿರ್ಮಿಸಿ ಪ್ರತಿದಿನ ಸಂಜೆ ಹಲವಾರು ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆದಿದ್ದವು.
ಸಂಗೀತ ಮಹಲ್ ಮಹತ್ವ
ಆದಿಲ್ ಶಾಹಿ ನಿರ್ಮಾಣದ ನವರಸಪುರ (ಸಂಗೀತ ಮಹಲ್)ದಲ್ಲಿ ರಾಜಮನೆತನ ಹಾಗೂ ಪ್ರಜೆಗಳ ಮನರಂಜನೆಗಾಗಿ ನಡೆಯುತ್ತಿದ್ದ ಸಂಗೀತ ಸಂಜೆ ಕಾರ್ಯಕ್ರಮ ಮುಂದೆ ನವರಸಪುರ ಉತ್ಸವವಾಗಿ ವಿಜಯಪುರ ಜಿಲ್ಲೆಯಲ್ಲಿ ಸಾಕಷ್ಟು ಪ್ರಸಿದ್ದಿ ಪಡೆದುಕೊಂಡಿತು.ಕೊನೆಯ ಬಾರಿ 2015ರಲ್ಲಿ ನಗರದಲ್ಲಿ ನವರಸಪುರ ಉತ್ಸವ ಆಚರಿಸಲಾಗಿತ್ತು.
ಈ ಉತ್ಸವ ನಡೆಸಲು ಸರ್ಕಾರ ನೀಡುವ ಅನುದಾನವನ್ನು ಬೇರಾವುದಕ್ಕೂ ಬಳಸಬಾರದು ಎನ್ನುವ ನಿಯಮಾವಳಿ ಸಹ ಇದೆ. ಆಕಸ್ಮಿಕವಾಗಿ ಉತ್ಸವ ಆಚರಣೆ ಮಾಡದಿದ್ದರೆ ಆ ಅನುದಾನ ಸರ್ಕಾರದ ಖಜಾನೆಗೆ ವಾಪಸ್ ಆಗುತ್ತದೆ.
ಪ್ರವಾಸೋದ್ಯಮಕ್ಕೆ ಒತ್ತು
ವಿಜಯಪುರ ಜಿಲ್ಲೆಗೆ ಸಂಗೀತದ ರಸೌತಣ ನೀಡುತ್ತಿದ್ದ ನವರಸಪುರ ಉತ್ಸವ ಈಗ ಜನರ ಮನಸ್ಸಿನಿಂದಲೇ ಮರೆಯಾಗಿದೆ. ಇಂಥ ಉತ್ಸವಗಳಿಂದ ಸ್ಥಳೀಯ ಕಲಾವಿದರಿಗೆ ಆರ್ಥಿಕವಾಗಿ ಸಾಕಷ್ಟು ಅನುಕೂಲವಾಗುತ್ತಿತ್ತು. ಪ್ರವಾಸೋದ್ಯಮಕ್ಕೂ ಅನುಕೂಲವಾಗುತ್ತಿತ್ತು. ಕಳೆದ 9 ವರ್ಷದಲ್ಲಿ ಜಿಲ್ಲೆಯಲ್ಲಿ ಅತಿವೃಷ್ಟಿ, ಅನಾವೃಷ್ಟಿ ನಂತರ ಕೊವಿಡ್ 19ರ ಕಾರಣದಿಂದ ಉತ್ಸವ ಆಚರಣೆಯಾಗಿಲ್ಲ.
9 ವರ್ಷಗಳಿಂದ ಉತ್ಸವ ನಡೆಸುವಂತೆ ಸಾರ್ವಜನಿಕರು, ಕಲಾವಿದರು ಸಾಕಷ್ಟು ಒತ್ತಡವನ್ನು ಸ್ಥಳೀಯ ಜನಪ್ರತಿನಿಧಿಗಳಿಗೆ, ಜಿಲ್ಲಾಡಳಿತ ಮೇಲೆ ಹೇರುತ್ತಲೇ ಬಂದಿದ್ದಾರೆ. ಆದರೂ ಜಿಲ್ಲಾಡಳಿತ ಕೋವಿಡ್, ಅತಿವೃಷ್ಟಿ, ಅನಾವೃಷ್ಟಿ ಸೇರಿದಂತೆ ಇನ್ನಿತರ ಕಾರಣದ ನೆಪವೊಡ್ಡಿ ನವರಸಪುರ ಉತ್ಸವವನ್ನು ಮುಂದೂಡುತ್ತಲೇ ಬಂದಿದೆ. ಈ ಹಿನ್ನಲೆಯಲ್ಲಿ ಈ ಬಾರಿಯಾದರೂ ನವರಸಪುರ ಉತ್ಸವ ಆಚರಿಸಬೇಕು. ಆ ಮೂಲಕ ವಿಜಯಪುರ ಪ್ರವಾಸೋದ್ಯಮಕ್ಕೂ ಶಕ್ತಿ ನೀಡಬೇಕು ಎನ್ನುವುದು ಸಾರ್ವಜನಿಕರ ಬೇಡಿಕೆಯಾಗಿದೆ.
ವರದಿ: ಸಮೀವುಲ್ಲಾ ಉಸ್ತಾದ, ವಿಜಯಪುರ