ಕನ್ನಡ ಸುದ್ದಿ  /  ಜೀವನಶೈಲಿ  /  Health Tips: ನಿಮ್ಮ ದೇಹದಲ್ಲಿನ ಉಷ್ಣತೆ ನಿಯಂತ್ರಿಸಬೇಕೇ; ಪ್ರತಿದಿನ ಈ 4 ಪ್ರಾಣಾಯಾಮಗಳನ್ನು ಪ್ರಯತ್ನಿಸಿ ನೋಡಿ

Health Tips: ನಿಮ್ಮ ದೇಹದಲ್ಲಿನ ಉಷ್ಣತೆ ನಿಯಂತ್ರಿಸಬೇಕೇ; ಪ್ರತಿದಿನ ಈ 4 ಪ್ರಾಣಾಯಾಮಗಳನ್ನು ಪ್ರಯತ್ನಿಸಿ ನೋಡಿ

ಬೇಸಿಗೆಯಲ್ಲಿ ದೇಹದ ಉಷ್ಣತೆ ತಗ್ಗಿಸಲು ಪ್ರಾಣಾಯಾಮ ಕೂಡ ಒಂದು ಪರಿಹಾರದ ಮಾರ್ಗವಾಗಿದೆ. ಆದರೆ ಯಾವ ಪ್ರಾಣಾಯಾಮ ಹೇಗೆ ಮಾಡಿದರೆ ದೇಹ ಕೂಲ್ ಆಗುತ್ತೆ ಅನ್ನೋದನ್ನ ಇಲ್ಲಿ ತಿಳಿಯಿರಿ.

ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುವ 4 ಪ್ರಾಣಾಯಾಮಗಳ ಬಗ್ಗೆ ತಿಳಿಯಿರಿ
ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ನೆರವಾಗುವ 4 ಪ್ರಾಣಾಯಾಮಗಳ ಬಗ್ಗೆ ತಿಳಿಯಿರಿ

ಬೇಸಿಯಲ್ಲಿನ ಸುಡು ಬಿಸಿಲು ಅನೇಕ ಆರೊಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತೆ. ಅದರಲ್ಲೂ ದೇಹವನ್ನು ತಂಪಾಗಿಸಲು ಸೂಕ್ತ ಆಹಾರ, ಪಾನೀಯಗಳನ್ನ ಸೇವಿಸಿದ್ರು ದೇಹದ ಉಷ್ಣತೆ ಇಳಿಯುತ್ತಿಲ್ಲವೇಕೆ ಎಂಬ ಚಿಂತೆ ನಿಮ್ಮನ್ನು ಕಾಡುತ್ತಿರಬಹುದು. ಆಹಾರದ ಜೊತೆ ಜೊತೆಗೆ ಕೆಲ ಪ್ರಾಣಾಯಾಮಗಳನ್ನು (Pranayama) ಮಾಡುವುದರಿಂದ ದೇಹದ ಉಷ್ಣತೆಯನ್ನ ಕಡಿಮೆ ಮಾಡಿಕೊಳ್ಳಬಹುದು. ಯೋಗವಿಜ್ಞಾನದ ಪ್ರಮುಖ ಭಾಗವಾಗಿರುವ ಪ್ರಾಣಾಯಾಮ ಉಸಿರಾಡುವ ಕಲೆಯನ್ನು ಕಲಿಸುವ ವಿಧಾನವಾಗಿದೆ. ಉಸಿರಾಟದ ನಿಯಂತ್ರಣವೇ ಪ್ರಾಣಾಯಾಮ. ಪ್ರಾಣಾಯಾಮದ ಮೂಲಕ ದೇಹ ಹಾಗೂ ಮನಸ್ಸನ್ನು ಹಿಡಿತದಲ್ಲಿಟ್ಟುಕೊಳ್ಳಲು ಸಾಧ್ಯವಾಗುತ್ತದೆ. ಅದರಲ್ಲಿ ದೇಹದ ಉಷ್ಣತೆ ಹೆಚ್ಚಾದಾಗ ಪ್ರಾಣಾಯಾಮದ ಮೂಲಕ ಪರಿಹಾರವನ್ನು ಕಂಡುಕೊಳ್ಳಲು ಸಾಧ್ಯವಿದೆ. ಹಾಗಾದರೆ ಯಾವೆಲ್ಲಾ ಪ್ರಾಣಾಯಾಮಗಳಿಂದ ದೇಹದ ಉಷ್ಣತೆ ಕಡಿಮೆ ಮಾಡಿಕೊಳ್ಳಬಹುದು ಎಂಬುದರ ವಿವರ ಇಲ್ಲಿದೆ.

ಟ್ರೆಂಡಿಂಗ್​ ಸುದ್ದಿ

ಶೀತಲಿ ಪ್ರಾಣಾಯಾಮ

ದೇಹವನ್ನು ತಂಪಾಗಿಸಲು ಇದೊಂದು ಉತ್ತಮ ಪ್ರಾಣಾಯಾಮವಾಗಿದೆ. ಪಿತ್ತವನ್ನು ಸಮತೋಲನದಲ್ಲಿರಿಸಿ, ವಾತ ಹಾಗೂ ಕಫವನ್ನು ಕಡಿಮೆ ಮಾಡಿಲು ಸಹಕಾರಿಯಾಗಿದೆ. ಈ ಪ್ರಾಣಾಯಾಮದಿಂದ ದೇಹವು ತಂಪಾಗುವುದು ಮಾತ್ರವಲ್ಲದೆ, ಒತ್ತಡವನ್ನು ಶಮನಗೊಳಿಸುತ್ತದೆ. ಬಹುಬೇಗನೆ ಸಿಟ್ಟು ಬರುವುದು ಹಾಗೂ ಕಿರಿಕಿರಿಗೊಳಗಾಗುವ ವ್ಯಕ್ತಿತ್ವವುಳ್ಳವರಿಗೆ ಇದು ಪರಿಹಾರವಾಗಿದೆ.

ಮಾಡುವ ವಿಧಾನ: ನೇರವಾಗಿ ಕುಳಿತುಕೊಂಡು, ಭುಜಗಳನ್ನು ಅಗಲವಾಗಿರಿಸಿ, ಕೈಗಳಲ್ಲಿ ಧ್ಯಾನ ಮುದ್ರೆಯನ್ನು ಮಾಡಿಕೊಳ್ಳಿ. ಕಣ್ಣನ್ನು ಮುಚ್ಚಿ. ನಾಲಿಗೆ ಮುಂಭಾಗದ ತುದಿಯ ರಂಧ್ರದಂತಿರುವ ಭಾಗದಿಂದ ಉಸಿರನ್ನು ತೆಗೆದುಕೊಳ್ಳಬೇಕು. ಉಸಿರು ತೆಗೆದುಕೊಳ್ಳುವಾಗ ತಂಪಾದ ಅನುಭವ ಆಗುತ್ತದೆ. ನಾಲಿಗೆಯನ್ನು ಒಳಗಡೆ ತೆಗೆದುಕೊಳ್ಳಬೇಕು. ಆಮೇಲೆ ಕತ್ತನ್ನು ಮುಂದಕ್ಕೆ ಬಗ್ಗಿಸಿ ಗಲ್ಲವನ್ನು ಎದೆಗೆ ತಾಕುವಂತೆ ಮಾಡಿಕೊಳ್ಳಿ. 2 ಸೆಕೆಂಡ್‌ ನಂತರ ಕತ್ತನ್ನು ಮುಂದಕ್ಕೆ ತಂದುಕೊಂಡು ಮೂಗಿನಿಂದ ಉಸಿರು ಬಿಡಿ. ಬಿಡುವಾಗ ಉಸಿರನ ಮೇಲೆ ಏಕಾಗ್ರತೆ ಇರಬೇಕು. ಈ ರೀತಿ 10-15 ಬಾರಿ ಮಾಡಬಹುದು. ಇದರಿಂದಾಗಿ ದೇಹವು ಬಹು ಬೇಗನೆ ತಂಪಾಗುತ್ತದೆ.

ಶೀತ್ಕಾರಿ ಪ್ರಾಣಯಾಮ

ಶೀತ್ಕಾರಿ ಅಥವಾ ಶಿತಕಾರಿ ಎಂದರೆ ತಂಪನ್ನುಂಟು ಮಾಡುವುದು ಎಂದರ್ಥ. ಎರಡು ತುಟಿಗಳ ಮಧ್ಯದಿಂದ 'ಸ್‌' 'ಸ್‌' ಎಂದು ಶಬ್ದ ಮಾಡುತ್ತಾ ಉಸಿರು ತೆಗೆದುಕೊಂಡು ಮಾಡುವ ಪ್ರಾಣಾಯಾಮವಿದು. ದೇಹದ ಉಷ್ಣತೆಯನ್ನು ಕಡಿಮೆ ಮಾಡಲು ಸಹಕಾರಿಯಾಗಿರುವ ಈ ಪ್ರಾಣಾಯಾಮವು, ಭಾವನಾತ್ಮಕವಾಗಿ ಬಲು ಬೇಗನೆ ಕುಗ್ಗುವವರಿಗೆ ಸದೃಢವಾಗಲು ಒಳ್ಳೆಯ ಆಯ್ಕೆ. ಆದರೆ ಶೀತಕ್ಕೆ ಸಂಬಂಧಿಸಿದ ಯಾವುದೇ ಕಾಯಿಲೆ ಇದ್ದಲ್ಲಿ ಶೀತ್ಕಾರಿ ಪ್ರಾಣಾಯಾಮ ಮಾಡಬಾರದು.

ಮಾಡುವ ವಿಧಾನ: ನೇರವಾಗಿ ಕುಳಿತುಕೊಂಡು, ಹಲ್ಲುಗಳನ್ನು ಬಿಗಿಯಾಗಿ ಕಚ್ಚಿಕೊಳ್ಳಿ. ನಾಲಿಗೆಯನ್ನು ಹಲ್ಲಿಗೆ ತಾಕುವಂತಿರಿಸಿ. ಕೈಯಲ್ಲಿ ಧ್ಯಾನಮುದ್ರೆಯನ್ನು ಇಟ್ಟುಕೊಳ್ಳಿ. ನಂತರ ಹಲ್ಲುಗಳ ಕಚ್ಚಿಕೊಂಡಿರುವಂತೆಯೇ ಬಾಯಿಯ ಮೂಲಕ ಉಸಿರನ್ನು ದೀರ್ಘವಾಗಿ ಒಳಗೆ ತೆಗೆದುಕೊಂಡು ಮೂಗಿನ ಮೂಲಕ ಉಸಿರನ್ನು ಮೆಲ್ಲಗೆ ಹೊರಕ್ಕೆ ಬಿಡಿ. ಈ ರೀತಿ 10 ಬಾರಿ ಮಾಡಬೇಕು. ಇದರಿಂದ ದೇಹದ ಸ್ನಾಯುಗಳು ಸಡಿಲಗೊಳ್ಳುತ್ತವೆ ಮತ್ತು ಇಡೀ ದೇಹ ತಂಪಾಗುತ್ತದೆ. ಕಣ್ಣು, ಕಿವಿಗಳಿಗೆ ವಿಶ್ರಾಂತಿ ದೊರೆಯುತ್ತದೆ. ಬಾಯಾರಿಕೆ, ಹಸಿವು ನೀಗುತ್ತದೆ. ಮನಸ್ಸಿಗೆ ಶಾಂತಿ ದೊರೆಯುತ್ತದೆ. ನಾಲಿಗೆ ರುಚಿ ಗ್ರಂಥಿಗಳು ಚೈತನ್ಯಗೊಳ್ಳುತ್ತವೆ.

ಚಂದ್ರಭೇದನ ಪ್ರಾಣಾಯಾಮ

ಮೂಗಿನ ಎಡ ಹೊಳ್ಳೆಯನ್ನು ಚಂದ್ರನಿಗೆ ಹೋಲಿಸಲಾಗುತ್ತದೆ. ಏಕೆಂದರೆ ನಮ್ಮ ಶರೀರವನ್ನು ತಂಪಾಗಿಡಲು ಎಡಭಾಗದ ಹೊಳ್ಳೆಯ ಉಸಿರಾಟವು ಅತ್ಯಂತ ಪ್ರಮುಖವಾದದ್ದು. ಒಂದು ಹೊಳ್ಳೆಯಿಂದ ಮತ್ತೊಂದು ಹೊಳ್ಳೆಗೆ ಉಸಿರನ್ನು ತಳ್ಳುವುದಕ್ಕೆ ಭೇದನ ಎನ್ನಲಾಗುತ್ತದೆ. ರಾತ್ರಿ ಮಲಗುವ ಮುನ್ನ, ಇಲ್ಲವೇ ಬೇಸರದಲ್ಲಿದ್ದಾಗ, ಕಿರಿಕಿರಿಯ ಭಾವನೆಯಲ್ಲಿದ್ದಾಗ ಈ ಪ್ರಾಣಾಯಾಮವನ್ನು ಮಾಡುವುದರಿಂದ ಮನಸ್ಸು ಹಗುರಾಗುತ್ತದೆ, ದೇಹದ ಉಷ್ಣತೆ ಕಡಿಮೆಯಾಗುವುದು ಮಾತ್ರವಲ್ಲದೆ ಎದೆ ಉರಿಯಂತಹ ಅನೇಕ ಸಮಸ್ಯೆಗಳು ಇಲ್ಲವಾಗುತ್ತವೆ. ಚಳಿಗಾಲದಲ್ಲಿ ಅಥವಾ ಶೀತ, ಕೆಮ್ಮಿನ ವೇಳೆ ಈ ಪ್ರಾಣಾಯಾ ಮಾಡುವುದು ಸೂಕ್ತವಲ್ಲ.

ಮಾಡುವ ವಿಧಾನ: ನೇರವಾಗಿ ಕುಳಿತುಕೊಂಡು, ಬಲ ಹಸ್ತದಲ್ಲಿ ಸೂರ್ಯ ಮುದ್ರೆ ಮತ್ತು ಎಡ ಹಸ್ತದಲ್ಲಿ ವರುಣ ಮುದ್ರೆಯನ್ನು ಧರಿಸಬೇಕು. ಬಲ ಹಸ್ತದ ಹೆಬ್ಬೆರಳನ್ನು ಬಲ ಮೂಗಿನ ಹೊಳ್ಳೆ ಮೇಲೆ ಒತ್ತಿ ಹೊಳ್ಳೆಯನ್ನು ಮುಚ್ಚಬೇಕು. ಎಡ ಹಸ್ತದ ಹೆಬ್ಬೆರಳ ತುದಿ ಮತ್ತು ಕಿರುಬೆರಳಿನ ತುದಿಯನ್ನು ತಾಕಿಸಿದ ವರುಣ ಮುದ್ರೆಯನ್ನು ಎಡಗಾಲಿನ ಮಂಡಿಯ ಮೇಲೆ ಇರಿಸಬೇಕು. ಎಡ ಹೊಳ್ಳೆಯಿಂದ ಪೂರ್ಣ ಉಸಿರನ್ನು ಬಿಟ್ಟು ಉಸಿರನ್ನು ತೆಗೆದುಕೊಳ್ಳಬೇಕು. ಈಗ ಮಧ್ಯದ ಬೆರಳು ಮತ್ತು ಉಂಗುರದ ಬೆರಳಿನಿಂದ ಎಡ ಹೊಳ್ಳೆಯನ್ನು ಮುಚ್ಚಬೇಕು. ಬಲ ಹೊಳ್ಳೆಯನ್ನು ತೆರೆದು ಉಸಿರನ್ನು ಬಲ ಹೊಳ್ಳೆಯಿಂದ ಬಿಡಬೇಕು. ಇದು ಒಂದು ಸುತ್ತು. ಇದೇ ರೀತಿ ಎಡ ಹೊಳ್ಳೆಯಲ್ಲಿ ಉಸಿರನ್ನು ತೆಗೆದುಕೊಳ್ಳಬೇಕು. ಬಲ ಹೊಳ್ಳೆಯಿಂದ ಬಿಡಬೇಕು. ಇದೇ ರೀತಿ 15 ಸುತ್ತು ಅಭ್ಯಾಸ ಮಾಡಬೇಕು. ಮಾಡುವಾಗ ಬೆನ್ನು ಮತ್ತು ಕುತ್ತಿಗೆ ನೇರವಾಗಿರಬೇಕು.

ಭ್ರಾಮರಿ ಪ್ರಾಣಯಾಮ

ಭ್ರಮರ ಎಂದರೆ ಜೇನು ದುಂಬಿ. ಉಸಿರು ಹೊರ ಬಿಡುವಾಗ ʻಹಂ' ಎಂಬ ಜೇನು ನೊಣದ ಝೇಂಕಾರ ಶಬ್ಧವನ್ನು ಮಾಡುವ ಕಾರಣ ಈ ಪ್ರಾಣಾಯಾಮಕ್ಕೆ ಭ್ರಾಮರಿ ಎಂಬ ಹೆಸರು. ಪ್ರಕೃತಿಯೊಂದಿಗೆ ಬೆಸೆಯುವಲ್ಲಿ ನೆರವಾಗುವ ಈ ಪ್ರಾಣಾಯಾಮವು, ತಲೆನೋವು, ಮನಸ್ಸಿಗೆ ಕಿರಿಕಿರಿ ಎನಿಸಿದಾಗಲೆಲ್ಲಾ ಸಮಾಧಾನವನ್ನು ನೀಡುತ್ತದೆ. ಅಲ್ಲದೆ ನಿದ್ರಾ ಹೀನತೆ ನಿವಾರಣೆಯಾಗುತ್ತದೆ. ಮನಸ್ಸಿಗೆ ಮತ್ತು ಮೆದುಳಿಗೆ ಶಾಂತಿ ದೊರೆಯುತ್ತದೆ. ದೇಹದ ಸಮತೋಲನಕ್ಕೂ ಸಹಕಾರಿಯಾಗಿದೆ.

ಮಾಡುವ ವಿಧಾನ: ಈ ಪ್ರಾಣಾಯಾಮವನ್ನು ನಿಶ್ಯಬ್ದವಾದ ಸ್ಥಳದಲ್ಲಿ ಬೆಳಗ್ಗೆ ಅಥವಾ ರಾತ್ರಿ ಏಕಾಂತದಲ್ಲಿ ಅಭ್ಯಾಸ ಮಾಡಬಹುದು. ಪದ್ಮಾಸನ ಅಥವಾ ಸುಖಾಸನದಲ್ಲಿ ಬಾಯಿಯನ್ನು ಮುಚ್ಚಿದ ರೀತಿಯಲ್ಲಿ ಈ ಪ್ರಾಣಾಯಾಮ ಮಾಡಬೇಕಿದೆ. ದೀರ್ಘವಾಗಿ ಉಸಿರನ್ನು ತೆಗೆದುಕೊಳ್ಳಿ ಹಾಗೆಯೆ ದೀರ್ಘವಾಗಿ ಉಸಿರನ್ನು ಬಿಡುವಾಗ ಹಂ ಎಂಬ ಝೇಂಕಾರ ಶಬ್ದ ಬರಬೇಕು. ಪುನಾರವರ್ತಿಸಿ ಈ ಕ್ರಿಯೆಯನ್ನು ಅಭ್ಯಾಸ ಮಾಡಬೇಕು. ಇದನ್ನು ಷಣ್ಮುಖಿ ಮುದ್ರೆಯಲ್ಲಿಯೇ ಮಾಡಬೇಕು. ಹೀಗೆ 4 ರಿಂದ 8 ಬಾರಿ ಅಭ್ಯಾಸ ಮಾಡಬೇಕು.

ಈ ನಾಲ್ಕೂ ಪ್ರಾಣಾಯಾಮಗಳನ್ನು ಮಾಡುವುದರಿಂದ ಬರಿಯ ದೇಹದ ಉಷ್ಣತೆ ಕಡಿಮೆಯಾಗುವುದು ಮಾತ್ರವಲ್ಲದೆ ಮನಸ್ಸು ಹಗುರಾಗಲೂ ಸಹ ನೆರವಾಗುತ್ತದೆ. ಬೇಸಿಗೆಯಾಗಿರುವುದರಿಂದ ಈ ಪ್ರಾಣಾಯಾಮಗಳನ್ನು ಮಾಡುವುದರ ಜೊತೆಗೆ ಬಹುಬೇಗನೆ ಜೀರ್ಣವಾಗುವ ಆಹಾರವನ್ನೇ ಸೇವಿಸಿ. ದೇಹಕ್ಕೆ ಬೇಕಾದಷ್ಟು ನೀರನ್ನು ಕುಡಿಯುತ್ತಲೇ ಇರಿ. ಇದರಿಂದ ನಿರ್ಜಲೀಕರಣದ ಸಮಸ್ಯೆ ಬಾರದು, ದೇಹವೂ ತಂಪಾಗಿರುತ್ತದೆ.