ಚಿಕನ್ ತಿನ್ನೋದು ಅಪಾಯ, ಬಾಯ್ಲರ್ ಕೋಳಿ ಅತಿಯಾಗಿ ತಿಂದ್ರೆ ಸಂತಾನಹೀನತೆ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಬಹುದು ಎಚ್ಚರ
ಮಾಂಸಾಹಾರಿ ಪ್ರಿಯರಿಗೆ ಚಿಕನ್ ಬಹಳ ಅಚ್ಚುಮೆಚ್ಚು. ಪ್ರತಿದಿನ ಚಿಕನ್ ತಿನ್ನುವವರೂ ಇದ್ದಾರೆ. ಆದರೆ ಈಗ ಚಿಕನ್ ತಿನ್ನುವುದು ಅಪಾಯ ಎಂಬ ಮಾತು ಕೇಳಿ ಬರುತ್ತಿದೆ. ಬಾಯ್ಲರ್ ಚಿಕನ್ ತಿನ್ನುವುದರಿಂದ ಸಂತಾನ ಸಮಸ್ಯೆ ಎದುರಾಗುತ್ತದೆ ಎನ್ನಲಾಗುತ್ತಿದೆ. ಈ ಬಗ್ಗೆ ತಜ್ಞರು ಏನಂತಾರೆ ನೋಡಿ.
ಭಾರತವನ್ನು ಶಾಖಾಹಾರಿಗಳ ದೇಶ ಎನ್ನಬಹುದು. ಇಲ್ಲಿ ಮಾಂಸಾಹಾರ ಪ್ರಿಯರ ಸಂಖ್ಯೆ ಹೆಚ್ಚಿದೆ. ಮೀನು, ಕೋಳಿ, ಕುರಿ ಹೀಗೆ ಬೇರೆ ಬೇರೆ ಮಾಂಸಗಳನ್ನು ಇಷ್ಟಪಟ್ಟು ತಿನ್ನುತ್ತಾರೆ. ಅದರಲ್ಲೂ ಚಿಕನ್ ಮಾಂಸಾಹಾರಿಗಳಿಗೆ ಬಹಳ ಅಚ್ಚುಮೆಚ್ಚು. ಪ್ರತಿನಿತ್ಯ ಚಿಕನ್ ಬಿರಿಯಾನಿ, ಚಿಕನ್ ಕರಿ, ಚಿಕನ್ ರೋಲ್ ತಿನ್ನುವವರೂ ಇದ್ದಾರೆ. ದೇಶಿ ಕೋಳಿಗಳಿಗೆ ಹೋಲಿಸಿದರೆ ನಮ್ಮ ದೇಶದಲ್ಲಿ ಬಾಯ್ಲರ್ ಕೋಳಿಗಳ ಉತ್ಪಾದನೆ ಹೆಚ್ಚು. ಮಾರುಕಟ್ಟೆಯಲ್ಲಿ ಶೇ 90ರಷ್ಟು ಬಾಯ್ಲರ್ ಕೋಳಿ ಮಾಂಸವೇ ಲಭ್ಯವಿರುತ್ತದೆ. ಬಾಯ್ಲರ್ ಕೋಳಿಗಳ ಬೆಲೆಯೂ ಅಗ್ಗ. ಇದು ಎಲ್ಲಾ ವರ್ಗದವರಿಗೂ ಸಲ್ಲುವ ಕಾರಣ ಇದರ ಮಾರಾಟವೇ ಹೆಚ್ಚಿದೆ. ಕೋಳಿ ಫಾರಂಗಳಲ್ಲೂ ಬಾಯ್ಲರ್ ಕೋಳಿಗಳನ್ನೇ ಹೆಚ್ಚು ಸಾಕುತ್ತಾರೆ.
ಆದರೆ ಬಾಯ್ಲರ್ ಕೋಳಿಗಳು ಆರೋಗ್ಯಕ್ಕೆ ಒಳ್ಳೆಯದಲ್ಲ. ಇದನ್ನು ಬೆಳೆಸುವಾಗ ಕೆಲವು ಚುಚ್ಚುಮದ್ದು ಹಾಗೂ ಔಷಧಗಳನ್ನು ನೀಡಲಾಗುತ್ತದೆ. ಆ ಕಾರಣಕ್ಕೆ ಬಾಯ್ಲರ್ ಕೋಳಿ ತಿನ್ನುವುದರಿಂದ ಆರೋಗ್ಯ ಸಮಸ್ಯೆ ಎದುರಾಗುತ್ತದೆ ಎಂದು ಹೇಳಲಾಗುತ್ತದೆ. ಕಳೆದ ಒಂದಿಷ್ಟು ವರ್ಷಗಳಿಂದ ಈ ಮಾತು ಕೇಳಿ ಬರುತ್ತಿದ್ದರೂ ಈಗ ಮತ್ತೆ ಮುನ್ನೆಲೆಗೆ ಬಂದಿದೆ. ಹಾಗಾದರೆ ಈ ಮಾತು ಎಷ್ಟು ಸತ್ಯ, ಇದರಿಂದ ಆರೋಗ್ಯಕ್ಕೆ ಏನು ತೊಂದರೆ ಆಗುತ್ತದೆ ಎಂಬಿತ್ಯಾದಿ ವಿವರ ನೋಡೋಣ.
ಏನಿದು ಬಾಯ್ಲರ್ ಚಿಕನ್?
ಊರು ಕೋಳಿ, ನಾಟಿ ಕೋಳಿ ಅಥವಾ ಮನೆಗಳಲ್ಲಿ ಸಾಕಿದ ಕೋಳಿಗಳು ಮನೆಯ ಪರಿಸರದಲ್ಲಿ ಇರುವ ಕ್ರಿಮಿ ಕೀಟಗಳನ್ನು ತಿನ್ನುತ್ತಾ ಮನೆಯ ಸುತ್ತಲೂ ಮುಕ್ತವಾಗಿ ಬೆಳೆಯುತ್ತವೆ. ಅವುಗಳ ಬೆಳವಣಿಗೆಗೆ ವಿಶೇಷ ಗಮನ ಹರಿಸುವ ಅಗತ್ಯವಿರುವುದಿಲ್ಲ. ಆದರೆ ಬಾಯ್ಲರ್ ಕೋಳಿಗಳು ಹಾಗಲ್ಲ. ಅವುಗಳನ್ನು ಸಾಕಾಣಿಕ ಕೇಂದ್ರಗಳಲ್ಲೇ ಪೋಷಿಸಲಾಗುತ್ತದೆ. ಅವುಗಳಿಗೆ ಮುಕ್ತವಾಗಿ ಚಲಿಸಲು ಸಾಧ್ಯವಾಗುವುದಿಲ್ಲ. ಸ್ಥಳೀಯ ಕೋಳಿಗಳಿಗೆ ಹೋಲಿಸಿದರೆ ಬಾಯ್ಲರ್ ಕೋಳಿಗಳು ಕಡಿಮೆ ಅವಧಿಯಲ್ಲಿ ವೇಗವಾಗಿ ಬೆಳೆಯುತ್ತವೆ. 50 ದಿನಗಳಲ್ಲಿ ಅವು ಬೆಳೆದು ಮಾರುಕಟ್ಟೆಯನ್ನು ತಲುಪುತ್ತವೆ. ಅದಕ್ಕಾಗಿಯೇ ಹೆಚ್ಚಿನವರು ಬಾಯ್ಲರ್ ಕೋಳಿಗಳನ್ನು ಫಾರಂನಲ್ಲಿ ನಡೆಸುತ್ತಾರೆ. 1930ರಲ್ಲಿ ಮೊದಲ ಬಾರಿಗೆ ಫಾರಂಗಳಲ್ಲಿ ಕೋಳಿಗಳನ್ನು ಸಾಕಲಾಯಿತು ಎಂದು ಹೇಳಲಾಗುತ್ತದೆ.
ಸಾಮಾನ್ಯವಾಗಿ ನಾಟಿ ಕೋಳಿಗಳು ಬೆಳೆಯಲು ಕನಿಷ್ಠ 6 ತಿಂಗಳು ಬೇಕಾಗುತ್ತದೆ. ಆದರೆ ಬ್ರಾಯ್ಲರ್ ಕೋಳಿಗಳು ಕೇವಲ 40 ರಿಂದ 50 ದಿನಗಳಲ್ಲಿ ಎರಡು ಕೆಜಿ ತೂಕವನ್ನು ಹೆಚ್ಚಿಸುತ್ತವೆ. ಬಾಯ್ಲರ್ ಕೋಳಿಗಾಗಿಯೇ ವಿಶೇಷ ಮೇವು ನೀಡಲಾಗುತ್ತದೆ. ಕೆಲವು ರೀತಿಯ ವ್ಯಾಕ್ಸಿನೇಷನ್‌ಗಳನ್ನು ಸಹ ಮಾಡಲಾಗುತ್ತದೆ. ಬಾಯ್ಲರ್ ಕೋಳಿಗಳಿಗೆ ಸ್ಥಳೀಯ ಕೋಳಿಗಳಿಗೆ ಇರುವಂತಹ ರೋಗನಿರೋಧಕ ಶಕ್ತಿ ಇರುವುದಿಲ್ಲ. ಒಂದು ಕೋಳಿಗೆ ಯಾವುದಾದರೂ ಕಾಯಿಲೆ ಬಂದರೆ ಇತರ ಕೋಳಿಗಳಿಗೂ ಆ ರೋಗ ಬೇಗ ತಗಲುತ್ತದೆ.
ಕೆಲವೆಡೆ ಬಾಯ್ಲರ್ ಕೋಳಿಗಳಿಗೆ ಹಾರ್ಮೋನ್ ಚುಚ್ಚುಮದ್ದು ನೀಡಿ ಅವು ವೇಗವಾಗಿ ಬೆಳೆಯುವಂತೆ ಮಾಡುತ್ತಾರೆ. ಈ ಹಾರ್ಮೋನು ಚುಚ್ಚುಮದ್ದುಗಳು ಕೋಳಿಗಳನ್ನು ವೇಗವಾಗಿ ಬೆಳೆಯುವಂತೆ ಮಾಡುತ್ತವೆ. ಇದರಿಂದ ಆ ಕೋಳಿಗಳು ವೇಗವಾಗಿ ಮೊಟ್ಟೆಯೊಡೆಯಲು ಕಾರಣವಾಗಬಹುದು ಎಂದು ಅಧ್ಯಯನಗಳು ಈಗಾಗಲೇ ತೋರಿಸಿವೆ. ಹಾಗಂತ ಎಲ್ಲಾ ಕೋಳಿ ಫಾರಂಗಳಲ್ಲೂ ಕೋಳಿಗಳಿಗೆ ಹಾರ್ಮೋನ್ ಇಂಜೆಕ್ಷನ್ ಕೊಟ್ಟು ಸಾಕುತ್ತಾರೆ ಎಂದು ಹೇಳಲಾಗದು. ಕೆಲವೊಮ್ಮೆ ಕೋಳಿಗಳ ಮೇಲೆ ಕೆಲವು ರೀತಿಯ ಬ್ಯಾಕ್ಟೀರಿಯಾ ಮತ್ತು ವೈರಸ್‌ಗಳು ದಾಳಿ ಮಾಡುತ್ತವೆ. ಆ ವೈರಸ್‌ಗಳಿಂದ ರಕ್ಷಿಸಲು ಕೆಲವು ರೀತಿಯ ಲಸಿಕೆಗಳನ್ನು ನೀಡುತ್ತಾರೆ. ಮನುಷ್ಯರಿಗೆ ಲಸಿಕೆಗಳು ಹೇಗೆ ಬೇಕು, ಬಾಯ್ಲರ್ ಕೋಳಿಗಳಿಗೂ ಲಸಿಕೆಗಳು ಬೇಕಾಗುತ್ತವೆ. ಆದರೆ ಪ್ರತಿ ಕೋಳಿಗೂ ಹಾರ್ಮೋನ್ ಚುಚ್ಚುಮದ್ದು ಮಾಡುವುದಿಲ್ಲ ಎನ್ನುತ್ತಾರೆ ಕೋಳಿ ಫಾರಂ ಮಾಲೀಕರು.
ಬಾಯ್ಲರ್ ಕೋಳಿ ತಿನ್ನುವುದರಿಂದಾಗುವ ತೊಂದರೆಗಳು
ಬಾಯ್ಲರ್ ಚಿಕನ್ ಅನ್ನು ಮಿತವಾಗಿ ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ತೊಂದರೆ ಎದುರಾಗುವುದಿಲ್ಲ. ಆದರೆ ಅತಿಯಾಗಿ ತಿನ್ನುವುದು ಖಂಡಿತ ಅಪಾಯ. ಇದರಿಂದ ಬೊಜ್ಜು ಬರುತ್ತದೆ. ಮಹಿಳೆಯರಲ್ಲಿ ಋತುಬಂಧವು ಬೇಗನೆ ಸಂಭವಿಸುತ್ತದೆ. ಅಲ್ಲದೆ, ಮಕ್ಕಳು ಬೇಗನೆ ಪ್ರೌಢಾವಸ್ಥೆಯನ್ನು ತಲುಪುತ್ತಾರೆ. ಹಾಗಾಗಿ ಚಿಕನ್ ಅನ್ನು ಚೆನ್ನಾಗಿ ಬೇಯಿಸಿ ಕರಿ ರೂಪದಲ್ಲಿ ತಿನ್ನುವುದು ಉತ್ತಮ. ಬಿರಿಯಾನಿ ರೂಪದಲ್ಲಿ ತಿನ್ನುವುದು, ಕೋಳಿ ಬೇಯಿಸಲು ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಹಾಗಾಗಿ ಚಿಕನ್ ತಿನ್ನಲು ಬಯಸುವವರು ಚಿಕನ್ ಅನ್ನು ಹೆಚ್ಚು ಹೊತ್ತು ಚೆನ್ನಾಗಿ ಬೇಯಿಸಬೇಕು. ಕುಕ್ಕರ್‌ನಲ್ಲಿ ಬೇಯಿಸಿ ತಿನ್ನುವುದು ಉತ್ತಮ ವಿಧಾನವಲ್ಲ.
ಫಲವಂತಿಕೆ ಸಮಸ್ಯೆಗಳು ಬರಬಹುದೇ?
ಕೋಳಿಫಾರಂನಲ್ಲಿರುವ ಕೋಳಿಗಳನ್ನು ನೈಸರ್ಗಿಕವಾಗಿ ಸಾಕಿದರೆ ಇಂತಹ ಸಮಸ್ಯೆಗಳು ಬರುವುದಿಲ್ಲ. ಆದರೆ ಅವುಗಳಿಗೆ ಆ್ಯಂಟಿಬಯೋಟಿಕ್ ಮತ್ತು ರಾಸಾಯನಿಕಗಳನ್ನು ಸೇರಿಸಿದರೆ ಸಮಸ್ಯೆಗಳಾಗುವ ಸಾಧ್ಯತೆ ಇದೆ. ಕೆಲವು ಕೋಳಿಗಳಿಗೆ ಹೆಚ್ಚು ಮಾಂಸವನ್ನು ಉತ್ಪಾದಿಸಲು ರಾಸಾಯನಿಕಗಳನ್ನು ಸೇರಿಸಲಾಗುತ್ತಿದೆ ಎಂಬ ವರದಿಗಳು ಬಂದಿವೆ. ಇಂತಹ ಚಿಕನ್ ತಿಂದರೆ ಹೆಂಗಸರು ಮತ್ತು ಪುರುಷರಿಬ್ಬರಿಗೂ ಮಕ್ಕಳಾಗುವ ಸಾಧ್ಯತೆ ಕಡಿಮೆಯಾಗುತ್ತದೆ. ಮಹಿಳೆಯರು ಆರಂಭಿಕ ಋತುಬಂಧಕ್ಕೆ ಒಳಗಾಗುತ್ತಾರೆ. ಪುರುಷರಲ್ಲಿ ವೀರ್ಯ ಚಲನಶೀಲತೆ ಕಡಿಮೆಯಾಗಿದೆ. ಅವರ ಸಂಖ್ಯೆ ಕಡಿಮೆಯಾಗಬಹುದು. ಇದರಿಂದಾಗಿ ಮಹಿಳೆಯರು ಹಾಗೂ ಪುರುಷರಲ್ಲಿ ಸಂತಾನಹೀನತೆಯ ಸಮಸ್ಯೆ ಎದುರಾಗಬಹುದು ಎಂದು ತಜ್ಞರು ಹೇಳುತ್ತಾರೆ.
ಬಾಯ್ಲರ್ ಚಿಕನ್ ತಿನ್ನುವ ಮುನ್ನ ಈ ಕ್ರಮ ಪಾಲಿಸಿ
ಕೆಲವರಿಗೆ ಚಿಕನ್ ತಿನ್ನದೇ ಇರಲು ಸಾಧ್ಯವೇ ಇಲ್ಲ. ಆದರೆ ವಾರದಲ್ಲಿ ಮೂರು ಬಾರಿಗಿಂತ ಹೆಚ್ಚು ತಿನ್ನುವ ಅಭ್ಯಾಸ ಸಲ್ಲ. ನೀವು ಚಿಕನ್ ತಿನ್ನುವ ಮೂರು ಹೊತ್ತು ಕೂಡ ಬಹಳ ಹೊತ್ತು ಬೇಯಿಸಿದ ಚಿಕನ್ ಅನ್ನೇ ತಿನ್ನಬೇಕು. ಬಿರಿಯಾನಿ ರೂಪದಲ್ಲಿ ಹೆಚ್ಚು ಚಿಕನ್ ತಿನ್ನುವುದು ಒಳ್ಳೆಯದಲ್ಲ. ಚಿಕನ್ ಬಿರಿಯಾನಿ ತಿನ್ನಬೇಕಾದರೆ ತಿಂಗಳಿಗೆ ಒಂದು ಅಥವಾ ಎರಡು ಬಾರಿ ಮಾತ್ರ ತಿನ್ನಬೇಕು. ಚಿಕನ್ ಕರಿಯನ್ನು ಹೆಚ್ಚಿನ ತಾಪಮಾನದಲ್ಲಿ ದೀರ್ಘಕಾಲ ಬೇಯಿಸಿದರೆ, ಮಾಂಸದಲ್ಲಿರುವ ವೈರಸ್ ಮತ್ತು ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ ಮತ್ತು ಹೊರಗಿನಿಂದ ಸೇರಿಸಲಾದ ಪ್ರತಿಜೀವಕಗಳು ನಾಶವಾಗುತ್ತವೆ. ಆಗ ಅದು ಸುರಕ್ಷಿತ ಆಹಾರವಾಗುತ್ತದೆ. ನಂತರ ನೀವು ಅವುಗಳನ್ನು ತಿನ್ನಬಹುದು ಎಂದು ತಜ್ಞರು ಸಲಹೆ ನೀಡುತ್ತಾರೆ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)