ಸೂಪರ್‌ಫುಡ್‌ಗಳ ಸಾಲಿಗೆ ಸೇರಿದ ಕಾಫಿ; ಹಲವರಿಗೆ ತಿಳಿದಿರದ ಕಾಫಿಯ 6 ಅದ್ಭುತ ಆರೋಗ್ಯ ಪ್ರಯೋಜನಗಳಿವು-health tips is coffee the new superfood 6 health benefits you didnt know about coffe health benefits cancer rst ,ಜೀವನಶೈಲಿ ಸುದ್ದಿ
ಕನ್ನಡ ಸುದ್ದಿ  /  ಜೀವನಶೈಲಿ  /  ಸೂಪರ್‌ಫುಡ್‌ಗಳ ಸಾಲಿಗೆ ಸೇರಿದ ಕಾಫಿ; ಹಲವರಿಗೆ ತಿಳಿದಿರದ ಕಾಫಿಯ 6 ಅದ್ಭುತ ಆರೋಗ್ಯ ಪ್ರಯೋಜನಗಳಿವು

ಸೂಪರ್‌ಫುಡ್‌ಗಳ ಸಾಲಿಗೆ ಸೇರಿದ ಕಾಫಿ; ಹಲವರಿಗೆ ತಿಳಿದಿರದ ಕಾಫಿಯ 6 ಅದ್ಭುತ ಆರೋಗ್ಯ ಪ್ರಯೋಜನಗಳಿವು

ಭಾರತ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ ಜನ ಮೂಡ್ ಫ್ರೆಶ್ ಆಗಲೆಂದು ಕಾಫಿ ಕುಡಿಯುವ ಅಭ್ಯಾಸವನ್ನು ರೂಢಿಸಿಕೊಂಡಿದ್ದಾರೆ. ಆದರೆ ಪದೇ ಪದೇ ಅಥವಾ ದಿನದಲ್ಲಿ ಇಂತಿಷ್ಟು ಪ್ರಮಾಣಕ್ಕಿಂತ ಜಾಸ್ತಿ ಕಾಫಿ ಕುಡಿಯುವುದು ಅಪಾಯಕಾರಿ ಎಂಬ ಅಂಶವನ್ನು ನಾವು ಕೇಳಿದ್ದೇವೆ. ಆದರೆ ಕಾಫಿಯನ್ನು ಮಿತವಾಗಿ ಕುಡಿಯುವುದರಿಂದ ದೇಹಕ್ಕೆ ಅದ್ಭುತ ಪ್ರಯೋಜನಗಳಿವೆ ಎಂಬುದು ಸುಳ್ಳಲ್ಲ.

ಕಾಫಿಯ ಆರೋಗ್ಯ ಪ್ರಯೋಜನಗಳು
ಕಾಫಿಯ ಆರೋಗ್ಯ ಪ್ರಯೋಜನಗಳು (PC: Canva)

ನಮ್ಮಲ್ಲಿ ಬಹುತೇಕರ ದಿನಚರಿಯ ಭಾಗವಾಗಿದೆ ಕಾಫಿ. ಭಾರತ ಸೇರಿದಂತೆ ಪ್ರಪಂಚದ ಹಲವು ದೇಶಗಳಲ್ಲಿ ಕಾಫಿ ಕುಡಿಯುವವರ ಪ್ರಮಾಣ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ, ಇದು ನಮ್ಮ ಬದುಕಿನ ಅವಿಭಾಜ್ಯ ಅಂಗವಾಗಿದ್ದು ಸುಳ್ಳಲ್ಲ. ಕಾಫಿ ಕುಡಿಯುವುದರಿಂದ ಮೂಡ್ ಫ್ರೆಶ್ ಆಗುತ್ತೆ, ಮಾತ್ರವಲ್ಲ ಇದು ಶಕ್ತಿವರ್ಧಕವಾಗಿಯೂ ಕೆಲಸ ಮಾಡುವ ಕಾರಣ ಇದರಿಂದ ಆರೋಗ್ಯಕ್ಕೂ ಸಾಕಷ್ಟು ಪ್ರಯೋಜನಗಳಿವೆ.

ಕಾಫಿಯ ಆರೋಗ್ಯ ಪ್ರಯೋಜನಗಳು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದನ್ನು ಪಾನೀಯಕ್ಕಿಂತ ಹೆಚ್ಚಾಗಿ ಪರಿಗಣಿಸಲಾಗಿದೆ. ಕಾಫಿಯು ಉತ್ಕರ್ಷಣ ನಿರೋಧಕ ಶಕ್ತಿಯ ಕೇಂದ್ರವಾಗಿದೆ. ಇದು ಮೆದುಳನ್ನು ಉತ್ತೇಜಿಸುತ್ತದೆ. ನಿಮ್ಮ ಆರೋಗ್ಯದ ಮೇಲೆ ಧನಾತ್ಮಕ ಪರಿಣಾಮ ಬೀರುವ ಪೋಷಕಾಂಶಗಳನ್ನು ಉತ್ತೇಜಿಸುತ್ತದೆ. ಕಾಫಿಯು ರಾಸಾಯನಿಕಗಳ ಸಂಕೀರ್ಣ ಮಿಶ್ರಣವಾಗಿದ್ದು ಅದು ಗಮನಾರ್ಹ ಪ್ರಮಾಣದ ಕ್ಲೋರೊಜೆನಿಕ್ ಆಮ್ಲ ಮತ್ತು ಕೆಫೀನ್ ಅನ್ನು ಒದಗಿಸುತ್ತದೆ. ವೈಜ್ಞಾನಿಕವಾಗಿ ಸಾಬೀತಾದ ಕಾಫಿಯ ಪ್ರಯೋಜನಗಳ ಬಗ್ಗೆ ಹಿಂದೂಸ್ತಾನ್ ಟೈಮ್ಸ್ ಲೈಫ್‌ಸ್ಟೈಲ್‌ಗೆ ನೀಡಿದ ಸಂದರ್ಶನದಲ್ಲಿ ಕಾಫಿ ವರ್ಕ್ಸ್‌ ಅಂಡ್ ಟೆಕ್ನಾಲಜಿ ಕೆಲಚಂದ್ರ ಕಾಫಿ ಇದರ ಮುಖ್ಯಸ್ಥೆ ನೆಲೀಮಾ ರಾಣಾ ಜಾರ್ಜ್ ತಿಳಿಸಿದ್ದಾರೆ.

ಸಾವಿನ ಅಪಾಯವನ್ನು ಕಡಿಮೆ ಮಾಡುತ್ತದೆ

ಬ್ರಿಟಿಷ್ ಮೆಡಿಕಲ್ ಜರ್ನಲ್‌ನಲ್ಲಿ ಪ್ರಕಟವಾದ ಅಧ್ಯಯನವು ಕಾಫಿ ಕುಡಿಯದವರಿಗೆ ಹೋಲಿಸಿದರೆ ಕುಡಿಯುವವರಲ್ಲಿ ಜೀವತಾವಧಿಯ ಪ್ರಮಾಣ ಹೆಚ್ಚು. ಯಾವುದೇ ಆರೋಗ್ಯ ಅಪಾಯದಿಂದ ಸಾಯುವ ಅಪಾಯ ಕಡಿಮೆ. ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುವ ಉತ್ಕರ್ಷಣ ನಿರೋಧಕಗಳು ಕಾಫಿಯಲ್ಲಿ ಸಮೃದ್ಧವಾಗಿರುವುದೇ ಇದಕ್ಕೆ ಕಾರಣ ಎಂದು ಹೇಳಲಾಗುತ್ತದೆ.

ಹೃದಯರಕ್ತನಾಳದ ಆರೋಗ್ಯ ಸುಧಾರಿಸುವಲ್ಲಿ ಧನಾತ್ಮಕ ಪರಿಣಾಮ

ಕಾಫಿಯು ಉತ್ಕರ್ಷಣ ನಿರೋಧಕಗಳ ಸಮೃದ್ಧ ಮೂಲವಾಗಿದೆ, ಉತ್ಕರ್ಷಣ ನಿರೋಧಕಗಳ ಅಂಶದಲ್ಲಿ ಇದು ಗ್ರೀನ್ ಟೀಯನ್ನು ಕೂಡ ಮೀರಿಸುತ್ತದೆ. ಈ ಸಂಯುಕ್ತಗಳು ಆಕ್ಸಿಡೇಟಿವ್ ಒತ್ತಡವನ್ನು ಎದುರಿಸಲು ಸಹಾಯ ಮಾಡುತ್ತದೆ, ಹೃದ್ರೋಗ ಮತ್ತು ಕ್ಯಾನ್ಸರ್‌ನಂತಹ ದೀರ್ಘಕಾಲದ ಕಾಯಿಲೆಗಳ ಅಪಾಯವನ್ನು ಸಮರ್ಥವಾಗಿ ಕಡಿಮೆ ಮಾಡುತ್ತದೆ. ಅಮೆರಿಕನ್ ಕಾಲೇಜ್ ಆಫ್ ಕಾರ್ಡಿಯಾಲಜಿ ಜರ್ನಲ್‌ನಲ್ಲಿ ಪ್ರಕಟವಾದ ಸಂಶೋಧನೆಯು ಪ್ರತಿದಿನ ಎರಡರಿಂದ ಮೂರು ಕಪ್ ಕಾಫಿ ಕುಡಿಯುವುದರಿಂದ ಪರಿಧಮನಿಯ ಹೃದಯ ಕಾಯಿಲೆಯ ಪ್ರಮಾಣ ಗಣನೀಯವಾಗಿದೆ ತಗ್ಗಿದೆ ಎಂಬುದನ್ನು ತಿಳಿಸುತ್ತದೆ. ಹೆಚ್ಚುವರಿಯಾಗಿ, ಕಾಫಿ ಸೇವನೆಯು ಪ್ರಾಸ್ಟೇಟ್ ಮತ್ತು ಎಂಡೊಮೆಟ್ರಿಯಲ್ ಕ್ಯಾನ್ಸರ್ ಸೇರಿದಂತೆ ವಿವಿಧ ಕ್ಯಾನ್ಸರ್‌ಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಮತ್ತು ನರವೈಜ್ಞಾನಿಕ, ಚಯಾಪಚಯ ಮತ್ತು ಯಕೃತ್ತಿನ ಸ್ಥಿತಿಯನ್ನು ತಗ್ಗಿಸಲು ಸಹಾಯ ಮಾಡುತ್ತದೆ.

ಟೈಪ್ 2 ಡಯಾಬಿಟಿಸ್ ಅಪಾಯ ಕಡಿಮೆ

ಕೆಫಿನ್ ಹೊಂದಿರುವ ಅಥವಾ ಕೆಫಿನ್ ಹೊಂದಿರದ ಕಾಫಿ ಕುಡಿಯುವುದರಿಂದ ಟೈಪ್‌ 2 ಮಧುಮೇಹದ ಅಪಾಯ ಕಡಿಮೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತದೆ. ಭಾರತದಲ್ಲಿ ಇತ್ತೀಚೆಗೆ ಟೈಪ್ 2 ಮಧುಮೇಹದ ಅಪಾಯವುದ ಏರಿಕೆಯಾಗುತ್ತಿದೆ. ಕಾಫಿ ಕುಡಿಯುವವರಿಗೆ ಟೈಪ್ 2 ಮಧುಮೇಹದ ಅಪಾಯ ಕಡಿಮೆ ಎಂದು ಹಲವಾರು ಅಧ್ಯಯನಗಳು ಸೂಚಿಸುತ್ತವೆ. ಆರ್ಕೈವ್ಸ್ ಆಫ್ ಇಂಟರ್ನಲ್ ಮೆಡಿಸಿನ್‌ನಲ್ಲಿ ಪ್ರಕಟವಾದ ಮೆಟಾ-ವಿಶ್ಲೇಷಣೆಯು ಪ್ರತಿದಿನ ನಾವು ಕುಡಿಯುವ ಕಾಫಿಯು ಶೇ 7 ರಷ್ಟು ನಮ್ಮಲ್ಲಿ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ.

ಯಕೃತ್ತಿನ ಆರೋಗ್ಯದ ಮೇಲೆ ಋಣಾತ್ಮಕ ಪರಿಣಾಮ

ಕಾಫಿಯು ಯಕೃತ್ತಿನ ಮೇಲೆ ಗಮನಾರ್ಹವಾದ ರಕ್ಷಣಾತ್ಮಕ ಪರಿಣಾಮಗಳನ್ನು ಹೊಂದಿದೆ ಎಂದು ತೋರಿಸಲಾಗಿದೆ. ಸಂಶೋಧನೆಗಳ ಪ್ರಕಾರ ಕಾಫಿ ಕುಡಿಯುವುದರಿಂದ ಯಕೃತ್ತಿನ ಕಾಯಿಲೆಗಳಾದ ಆಲ್ಕೊಹಾಲ್ಯುಕ್ತವಲ್ಲದ ಕೊಬ್ಬಿನ ಪಿತ್ತಜನಕಾಂಗದ ಕಾಯಿಲೆ, ಯಕೃತ್ತಿನ ಫೈಬ್ರೋಸಿಸ್, ಸಿರೋಸಿಸ್ ಮತ್ತು ಯಕೃತ್ತಿನ ಕ್ಯಾನ್ಸರ್‌ನ ಪ್ರಮಾಣ ಗಣನೀಯವಾಗಿ ಕಡಿಮೆಯಾಗುತ್ತದೆ. ಜರ್ನಲ್ ಆಫ್ ಹೆಪಟಾಲಜಿಯಲ್ಲಿ ಪ್ರಕಟವಾದ ಅಧ್ಯಯನವು ದಿನಕ್ಕೆ ನಾಲ್ಕು ಕಪ್ ಕಾಫಿ ಕುಡಿಯುವುದರಿಂದ ಯಕೃತ್ತಿನ ಸಿರೋಸಿಸ್ ಅಪಾಯವು ಶೇ 80 ರಷ್ಟು ಕಡಿಮೆ ಮಾಡುತ್ತದೆ ಎಂದು ಕಂಡುಹಿಡಿದಿದೆ. ಭಾರತದಲ್ಲಿ ಯಕೃತ್ತು-ಸಂಬಂಧಿತ ಅಸ್ವಸ್ಥತೆಗಳ ಹೆಚ್ಚುತ್ತಿರುವ ಸಂಭವವನ್ನು ಗಮನಿಸಿದರೆ, ಈ ಪ್ರಯೋಜನವು ವಿಶೇಷವಾಗಿ ಗಮನಾರ್ಹವಾಗಿದೆ.

ಪಾರ್ಕಿನ್ಸನ್‌, ಅಲ್ಜೈಮರ್, ಖಿನ್ನತೆಗೆ ಪರಿಹಾರ 

ನಿಯಮಿತ ಕಾಫಿ ಸೇವನೆಯು ಪಾರ್ಕಿನ್ಸನ್ ಕಾಯಿಲೆ, ಖಿನ್ನತೆ ಮತ್ತು ಆಲ್ಜೈಮನರ್‌ನಂತಹ ಅರಿವಿನ ಅಸ್ವಸ್ಥತೆಗಳನ್ನು ಒಳಗೊಂಡಂತೆ ನ್ಯೂರೋ ಡಿಜೆನೆರೆಟಿವ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ ಎಂದು ಹೇಳಲಾಗುತ್ತದೆ. ಆಲ್ಜೈಮರ್‌ ಕಾಯಿಲೆಯ ಜರ್ನ‌ಲ್‌ನಲ್ಲಿ ಪ್ರಕಟವಾದ ಅಧ್ಯಯನವು ಕಾಫಿ ಕುಡಿಯುವವರಿಗೆ ಆಲ್ಜೈಮರ್‌ ಬೆಳವಣಿಗೆಯ ಅಪಾಯವು ಶೇ 65 ವರೆಗೆ ಕಡಿಮೆಯಾಗಿದೆ ಎಂದು ಹೇಳಲಾಗುತ್ತದೆ.

ಅರಿವಿನ ಕಾರ್ಯ ಸುಧಾರಿಸುತ್ತದೆ 

ಕಾಫಿಯಲ್ಲಿನ ಪ್ರಾಥಮಿಕ ಸಕ್ರಿಯ ಘಟಕಾಂಶವಾದ ಕೆಫಿನ್ ಮೆದುಳಿನ ಕಾರ್ಯವನ್ನು ವರ್ಧಿಸುತ್ತದೆ ಎಂದು ತಿಳಿದುಬಂದಿದೆ. ಇದು ಪ್ರತಿಬಂಧಕ ನರಪ್ರೇಕ್ಷಕ ಅಡೆನೊಸಿನ್ ಅನ್ನು ನಿರ್ಬಂಧಿಸುತ್ತದೆ, ಇದು ಡೋಪಮೈನ್‌ನಂತಹ ಇತರ ನರಪ್ರೇಕ್ಷಕಗಳ ಮಟ್ಟವನ್ನು ಹೆಚ್ಚಿಸಲು ಕಾರಣವಾಗುತ್ತದೆ. ಇದು ಮನಸ್ಥಿತಿಯ ಸುಧಾರಣೆ, ಸ್ಮರಣೆ ಮತ್ತು ಅರಿವಿನ ಕಾರ್ಯಕ್ಷಮತೆಗೆ ಕಾರಣವಾಗುತ್ತದೆ.

ಸರಿಯಾದ ಪ್ರಮಾಣ ಮತ್ತು ಕಾಫಿ ಕುಡಿಯುವ ವಿಧಾನ

ಕಾಫಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆಯಾದರೂ, ಅದನ್ನು ಸರಿಯಾದ ಪ್ರಮಾಣದಲ್ಲಿ ಮತ್ತು ರೀತಿಯಲ್ಲಿ ಸೇವಿಸುವುದು ಬಹಳ ಮುಖ್ಯ. ಹೆಚ್ಚಿನ ಆರೋಗ್ಯವಂತ ವಯಸ್ಕರಿಗೆ, ದಿನಕ್ಕೆ 400 ಮಿಲಿಗ್ರಾಂಗಳಷ್ಟು ಕೆಫೀನ್-ಸುಮಾರು ನಾಲ್ಕು 8-ಔನ್ಸ್ ಕಪ್ ಕಾಫಿಗೆ ಸಮನಾಗಿರುತ್ತದೆ-ಸುರಕ್ಷಿತವೆಂದು ಪರಿಗಣಿಸಲಾಗಿದೆ. 

ಕಾಫಿಯ ಪ್ರಯೋಜನಗಳನ್ನು ಹೆಚ್ಚಿಸಲು ಈ ಸಲಹೆ ಪಾಲಿಸಿ: 

ದಿನದ ಸಮಯ: ನಿದ್ರೆಗೆ ಅಡ್ಡಿಯಾಗುವುದನ್ನು ತಪ್ಪಿಸಲು ಬೆಳಿಗ್ಗೆ ಅಥವಾ ಮಧ್ಯಾಹ್ನದ ಆರಂಭದಲ್ಲಿ ಕಾಫಿ ಸೇವಿಸುವುದು ಉತ್ತಮ.

ಅತಿಯಾದ ಸೇರ್ಪಡೆಗಳನ್ನು ತಪ್ಪಿಸಿ: ನಿಮ್ಮ ಕಾಫಿಯನ್ನು ಆರೋಗ್ಯಕರವಾಗಿಡಲು, ಸಕ್ಕರೆ, ಸುವಾಸನೆಯ ಸಿರಪ್‌ಗಳು ಮತ್ತು ಕೊಬ್ಬಿನಾಂಶ ಹೆಚ್ಚಿರುವ ಡೈರಿ ಉತ್ಪನ್ನಗಳ ಬಳಕೆಯನ್ನು ಮಿತಿಗೊಳಿಸಿ. ಬ್ಲ್ಯಾಕ್‌ ಕಾಫಿಯನ್ನು ಆರಿಸಿ. ಸ್ವಲ್ಪ ಪ್ರಮಾಣದ ಹಾಲು ಅಥವಾ ಸಸ್ಯ ಆಧಾರಿತ ಪರ್ಯಾಯಗಳನ್ನು ಸೇರಿಸಿ.

ಹೈಡ್ರೇಟೆಡ್ ಆಗಿರಿ: ಕಾಫಿ ಸೌಮ್ಯ ಮೂತ್ರವರ್ಧಕವಾಗಿರುವುದರಿಂದ, ದಿನವಿಡೀ ಸಾಕಷ್ಟು ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ಅದನ್ನು ಸಮತೋಲನಗೊಳಿಸುವುದು ಅತ್ಯಗತ್ಯ.

ಮಿತಗೊಳಿಸುವಿಕೆ ಮತ್ತು ಸಮತೋಲನ: ಕಾಫಿ ಹಲವಾರು ಆರೋಗ್ಯ ಪ್ರಯೋಜನಗಳನ್ನು ನೀಡುತ್ತದೆ, ಇದು ಸಮತೋಲಿತ ಆಹಾರದ ಭಾಗವಾಗಿರಬೇಕು. ಪೌಷ್ಟಿಕಾಂಶ-ಭರಿತ ಆಹಾರಗಳೊಂದಿಗೆ ಕಾಫಿಯನ್ನು ಸೇವಿಸುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ನಿರ್ವಹಿಸುವುದು ಅದರ ಪ್ರಯೋಜನಗಳನ್ನು ಆನಂದಿಸಲು ಪ್ರಮುಖವಾಗಿದೆ.

(ಗಮನಿಸಿ: ಈ ಸುದ್ದಿಯು ಸಾಮಾನ್ಯ ಮಾಹಿತಿಯನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗಾಗಿ ತಜ್ಞರನ್ನು ಸಂಪರ್ಕಿಸಿ ಅವರಿಂದ ಅಭಿಪ್ರಾಯ ಪಡೆಯುವುದನ್ನು ಮರೆಯದಿರಿ)

mysore-dasara_Entry_Point