ಡಯೆಟ್ ಮಾಡುತ್ತಿದ್ದರೆ ಬೆಳಗ್ಗೆ ನವಣೆ ಉಪ್ಪಿಟ್ಟು ಸವಿಯಿರಿ: ತೂಕ ಇಳಿಕೆಗೆ ಇದು ಸಹಕಾರಿ, ಇಲ್ಲಿದೆ ರೆಸಿಪಿ-food weight loss tips how to make quinoa upma recipe morning breakfast recipe prk ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಡಯೆಟ್ ಮಾಡುತ್ತಿದ್ದರೆ ಬೆಳಗ್ಗೆ ನವಣೆ ಉಪ್ಪಿಟ್ಟು ಸವಿಯಿರಿ: ತೂಕ ಇಳಿಕೆಗೆ ಇದು ಸಹಕಾರಿ, ಇಲ್ಲಿದೆ ರೆಸಿಪಿ

ಡಯೆಟ್ ಮಾಡುತ್ತಿದ್ದರೆ ಬೆಳಗ್ಗೆ ನವಣೆ ಉಪ್ಪಿಟ್ಟು ಸವಿಯಿರಿ: ತೂಕ ಇಳಿಕೆಗೆ ಇದು ಸಹಕಾರಿ, ಇಲ್ಲಿದೆ ರೆಸಿಪಿ

ನವಣೆ ಉಪ್ಪಿಟ್ಟು ದಕ್ಷಿಣ ಭಾರತದ ಸಾಂಪ್ರದಾಯಿಕ ಉಪಹಾರ ಖಾದ್ಯಗಳಲ್ಲಿ ಒಂದಾಗಿದೆ. ತೂಕ ಇಳಿಕೆ ಜೊತೆಗೆ ಆರೋಗ್ಯಕರ ಆಹಾರವನ್ನು ನೀವು ಸೇವಿಸಲು ಬಯಸಿದರೆ ಬೆಳಗ್ಗಿನ ತಿಂಡಿಗೆ ನವಣೆ ಉಪ್ಪಿಟ್ಟು ಸವಿಯಬಹುದು. ಇದನ್ನು ಮಾಡುವುದು ಹೇಗೆ, ಇಲ್ಲಿ ತಿಳಿಯಿರಿ.

ತೂಕ ಇಳಿಕೆಗೆ ಸಹಕಾರಿಯಾಗಿರುವ ನವಣೆ ಉಪ್ಪಿಟ್ಟು ಮಾಡುವುದು ಹೇಗೆ, ಇಲ್ಲಿ ತಿಳಿಯಿರಿ.
ತೂಕ ಇಳಿಕೆಗೆ ಸಹಕಾರಿಯಾಗಿರುವ ನವಣೆ ಉಪ್ಪಿಟ್ಟು ಮಾಡುವುದು ಹೇಗೆ, ಇಲ್ಲಿ ತಿಳಿಯಿರಿ.

ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವ ಬಹುತೇಕ ಮಂದಿ ಆಹಾರ ಪದ್ಧತಿ ಹಾಗೂ ದೇಹದ ಫಿಟ್ನೆಸ್ ಕಾಪಾಡುವತ್ತ ಗಮನಹರಿಸುತ್ತಾರೆ. ಆಹಾರ ಪದ್ಧತಿಯಲ್ಲಿ ಕೊಂಚ ಬದಲಾವಣೆ ಮಾಡಿಕೊಂಡು ಪೌಷ್ಠಿಕಾಂಶಯುಕ್ತ, ಕಡಿಮೆ ಕ್ಯಾಲೋರಿ ಇರುವ ಆಹಾರದತ್ತ ಮೊರೆ ಹೋಗುತ್ತಾರೆ. ತೂಕ ಇಳಿಕೆಯಲ್ಲಿ ನವಣೆಯು ಬಹಳ ಮುಖ್ಯ ಪಾತ್ರ ವಹಿಸುತ್ತದೆ. ಇದೊಂದು ಬಹಳ ಆರೋಗ್ಯಕರ ಧಾನ್ಯವಾಗಿದ್ದು, ತೂಕ ನಷ್ಟದಲ್ಲಿ ಬಹಳ ಪರಿಣಾಮಕಾರಿ ಎಂದು ಸಾಬೀತುಪಡಿಸುತ್ತದೆ. ಈ ಧಾನ್ಯವು ಹೃದಯದ ಆರೋಗ್ಯದಿಂದ ಮಧುಮೇಹ ನಿಯಂತ್ರಣದವರೆಗೆ ಪ್ರಯೋಜನಕಾರಿಯಾಗಿದೆ. ನವಣೆ ಸಾಕಷ್ಟು ಜೀವಸತ್ವಗಳು ಮತ್ತು ಖನಿಜಗಳನ್ನು ಹೊಂದಿದ್ದು, ಉಪಹಾರಕ್ಕೂ ಉತ್ತಮ ಆಯ್ಕೆ. ನವಣೆಯ ಉಪ್ಪಿಟ್ಟು ತಿನ್ನಲೂ ರುಚಿಕರವಾಗಿದ್ದು, ತೂಕ ಇಳಿಕೆಗೂ ಸಹಕಾರಿಯಾಗಿದೆ. ಹಾಗಿದ್ದರೆ ಈ ರೆಸಿಪಿ ಮಾಡುವುದು ಹೇಗೆ ಇಲ್ಲಿ ತಿಳಿಯೋಣ.

ನವಣೆ ಉಪ್ಪಿಟ್ಟು ಮಾಡುವುದು ಹೀಗೆ

ಬೇಕಾಗುವ ಸಾಮಗ್ರಿ: ನವಣೆ 1 ಕಪ್, ತೆಂಗಿನ/ಆಲಿವ್ ಎಣ್ಣೆ- 1 ಟೀ ಚಮಚ, ಕಡಲೆಕಾಯಿ- 2 ಚಮಚ, ಸಾಸಿವೆ- 1 ಟೀ ಚಮಚ, ಕಡಲೇಬೇಳೆ- 1 ಚಮಚ, ಉದ್ದಿನ ಬೇಳೆ- 1 ಚಮಚ, ಕರಿಬೇವಿನ ಎಲೆ- 6 ರಿಂದ 7, ಹಸಿರು ಮೆಣಸಿನಕಾಯಿ- 2, ಶುಂಠಿ ಪೇಸ್ಟ್- 1 ಚಮಚ, ಈರುಳ್ಳಿ- 1, ಟೊಮೆಟೊ- 1, ತರಕಾರಿಗಳು (ಬೀನ್ಸ್, ಕ್ಯಾರೆಟ್, ಬಟಾಣಿ), ನೀರು- ಸ್ವಲ್ಪ, ಕೊತ್ತಂಬರಿ ಸೊಪ್ಪು, ತೆಂಗಿನಕಾಯಿ ತುರಿ- ಸ್ವಲ್ಪ, ರುಚಿಗೆ ತಕ್ಕಷ್ಟು ಉಪ್ಪು.

ಮಾಡುವ ವಿಧಾನ: ನವಣೆ ಉಪ್ಪಿಟ್ಟು ತಯಾರಿಸಲು ಪ್ಯಾನ್‍ನಲ್ಲಿ ಸ್ವಲ್ಪ ಎಣ್ಣೆಯನ್ನು ಹಾಕಿ ಅದಕ್ಕೆ 2 ಚಮಚ ಕಡಲೆಕಾಯಿ ಹಾಕಿ ಫ್ರೈ ಮಾಡಿ. ಬಳಿಕ ಸಾಸಿವೆ, ಕಡಲೇಬೇಳೆ, ಉದ್ದಿನ ಬೇಳೆಯನ್ನು ಹಾಕಿ ಫ್ರೈ ಮಾಡಿ. ಇದಕ್ಕೆ 6 ರಿಂದ 7 ಕರಿಬೇವಿನ ಎಲೆ ಹಾಕಿ, 2 ಹಸಿರು ಮೆಣಸಿನಕಾಯಿಗಳನ್ನು ಸೇರಿಸಿ. ಇದಕ್ಕೆ ನುಣ್ಣಗೆ ಕತ್ತರಿಸಿದ ಈರುಳ್ಳಿ ಸೇರಿಸಿ ಫ್ರೈ ಮಾಡಿ. ನಂತರ ಚಿಕ್ಕದಾಗಿ ಕತ್ತರಿಸಿದ ಟೊಮೆಟೊ ಸೇರಿಸಿ. ಮಿಕ್ಸ್ ಮಾಡಿ. ಬಳಿಕ ಇದಕ್ಕೆ ಬೀನ್ಸ್, ಕ್ಯಾರೆಟ್, ಬಟಾಣಿಗಳನ್ನು ಸೇರಿಸಿ ಮಿಶ್ರಣ ಮಾಡಿ. 1-2 ನಿಮಿಷಗಳ ನಂತರ 1 ಟೀಸ್ಪೂನ್ ಶುಂಠಿ ಪೇಸ್ಟ್ ಸೇರಿಸಿ. ಮಿಕ್ಸ್ ಮಾಡಿ. ನಂತರ ಸ್ವಲ್ಪ ನೀರು ಹಾಕಿ ತರಕಾರಿ ಬೇಯಲು ಬಿಡಿ. ಈ ವೇಳೆ ಇನ್ನೊಂದು ಪಾತ್ರೆಯಲ್ಲಿ ನವಣೆಯನ್ನು ಬೇಯಿಸಿ.

ಇನ್ನು ತರಕಾರಿ ಬೇಯುತ್ತಿದ್ದಂತೆ ರುಚಿಗೆ ತಕ್ಕಷ್ಟು ಉಪ್ಪು ಹಾಕಿ. ತರಕಾರಿ ಬೆಂದ ನಂತರ ಬೇಯಿಸಿದ ನವಣೆ ಸೇರಿಸಿ ಮಿಶ್ರಣ ಮಾಡಿ. ಇದಕ್ಕೆ ಹೆಚ್ಚಿಟ್ಟ ಕೊತ್ತಂಬರಿ ಸೊಪ್ಪು ಸೇರಿಸಿ ಕಡಿಮೆ ಉರಿಯಲ್ಲಿ ಬೇಯಿಸಿದರೆ ರುಚಿಕರವಾದ ನವಣೆ ಉಪ್ಪಿಟ್ಟು ಸವಿಯಲು ಸಿದ್ಧ. ಸ್ಟೌವ್ ಆಫ್ ಮಾಡಿದ ಬಳಿಕ ಬೇಕಿದ್ದರೆ ಅರ್ಧ ನಿಂಬೆ ರಸವನ್ನು ಸೇರಿಸಬಹುದು. ಇದು ರುಚಿಯನ್ನು ಮತ್ತಷ್ಟು ಹೆಚ್ಚಿಸುತ್ತದೆ.

ಫೈಬರ್ ನಲ್ಲಿ ಸಮೃದ್ಧವಾಗಿರುವ ನವಣೆಯನ್ನು ಸೇವಿಸುವುದರಿಂದ ತೂಕವನ್ನು ವೇಗವಾಗಿ ಕಡಿಮೆ ಮಾಡಬಹುದು. ನವಣೆಯು ಜೀವಸತ್ವಗಳು ಮತ್ತು ಖನಿಜಗಳಿಂದ ಸಮೃದ್ಧವಾಗಿದೆ. ಅದು ನಿಮ್ಮ ಆರೋಗ್ಯ ಕಾಪಾಡಲು ಕೂಡ ಸಹಕಾರಿಯಾಗಿದೆ.

mysore-dasara_Entry_Point