ನಿರಂತರವಾಗಿ ವಾಂತಿ, ಭೇದಿ ಆಗ್ತಿದ್ದು ತಕ್ಷಣ ಪರಿಹಾರ ಸಿಗಬೇಕು ಅಂತಿದ್ರೆ ಈ ಮನೆಮದ್ದು ಟ್ರೈ ಮಾಡಿ, ಸುಸ್ತು ಕೂಡ ಕಡಿಮೆಯಾಗುತ್ತೆ
ತಿಂದ ಆಹಾರದಲ್ಲಿ ವ್ಯತ್ಯಾಸವಾದ್ರೆ, ಕಲುಷಿತ ಆಹಾರ ಸೇವಿಸಿದ್ರೆ, ಕೆಲವೊಮ್ಮೆ ಪಿತ್ತ ಕಾರಣದಿಂದ ವಾಂತಿ ಹಾಗೂ ಭೇದಿ ಶುರುವಾಗುತ್ತದೆ. ನಿರಂತರವಾಗಿ ವಾಂತಿ ಭೇದಿ ಆಗ್ತಾ ಇದ್ದು, ತಕ್ಷಣ ಪರಿಹಾರ ಸಿಗಬೇಕು ಅಂದ್ರೆ ಈ ಮನೆಮದ್ದು ಸೇವಿಸಿ ನೋಡಿ. ಇದು ಸುಸ್ತನ್ನು ಕೂಡ ಕಡಿಮೆ ಮಾಡುತ್ತದೆ.
ನಾವು ತಿನ್ನುವ ಆಹಾರದಲ್ಲಿ ಕೊಂಚ ವ್ಯತ್ಯಾಸವಾದ್ರೂ ಆರೋಗ್ಯ ಕೆಡುತ್ತೆ. ಮಕ್ಕಳಿಗಾಗಲಿ, ವಯಸ್ಕರಿಗಾಗಲಿ ಕರಿದ, ಮಸಾಲೆಯುಕ್ತ ಅಥವಾ ಜಂಕ್‌ಫುಡ್‌ಗಳನ್ನು ಹೆಚ್ಚು ಸೇವಿಸಿದ್ರೆ ಇದು ಜೀರ್ಣಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಬ್ಬಹರಿದಿನಗಳಲ್ಲಿ ಅತಿಯಾದ ಸಿಹಿ ತಿನಿಸು ಹಾಗೂ ಕರಿದ ಪದಾರ್ಥಗಳನ್ನು ತಿನ್ನುವುದು ಕೂಡ ಹೊಟ್ಟೆಯ ಮೇಲೆ ಪರಿಣಾಮ ಬೀರಬಹುದು. ಇದರಿಂದ ವಾಂತಿ, ಭೇದಿ, ಅತಿಸಾರದಂತಹ ಸಮಸ್ಯೆಗಳು ಎದುರಾಗುತ್ತದೆ.
ಆಯುರ್ವೇದದಲ್ಲಿ ಇದಕ್ಕೆ ಪಿತ್ತರಸ ಎಂದು ಕರೆಯಲಾಗುತ್ತದೆ. ವಾಂತಿ, ಭೇದಿಯಾದಾಗ ಓಆರ್‌ಎಸ್ ಕುಡಿಯಲು ಸಲಹೆ ನೀಡುತ್ತಾರೆ. ಇದರಿಂದ ದೇಹದಲ್ಲಿ ಎಲೆಕ್ಟ್ರೋಲೈಟ್ ಪ್ರಮಾಣ ಹಾಗೂ ನೀರಿನಾಂಶ ಕಡಿಮೆಯಾಗುವುದಿಲ್ಲ ಎಂದು ಹೇಳಲಾಗುತ್ತದೆ. ಆದರೆ ವಾಂತಿ, ಭೇದಿಯಾದಾಗ ಈ ಒಂದು ಮನೆಮದ್ದು ಸೇವಿಸಿದ್ರೆ ತಕ್ಷಣಕ್ಕೆ ಪರಿಹಾರ ಸಿಗುತ್ತದೆ, ಮಾತ್ರವಲ್ಲ ಸುಸ್ತು ಕೂಡ ಕಡಿಮೆಯಾಗುತ್ತದೆ.
ಬಾರ್ಲಿ ಮತ್ತು ಕೊತ್ತಂಬರಿ ನೀರು
100ಗ್ರಾಂ ಬಾರ್ಲಿಯನ್ನು ಒಂದು ಲೀಟರ್ ನೀರಿನಲ್ಲಿ ಕುದಿಸಿ, ಫಿಲ್ಟರ್ ಮಾಡಿ ಮತ್ತು ಅದಕ್ಕೆ ಒಂದು ಚಮಚ ಕೊತ್ತಂಬರಿ ಪುಡಿಯನ್ನು ಸೇರಿಸಿ. ಈಗ ಈ ಪಾನೀಯವನ್ನು ದಿನವಿಡಿ ಸ್ವಲ್ಪ ಕುಡಿಯುತ್ತಿರಿ. ಈ ಪಾನೀಯವನ್ನು ಕುಡಿಯುವುದರಿಂದ ಸ್ವಲ್ಪ ಸಮಯದೊಳಗೆ ಅತಿಸಾರ ಮತ್ತು ವಾಂತಿಯಿಂದ ಪರಿಹಾರ ದೊರೆಯುತ್ತದೆ.
ಬಾರ್ಲಿ ನೀರು ದೇಹವನ್ನು ನಿರ್ವಿಷಗೊಳಿಸುತ್ತದೆ
ಬಾರ್ಲಿ ನೀರು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಇದನ್ನು ಕುಡಿಯುವುದರಿಂದ ದೇಹದಿಂದ ವಿಷಕಾರಿ ಅಂಶಗಳು ಸುಲಭವಾಗಿ ಹೊರಹೋಗುತ್ತವೆ. ಹೆಚ್ಚುವರಿಯಾಗಿ, ಮೂತ್ರಪಿಂಡವನ್ನು ಸ್ವಚ್ಛಗೊಳಿಸಲಾಗುತ್ತದೆ ಮತ್ತು ಅದರ ಕಾರ್ಯವು ಸುಧಾರಿಸುತ್ತದೆ.
ಕರುಳಿನಲ್ಲಿ ಉತ್ತಮ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ
ಇದರೊಂದಿಗೆ ಬಾರ್ಲಿ ನೀರು ಕರುಳಿನ ಆರೋಗ್ಯವನ್ನು ಬಲಪಡಿಸುತ್ತದೆ. ಕೊತ್ತಂಬರಿ ಕರುಳಿನಲ್ಲಿ ಬ್ಯಾಕ್ಟೀರಿಯಾವನ್ನು ಹೆಚ್ಚಿಸುತ್ತದೆ, ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ವಾಂತಿ ಮತ್ತು ಭೇದಿ ಹೆಚ್ಚಾಗಿ ಕರುಳಿನಲ್ಲಿ ಕೆಟ್ಟ ಬ್ಯಾಕ್ಟೀರಿಯಾಗಳ ಬೆಳವಣಿಗೆಯಿಂದ ಉಂಟಾಗುತ್ತದೆ. ಇದನ್ನು ನಿಭಾಯಿಸಲು, ಬಾರ್ಲಿ ಮತ್ತು ಕೊತ್ತಂಬರಿ ನೀರು ಆರೋಗ್ಯಕರವಾಗಿದೆ.
ವಾಂತಿ, ಭೇದಿಯಾದಾಗ ಅತಿಯಾದ ಸುಸ್ತು ಕಾಡುವುದು ಸಹಜ. ಅಂತಹ ಸಂದರ್ಭದಲ್ಲಿ ದೇಹದಲ್ಲಿ ಎಲೆಕ್ಟ್ರೋಲೈಟ್ ಅಂಶ ಹೆಚ್ಚಿಸುವ ಆಹಾರಗಳನ್ನು ಸೇವಿಸಬೇಕು. ಬಾರ್ಲಿ ನೀರು ಕುಡಿಯುವುದರಿಂದ ದೇಹದಲ್ಲಿ ನೀರಿನಾಂಶ ವೃದ್ಧಿಯಾಗುತ್ತದೆ. ಇದರಿಂದ ಡಿಹೈಡ್ರೇಷನ್ ಸಮಸ್ಯೆಯನ್ನೂ ಕೂಡ ನಿವಾರಿಸಬಹುದು. ಆಯುರ್ವೇದದಲ್ಲಿ ಬಾರ್ಲಿಗೆ ವಿಶೇಷ ಮಹತ್ವವಿದ್ದು ಅತಿಸಾರ, ಭೇದಿಯಂತಹ ಸಮಸ್ಯೆಗಳಿದ್ದಾಗ ಬಾರ್ಲಿ ಗಂಜಿ ಕುಡಿಯುವ ಅಭ್ಯಾಸವು ಒಳ್ಳೆಯದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯಜ್ಞಾನವನ್ನು ಆಧರಿಸಿದೆ. ಈ ಕುರಿತ ಹೆಚ್ಚಿನ ಮಾಹಿತಿಗೆ ತಜ್ಞರನ್ನು ಸಂಪರ್ಕಿಸಿ)