ನೀರು ಕಡಿಮೆ ಕುಡಿಯೋದು ಮಾತ್ರವಲ್ಲ, ಹೆಚ್ಚು ಕುಡಿಯೋದು ಅಪಾಯ; ಓವರ್ ಹೈಡ್ರೇಷನ್‌ನಿಂದಾಗಿ ಪ್ರಾಣಾಪಾಯದಲ್ಲಿ ಹೈದ್ರಾಬಾದ್ ಮಹಿಳೆ
Overhydration: ನೀರು ಕಡಿಮೆ ಕುಡಿದರೆ ಡೀಹೈಡ್ರೇಷನ್ ಆಗಿ ಸಾಕಷ್ಟು ಸಮಸ್ಯೆಗಳಾಗುತ್ತವೆ ಎಂಬುದನ್ನು ಕೇಳಿರುತ್ತೀರಿ. ಹಾಗಾಗಿ ವೈದ್ಯರು ಕೂಡ ಎಲ್ಲಾ ಸೀಸನ್‌ನಲ್ಲೂ ಹೆಚ್ಚು ನೀರು ಕುಡಿಯಲು ಸಲಹೆ ನೀಡುತ್ತಾರೆ. ಆದರೆ ಅತಿಯಾಗಿ ನೀರು ಕುಡಿಯೋದು ಅಪಾಯ, ಇದು ಪ್ರಾಣಕ್ಕೂ ಕಂಟಕವಾಗಬಹುದು. ಹೆಚ್ಚು ನೀರು ಕುಡಿದ ಹೈದರಾಬಾದ್ ಮಹಿಳೆಯ ಸ್ಥಿತಿ ಈಗ ಚಿಂತಾಜನಕವಾಗಿದೆ.
Overhydration: ನೀರು ನಮ್ಮ ದೇಹಕ್ಕೆ ಅತ್ಯವಶ್ಯ, ದಿನಕ್ಕೆ ಕನಿಷ್ಠ 3 ಲೀಟರ್ ನೀರು ಕುಡಿಯಬೇಕು ಎಂದು ಸಲಹೆ ನೀಡಲಾಗುತ್ತದೆ. ಚಳಿಗಾಲ, ಮಳೆಗಾಲದಲ್ಲೂ ದೇಹದಲ್ಲಿ ನೀರಿನ ಕೊರತೆ ಕಾಡಬಾರದು. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ಡೀಹೈಡ್ರೇಷನ್ ಸಮಸ್ಯೆ ಆಗುತ್ತೆ. ಇದರಿಂದ ಸಾಕಷ್ಟು ತೊಂದರೆಗಳು ಎದುರಾಗುತ್ತೆ. ಇದನ್ನೆಲ್ಲಾ ನಾವು ಮೊದಲಿನಿಂದಲೂ ಕೇಳಿಕೊಂಡು ಬಂದಿದ್ದೇವೆ. ಆದರೆ, ಇಲ್ಲೊಂದು ಕಳವಳಕಾರಿ ಸುದ್ದಿ ಇದೆ. ಅದೇನೆಂದರೆ ಅತಿಯಾಗಿ ನೀರು ಕುಡಿಯೋದು ಕೂಡ ಅಪಾಯಕಾರಿ. ಹೈದರಾಬಾದ್‌ನ ಮಹಿಳೆಯೊಬ್ಬರು ಹೆಚ್ಚು ನೀರು ಕುಡಿದ ಕಾರಣದಿಂದ ಪ್ರಾಣಾಪಾಯದಲ್ಲಿದ್ದಾರೆ. ಹಾಗಾದರೆ ನೀರು ಕುಡಿಯೋದು ಅಪಾಯವೇ, ವಾಟರ್ ಇನ್‌ಟಾಕ್ಸಿಕೇಷನ್ ಎಂದರೇನು, ಇದರ ಪರಿಣಾಮಗಳೇನು ಎಂಬ ವಿವರ ಇಲ್ಲಿದೆ.
ಏನಿದು ಘಟನೆ?
ಹೈದರಾಬಾದ್‌ನ ಮಹಿಳೆಯೊಬ್ಬರು ಬೆಳಿಗ್ಗೆ ಎದ್ದ ತತ್‌ಕ್ಷಣ 4 ಲೀಟರ್ ನೀರು ಕುಡಿದಿದ್ದಾರೆ. ಇದರಿಂದ ಅವರಿಗೆ ವಾಟರ್ ಇನ್‌ಟಾಕ್ಸಿಕೇಷನ್ ಸಮಸ್ಯೆ ಎದುರಾಗಿದೆ. ಆ ಮಹಿಳೆ ಈಗ ಸಾವು ಬದುಕಿನ ನಡುವೆ ಹೋರಾಡುತ್ತಿದ್ದಾರೆ. ಆಕೆಗೆ ನೀವು ಕುಡಿದ ನಂತರ ತೀವ್ರ ತಲೆನೋವು ಶುರುವಾಗಿದೆ. ನಂತರ ವಾಕರಿಕೆ, ವಾಂತಿ ಶುರುವಾಗಿದ್ದು ಆಕೆ ಮೂರ್ಛೆ ತಪ್ಪಿದ್ದರು.
ಏನಿದು ವಾಟರ್ ಇನ್‌ಟಾಕ್ಸಿಕೇಷನ್?
ವಾಟರ್ ಇನ್‌ಟಾಕ್ಸಿಕೇಷನ್ ಅನ್ನು ನೀರಿನ ವಿಷ ಅಥವಾ ಹೈಪರ್ ಹೈಡ್ರೇಷನ್ ಎಂದು ಕೂಡ ಕರೆಯಲಾಗುತ್ತದೆ. ಇದನ್ನು ಕನ್ನಡದಲ್ಲಿ ನೀರಿನ ಅಮಲು ಎಂದೂ ಕರೆಯಬಹುದು. ಒಬ್ಬ ವ್ಯಕ್ತಿಯು ಕಡಿಮೆ ಅವಧಿಯಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸೇವಿಸಿದಾಗ, ಶರೀರದಲ್ಲಿ ಎಲೆಕ್ಟ್ರೋಲೈಟ್ ಅಸಮತೋಲನಕ್ಕೆ ಕಾರಣವಾಗುತ್ತದೆ. ಈ ಸ್ಥಿತಿಯು ಸಾಮಾನ್ಯ ಶಾರೀರಿಕ ಕ್ರಿಯೆಗಳಿಗೆ ಅಡ್ಡಿಯಾಗಬಹುದು. ಇದರಿಂದಾಗಿ ಜೀವಕ್ಕೆ ಅಪಾಯವಾಗಬಹುದು. ದೇಹಕ್ಕೆ ನೀರು ಅಗತ್ಯವಾದರೂ ಅಗತ್ಯಕ್ಕಿಂತ ಹೆಚ್ಚು ನೀರು ಕುಡಿಯುವುದು ಕೂಡ ಅಪಾಯ ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು.
ವಾಟರ್ ಇನ್‌ಟಾಕ್ಸಿಕೇಷನ್ ಲಕ್ಷಣಗಳು
ಹೈಪರ್‌ಹೈಡ್ರೇಷನ್ ಅಥವಾ ಓವರ್ ಹೈಡ್ರೇಷನ್ ಆದಾಗ ಈ ಕೆಲವು ಲಕ್ಷಣಗಳು ಗೋಚರಿಸುತ್ತವೆ. ಈ ರೀತಿ ಆದರೆ ಕೂಡಲೇ ವೈದ್ಯರಲ್ಲಿ ತೋರಿಸಬೇಕು. ವಾಟರ್ ಇನ್‌ಟಾಕ್ಸಿಕೇಷನ್ ಲಕ್ಷಣಗಳನ್ನು ನಿರ್ಲಕ್ಷ್ಯ ಮಾಡುವುದರಿಂದ ಪ್ರಾಣವೇ ಹೋಗಬಹುದು.
- ವಾಕರಿಕೆ ಮತ್ತು ವಾಂತಿ
- ಹೊಟ್ಟೆಯುಬ್ಬರ
- ತಲೆನೋವು
- ತೂಕಡಿಕೆ
- ಸ್ನಾಯು ದೌರ್ಬಲ್ಯ, ನೋವು ಮತ್ತು ಸೆಳೆತ
- ಗೊಂದಲ, ಕಿರಿಕಿರಿ ಮತ್ತು ತಲೆತಿರುಗುವಿಕೆ ಸೇರಿದಂತೆ ಮಾನಸಿಕ ಸ್ಥಿತಿಯಲ್ಲಿ ಬದಲಾವಣೆ
- ಕೈಗಳು, ಪಾದಗಳು ಮತ್ತು ಹೊಟ್ಟೆಯಲ್ಲಿ ತೀವ್ರವಾದ ಊತ
ಇದನ್ನೂ ಓದಿ: ಆಯುರ್ವೇದದ ಪ್ರಕಾರ ಈ ಆಹಾರಗಳನ್ನು ತಿಂದ ನಂತರ ತಪ್ಪಿಯೂ ನೀರು ಕುಡಿಯಬಾರದು, ಕರುಳಿನ ಸಮಸ್ಯೆಗಳು ಕಾಡಬಹುದು
ಎಷ್ಟು ನೀರು ವಾಟರ್ ಇನ್‌ಟಾಕ್ಸಿಕೇಷನ್‌ಗೆ ಕಾರಣವಾಗಬಹುದು?
ವಾಟರ್ ಇನ್‌ಟಾಕ್ಸಿಕೇಷನ್ ಅಥವಾ ಓವರ್‌ಹೈಡ್ರೇಷನ್‌ಗೆ ನಾವು ಎಷ್ಟು ನೀರು ಕುಡಿದಿದ್ದೇವೆ ಎಂಬ ನೀರಿನ ಪ್ರಮಾಣವೂ ಕಾರಣವಾಗುತ್ತದೆ. ವೈದ್ಯರ ಪ್ರಕಾರ ನಮ್ಮ ದೇಹವು ಎಷ್ಟು ನೀರನ್ನು ಬಳಸುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳುವ ಮೂಲಕ, ಎಷ್ಟು ನೀರು ಹೆಚ್ಚಾಗುತ್ತದೆ ಎಂಬುದನ್ನು ತಿಳಿದುಕೊಳ್ಳಬಹುದು. ಮೂತ್ರ ಹಾಗೂ ಬೆವರಿನ ಮೂಲಕ ದೇಹದಿಂದ ಹೆಚ್ಚುವರಿ ನೀರನ್ನು ಹೊರಹಾಕಲು ಸಾಧ್ಯವಿದೆ. ಒಂದು ದಿನದಲ್ಲಿ, ಇದು ಸುಮಾರು 1-2 ಲೀಟರ್‌ಗಳಿಗೆ ಸಮನಾಗಿರುತ್ತದೆ. ಆದರೆ, ಕೆಲವರು ಒಂದು ಅಥವಾ ಎರಡು ಗಂಟೆಗೆ 3 ರಿಂದ 4 ಲೀಟರ್ ಕುಡಿಯುತ್ತಾರೆ. ಅಂತಹ ಸಂದರ್ಭಗಳಲ್ಲಿ ವಾಟರ್ ಇನ್‌ಟಾಕ್ಸಿಕೇಷನ್ ಸಮಸ್ಯೆ ಎದುರಾಗಬಹುದು.
ಓವರ್ ಹೈಡ್ರೇಷನ್ ತಡೆಯುವ ಮಾರ್ಗಗಳು
- ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುವುದು
- ದೇಹದ ಮಾತುಗಳನ್ನು ಆಲಿಸುವುದು
- ಬಾಯಾರಿಕೆ ನೀಗಿದ ನಂತರ ನೀರು ಕುಡಿಯುವುದನ್ನು ನಿಲ್ಲಿಸುವುದು
- ನೀರು ಕುಡಿಯುವಂತೆ ನಿಮ್ಮನ್ನು ನೀವು ಒತ್ತಾಯಿಸುವುದನ್ನು ತಡೆಯುವುದು
- ವಾಕರಿಕೆ, ವಾಂತಿ, ಹೊಟ್ಟೆಯುಬ್ಬರವಿದ್ದರೆ ನೀರು ಕುಡಿಯುವುದನ್ನು ನಿಲ್ಲಿಸುವುದು.
(ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ)
ವಿಭಾಗ