ರಾತ್ರಿ ನಿದ್ರೆ ಬಳಿಕವೂ ಬೆಳಿಗ್ಗೆ ತೂಕಡಿಕೆಯ ಅನುಭವವಾಗುವುದೇಕೆ? ನೀವು ಈ ಸಮಸ್ಯೆಗಳಿಂದ ಬಳಲುತ್ತಿರಬಹುದು, ಪರಿಹಾರಕ್ಕೆ ಇಲ್ಲಿದೆ ಟಿಪ್ಸ್
ಕೆಲವರು ಯಾವಾಗಲೂ ತೂಕಡಿಸುತ್ತಲೇ ಇರುತ್ತಾರೆ. ರಾತ್ರಿ ಮಲಗಿದ್ದೆ ಆದರೂ ತೂಕಡಿಕೆ ನನ್ನನ್ನು ಬಿಡುತ್ತಿಲ್ಲ ಎಂಬ ಅಭಿಪ್ರಾಯ ಅನೇಕರದ್ದು. ಅಸಲಿಗೆ ಈ ರೀತಿಯ ಸಮಸ್ಯೆ ಏಕೆ ಕಾಡುತ್ತದೆ? ಹಗಲು ಆಲಸ್ಯ ನಮ್ಮನ್ನು ಬಾಧಿಸಲು ಕಾರಣವೇನು? ಇಲ್ಲಿದೆ ಮಾಹಿತಿ (ಬರಹ: ರಶ್ಮಿ)
ರಾತ್ರಿ ಪೂರ್ತಿ ನಿದ್ರೆ ಮಾಡಿದರೂ ಕೆಲವರಿಗೆ ಸಾಕು ಎನಿಸುವುದಿಲ್ಲ. ಬೆಳಿಗ್ಗೆ ಎದ್ದ ಬಳಿಕವೂ ಅರೆನಿದ್ರಾವಸ್ಥೆಯಲ್ಲಿಯೇ ಇರುತ್ತಾರೆ. ಏನೆಲ್ಲ ಸಾಹಸಗಳನ್ನು ಮಾಡಿದರೂ ಇದೊಂದು ಸಮಸ್ಯೆಯಿಂದ ಹೊರಬರಲು ಸಾಧ್ಯವಾಗುವುದಿಲ್ಲ. ಅರೆನಿದ್ರಾ ಸ್ಥಿತಿಯು ನಿಮಗೆ ಯಾವುದೇ ಚಟುವಟಿಕೆಗಳಲ್ಲಿ ಉತ್ಸಾಹದಿಂದ ಪಾಲ್ಗೊಳ್ಳಲು ಬಿಡುವುದಿಲ್ಲ. ನಿಮ್ಮನ್ನು ಇನ್ನಷ್ಟು ಸೋಂಬೇರಿಯನ್ನಾಗಿ ಮಾಡಿಬಿಡಬಹುದು. ಆದರೆ ಎಂದಾದರೂ ಈ ರೀತಿಯ ಸಮಸ್ಯೆ ಏಕೆ ಕಾಡುತ್ತದೆ? ನಿಮ್ಮನ್ನು ತೂಕಡಿಸುವಂತೆ ಮಾಡುವ ಈ ಸ್ಥಿತಿಗೆ ಕಾರಣವೇನು? ಎಂಬುದನ್ನು ಯೋಚಿಸಿದ್ದೀರಾ? ನೀವು ತಿಳಿಯಲೇಬೇಕಾದ ಮಾಹಿತಿ ಇಲ್ಲಿದೆ.
ಅನೇಕರಿಗೆ ನಿದ್ರಾಹೀನತೆಯ ಸಮಸ್ಯೆಯಿರುತ್ತದೆ. ಇನ್ನೂ ಕೆಲವರಿಗೆ ನಿದ್ರೆಯಲ್ಲಿ ಉಸಿರುಗಟ್ಟಿದಂತಾಗುತ್ತದೆ. ಮತ್ತೆ ಹಲವರಿಗೆ ನಿದ್ರೆಯಲ್ಲಿ ಕಾಲುಗಳು ಇದ್ದಕ್ಕಿದ್ದಂತೆ ಜೋಮು ಹಿಡಿದು ತೀವ್ರತರವಾದ ನೋವು ಕಾಣಿಸಿಕೊಂಡು ಎಚ್ಚರಗೊಳ್ಳುತ್ತಾರೆ. ಇದೆಲ್ಲವೂ ನಿಮ್ಮ ನಿದ್ರೆಯ ಗುಣಮಟ್ಟ ಕಳಪೆಯಾಗುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಅಧ್ಯಯನವೊಂದರ ಪ್ರಕಾರ ವಯಸ್ಕರಲ್ಲಿ ಮೂರನೇ ಒಂದು ಭಾಗದಷ್ಟು ಜನರು ರಾತ್ರಿ ಸಮರ್ಪಕವಾದ ನಿದ್ದೆ ಬಾರದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಜರ್ನಲ್ ಸ್ಲೀಪ್‌ನಲ್ಲಿ ಪ್ರಕಟಗೊಂಡ ಅಧ್ಯಯನವೊಂದರ ಪ್ರಕಾರ ಯಾರು ರಾತ್ರಿ ಸಮಯದಲ್ಲಿ ಸೂಕ್ತ ವಿಶ್ರಾಂತಿ ಪಡೆಯುವುದಿಲ್ಲವೋ, ಆರೋಗ್ಯವಂತ ನಿದ್ರೆಯನ್ನು ಹೊಂದುವುದಿಲ್ಲವೋ, ಅಂಥವರಲ್ಲಿ ಖಿನ್ನತೆ, ಆಯಾಸ ಹಾಗೂ ಹೃದಯ ರಕ್ತನಾಳಕ್ಕೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳುತ್ತವೆ. ಮುಖ್ಯ ವಿಷಯಗಳನ್ನು ಈ ರೀತಿ ಪಟ್ಟಿ ಮಾಡಬಹುದು.
ಒತ್ತಡದ ಬದುಕಿನಿಂದ ಅಸ್ವಸ್ಥತೆ
ನಾವು ಅತಿಯಾದ ಒತ್ತಡವನ್ನು ಎದುರಿಸಿದಾಗ ನಮ್ಮ ದೇಹವು ಹೆಚ್ಚಿನ ಪ್ರಮಾಣದಲ್ಲಿ ಕಾರ್ಟಿಸೋಲ್‌ಗಳನ್ನು ಬಿಡುಗಡೆ ಮಾಡುತ್ತದೆ. ಇದು ನಮಗೆ ಸರಿಯಾಗಿ ನಿದ್ರೆ ಮಾಡಲು ಬಿಡುವುದಿಲ್ಲ. ವಿಶ್ರಾಂತಿ ಪಡೆಯಬೇಕು ಎಂದುಕೊಂಡ ಸಮಯದಲ್ಲಿ ನಮ್ಮನ್ನು ಜಾಗೃತವಾಗಿಡಲು ನೋಡುತ್ತದೆ. ಇದರಿಂದ ನಿದ್ರೆಗೆ ಸಂಬಂಧಿಸಿದ ಅಸ್ವಸ್ಥತೆ, ಆಯಾಸ ಸೇರಿದಂತೆ ದೀರ್ಘಾವಧಿ ಆರೋಗ್ಯ ಸಮಸ್ಯೆಗಳು ಕಾಣಿಸಬಹುದು. 2017ರಲ್ಲಿ ಜರ್ನಲ್ ಸ್ಲೀಪ್ ಮೆಡಿಸಿನ್‌ನಲ್ಲಿ ಪ್ರಕಟಗೊಂಡ ಅಧ್ಯಯನವೊಂದು ಒತ್ತಡದಾಯಕ ಜೀವನಶೈಲಿ ಹಾಗೂ ನಿದ್ರಾಹೀನತೆ ಸಮಸ್ಯೆಯು ಹಗಲುಹೊತ್ತು ಕಾಡುವ ತೂಕಡಿಕೆಯೊಂದಿಗೆ ನೇರ ಸಂಬಂಧ ಹೊಂದಿದೆ ಎಂದು ಹೇಳಿದೆ.
ಕಬ್ಬಿಣಾಂಶದ ಕೊರತೆಯಿಂದ ಆಯಾಸ
ನಿಮ್ಮ ಸಂಪೂರ್ಣ ದೇಹಕ್ಕೆ ಆಮ್ಲಜನಕ ಸರಬರಾಜು ಮಾಡುವಲ್ಲಿ ಕಬ್ಬಿಣಾಂಶವು ಪ್ರಮುಖ ಪಾತ್ರ ವಹಿಸುತ್ತದೆ. ಆದರೆ ನಾವು ಕಬ್ಬಿಣಾಂಶದ ಕೊರತೆಯಿಂದ ಬಳಲುತ್ತಿದ್ದರೆ ನಮ್ಮ ದೇಹವು ಅಗತ್ಯ ಪ್ರಮಾಣದ ಹಿಮೋಗ್ಲೋಬಿನ್ ಉತ್ಪಾದಿಸಲು ಸಾಧ್ಯವಾಗುವುದಿಲ್ಲ. ಇದರಿಂದ ಆಯಾಸ ಉಂಟಾಗುತ್ತದೆ. ಮಹಿಳೆಯಲ್ಲಿ ಕಬ್ಬಿಣಾಂಶದ ಕೊರತೆಯು ರಕ್ತಹೀನತೆಯ ಸಮಸ್ಯೆಗೆ ಕಾರಣವಾಗುತ್ತದೆ. ಅಮೆರಿಕನ್ ಜರ್ನಲ್ ಆಫ್ ಕ್ಲಿನಕಲ್ ನ್ಯೂಟ್ರಿಷನ್‌ನಲ್ಲಿ ಪ್ರಕಟವಾದ ಅಧ್ಯಯನದಲ್ಲಿ ರಕ್ತಹೀನತೆಯ ಸಮಸ್ಯೆಯಿಂದ ಬಳಲುತ್ತಿರುವ ಮಹಿಳೆಯರಲ್ಲಿ ಕಬ್ಬಿಣಾಂಶವನ್ನು ಹೆಚ್ಚಿಸದರೆ ರಕ್ತಹೀನತೆಯ ಸಮಸ್ಯೆ ಕೂಡ ವಾಸಿಯಾಗುತ್ತದೆ ಎಂದು ಹೇಳಿದೆ. ಇದರಿಂದ ಆಯಾಸದ ಸಮಸ್ಯೆ ಕೂಡ ದೂರವಾಗಿ ಉತ್ತಮ ನಿದ್ರೆಯನ್ನು ಪಡೆಯಬಹುದಾಗಿದೆ.
ಬ್ಯಾಕ್ಟೀರಿಯಾ ಹಾಗೂ ವೈರಸ್ ಸಂಬಂಧಿ ಸೋಂಕುಗಳು
ನಮ್ಮ ದೇಹವು ಯಾವುದಾದರೂ ಸೋಂಕಿನ ವಿರುದ್ಧ ಹೋರಾಡುತ್ತಿರುವ ಸಂದರ್ಭದಲ್ಲಿಯೂ ನಿದ್ರಾಹೀನತೆ ಸಮಸ್ಯೆ ಕಾಡಬಹುದು. ಬ್ಯಾಕ್ಟೀರಿಯಾ ಸೋಂಕಿನಿಂದ ದೇಹ ಗುಣಮುಖವಾದ ಬಳಿಕವೂ ದೇಹವು ಕೆಲ ಕಾಲ ಆಯಾಸದ ಸಮಸ್ಯೆಯನ್ನು ಹೊಂದಿರುತ್ತದೆ. ಈ ಸಂದರ್ಭದಲ್ಲಿಯೂ ಅನೇಕರು ನಿದ್ರಾಹೀನತೆ ಸಮಸ್ಯೆಯಿಂದ ಬಳಲುತ್ತಾರೆ.
ಹೈಪೋಥೈರಾಯಿಡಿಸಂ
ನಮ್ಮ ದೇಹದ ಚಯಾಪಚಯ ಕ್ರಿಯೆಯನ್ನು ನಿಯಂತ್ರಿಸುವ ಕಾರ್ಯದಲ್ಲಿ ಥೈರಾಯ್ಡ್ ಗ್ರಂಥಿಗಳು ಪ್ರಮುಖ ಪಾತ್ರ ವಹಿಸುತ್ತವೆ. ಆದರೆ ಥೈರಾಯ್ಡ್ ಗ್ರಂಥಿಯು ತನ್ನ ಕಾರ್ಯವನ್ನು ಸರಿಯಾಗಿ ನಿರ್ವಹಿಸದ ಸಂದರ್ಭದಲ್ಲಿ ಹೈಪೋಥೈರಾಯಿಡಿಸಂ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಇವುಗಳು ನಿಮ್ಮ ಸುಖಕರವಾದ ನಿದ್ರೆಗೆ ಭಂಗ ತರುತ್ತದೆ. ಚಯಾಚಪಯ ಕ್ರಿಯೆಯಲ್ಲಿ ಉಂಟಾಗುವ ಸಮಸ್ಯೆಯು ಆಯಾಸ, ತೂಕ ಏರಿಕೆ ಹಾಗೂ ಆಲಸ್ಯಕ್ಕೆ ದಾರಿ ಮಾಡುತ್ತದೆ. ಇದರಿಂದ ಕೂಡ ಮನುಷ್ಯ ತೂಕಡಿಕೆಯ ಅನುಭವ ಹೊಂದುತ್ತಾನೆ. ಪೋಥೈರಾಯಿಡಿಸಂಗೆ ಸೂಕ್ತ ಚಿಕಿತ್ಸೆ ಪಡೆಯುವ ಮೂಲಕ ಖಂಡಿತ ಈ ಸಮಸ್ಯೆಗಳಿಂದ ಪಾರಾಗಲು ಸಾಧ್ಯವಿದೆ.
ವಿಭಾಗ