Migraine: ಋತುಮಾನಗಳ ಬದಲಾವಣೆಯಿಂದ ಮೈಗ್ರೇನ್ ಹೆಚ್ಚುವುದೇ, ಇದನ್ನು ತಡೆಗಟ್ಟುವ ವಿಧಾನಗಳೇನು; ಇಲ್ಲಿದೆ ತಜ್ಞರ ಉತ್ತರ
ಮೈಗ್ರೇನ್ ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆ. ಇದಕ್ಕೆ ಕಾರಣಗಳು ಹಲವು. ಒತ್ತಡ, ಹಾರ್ಮೋನ್‌ಗಳಲ್ಲಿನ ಬದಲಾವಣೆ, ಆಹಾರ, ನಿದ್ದೆ ಹೀಗೆ ವಿವಿಧ ಕಾರಣಗಳು ಮೈಗ್ರೇನ್ ತಲೆನೋವು ಹೆಚ್ಚಲು ಕಾರಣವಾಗಬಹುದು. ಕೆಲವೊಮ್ಮೆ ಋತುಮಾನಗಳ ಬದಲಾವಣೆಯೂ ಮೈಗ್ರೇನ್‌ಗೆ ಕಾರಣವಾಗಬಹುದು ಎಂಬುದು ತಜ್ಞರ ಅಭಿಪ್ರಾಯ.
ಮೈಗ್ರೇನ್ ಹಲವರನ್ನು ಕಾಡುವ ಸಮಸ್ಯೆ. ಈ ವಿಚಿತ್ರ ತಲೆನೋವಿಗೆ ಶಾಶ್ವತ ಪರಿಹಾರ ಎಂಬುದಿಲ್ಲ. ಇದೊಂದು ಸಂಕೀರ್ಣ ಹಾಗೂ ಅತಿಯಾಗಿ ಕಾಡುವ ನರ ವೈಜ್ಞಾನಿಕ ಸಮಸ್ಯೆ. ಮೈಗ್ರೇನ್ ಅತಿಯಾದ ತಲೆನೋವಿನ ರೂಪದಲ್ಲಿ ಕಾಡುತ್ತದೆ. ಈ ಸಮಸ್ಯೆ ಇರುವವರಿಗೆ ಶಬ್ದ ಹಾಗೂ ಬೆಳಕಿನ ಸೂಕ್ಷ್ಮತೆಗೆ ತಲೆನೋವು ಬರುತ್ತದೆ. ಕೆಲವೊಮ್ಮೆ ವಾಕರಿಕೆ ಕೂಡ ಬರಬಹುದು.
ಮೈಗ್ರೇನ್ ತಲೆನೋವು ಇತ್ತೀಚೆಗೆ ಹಲವರನ್ನು ಕಾಡುತ್ತಿರುವ ಜಾಗತಿಕ ಸಮಸ್ಯೆಯಾಗಿದೆ. ಜಗತ್ತಿನಲ್ಲಿ ಲಕ್ಷಾಂತರ ಮಂದಿ ಈ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದಕ್ಕೆ ಕಾರಣಗಳು ಹಲವು. ಒತ್ತಡ, ಹಾರ್ಮೋನ್‌ಗಳಲ್ಲಿನ ಬದಲಾವಣೆ, ಆಹಾರ, ನಿದ್ದೆ ಹಾಗೂ ಕೆಲವು ಪರಿಸ್ಥಿತಿಗಳು ಹೀಗೆ ವಿವಿಧ ಕಾರಣಗಳು ಮೈಗ್ರೇನ್ ತಲೆನೋವು ಹೆಚ್ಚಲು ಕಾರಣವಾಗಬಹುದು.
ಬೆಂಗಳೂರಿನ ಅಪೊಲೊ ಸ್ಪೆಕ್ಟ್ರಾ ಆಸ್ಪತ್ರೆಯ ನರರೋಗತಜ್ಞ ಡಾ. ಸಂಪತ್ ಚಂದ್ರ ಅವರು ಎಚ್‌ಟಿ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ʼಮೈಗೇನ್‌ಗೆ ನಿಖರವಾದ ಕಾರಣ ಏನು ಎಂಬುದನ್ನು ಇನ್ನು ಸಂಪೂರ್ಣ ಅರ್ಥ ಮಾಡಿಕೊಳ್ಳಲು ಸಾಧ್ಯವಾಗಿಲ್ಲ. ಅವು ಅನುವಂಶಿಕ, ಪರಿಸರ ಹಾಗೂ ನರವೈಜ್ಞಾನಿಕ ಅಂಶಗಳ ಸಂಯೋಜನೆಯನ್ನು ಒಳಗೊಂಡಿದೆ ಎಂದು ಭಾವಿಸಲಾಗಿದೆ. ಮೈಗ್ರೇನ್‌ಗೆ ಹವಾಮಾನ ಬದಲಾವಣೆಯು ಸಂಭಾವ್ಯ ಪ್ರಚೋದಕಗಳು ಎಂದು ಕೆಲವು ವರದಿಗಳು ತಿಳಿಸಿವೆʼ ಎಂದು ಅವರು ಹೇಳಿದ್ದಾರೆ.
ʼಹವಾಮಾನ ಬದಲಾವಣೆ, ವಿಶೇಷವಾಗಿ ವಾಯುಮಂಡಲದ ಒತ್ತಡ, ತಾಪಮಾನ, ಆರ್ದ್ರತೆ ಹಾಗೂ ವಾತಾವರಣದಲ್ಲಿನ ಪರಿಸ್ಥಿತಿಗಳಲ್ಲಿನ ಬದಲಾವಣೆಗಳು ಕೆಲವರಲ್ಲಿ ಮೈಗ್ರೇನ್ ಪ್ರಚೋದನೆಗೆ ಸಂಭಾವ್ಯ ಕಾರಣಗಳಾಗಿರಬಹುದು. ಆದರೆ ಮೈಗ್ರೇನ್ ಹೊಂದಿರುವ ಪ್ರತಿಯೊಬ್ಬರೂ ಈ ಹವಾಮಾನ ಬದಲಾವಣೆಗಳಿಗೆ ಸೂಕ್ಷ್ಮವಾಗಿರುವುದಿಲ್ಲ. ಕೆಲವೊಮ್ಮೆ ಮೈಗ್ರೇನ್‌ಗೆ ಕಾರಣಗಳು ಸರಿಯಾಗಿ ತಿಳಿಯುವುದಿಲ್ಲʼ ಎಂದು ಅವರು ಹೇಳುತ್ತಾರೆ.
ಮೈಗ್ರೇನ್ ನಿವಾರಣೆಗೆ ಟಿಪ್ಸ್
ಡಾ. ಸಂಪತ್ ಅವರ ಪ್ರಕಾರ ಉತ್ತಮ ನಿದ್ದೆಯು ಮೈಗ್ರೇನ್ ನಿವಾರಣೆಯಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಹಾಗಾದರೆ ಗುಣಮಟ್ಟದ ನಿದ್ದೆಯ ಮೇಲೆ ಗಮನ ಕೊಡುವುದು ಮುಖ್ಯವಾಗುತ್ತದೆ.
ನಿದ್ದೆಯ ವಿಧಾನದಲ್ಲಿ ಸ್ಥಿರತೆ ಕಾಪಾಡಿಕೊಳ್ಳುವುದು: ಪ್ರತಿದಿನ ಒಂದೇ ಸಮಯಕ್ಕೆ ಮಲಗುವುದು ದೇಹದ ಆಂತರಿಕ ಗಡಿಯಾರ ಸರಿಯಾಗಿ ಕಾರ್ಯ ನಿರ್ವಹಿಸಲು ಸಹಾಯ ಮಾಡುತ್ತದೆ. ಒಂದೇ ಸಮಯಕ್ಕೆ ಮಲಗಿ ಏಳುವ ಅಭ್ಯಾಸ ರೂಢಿಸಿಕೊಳ್ಳುವುದು ಮೈಗ್ರೇನ್ ತಡೆಯಲು ಒಂದು ವಿಧಾನವಾಗಿದೆ.
ನಿರ್ದಿಷ್ಟ ಅವಧಿಯ ನಿದ್ದೆ: ಮೈಗ್ರೇನ್ ನಿವಾರಣೆಗೆ ಸಾಕಷ್ಟು ನಿದ್ದೆ ಮಾಡುವುದು ಕೂಡ ಪರಿಹಾರ. ನಿದ್ದೆಯಲ್ಲಿ ಅಡಚಣೆ ಹಾಗೂ ನಿದ್ದೆಯ ಗುಣಮಟ್ಟದಲ್ಲಿ ವ್ಯತ್ಯಯವು ಸಮರ್ಪಕ ನಿದ್ದೆಯನ್ನು ಕಸಿಯುತ್ತದೆ. ಇದು ಮೈಗ್ರೇನ್ ಹೆಚ್ಚಲು ಕಾರಣವಾಗುತ್ತದೆ. ಇದಕ್ಕಾಗಿ ಪ್ರತಿದಿನ 7 ರಿಂದ 9 ಗಂಟೆಗಳ ಕಾಲ ನಿದ್ದೆ ಮಾಡುವುದು ಅವಶ್ಯ.
ಅತಿಯಾದ ನಿದ್ದೆಯೂ ಸಲ್ಲ: ಸಾಕಷ್ಟು ನಿದ್ದೆ ಮನುಷ್ಯ ದೇಹಕ್ಕೆ ಅಗತ್ಯ ನಿಜ, ಆದರೆ ಅತಿಯಾದ ನಿದ್ದೆಯು ಮೈಗ್ರೇನ್‌ಗೆ ಹೆಚ್ಚಲು ಕಾರಣವಾಗಬಹುದು. ಸಮಪ್ರಮಾಣದ ನಿದ್ದೆಯನ್ನು ಪಾಲಿಸುವುದು ಅವಶ್ಯ. ವಾರದ ರಜೆದಿನಗಳಲ್ಲಿ ಹೆಚ್ಚು ಹೊತ್ತು ಮಲಗುವುದು ಮೈಗ್ರೇನ್ ಹೆಚ್ಚಲು ಕಾರಣವಾಗಬಹುದು.
ಸ್ಕ್ರೀನ್ ನೋಡುವುದನ್ನು ಮಿತಿಗೊಳಿಸಿ: ಕೆಫಿನ್ ಅಂಶ ಇರುವ ಆಹಾರ ಪದಾರ್ಥಗಳ ಅತಿಯಾದ ಸೇವನೆ ಹಾಗೂ ಹೆಚ್ಚು ಹೊತ್ತು ಮೊಬೈಲ್, ಕಂಪ್ಯೂಟರ್ ಸ್ಕ್ರೀನ್ ನೀಡುವುದು ಮೈಗ್ರೇನ್ ಹೆಚ್ಚಲು ಕಾರಣವಾಗಬಹುದು. ಅದರಲ್ಲೂ ಮಲಗುವ ಹೊತ್ತಿನಲ್ಲಿ ಈ ಅಭ್ಯಾಸ ಸಲ್ಲ.
ನಿರಂತರ ವ್ಯಾಯಾಮ: ದೀರ್ಘ ಉಸಿರಾಟ, ಧ್ಯಾನ ಹಾಗೂ ಇತರ ದೈಹಿಕ ಚಟುವಟಿಕಗಳು ಮೈಗ್ರೇನ್ ಕಡಿಮೆ ಮಾಡಲು ಸಹಾಯ ಮಾಡುತ್ತವೆ.
ಆರೋಗ್ಯಕರ ಆಹಾರ ಸೇವನೆ: ಸಮತೋಲಿತ ಆಹಾರಕ್ರಮ ಪಾಲಿಸುವುದು, ಅತಿಯಾದ ಖಾರದ ವಸ್ತುಗಳನ್ನು ತಿನ್ನುವುದು, ರಾತ್ರಿ ಮಲಗುವಾಗ ಹೊಟ್ಟೆ ಬಿರಿಯುವಷ್ಟು ತಿನ್ನುವುದು ಕೂಡ ಮೈಗ್ರೇನ್ ಹೆಚ್ಚಲು ಕಾರಣವಾಗಬಹುದು. ಮದ್ಯಪಾನ ಹಾಗೂ ಇದಕ್ಕೆ ಸಂಬಂಧಿಸಿದ ಪದಾರ್ಥಗಳು ನಿದ್ದೆಯ ಕೊರತೆ ಉಂಟು ಮಾಡುತ್ತವೆ. ಇದರಿಂದಲೂ ತಲೆನೋವು ಕಾಣಿಸಬಹುದು.
ಒತ್ತಡ ನಿರ್ವಹಣೆ: ಮೈಗ್ರೇನ್‌ಗೆ ಒತ್ತಡವೂ ಪ್ರಮುಖ ಕಾರಣವಾಗಬಹುದು. ಅದಕ್ಕೆ ಒತ್ತಡ ನಿರ್ವಹಣೆಯ ತಂತ್ರ ಪಾಲಿಸುವುದು ಮುಖ್ಯವಾಗುತ್ತದೆ. ಯೋಗ ಹಾಗೂ ಕೆಲವು ಒತ್ತಡ ನಿವಾರಿಸುವ ಹವ್ಯಾಸಗಳನ್ನು ರೂಢಿಸಿಕೊಳ್ಳುವ ಮೂಲಕ ಮೈಗ್ರೇನ್ ತಡೆಯಬಹುದು.