ಬೆಂಗಳೂರಲ್ಲಿ ಬೆಸ್ಟ್‌ ಪೋಡಿ ಇಡ್ಲಿ ಸಿಗುವ 10 ಜಾಗಗಳಿವು; ಇಡ್ಲಿ ಫೇವರಿಟ್‌ ಅನ್ನೋರು ಮಿಸ್‌ ಮಾಡ್ಲೇಬೇಡಿ
ಕನ್ನಡ ಸುದ್ದಿ  /  ಜೀವನಶೈಲಿ  /  ಬೆಂಗಳೂರಲ್ಲಿ ಬೆಸ್ಟ್‌ ಪೋಡಿ ಇಡ್ಲಿ ಸಿಗುವ 10 ಜಾಗಗಳಿವು; ಇಡ್ಲಿ ಫೇವರಿಟ್‌ ಅನ್ನೋರು ಮಿಸ್‌ ಮಾಡ್ಲೇಬೇಡಿ

ಬೆಂಗಳೂರಲ್ಲಿ ಬೆಸ್ಟ್‌ ಪೋಡಿ ಇಡ್ಲಿ ಸಿಗುವ 10 ಜಾಗಗಳಿವು; ಇಡ್ಲಿ ಫೇವರಿಟ್‌ ಅನ್ನೋರು ಮಿಸ್‌ ಮಾಡ್ಲೇಬೇಡಿ

ದಕ್ಷಿಣ ಭಾರತದ ಪ್ರಸಿದ್ಧ ಉಪಹಾರಗಳಲ್ಲಿ ಪೋಡಿ ಇಡ್ಲಿಯೂ ಒಂದು. ಬೆಂಗಳೂರಿನ ಹೋಟೆಲ್‌ಗಳಲ್ಲಿ ಪೋಡಿ ಇಡ್ಲಿ ಸಖತ್‌ ಫೇಮಸ್‌. ನೀವೂ ಇದನ್ನು ತಿಂದಿರಬಹುದು. ನೀವು ಬೆಂಗಳೂರಲ್ಲೇ ಇದ್ದು ತುಪ್ಪದ ಪೋಡಿ ತಿನ್ನಲು ಬೆಸ್ಟ್‌ ಜಾಗ ಹುಡುಕುತ್ತಿದ್ದರೆ ನಾವು ನಿಮಗೆ ಮಾಹಿತಿ ಕೊಡ್ತೀವಿ, ಜೊತೆಗೆ ಪೋಡಿ ಇಡ್ಲಿ ಮಾಡೋದು ಹೇಗೆ ಅಂತಾನೂ ಇಲ್ಲಿದೆ ವಿವರ (ಬರಹ: ಪ್ರಿಯಾಂಕ ಗೌಡ)

ಬೆಂಗಳೂರಿನಲ್ಲಿ ಬೆಸ್ಟ್‌ ಪೋಡಿ ಇಡ್ಲಿ ಸಿಗುವ 10 ಜಾಗಗಳಿವು; ಇಡ್ಲಿ ಫೇವರಿಟ್‌ ಅನ್ನೋರು ಈ ಜಾಗಗಳನ್ನ ಮಿಸ್‌ ಮಾಡ್ಲೇಬೇಡಿ
ಬೆಂಗಳೂರಿನಲ್ಲಿ ಬೆಸ್ಟ್‌ ಪೋಡಿ ಇಡ್ಲಿ ಸಿಗುವ 10 ಜಾಗಗಳಿವು; ಇಡ್ಲಿ ಫೇವರಿಟ್‌ ಅನ್ನೋರು ಈ ಜಾಗಗಳನ್ನ ಮಿಸ್‌ ಮಾಡ್ಲೇಬೇಡಿ (PC: Pinterest)

ದಕ್ಷಿಣ ಭಾರತದ ಜನಪ್ರಿಯ ಉಪಹಾರಗಳಲ್ಲಿ ಇಡ್ಲಿಯೂ ಒಂದು. ಬಹುತೇಕರಿಗೆ ಇಡ್ಲಿ ಬಹಳ ಅಚ್ಚುಮೆಚ್ಚು. ನಿಮ್ಮಲ್ಲಿ ಅನೇಕರು ಹೋಟೆಲ್‌ಗಳಿಗೆ ತಿಂಡಿ ತಿನ್ನೋಕೆ ಹೋದರೆ ಬಹುಶಃ ಇಡ್ಲಿಯನ್ನೇ ಆರ್ಡರ್ ಮಾಡುವವರಿಬಹುದು. ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಕನಿಷ್ಠ 5 ರಿಂದ 6 ಗಂಟೆಗಳವರೆಗೆ ನೀರಿನಲ್ಲಿ ನೆನೆಸಿ ಬಳಿಕ ನುಣ್ಣಗೆ ರುಬ್ಬಿ, ಮರುದಿನ ಈ ಹಿಟ್ಟನ್ನು ಆವಿಯಲ್ಲಿ ಬೇಯಿಸುವ ಮೂಲಕ ಅವುಗಳನ್ನು ತಯಾರಿಸಲಾಗುತ್ತದೆ. ಇದರಲ್ಲಿ ಪ್ರೊಟೀನ್ ಮತ್ತು ನಾರಿನಾಂಶ ಅಂಶ ಅಧಿಕವಾಗಿರುವ ಕಾರಣ ಹೆಚ್ಚು ಕಾಲ ಹೊಟ್ಟೆ ತುಂಬಿದಂತಿರುತ್ತದೆ.

ದಕ್ಷಿಣ ಭಾರತದವರು ವಿಶೇಷವಾಗಿ ಇಷ್ಟಪಡುವ ಖಾದ್ಯವೆಂದರೆ ತುಪ್ಪದ ಪೋಡಿ ಇಡ್ಲಿ. ಇದು ಬಹಳ ಜನಪ್ರಿಯವಾಗಿದ್ದು, ಹಲವಾರು ಹೋಟೆಲ್‌ಗಳಲ್ಲಿ ಇದು ಸಿಗ್ನೇಚರ್‌ ಡಿಶ್‌ ಎನ್ನಿಸಿಕೊಂಡಿದೆ. ಪೋಡಿ ಅಂದರೆ ಚಟ್ನಿ ಪುಡಿ ಎಂದು ಕರೆಯಲಾಗುತ್ತದೆ. ಇದು ಒಣ ಮಸಾಲೆಗಳನ್ನು ಪುಡಿಮಾಡಿಟ್ಟ ಮಿಶ್ರಣವಾಗಿದೆ. ಇದನ್ನು ಮನೆಯಲ್ಲೇ ತಯಾರಿಸೋದಾದ್ರೆ ಏನೆಲ್ಲಾ ಸಾಮಗ್ರಿ ಬೇಕು, ತಯಾರಿಸೋದು ಹೇಗೆ ನೋಡಿ.

ಪೋಡಿ ಇಡ್ಲಿ ಮಾಡೋದು ಹೇಗೆ?

ಬೇಕಾಗುವ ಪದಾರ್ಥಗಳು: ಅಕ್ಕಿ- 2 ಕಪ್, ಉದ್ದಿನ ಬೇಳೆ- 1 ಕಪ್, ನೆನೆಯಲು ಮತ್ತು ರುಬ್ಬಲು ನೀರು, ರುಚಿಗೆ ತಕ್ಕಷ್ಟು ಉಪ್ಪು.

ಪೋಡಿ ಮಾಡಲು ಬೇಕಾಗುವ ಪದಾರ್ಥಗಳು: ಕಡಲೆಬೇಳೆ - 1/4 ಕಪ್, ಉದ್ದಿನ ಬೇಳೆ- 1/4 ಕಪ್, ಎಳ್ಳು - 2 ಟೀ ಚಮಚ, ಒಣಗಿದ ಕೆಂಪು ಮೆಣಸಿನಕಾಯಿ- 4 ರಿಂದ 5, ಇಂಗು- 1/2 ಟೀ ಚಮಚ, ಕರಿಬೇವಿನ ಎಲೆಗಳು- 10-12, ರುಚಿಗೆ ತಕ್ಕಷ್ಟು ಉಪ್ಪು

ತಯಾರಿಸುವ ವಿಧಾನ: ಉದ್ದಿನಬೇಳೆ ಮತ್ತು ಬೇಯಿಸಿದ ಅಕ್ಕಿಯನ್ನು ಪ್ರತ್ಯೇಕವಾಗಿ ತೊಳೆದು, ನಾಲ್ಕರಿಂದ ಆರು ಗಂಟೆಗಳ ಕಾಲ ಅಥವಾ ರಾತ್ರಿಯಿಡೀ ನೀರಿನಲ್ಲಿ ನೆನೆಸಿಡಿ. ನಂತರ, ಅಕ್ಕಿ ಮತ್ತು ಉದ್ದಿನ ಬೇಳೆಯನ್ನು ಪ್ರತ್ಯೇಕವಾಗಿ ನುಣ್ಣಗೆ ರುಬ್ಬಿರಿ. ಇದನ್ನು ದೊಡ್ಡ ಪಾತ್ರೆಗೆ ಹಾಕಿ ಚೆನ್ನಾಗಿ ಮಿಶ್ರಣ ಮಾಡಿ ಹಿಟ್ಟನ್ನು ಎಂಟರಿಂದ ಹತ್ತು ಗಂಟೆಗಳ ಕಾಲ ಹುದುಗಿಸಲು ಬಿಡಿ. ಇನ್ನೊಂದೆಡೆ ಸ್ಟೌ ಮಧ್ಯಮ ಉರಿಯಲ್ಲಿಟ್ಟು ಪ್ಯಾನ್ ಅನ್ನು ಬಿಸಿ ಮಾಡಿ ಅದಕ್ಕೆ ಕಡ್ಲೇಬೇಳೆ, ಉದ್ದಿನಬೇಳೆ, ಎಳ್ಳು ಬೀಜಗಳು, ಒಣ ಕೆಂಪು ಮೆಣಸಿನಕಾಯಿ, ಇಂಗು ಮತ್ತು ಕರಿಬೇವಿನ ಎಲೆಗಳನ್ನು ಗೋಲ್ಡನ್ ಬ್ರೌನ್ ಆಗುವವರೆಗೆ ಎಣ್ಣೆ ಹಾಕದೆ ಹುರಿಯಿರಿ. ಹುರಿದ ಪದಾರ್ಥಗಳನ್ನು ಸಂಪೂರ್ಣವಾಗಿ ತಣ್ಣಗಾಗಲು ಬಿಡಿ. ನಂತರ ಅದಕ್ಕೆ ಸ್ವಲ್ಪ ಉಪ್ಪು ಬೆರೆಸಿ ಮಿಕ್ಸಿಯಲ್ಲಿ ಪುಡಿ ಮಾಡಿ. ಈ ರೀತಿ ಮಾಡಿದರೆ ಪೋಡಿ ಸಿದ್ಧವಾಗುತ್ತದೆ.

ಇಡ್ಲಿ ಪೋಡಿಯನ್ನು ಈ ರೀತಿ ಮಾಡುವುದು: ಇಡ್ಲಿ ಅಚ್ಚನ್ನು ಸ್ವಲ್ಪ ತುಪ್ಪದೊಂದಿಗೆ ಸವರಿ. ರಾತ್ರಿಯಿಡಿ ಹುದುಗಿಸಿದ ಇಡ್ಲಿಹಿಟ್ಟನ್ನು ಅಚ್ಚುಗಳಿಗೆ ಸುರಿದು ಹಬೆಯಲ್ಲಿ ಬೇಯಿಸಿ. ಇದು ಸಾಮಾನ್ಯವಾಗಿ ಸುಮಾರು 10 ರಿಂದ 15 ನಿಮಿಷಗಳನ್ನು ತೆಗೆದುಕೊಳ್ಳುತ್ತದೆ. ಇಡ್ಲಿಗಳು ಬೆಂದ ನಂತರ, ಅವುಗಳನ್ನು ಅಚ್ಚುಗಳಿಂದ ತೆಗೆದು ಸರ್ವಿಂಗ್ ಡಿಶ್‌ನಲ್ಲಿ ಇರಿಸಿ. ನಂತರ ಇಡ್ಲಿಗಳ ಮೇಲೆ ನೀವು ಇಷ್ಟಪಡುವಷ್ಟು ತುಪ್ಪ ಸುರಿಯಿರಿ. ಇದರ ಮೇಲೆ ಮಾಡಿಟ್ಟ ಪೋಡಿ ಮಸಾಲೆಯನ್ನು ಸುರಿಯಿರಿ. ಬಹಳ ಸಿಂಪಲ್ಲಾಗಿ ಮನೆಯಲ್ಲೇ ತಯಾರಿಸಿದ ಪೋಡಿ ಇಡ್ಲಿ ಬಡಿಸಲು ಸಿದ್ಧವಾಗಿವೆ.

ಬೆಂಗಳೂರಿನ ಟಾಪ್ 10 ಘೀ ಪೋಡಿ ಇಡ್ಲಿ ಸ್ಥಳಗಳು

 ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಹಲವು ಹೋಟೆಲ್‌ಗಳಲ್ಲಿ ಪೋಡಿ ಇಡ್ಲಿಗೆ ಪ್ರಸಿದ್ಧಿ ಪಡೆದಿವೆ. ತಮ್ಮ ಉತ್ತಮ ಗುಣಮಟ್ಟದ ಮತ್ತು ಪರಿಮಳಭರಿತ ತುಪ್ಪದ ಪೋಡಿ ಇಡ್ಲಿಗಳಿಗೆ ಹೆಸರುವಾಸಿಯಾಗಿದ್ದಾರೆ. ರಾಜಧಾನಿಯಲ್ಲಿ ತುಪ್ಪದ ಪೋಡಿ ಇಡ್ಲಿಗಳನ್ನು ಸವಿಯಲು ನೀವು ಹೋಗಲೇಬೇಕಾದ 10 ಸ್ಥಳಗಳ ಬಗ್ಗೆ ಇಲ್ಲಿದೆ ಮಾಹಿತಿ.

ರಾಮೇಶ್ವರಂ ಕೆಫೆ, ಇಂದಿರಾನಗರ: ಇದು ಬೆಂಗಳೂರಿನಲ್ಲಿ ತುಪ್ಪದ ಪೋಡಿ ಇಡ್ಲಿಗೆ ಹೆಸರುವಾಸಿಯಾದ ಜನಪ್ರಿಯ ಉಪಹಾರ ಸ್ಥಳ. ಇಂದಿರಾನಗರ ಪ್ರದೇಶದಲ್ಲಿ ನೆಲೆಗೊಂಡಿರುವ ರಾಮೇಶ್ವರಂ ಕೆಫೆಯು ಅಷ್ಟೊಂದು ದುಬಾರಿಯಲ್ಲದ ಆಹಾರಕ್ಕೆ ಹೆಸರುವಾಸಿಯಾಗಿದೆ. ಫಿಲ್ಟರ್ ಕಾಫಿ, ದೋಸೆ ಸೇರಿದಂತೆ ಎಲ್ಲಾ ಖಾದ್ಯಗಳು ಇಲ್ಲಿ ಬಹಳ ರುಚಿಕರವಾಗಿರುತ್ತದೆ. ಅದರಲ್ಲೂ ಇಲ್ಲಿ ಪೋಡಿ ಇಡ್ಲಿ ಸಖತ್ ಫೇಮಸ್. ತುಪ್ಪದ ಪೋಡಿ ಇಡ್ಲಿ ಸವಿಯಲೆಂದೇ ಗ್ರಾಹಕರು ಇಲ್ಲಿಗೆ ಬರುತ್ತಾರೆ.

ವಿಳಾಸ: 2984, 12ನೇ ಮುಖ್ಯ ರಸ್ತೆ, ಎಚ್‌ಎಎಲ್ 2ನೇ ಹಂತ, ಇಂದಿರಾನಗರ, ಬೆಂಗಳೂರು

ಸಮಯ: ಬೆಳಗ್ಗೆ 6:30 ರಿಂದ ಮಧ್ಯರಾತ್ರಿ 1 ಗಂಟೆ

ಉಮೇಶ್ ದೋಸಾ ಪಾಯಿಂಟ್, ಶೇಷಾದ್ರಿಪುರಂ: ಇಲ್ಲಿ ರುಚಿಕರವಾದ ತುಪ್ಪದ ಪೋಡಿ ಇಡ್ಲಿಗಳನ್ನು ತಯಾರಿಸಲಾಗುತ್ತದೆ. ಇಡ್ಲಿಗಳನ್ನು ತಯಾರಿಸಿದ ನಂತರ, ಅದಕ್ಕೆ ಸಾಕಷ್ಟು ತುಪ್ಪ ಸುರಿದು, ಚಟ್ನಿ (ಪೋಡಿ) ಯಿಂದ ಅಲಂಕರಿಸುತ್ತಾರೆ. ಇವರು ಮಾಡುವ ಪೋಡಿಯ ಪರಿಮಳ ತುಂಬಾ ಪ್ರಸಿದ್ಧಿ ಪಡೆದಿವೆ. ತಮ್ಮ ಚಟ್ನಿ ಪೋಡಿಯ ಪ್ಯಾಕೇಜುಗಳನ್ನು ಮಾರಾಟ ಸಹ ಮಾಡುತ್ತಾರೆ. ತುಪ್ಪದ ಪೋಡಿ ಇಡ್ಲಿ ಜೊತೆಗೆ ಮಸಾಲೆ ದೋಸೆ, ವಡಾ ಇಲ್ಲಿ ತುಂಬಾನೇ ಫೇಮಸ್.

ವಿಳಾಸ: 21, ನೆಹರು ನಗರ ಮುಖ್ಯ ರಸ್ತೆ, ಶೇಷಾದ್ರಿಪುರಂ, ಬೆಂಗಳೂರು

ಸಮಯ: ಬೆಳಗ್ಗೆ 8 ರಿಂದ ರಾತ್ರಿ 10 ರವರೆಗೆ

ಐಡಿಸಿ ಕಿಚನ್, ಮಲ್ಟಿಪಲ್ ಔಟ್ಲೆಟ್‌ಗಳು: ಇವರು ಮಾಡುವ ತುಪ್ಪದ ತಟ್ಟೆ ಇಡ್ಲಿಯನ್ನು ಒಮ್ಮೆ ನೀವು ತಿಂದರೆ ಮತ್ತೆ ಮತ್ತೆ ತಿನ್ನಬೇಕು ಎಂದೆನಿಸುತ್ತದೆ. ಹತ್ತಿಯಷ್ಟೇ ಮೃದುವಾಗಿರುವ ಇಡ್ಲಿಗೆ ತುಪ್ಪ ಸುರಿದು, ಅದರ ಮೇಲೆ ಹಾಕುವ ಚಟ್ನಿಯನ್ನು ಸವಿಯುವುದೇ ಒಂದು ಆನಂದ. ತುಪ್ಪದ ಪೋಡಿ ಇಡ್ಲಿ ಜೊತೆಗೆ ತಟ್ಟೆ ಇಡ್ಲಿಯನ್ನು ಗ್ರಾಹಕರು ಹೆಚ್ಚಾಗಿ ಆರ್ಡರ್ ಮಾಡುತ್ತಾರೆ.

ವಿಳಾಸ: 134, ಮೀಡಿಯಾ ಡೊಮೈನ್, ಡಬಲ್ ರೋಡ್, 2ನೇ ಹಂತ, ಇಂದಿರಾನಗರ, ಬೆಂಗಳೂರು.

ಸಮಯ: ಬೆಳಗ್ಗೆ 7 ರಿಂದ- ರಾತ್ರಿ 10:30

ಪೋಡಿ ಇಡ್ಲಿ, ಕೋರಮಂಗಲ: ಬೆಂಗಳೂರಿನ ಮಧ್ಯಭಾಗದಲ್ಲಿರುವ ಕೋರಮಂಗಲದಲ್ಲಿರುವ ಈ ರೆಸ್ಟೋರೆಂಟ್ ದಕ್ಷಿಣ ಭಾರತದ ಉಪಹಾರಕ್ಕೆ ಹೆಸರುವಾಸಿಯಾಗಿದೆ. ಇಲ್ಲಿ, ನೀವು ಸಾಮಾನ್ಯ ಮತ್ತು ಪೋಡಿ ಇಡ್ಲಿ ಎರಡನ್ನೂ ಸೇವಿಸಬಹುದು. ರುಚಿಕರವಾದ ಪೋಡಿ ಇಡ್ಲಿಯೊಂದಿಗೆ ಮೂರು ವಿಧದ ಚಟ್ನಿ ಮತ್ತು ಸಾಂಬಾರ್ ಅನ್ನು ಬಡಿಸುತ್ತಾರೆ. ಇಡ್ಲಿ ಅಂದ್ರೆ ಸಖತ್ ಇಷ್ಟ ಅನ್ನುವವರು ಈ ಪೋಡಿ ಇಡ್ಲಿ ವೆಜ್ ರೆಸ್ಟೋರೆಂಟ್ ಭೇಟಿ ನೀಡಬಹುದು. ತುಪ್ಪದ ಪೋಡಿ ಇಡ್ಲಿ ಜೊತೆಗೆ ಅಪ್ಪಂ ಮತ್ತು ಉಪ್ಮಾಗೆ ಭಾರಿ ಡಿಮ್ಯಾಂಡ್ ಇದೆ.

ವಿಳಾಸ: 503, 6ನೇ ಅಡ್ಡರಸ್ತೆ, ಕೋರಮಂಗಲ, 6ನೇ ಬ್ಲಾಕ್, ಬೆಂಗಳೂರು

ಸಮಯ: ಬೆಳಗ್ಗೆ 7:30 ರಿಂದ ರಾತ್ರಿ 11:30 ರವರೆಗೆ

ಬ್ರಾಹ್ಮಿಣ್ಸ್ ತಟ್ಟೆ ಇಡ್ಲಿ, ಮಲ್ಟಿಪಲ್ ಔಟ್ಲೆಟ್: ಬೇರೆ-ಬೇರೆ ಕಡೆಗಳಲ್ಲಿ ಹಲವು ಔಟ್ಲೆಟ್‌ಗಳನ್ನು ಹೊಂದಿರುವ ಈ ರೆಸ್ಟೋರೆಂಟ್ ಪೋಡಿ ಇಡ್ಲಿಗೆ ಬಂದಾಗ ಇಡ್ಲಿ ಪ್ರಿಯರ ನೆಚ್ಚಿನ ತಾಣ ಅಂತಾನೇ ಹೇಳಬಹುದು. ಬೆಲೆಗಳು ದುಬಾರಿಯೇನಲ್ಲ, ಆಹಾರದ ಗುಣಮಟ್ಟಕ್ಕೂ ಸಾಟಿಯಿಲ್ಲ. ನೀವು ದಿನದ ಮೂರು ಹೊತ್ತಿನ ಊಟಗಳನ್ನು ಇಲ್ಲೇ ಮಾಡಬಹುದು. ಗುಣಮಟ್ಟದಲ್ಲಿ ಇವರನ್ನು ಮೀರಿಸುವವರು ಬಹುಶಃ ಕಡಿಮೆಯೇ. ಇಲ್ಲಿ ಪೋಡಿ ಇಡ್ಲಿ ಮತ್ತು ತಟ್ಟೆ ಇಡ್ಲಿಗಳ ಹೊರತಾಗಿ, ಪುಳಿಯೋಗರೆ, ಫಿಲ್ಟರ್ ಕಾಫಿ ಮತ್ತು ಮಸಾಲೆ ದೋಸೆಯ ರುಚಿಯನ್ನು ಸವಿಯಬಹುದು.

ವಿಳಾಸ: ಮನೆ 113/2-1, ನೆಲ ಮಹಡಿ, 8ನೇ ಮುಖ್ಯ ರಸ್ತೆ, 17ನೇ ಕ್ರಾಸ್, ಮಲ್ಲೇಶ್ವರಂ, ಬೆಂಗಳೂರು

ಸಮಯ: ಬೆಳಗ್ಗೆ 7 ರಿಂದ ರಾತ್ರಿ 8:30

ಮಧುರೈ ಇಡ್ಲಿ ಅಂಗಡಿ, ಇಂದಿರಾನಗರ: ಬೆಂಗಳೂರಿನ ಇಂದಿರಾನಗರದಲ್ಲಿರುವ ಮಧುರೈ ಇಡ್ಲಿ ಅಂಗಡಿಯು ಬೆಳಗ್ಗೆ 6:30 ಕ್ಕೆ ರೆಸ್ಟೋರೆಂಟ್ ತೆರೆಯುತ್ತದೆ. ಬೆಳಗ್ಗಿನ ಉಪಹಾರಕ್ಕೆ ಇದು ಅತ್ಯುತ್ತಮ ಸ್ಥಳ. ಇದು ತನ್ನ ಅಧಿಕೃತ ದಕ್ಷಿಣ ಭಾರತೀಯ ಪಾಕಪದ್ಧತಿಗೆ ಹೆಸರುವಾಸಿಯಾಗಿದೆ. ಇಲ್ಲಿನ ಸಿಬ್ಬಂದಿ ಸ್ನೇಹಪರರಾಗಿದ್ದು, ನೈರ್ಮಲ್ಯವನ್ನು ಕಾಪಾಡಿಕೊಳ್ಳಲಾಗಿದೆ. ಪೋಡಿ ಇಡ್ಲಿಯ ಜೊತೆಗೆ ಮಸಾಲಾ ದೋಸೆ, ಫಿಲ್ಟರ್ ಕಾಫಿಯ ರುಚಿ ಸವಿಯಬಹುದು.

ವಿಳಾಸ: 3048, 80 ಅಡಿ ರಸ್ತೆ, ಸಿವಿ ರಾಮನ್ ರಸ್ತೆ, ಎಚ್ಎಎಲ್ 2ನೇ ಹಂತ, ತಿಪ್ಪಸಂದ್ರ, ಇಂದಿರಾನಗರ, ಬೆಂಗಳೂರು

ಸಮಯ: ಬೆಳಗ್ಗೆ 6:30 ರಿಂದ ಮಧ್ಯರಾತ್ರಿ 12:45

ತೀರ್ಥಂ ಕೆಫೆ, ಕೋರಮಂಗಲ: ಈ ಸ್ಥಳವು ತುಂಬಾ ಅಲಂಕಾರಿಕವಾಗಿಲ್ಲ. ಆದರೆ ಪೋಡಿ ಇಡ್ಲಿ, ರವಾ ಇಡ್ಲಿ, ಚೌ ಚೌ ಬಾತ್, ಕೇಸರಿ ಬಾತ್ ಸೇರಿದಂತೆ ಎಲ್ಲಾ ದಕ್ಷಿಣ ಭಾರತೀಯ ಉಪಹಾರಗಳು ಇಲ್ಲಿ ಲಭ್ಯವಿದೆ. ಒಮ್ಮೆ ಇಲ್ಲಿ ಭೇಟಿ ಕೊಟ್ಟರೆ ಪದೇ ಪದೇ ನಿಮಗೆ ಹೋಗಬೇಕು ಎಂದೆನಿಸಬಹುದು. ಪೋಡಿ ಇಡ್ಲಿ ಜೊತೆಗೆ ವಡಾ, ಮಸಾಲೆ ದೋಸೆ ಇಲ್ಲಿ ಫೇಮಸ್.

ವಿಳಾಸ: 131, ವಾರ್ಡ್ 147, 1 ನೇ ಮುಖ್ಯ ರಸ್ತೆ, ಕೋರಮಂಗಲ, 7 ನೇ ಬ್ಲಾಕ್, ಬೆಂಗಳೂರು.

ಸಮಯ: ಬೆಳಗ್ಗೆ 7:30 ರಿಂದ ರಾತ್ರಿ 10:30

ಚಾಲುಕ್ಯ ಸಾಮ್ರಾಟ್ ಕೆಫೆ 1977 ರಿಂದ, ಸೇಂಟ್ ಮಾರ್ಕ್ಸ್ ರಸ್ತೆ: ಈ ರೆಸ್ಟೋರೆಂಟ್ ಆಹಾರ ಉದ್ಯಮದ ಐಕಾನ್ ಆಗಿದೆ. ಏಕೆಂದರೆ ಇದನ್ನು 1977 ರಲ್ಲಿ ಸ್ಥಾಪಿಸಲಾಗಿದ್ದೂ ಇನ್ನೂ ಪ್ರಬಲವಾಗಿದೆ. ಪೋಡಿ ಇಡ್ಲಿ ಸವಿಯಲೆಂದೇ ಇಲ್ಲಿ ಗ್ರಾಹಕರು ಬರುತ್ತಾರೆ. ಪಟ್ಟಿಯಲ್ಲಿರುವ ಇತರ ರೆಸ್ಟೋರೆಂಟ್‌ಗಳಿಗೆ ಹೋಲಿಸಿದರೆ ಇದು ಸ್ವಲ್ಪ ದುಬಾರಿಯಾಗಿದ್ದರೂ, ಈ ಕೆಫೆಯು ತಾಜಾ ಆಹಾರ, ಕುಟುಂಬ-ಸ್ನೇಹಿ ಪರಿಸರ ಮತ್ತು ಆಹಾರದ ಗುಣಮಟ್ಟಕ್ಕೆ ಹೆಸರುವಾಸಿಯಾಗಿದೆ. ಪೋಡಿ ಇಡ್ಲಿ ಜೊತೆಗೆ ಉತ್ತಪಮ್, ಇಡ್ಲಿಯನ್ನು ಸವಿಯಬಹುದು.

ವಿಳಾಸ: 1, ನೆಲ ಮಹಡಿ, 1 ಶೋಭಾ ಮಾಲ್, ಶಾಂತಲಾ ನಗರ, ಸೇಂಟ್ ಮಾರ್ಕ್ಸ್ ರಸ್ತೆ, ಬೆಂಗಳೂರು

ಸಮಯ: ಬೆಳಗ್ಗೆ 7 ರಿಂದ – 11 ರವರೆಗೆ

ಪ್ರಸಿದ್ಧಿ ಫುಡ್ ಕಾರ್ನರ್, ಜೆಪಿ ನಗರ: ಈ ಹೋಟೆಲ್ ಪಾಕೆಟ್ ಸ್ನೇಹಿಯಾಗಿದೆ. ನೀವು ಕೊಡುವ ಹಣಕ್ಕೆ ಯಾವುದೇ ಮೋಸವಿಲ್ಲ. ರುಚಿಯೂ ಅಷ್ಟೇ ಚೆನ್ನಾಗಿದ್ದು, ನೀವು ತಿನ್ನುತ್ತಿದ್ದರೆ, ಆಹಾಹಾ.. ಏನು ರುಚಿ ಅಂತಾ ಕಳೆದುಹೋಗೋದು ಪಕ್ಕಾ. ಇಲ್ಲಿನ ಉತ್ತಮ ಆಹಾರದ ಗುಣಮಟ್ಟ, ಸಿಬ್ಬಂದಿ ಸೇವೆ ಮತ್ತು ವಾತಾವರಣ ಖಂಡಿತಾ ನಿಮಗೆ ಇಷ್ಟವಾಗುವುದರಲ್ಲಿ ಡೌಟೇ ಇಲ್ಲ. ಪೋಡಿ ಇಡ್ಲಿಗೆ ಫೇಮಸ್ ಆದ್ರೂ ಮೊಸರನ್ನ, ರಾಗಿ ರೊಟ್ಟಿ, ಮೊಸರು ವಡಾ ಮುಂತಾದ ಖಾದ್ಯಗಳ ರುಚಿ ಅಮೋಘವಾದದ್ದು.

ವಿಳಾಸ: 25, 9ನೇ ಕ್ರಾಸ್, ಐಟಿಐ ಲೇಔಟ್, 34ನೇ ಮುಖ್ಯ, ಜೆಪಿ ನಗರ, ಬೆಂಗಳೂರು

ಸಮಯ: ಬೆಳಗ್ಗೆ 6:30 ರಿಂದ ರಾತ್ರಿ 11:30 ರವರೆಗೆ

ಚಿಕ್ಕಣ್ಣ ಟಿಫಿನ್ ರೂಂ, ಶೇಷಾದ್ರಿಪುರ: ಇಲ್ಲಿ ಹೆಚ್ಚಾಗಿ ಜನದಟ್ಟಣೆಯಿಂದ ಕೂಡಿರುತ್ತದೆ. ಗ್ರಾಹಕರ ಜನಜಂಗುಳಿಯೇ ಇಲ್ಲಿ ಹರಿದುಬರುತ್ತದೆ. ಚಿಕ್ಕಣ್ಣ ಟಿಫಿನ್ ರೂಂನಲ್ಲಿ ಪೋಡಿ ಇಡ್ಲಿಗಳ ಜೊತೆ ಸಾದಾ ದೋಸೆ, ಫಿಲ್ಟರ್ ಕಾಫಿ, ಮಸಾಲೆ ದೋಸೆ ಮತ್ತು ಬಾತ್ ಮಸಾಲೆ ದೋಸೆಯ ರುಚಿಯನ್ನು ನೀವು ಸವಿಯಬಹುದು. ಹಾಗಂತ ಮೆನು ಇಲ್ಲಿಗೇ ಕೊನೆಯಾಗುವುದಿಲ್ಲ. ತರಹೇವಾರಿ ಭಕ್ಷ್ಯಗಳು ಇಲ್ಲಿ ತಯಾರಾಗಿರುತ್ತವೆ. ನೀವು ಒಮ್ಮೆ ಪ್ರಯತ್ನಿಸಬಹುದು.

ವಿಳಾಸ: 9/01 & 2, ನೆಲ ಮಹಡಿ, 4 ನೇ ಮುಖ್ಯ ರಸ್ತೆ, ಸುಬ್ರಹ್ಮಣ್ಯಸ್ವಾಮಿ ದೇವಸ್ಥಾನದ ಬೀದಿ, ಕುಮಾರ್ ಪಾರ್ಕ್ ಪಶ್ಚಿಮ, ಶೇಷಾದ್ರಿಪುರಂ, ಬೆಂಗಳೂರು

ಸಮಯ: ಬೆಳಗ್ಗೆ 7:30 ರಿಂದ ಮಧ್ಯಾಹ್ನ 12ರವರೆಗೆ, ಸಂಜೆ 4:30 ರಿಂದ ರಾತ್ರಿ 10 ರವರೆಗೆ.

Whats_app_banner