Bike Review: ಹೇಗಿದೆ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌? 2 ಕೆಜಿ ಸಿಎನ್‌ಜಿ+ 2 ಲೀಟರ್‌ ಪೆಟ್ರೋಲ್‌, ಮೈಲೇಜ್‌ ಸೂಪರ್‌
ಕನ್ನಡ ಸುದ್ದಿ  /  ಜೀವನಶೈಲಿ  /  Bike Review: ಹೇಗಿದೆ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌? 2 ಕೆಜಿ ಸಿಎನ್‌ಜಿ+ 2 ಲೀಟರ್‌ ಪೆಟ್ರೋಲ್‌, ಮೈಲೇಜ್‌ ಸೂಪರ್‌

Bike Review: ಹೇಗಿದೆ ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌? 2 ಕೆಜಿ ಸಿಎನ್‌ಜಿ+ 2 ಲೀಟರ್‌ ಪೆಟ್ರೋಲ್‌, ಮೈಲೇಜ್‌ ಸೂಪರ್‌

Bajaj Freedom 125 CNG Bike Review: ಭಾರತದ ಮೊದಲ ಸಿಎನ್‌ಜಿ ಬೈಕ್‌ ಎಂಬ ಖ್ಯಾತಿಯ "ಬಜಾಜ್‌ ಫ್ರೀಡಂ ಸಿಎನ್‌ಜಿ" ಬೈಕ್‌ ಖರೀದಿಗೆ ಈಗ ಗ್ರಾಹಕರು ಹೆಚ್ಚಿನ ಆಸಕ್ತಿ ವಹಿಸುತ್ತಿದ್ದಾರೆ. ಈ ಬೈಕ್‌ ಹೇಗಿದೆ? ಮೈಲೇಜ್‌ ಎಷ್ಟು ದೊರಕುತ್ತದೆ? ಚಾಲನಾ ಅನುಭವ ಹೇಗಿದೆ? ಬೈಕ್‌ನ ಗುಣ ಅವಗುಣಗಳೇನು, ದರವೆಷ್ಟಿದೆ ಇತ್ಯಾದಿ ಮಾಹಿತಿ ತಿಳಿಯೋಣ.

ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ ವಿಮರ್ಶೆ
ಬಜಾಜ್ ಫ್ರೀಡಂ 125 ಸಿಎನ್‌ಜಿ ಬೈಕ್‌ ವಿಮರ್ಶೆ

Bajaj Freedom 125 CNG Bike Review: ಇತ್ತೀಚೆಗೆ ಪುತ್ತೂರಿಗೆ ಹೋಗಿದ್ದಾಗ ಗೆಳೆಯ ಸತ್ಯ ಆಚಾರ್ಯ ಹೊಸ ಬೈಕ್‌ ಖರೀದಿಸಿದ ಸುದ್ದಿ ತಿಳಿಯಿತು. ಪುತ್ತೂರಿನಲ್ಲಿ ಹೆಚ್ಚು ಗ್ರಾಹಕರು ಸಿಎನ್‌ಜಿ ಬೈಕ್‌ ಖರೀದಿಸಿಲ್ಲ. ಇದೇ ಕಾರಣಕ್ಕೆ ಸಿಎನ್‌ಜಿ ಸ್ಟೇಷನ್‌ನಲ್ಲಿ ಬೈಕ್‌ಗೆ ಸಿಎನ್‌ಜಿ ಇಂಧನ ತುಂಬಿಸುವ ಸಮಯದಲ್ಲಿ ಸಾಕಷ್ಟು ಜನರು ಅಚ್ಚರಿ ವ್ಯಕ್ತಪಡಿಸುತ್ತಾರೆ. "ಹೇಗಿದೆ ಬೈಕ್‌, ಎಷ್ಟು ಮೈಲೇಜ್‌ ದೊರಕುತ್ತದೆ, ದರ ಎಷ್ಟಿದೆ? ಮುಂತಾದ ಪ್ರಶ್ನೆಗಳನ್ನು ದಾರಿಯಲ್ಲಿ ಜನರು ಕೇಳುವುದು ಸಾಮಾನ್ಯ. ಈಗ ಸಿಎನ್‌ಜಿ ಕಾರುಗಳು, ಬಸ್‌ಗಳು ಹೆಚ್ಚುತ್ತಿವೆ. ಇದೇ ಸಮಯದಲ್ಲಿ ಬಜಾಜ್‌ ಕಂಪನಿಯು ಸಿಎನ್‌ಜಿ ಬೈಕ್‌ ಫ್ರೀಡಂ ಅನ್ನು ಪರಿಚಯಿಸಿತ್ತು. ಈಗ ಭಾರತದಾದ್ಯಂತ ಸಾಕಷ್ಟು ಗ್ರಾಹಕರು ಫ್ರೀಡಂ ಬಳಸುತ್ತಿದ್ದಾರೆ. ಪೆಟ್ರೋಲ್‌ ಮತ್ತು ಸಿಎನ್‌ಜಿ ಎರಡರಲ್ಲೂ ಚಲಾಯಿಸಬಹುದಾಗಿರುವುದರಿಂದ ಈ ಬೈಕ್‌ ಗ್ರಾಹಕರ ಗಮನ ಸೆಳೆಯುತ್ತಿದೆ. ನಾನು ರೈಡ್‌ ಮಾಡಿದ ಸಮಯದಲ್ಲಿ ಬೈಕ್‌ ಉತ್ತಮವಾಗಿದೆ ಎಂದೆನಿಸಿತ್ತು. ಸಿಎನ್‌ಜಿ ಪವರ್‌ ವ್ಯತ್ಯಾಸ ಅಷ್ಟಾಗಿ ಗೋಚರಿಸದು. ಆದರೆ, ತುಂಬಾ ಏರು ಹಾದಿ ಇರುವ ಗ್ರಾಮೀಣ ಭಾಗದ ರಸ್ತೆಗಳಲ್ಲಿ ಪೆಟ್ರೋಲ್‌ ಇಂಧನ ಆಯ್ಕೆ ಆನ್‌ ಮಾಡಿಕೊಂಡರೆ ಹೆಚ್ಚು ಖುಷಿಯಾಗುತ್ತದೆ. ಈ ಬೈಕ್‌ನ ಸೌಂಡ್‌ ಕೂಡ ಉತ್ತಮವಾಗಿದೆ. ಇದು ತುಂಬಾ ಕುಳ್ಳಗೆ ಇರುವವರಿಗೆ ಸೂಕ್ತವೆನಿಸದು. ಯಾವುದಕ್ಕೂ ಶೋರೂಂನಲ್ಲಿ ಒಮ್ಮೆ ಈ ಬೈಕ್‌ನ ಮೇಲೆ ಕುಳಿತು ಟೆಸ್ಟ್‌ ಡ್ರೈವ್‌ ಮಾಡಿ ನೋಡಿ. ಇತರೆ ಬೈಕ್‌ಗಳಿಗಿಂತ ಈ ಬೈಕ್‌ನ ತೂಕವೂ ಹೆಚ್ಚಿದೆ. ಹೊರಗಿನಿಂದ ನೋಡಿದಾಗ ಇದು ಸಣ್ಣ ಬೈಕ್‌ನಂತೆ ಕಾಣಿಸಬಹುದು. ಆದರೆ, ಹೆಚ್ಚು ಎತ್ತರ ಇಲ್ಲದವರಿಗೆ ಕೂತಾಗ ಕಾಲು ನೆಲಕ್ಕೆ ಎಟುಕುತ್ತಿಲ್ಲ ಎಂದೆನಿಸಬಹುದು. ಇದರ ಸೀಟಿನ ಎತ್ತರ, ವಿನ್ಯಾಸವೂ ಇದಕ್ಕೆ ಕಾರಣವಾಗಿರಬಹುದು.

ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್‌ನ ಮೈಲೇಜ್‌ ಎಷ್ಟು?

ಸತ್ಯ ಆಚಾರ್ಯ ಅವರು ಈ ಬೈಕ್‌ ಖರೀದಿಸಿ ಕೆಲವು ದಿನಗಳ ಕಳೆದಿವೆ. ಅವರು ಹಲವು ಬಾರಿ ಸಿಎನ್‌ಜಿ ಇಂಧನದ ಮೈಲೇಜ್‌ ಚೆಕ್‌ ಮಾಡಿದ್ದಾರೆ. 2 ಕೆಜಿ ಸಿಎನ್‌ಜಿಗೆ ಸರಾಸರಿ 210 ಕಿ.ಮೀ. ಮೈಲೇಜ್‌ ದೊರಕುತ್ತದೆ ಎಂದು ಅವರು ಹೇಳುತ್ತಾರೆ. ಕಂಪನಿಯ ಪ್ರಕಾರ ಪ್ರತಿಕೇಜಿಗೆ 102 ಕಿ.ಮೀ. ಮೈಲೇಜ್‌ ದೊರಕುತ್ತದೆ. ಇವರಿಗೆ ಇದಕ್ಕಿಂತ ತುಸು ಹೆಚ್ಚೇ ಮೈಲೇಜ್‌ ದೊರಕಿದೆ. ಇದೇ ಸಮಯದಲ್ಲಿ ಎರಡು ಲೀಟರ್‌ ಪೆಟ್ರೋಲ್‌ ಕೂಡ ಬೈಕ್‌ನಲ್ಲಿ ಇರಲಿದೆ. ಇದರಿಂದ ದೊರಕುವ ಮೈಲೇಜ್‌ ಸಪರೇಟ್‌. ಸತ್ಯ ಅವರು ಪೆಟ್ರೋಲ್‌ನ ಮೈಲೇಜ್‌ ಪರಿಶೀಲಿಸಿಲ್ಲ. ಕಂಪನಿಯ ಪ್ರಕಾರ ಪ್ರತಿಲೀಟರ್ ಪೆಟ್ರೋಲ್‌ಗೆ ಬಜಾಜ್‌ ಫ್ರೀಡಂ ಬೈಕ್‌ 65 ಕಿಮೀ ಮೈಲೇಜ್‌ ನೀಡಲಿದೆ.

 ಬಜಾಜ್‌ ಫ್ರೀಡಂ ಬೈಕ್‌
ಬಜಾಜ್‌ ಫ್ರೀಡಂ ಬೈಕ್‌

ಬಜಾಜ್ ಫ್ರೀಡಂ ಸಿಎನ್‌ಜಿ ಬೈಕ್‌ನ ದರ

ಪುತ್ತೂರಿನಲ್ಲಿ ಈ ಬೈಕ್‌ನ ದರ ಸುಮಾರು 1.40-50 ಲಕ್ಷ ರೂಪಾಯಿ ಆಸುಪಾಸಿನಲ್ಲಿದೆ. ಅಂದರೆ, ಸತ್ಯ ಆಚಾರ್ಯ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಖರೀದಿಸಿದ ಸುಪ್ರೀಂ ಆಟೋ ಡೀಲರ್ಸ್‌ನಲ್ಲಿ ಈ ಬೈಕ್‌ ಕಾಸ್ಟ್‌ 1,09,997 ರೂಪಾಯಿ, ವಿಮಾ ವೆಚ್ಚ 7144 ರೂಪಾಯಿ ಮತ್ತು ಟೆಂಪರರಿ ನೋಂದಣಿ ಶುಲ್ಕ 29,394 ರೂಪಾಯಿ ಆಗಿದೆ. ಒಟ್ಟಾರೆ ಆನ್‌ರೋಡ್‌ ದರ ಇವರಿಗೆ 1,46,535 ರೂಪಾಯಿ ಆಗಿದೆ. ಅಂದರೆ, ಒಂದೂವರೆ ಲಕ್ಷ ರೂಪಾಯಿಗೆ ಹತ್ತಿರದಲ್ಲಿ ಇದರ ದರ ಇದೆ. ಇತರೆ ಪೆಟ್ರೋಲ್‌ 125 ಸಿಸಿ ಬೈಕ್‌ಗಳಿಗೆ ಹೋಲಿಸಿದರೆ ದರ ತುಸು ಹೆಚ್ಚಾದಂತೆ ಅನಿಸಬಹುದು. ಆದರೆ, ಸಿಎನ್‌ಜಿ ಮೈಲೇಜ್‌ನಿಂದಾಗಿ ಮುಂದಿನ ದಿನಗಳಲ್ಲಿ ಹೆಚ್ಚುವರಿ ದರವನ್ನೂ ವಸೂಲಿ ಮಾಡಿಕೊಳ್ಳಬಹುದೇನೋ.

ಬಜಾಜ್‌ ಆಟೋ ವೆಬ್‌ಸೈಟ್‌ನಲ್ಲಿ ಮಂಗಳೂರಿನಲ್ಲಿ ಈ ಬೈಕ್‌ ಎಕ್ಸ್‌ ಶೋರೂಂ ದರ 1 09 997 ರೂಪಾಯಿ ಇದೆ. ಬೆಂಗಳೂರು, ಮೈಸೂರು, ಮಂಡ್ಯ, ಉಡುಪಿ ಸೇರಿದಂತೆ ಬಹುತೇಕ ನಗರಗಳಲ್ಲಿ ಇದೇ ದರ ಕಾಣಿಸುತ್ತಿದೆ. ಟಾಪ್‌ ಎಂಡ್‌ ಡಿಸ್ಕ್‌ ಬ್ರೇಕ್‌ ಆವೃತ್ತಿಗೆ ಆನ್‌ರೋಡ್‌ ದರ 1.39 ಲಕ್ಷ ರೂಪಾಯಿ ಇದೆ. ಆನ್‌ರೋಡ್‌ ದರ ಕುರಿತು ನಿಮ್ಮ ಊರಿನ ಶೋರೂಂಗಳಲ್ಲಿ ವಿಚಾರಿಸಬಹುದು.

ಬೈಕ್‌ ಹೀಗಿದೆ
ಬೈಕ್‌ ಹೀಗಿದೆ

ಖರೀದಿಸಬಹುದೇ?

ಈ ಬೈಕ್‌ನ ರೈಡಿಂಗ್‌ ಗುಣಮಟ್ಟ ಉತ್ತಮವಾಗಿದೆ. ಇದು ಸಾಮಾನ್ಯ ಪೆಟ್ರೋಲ್‌ ಬೈಕ್‌ನಂತೆಯೇ ಫೀಲ್‌ ನೀಡುತ್ತದೆ. ಸಿಎನ್‌ಜಿ ಮೋಡ್‌ನಲ್ಲಿ ಪವರ್‌ ಕೊಂಚ ಕಡಿಮೆ ದೊರಕುವಂತೆ ಕೆಲವರಿಗೆ ಅನಿಸಬಹುದು. ಇದರ ವಿನ್ಯಾಸವೂ ಆಕರ್ಷಕ. ವಿಶೇಷವಾಗಿ ಮುಂಭಾಗದ ಡಿಸೈನ್‌ ಗಮನ ಸೆಳೆಯುತ್ತದೆ.

ಪುತ್ತೂರಿನಲ್ಲಿ ಸಿಎನ್‌ಜಿ ಫ್ಯೂಯಲ್‌ ಸ್ಟೇಷನ್‌ ದರ್ಬೆಯಲ್ಲಿದೆ. ಪ್ರತಿದಿನ ಸಿಟಿಗೆ ಪ್ರಯಾಣ ಬೆಳೆಸುವವರು, ಕನಿಷ್ಠ ವಾರಕ್ಕೆ ಎರಡು ದಿನವಾದರೂ (ಕನಿಷ್ಠ 1 ದಿನವಾದರೂ) ಪುತ್ತೂರಿಗೆ ಪ್ರಯಾಣಿಸುವವರಿಗೆ ಈ ಸಿಎನ್‌ಜಿ ಬೈಕ್‌ ಓಕೆ. ಗ್ರಾಮೀಣ ಭಾಗದಲ್ಲೇ ಹೆಚ್ಚು ಸಮಯ ಬೈಕ್‌ ರೈಡ್‌ ಮಾಡುವವರಿಗೆ ಸಿಎನ್‌ಜಿ ಬೈಕ್‌ಗೆ ಇಂಧನ ತುಂಬಿಸುವುದೇ ದೊಡ್ಡ ತಲೆನೋವಾಗಬಹುದು. ಇದೇ ರೀತಿ ನಿಮ್ಮ ನಿಮ್ಮ ಊರಿನಲ್ಲಿ, ಪಟ್ಟಣಗಳಲ್ಲಿ ಸಿಎನ್‌ಜಿ ಫ್ಯೂಯೆಲ್‌ ಸ್ಟೇಷನ್‌ಗಳ ಲಭ್ಯತೆ ಗಮನಿಸಿಕೊಂಡು ಈ ಬೈಕ್‌ ಖರೀದಿಸಬಹುದು.

ಬಜಾಜ್‌ ಫ್ರೀಡಂ 125 ಸಿಎನ್‌ಜಿ ಗುಣ ಮತ್ತು ಅವಗುಣಗಳು

ಬಜಾಜ್‌ ಫ್ರೀಡಂ 125 ಸಿಎನ್‌ಜಿ ಬೈಕ್‌ನ ಗುಣ ಮತ್ತು ಅವಗುಣಗಳನ್ನು ತಿಳಿದುಕೊಳ್ಳೋಣ. ಈ ಬೈಕ್‌ ನಿಮಗೆ ರನ್ನಿಂಗ್‌ ವೆಚ್ಚ ಕಡಿಮೆಯಾಗಲಿದೆ. ಅಂದರೆ, ದುಬಾರಿ ಪೆಟ್ರೋಲ್‌ಗೆ ನೀಡುವ ಹಣ ಉಳಿಯಲಿದೆ. ಒಂದು ಕೆಜಿ ಸಿಎನ್‌ಜಿ ದರ ನೂರು ರೂಪಾಯಿಯೊಳಗೆ ಇರುತ್ತದೆ. ಆದರೆ, ಈಗ ಸಿಎನ್‌ಜಿ ಮೂಲಸೌಕರ್ಯ, ಫ್ಯೂಯೆಲ್‌ ಸ್ಟೇಷನ್‌ಗಳು ಸಾಕಷ್ಟು ಇಲ್ಲ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಬೇಕು. ನೀವು ಇರುವ ಸ್ಥಳದಲ್ಲಿ ಸಿಎನ್‌ಜಿ ಫ್ಯೂಯೆಲ್‌ ಸ್ಟೇಷನ್‌ಗಳ ಲಭ್ಯತೆ ಗಮನಿಸಿಕೊಂಡು ಮುಂದುವರೆಯಿರಿ.

ಮುಂಭಾಗದ ಎಲ್‌ಇಡಿ ಲೈಟ್‌ ಮತ್ತು ವಿನ್ಯಾಸ
ಮುಂಭಾಗದ ಎಲ್‌ಇಡಿ ಲೈಟ್‌ ಮತ್ತು ವಿನ್ಯಾಸ

ಪ್ರಯೋಜನಗಳು

  1. ಹೆಚ್ಚು ಇಂಧನ ದಕ್ಷತೆ ದೊರಕುತ್ತದೆ. ಪ್ರತಿದಿನ ಸಾಕಷ್ಟು ಹಣ ಉಳಿತಾಯವಾಗುತ್ತದೆ.
  2. ಎರಡು ಬಗೆಯ ಇಂಧನ ಬಳಸಬಹುದು. ಸಿಎನ್‌ಜಿ ಮತ್ತು ಪೆಟ್ರೋಲ್‌ ಹಾಕಬಹುದು. ಈ ಇಂಧನಗಳಿಗೆ ಒಂದೇ ಟ್ಯಾಂಕ್‌ನೊಳಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಒಂದು ಸ್ವಿಚ್‌ ಕ್ಲಿಕ್‌ ಮಾಡುವ ಮೂಲಕ ಪೆಟ್ರೋಲ್‌ ಅಥವಾ ಸಿಎನ್‌ಜಿಗೆ ಬದಲಾಯಿಸಿಕೊಳ್ಳಬಹುದು.
  3. ಪೆಟ್ರೋಲ್‌ಗೆ ಹೋಲಿಸಿದರೆ ಪರಿಸರಕ್ಕೆ ಸಿಎನ್‌ಜಿ ಅಪಾಯ ಕಡಿಮೆ. ಹೀಗಾಗಿ ಸಿಎನ್‌ಜಿ ಬಳಕೆ ಪರಿಸರಕ್ಕೂ ಉತ್ತಮ.
  4. ಈ ಬೈಕ್‌ನ ವಿನ್ಯಾಸವೂ ಆಕರ್ಷಕವಾಗಿದೆ. ಆಧುನಿಕ ವಿನ್ಯಾಸದಿಂದಾಗಿ ಇತರ ಬೈಕ್‌ಗಳಿಗಿಂತ ಡಿಫರೆಂಟ್‌ ಆಗಿ ಕಾಣಿಸುತ್ತದೆ.

ಅವಗುಣಗಳು

  1. ಈಗ ಸಾಕಷ್ಟು ಸಿಎನ್‌ಜಿ ಮೂಲಸೌಕರ್ಯಗಳು ಇಲ್ಲ. ಆದರೆ, ಮುಂದಿನ ದಿನಗಳಲ್ಲಿ ಸಿಎನ್‌ಜಿ ಸ್ಟೇಷನ್‌ಗಳು ಹೆಚ್ಚಲಿವೆ. ನೀವು ಇರುವ ಸ್ಥಳದಲ್ಲಿ ಲಭ್ಯವಿರುವ ಸಿಎನ್‌ಜಿ ಮೂಲಸೌಕರ್ಯ ಗಮನದಲ್ಲಿಟ್ಟುಕೊಂಡು ಖರೀದಿಸುವುದು ಉತ್ತಮ.
  2. ಪೆಟ್ರೋಲ್‌ ಟ್ಯಾಂಕ್‌ಗೆ ಹೋಲಿಸಿದರೆ ಸಿಎನ್‌ಜಿ ಫ್ಯೂಯೆಲ್‌ ಟ್ಯಾಂಕ್‌ನ ಸಾಮರ್ಥ್ಯ ಕಡಿಮೆ. ಅಂದರೆ, 2 ಕೆಜಿ ಸಿಎನ್‌ಜಿ ತುಂಬಲು ಹೆಚ್ಚು ಸ್ಥಳಾವಕಾಶ ಬೇಕು. ಆಗಾಗ ಸಿಎನ್‌ಜಿ ತುಂಬಿಸುತ್ತ ಇರಬೇಕಾದದ್ದು ಅನಿವಾರ್ಯ.
  3. ಸಾಮಾನ್ಯ 125 ಸಿಸಿ ಬೈಕ್‌ಗೆ ಹೋಲಿಸಿದರೆ ಆಕ್ಸಿಲರೇಷನ್‌ ತುಸು ಕಡಿಮೆ ಎನಿಸಬಹುದು. ಆದರೆ, ಸಾಮಾನ್ಯ ರಸ್ತೆಯಲ್ಲಿ ಪವರ್‌ ಡಿಫರೆನ್ಸ್‌ ಗೊತ್ತಾಗುವುದಿಲ್ಲ.
  4. ಈ ಬೈಕ್‌ನ ದರ ತುಸು ದುಬಾರಿ ಎನಿಸಬಹುದು. ಸಿಎನ್‌ಜಿ ಟ್ಯಾಂಕ್‌ ಮತ್ತು ಇತರೆ ವೆಚ್ಚಗಳಿಂದಾಗಿ ದರ ಕೆಲವು ಸಾವಿರ ರೂಪಾಯಿ ಹೆಚ್ಚಿದೆ.
  5. ಸೀಟು ಎತ್ತರವಿದೆ. ಈಗಾಗಲೇ ಹೇಳಿದಂತೆ ಈ ಬೈಕ್‌ ಹೊರನೋಟಕ್ಕೆ ಅಷ್ಟು ದೊಡ್ಡದಾಗಿ ಕಾಣಿಸುವುದಿಲ್ಲ. ಆದರೆ, ಕುಳಿತಾಗ ಕಾಲು ಎಟುಕದಂತಹ ಫೀಲ್‌ ನೀಡುತ್ತದೆ. ಸೀಟಿನ ಎತ್ತರ ತುಸು ಹೆಚ್ಚಾದಂತೆ ಭಾಸವಾಗುತ್ತದೆ. ಖರೀದಿಸುವ ಮುನ್ನ ಸೀಟ್‌ನಲ್ಲಿ ಕುಳಿತು ನೋಡಿ. ಒಮ್ಮೆ ಟೆಸ್ಟ್‌ ಡ್ರೈವ್‌ ಮಾಡಿ ನೋಡಲು ಮರೆಯಬೇಡಿ.

ಬೈಕ್‌ ವಿಮರ್ಶೆ: ಪ್ರವೀಣ್‌ ಚಂದ್ರ ಪುತ್ತೂರು

Whats_app_banner