TATA Curvv Review: ಟಾಟಾ ಕರ್ವ್ ಖರೀದಿಸಬಹುದೇ? ಹೊಸ ಕೂಪೆ ಎಸ್‌ಯುವಿಯಲ್ಲಿ ಇಷ್ಟವಾಗುವ- ಇಷ್ಟವಾಗದ ಸಂಗತಿಗಳಿವು
TATA Curvv Review: ಉಳಿದ ಕಾರು ಕಂಪನಿಗಳಿಗಿಂತ ತಡವಾಗಿ ಮಧ್ಯಮ ಗಾತ್ರದ ಎಸ್‌ಯುವಿಯನ್ನು ಟಾಟಾ ಪರಿಚಯಿಸಿದ್ರೂ ಸಾಕಷ್ಟು ಸದ್ದು ಮಾಡುತ್ತಿದೆ. ಹೇಗಿದೆ ಟಾಟಾ ಕರ್ವ್ ಎಂಬ ಕೂಪೆ ಎಸ್‌ಯುವಿ? ಇದರಲ್ಲಿ ಇಷ್ಟವಾಗುವ ಅಂಶಗಳೇನು? ಯಾವ ಅಂಶಗಳು ಇಷ್ಟವಾಗುವುದಿಲ್ಲ- ಓದಿ ಟಾಟಾ ಕರ್ವ್ ವಿಮರ್ಶೆ.
TATA Curvv Review: ಟಾಟಾ ಮೋಟಾರ್ಸ್ ಕಂಪನಿಯ ಕರ್ವ್ ಎಂಬ ಕೂಪೆ ಎಸ್‌ಯುವಿಯ ಡೆಲಿವರಿ ಆರಂಭವಾಗುತ್ತಿದೆ. ಹೊಸ ಅಟ್ಲಾಸ್ ಪ್ಲಾಟ್‌ಫಾರ್ಮ್‌ನಲ್ಲಿ ನಿರ್ಮಿಸಲಾದ ಟಾಟಾ ಕರ್ವ್ ನಾಲ್ಕು ಆವೃತ್ತಿಗಳಲ್ಲಿ ದೊರಕುತ್ತದೆ. ಅಂದ್ರೆ, ಸ್ಮಾರ್ಟ್, ಪ್ಯೂರ್, ಕ್ರಿಯೆಟಿವ್ ಮತ್ತು ಅಕೊಂಪ್ಲಿಶ್ಡ್ ಎಂಬ ನಾಲ್ಕು ಆಯ್ಕೆಗಳಿವೆ. ಹ್ಯುಂಡೈ ಕ್ರೇಟಾ, ಕಿಯಾ ಸೆಲ್ಟೊಸ್, ಮಾರುತಿ ಸುಜುಕಿ ಗ್ರ್ಯಾಂಡ್ ವಿಟಾರ, ಹೋಂಡಾ ಎಲೆವೆಟ್, ಸ್ಕೋಡಾ ಕುಶಾಕ್, ಫೋಕ್ಸ್‌ವ್ಯಾಗನ್ ತೈಗುನ್ ಮುಂತಾದ ಎಸ್‌ಯುವಿಗಳ ಜತೆ ನೂತನ ಟಾಟಾ ಕರ್ವ್ ಮಾರುಕಟ್ಟೆಯಲ್ಲಿ ಸ್ಪರ್ಧಿಸಲಿದೆ. ಈ ಮಧ್ಯಮ ಗಾತ್ರದ ಸಣ್ಣ ಎಸ್‌ಯುವಿ ವಿಭಾಗದಲ್ಲಿ ಟಾಟಾ ಕರ್ವ್ ಸಾಕಷ್ಟು ಸಾಧನೆ (ಮಾರಾಟ) ಮಾಡಲಿದೆ ಎಂದು ಟಾಟಾ ಮೋಟಾರ್ಸ್ ಭರವಸೆ ಹೊಂದಿದೆ.
ನೂತನ ಕರ್ವ್‌ನಲ್ಲಿ 1.2 ಲೀಟರ್‌ನ ಟರ್ಬೊ ಪೆಟ್ರೋಲ್ ಹೈಪೆರಿಯಲ್ ಎಂಜಿನ್ ಇದೆ. ಇದು 5 ಸಾವಿರ ಆವರ್ತನಕ್ಕೆ 123 ಬಿಎಚ್‌ಪಿ ಮತ್ತು 1750 ಮತ್ತು 3 ಸಾವಿರದ ನಡುವಿನ ಆವರ್ತನದಲ್ಲಿ 225 ಎನ್‌ಎಂವರೆಗೆ ಟಾರ್ಕ್ ಬಿಡುಗಡೆ ಮಾಡುತ್ತದೆ. 6 ಸ್ಪೀಡ್‌ನ ಮ್ಯಾನುಯಲ್ ಗಿಯರ್ ಬಾಕ್ಸ್ ಮತ್ತು 7 ಸ್ಪೀಡ್‌ನ ಡ್ಯೂಯೆಲ್ ಕ್ಲಚ್ ಟ್ರಾನ್ಸ್‌ಮಿಷನ್‌ಗಳಲ್ಲಿ ನೂತನ ಕರ್ವ್ ಲಭ್ಯ.
ಟಾಟಾ ಕರ್ವ್‌ನಲ್ಲಿ ಇಷ್ಟವಾಗುವ ಅಂಶಗಳು
- ಟಾಟಾ ಮೋಟಾರ್ಸ್‌ನ ಕರ್ವ್ ಎಂಬ ಕೂಪೆ ಎಸ್‌ಯುವಿಯ ಸ್ಟೈಲ್ ಗಮನ ಸೆಳೆಯುತ್ತದೆ. ರಸ್ತೆಯಲ್ಲೂ ಎಲ್ಲರ ಗಮನ ಸೆಳೆಯುವಂತೆ ಇದೆ. ಸೌಂದರ್ಯದ ದೃಷ್ಟಿಯಿಂದ ಕರ್ವ್‌ಗೆ ಇದು ಪ್ಲಸ್ ಪಾಯಿಂಟ್ ಆಗಬಹುದು.
- ಪ್ರತಿಸ್ಪರ್ಧಿಗಳಿಗೆ ಹೋಲಿಸಿದರೆ ಇದರಲ್ಲಿ ಒಳ್ಳೆಯ ಪ್ಯಾಕೇಜ್ ಇದೆ. ಕ್ರೇಟಾ, ಸೆಲ್ಟೋಸ್, ಕುಶಾಕ್, ತೈಗುನ್, ಹೈಡ್ರೈರ್, ಗ್ರ್ಯಾಂಡ್ ವಿಟಾರ ಮುಂತಾದ ಸ್ಪರ್ಧಿಗಳಿಗೆ ಹೋಲಿಸಿದರೆ ಟಾಟಾ ಮೋಟಾರ್ಸ್ ಈ ದರಕ್ಕೆ ಇಷ್ಟೊಂದು ಫೀಚರ್ ನೀಡಿದೆ. ಇದು ಕೂಡ ಇಷ್ಟವಾಗುವ ಸಂಗತಿ.
- ಈ ಕಾರು ಹೊಂದಿರುವ ಪೆಟ್ರೋಲ್ ಮತ್ತು ಡೀಸೆಲ್ ಎಂಜಿನ್ ಹಾಗೂ ಅವು ನೀಡುವ ಪವರ್ ಕೂಡ ಇಷ್ಟವಾಗುತ್ತದೆ.
- ಆಟೋಮ್ಯಾಟಿಕ್ ಜತೆಗೆ ಮ್ಯಾನುಯಲ್ ಗಿಯರ್‌ಬಾಕ್ಸ್‌ನಲ್ಲೂ ದೊರಕುತ್ತದೆ. ಇದಕ್ಕೂ ಲೈಕ್ ನೀಡಬಹುದು.
- ಉತ್ತಮ ವೇಗದಲ್ಲಿಯೂ ಉತ್ತಮ ಸ್ಥಿರತೆ ದೊರಕುತ್ತದೆ ಎಂದು ಈಗಾಗಲೇ ಕಾರನ್ನು ಟೆಸ್ಟ್ ಡ್ರೈವ್ ಮಾಡಿರುವ ಅನೇಕರು ಅಭಿಪ್ರಾಯಪಟ್ಟಿದ್ದಾರೆ.
- ಕಾರಿನ ಹಿಂಬದಿಯಲ್ಲಿ ಲಗೇಜ್ ಇಡಲು ಸ್ಥಳಾವಕಾಶ ಬೇಕಾದಷ್ಟಿದೆ. ಸುಮಾರು 500 ಲೀಟರ್ ಬೂಟ್ ಸ್ಫೇಸ್ ಇರುವುದು ಕೂಡ ಉತ್ತಮ ವಿಚಾರ.
- ಇದರಲ್ಲಿರುವ ಫೀಚರ್‌ಗಳು ಕೂಡ ಗಮನ ಸೆಳೆಯುತ್ತವೆ. ಫ್ಲಸ್ ಡೋರ್ ಹ್ಯಾಮಡಲ್‌ಗಳು, ಗೆಸ್ಚರ್ ಆಕ್ಟಿವೇಷನ್, 9 ಸ್ಪೀಕರ್‌ನ ಜೆಬಿಎಲ್ ಆಡಿಯೋ ಸಿಸ್ಟಮ್, ಪನೊರಾಮಿಕ್ ಸನ್‌ರೂಫ್, ರಿಕ್ಲೈನ್ ಹೊಂದಾಣಿಕೆ ಮಾಡಬಹುದಾದ ಸೀಟುಗಳು ಸೇರಿದಂತೆ ಹಲವು ಫೀಚರ್‌ಗಳು ಇಷ್ಟವಾಗುತ್ತವೆ. ವಿಶೇಷವಾಗಿ ಈ ಬಜೆಟ್‌ನಲ್ಲಿ ಸನ್‌ರೂಫ್ ಕಾರು ಬಯಸುವವರಿಗೆ ಇದು ಅಚ್ಚುಮೆಚ್ಚಿನ ಆಯ್ಕೆಯಾಗಬಲ್ಲದು.
- ಸುರಕ್ಷತೆಯ ದೃಷ್ಟಿಯಿಂದಲೂ ಈ ಕಾರಿನಲ್ಲಿ ಇಷ್ಟವಾಗುವ ಅಂಶಗಳು ಸಾಕಷ್ಟಿವೆ. 2 ಲೆವೆಲ್ ಎಡಿಎಎಸ್, ಆರು ಏರುಬ್ಯಾಗ್‌ಗಳು, ಎಲ್ಲಾ ಚಕ್ರಗಳಿಗೂ ಡಿಸ್ಕ್ ಬ್ರೇಕ್‌ಗಳು, ಇಎಸ್‌ಪಿ, ಪ್ರಂಟ್ ಪಾರ್ಕಿಂಗ್ ಸೆನ್ಸಾರ್‌ಗಳು, 360 ಡಿಗ್ರಿ ವೀಕ್ಷಣೆಯ ಕ್ಯಾಮೆರಾ, ಹಿಲ್ ಹೋಲ್ಡ್ ಅಸಿಸ್ಟ್, ಇಳಿಯುವಾಗ ಹಿಲ್ ಡಿಸೆಂಟ್ ಕಂಟ್ರೋಲ್... ಹೀಗೆ ಸುರಕ್ಷತೆಯ ಫೀಚರ್‌ಗಳಿಗೆ ಪೂರ್ಣ ಅಂಕ ನೀಡಹುದು.
ಇದನ್ನೂ ಓದಿ: Tata Curvv vs Kia Seltos: ಯಾವ ಎಸ್‌ಯುವಿ ಖರೀದಿಸುವಿರಿ? ಟಾಟಾ ಕರ್ವ್- ಕಿಯಾ ಸೆಲ್ಟೋಸ್ ನಡುವೆ ಆರು ಹಿತವರು ನಿಮಗೆ
ಇಷ್ಟವಾಗದ ಸಂಗತಿಗಳು
- ಇದರಲ್ಲಿ ಟಾಪ್ ಆವೃತ್ತಿಯು 18 ಇಂಚಿನ ವೀಲ್‌ಗಳನ್ನು ಹೋಂದಿದೆ. ಆದರೆ, ಲೋವರ್ ಆವೃತ್ತಿಗಳಲ್ಲಿ 17 ಇಂಚಿನ ವೀಲ್‌ಗಳಿವೆ. ಕೆಟ್ಟ ರಸ್ತೆಗಳಲ್ಲಿ ಸಂಚರಿಸುವಾಗ ತುಸು ಹೆಚ್ಚು ಎಚ್ಚರವಹಿಸಬೇಕು.
- ಹಿಂದಿನ ಸೀಟುಗಳಲ್ಲಿ ಇಬ್ಬರು ಆರಾಮವಾಗಿ ಕುಳಿತುಕೊಳ್ಳಬಹುದು. ಆದರೆ, ಮೂವರು ಆರಾಮವಾಗಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಹೆಡ್‌ರೂಂ ಕೂಡ ಸೀಮಿತ.
- ನಿರ್ಮಾಣ ಗುಣಮಟ್ಟ ಉತ್ತಮವಾಗಿದ್ದರೂ ಕಾರಿನೊಳಗೆ ತುಸು ಇಕ್ಕಟ್ಟು ಅನಿಸಬಹುದು. ಈ ಬಜೆಟ್‌ಗೆ ಇಷ್ಟೇ ನೀಡಲು ಸಾಧ್ಯ ಎಂದುಕೊಳ್ಳುವಂತೆ ಇಲ್ಲ.
- ಎಂಜಿನ್ ಉತ್ತಮ ಪರ್ಫಾಮೆನ್ಸ್ ನೀಡುತ್ತದೆ. ಆದ್ರೆ, ಇನ್ನಷ್ಟು ಟ್ಯೂನ್ ಮಾಡಿದ್ರೆ ಚೆನ್ನಾಗಿತ್ತು ಎಂದು ಕೆಲವರು ಅಭಿಪ್ರಾಯಪಟ್ಟಿದ್ದಾರೆ.
- ಸ್ಟಿಯರಿಂಗ್ ವೀಲ್‌ನ ಟೆಲಿಸ್ಕೋಪಿಕ್ ಹೊಂದಾಣಿಕೆ, ಮುಂಭಾಗದ ಪ್ರಯಾಣಿಕರಿಗೆ ಕಪ್‌ಹೋಲ್ಡರ್‌ಗಳು ಸೇರಿದಂತೆ ಕೆಲವು ಫೀಚರ್‌ಗಳು ಮಿಸ್ ಆಗಿವೆ.