ಜವಾಬ್ದಾರಿಗಿಲ್ಲ ಹಿರಿಯ–ಕಿರಿಯ ಎಂಬ ಭೇದ; ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದು ಅವಶ್ಯ, ಅಗತ್ಯವೂ ಹೌದು– ಮನದ ಮಾತು
ಕನ್ನಡ ಸುದ್ದಿ  /  ಜೀವನಶೈಲಿ  /  ಜವಾಬ್ದಾರಿಗಿಲ್ಲ ಹಿರಿಯ–ಕಿರಿಯ ಎಂಬ ಭೇದ; ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದು ಅವಶ್ಯ, ಅಗತ್ಯವೂ ಹೌದು– ಮನದ ಮಾತು

ಜವಾಬ್ದಾರಿಗಿಲ್ಲ ಹಿರಿಯ–ಕಿರಿಯ ಎಂಬ ಭೇದ; ಬಾಲ್ಯದಿಂದಲೇ ಮಕ್ಕಳಿಗೆ ಮೌಲ್ಯಗಳನ್ನು ಕಲಿಸುವುದು ಅವಶ್ಯ, ಅಗತ್ಯವೂ ಹೌದು– ಮನದ ಮಾತು

ಭವ್ಯಾ ವಿಶ್ವನಾಥ್ ಬರಹ: ಮಗು ಹಿರಿಯ, ಮಧ್ಯಮ ಅಥವಾ ಕಿರಿಯ ಮಗುವೇ ಆಗಿದ್ದರೂ ಅವರಿಗೆ ಎಲ್ಲ ಜವಾಬ್ದಾರಿಗಳು ಸ್ವಾಭಾವಿಕ ಮತ್ತು ಅಗತ್ಯವೂ ಹೌದು. ಮಕ್ಕಳಿಗೆ ಜವಾಬ್ದಾರಿ ನೀಡುವುದು ಅವರ ಭವಿಷ್ಯದಲ್ಲಿ ಹೆಚ್ಚು ನೆರವಿಗೆ ಬರುತ್ತದೆ. ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಒತ್ತಡವೆನ್ನಿಸಿದರೂ, ಭವಿಷ್ಯದಲ್ಲಿ ಅವರಿಗೆ ಅದರ ಫಲ ಏನು ಎಂಬುದು ತಿಳಿಯುತ್ತದೆ.

ಹಿರಿಯ ಮಕ್ಕಳಿಗೇಕೆ ಹೆಚ್ಚು ಜವಾಬ್ದಾರಿ
ಹಿರಿಯ ಮಕ್ಕಳಿಗೇಕೆ ಹೆಚ್ಚು ಜವಾಬ್ದಾರಿ (PC: Canva)

ಕುಟುಂಬದ ಮೊದಲನೆಯ ಮಗು ಪೋಷಕರ ವಿಶೇಷ ಪ್ರೀತಿ, ಮೆಚ್ಚುಗೆಗೆ ಪಾತ್ರವಾಗಿರುತ್ತದೆ. ತಂದೆತನ ಮತ್ತು ತಾಯ್ತನದ ಸುಖವನ್ನು ಮೊದಲು ಪೋಷಕರಿಗೆ ಅನುಭವ ಮಾಡಿಸುವುದು ಹಿರಿಯ ಮಗುವಾದ್ದರಿಂದ ಒಂದು ರೀತಿಯ ವಿಶೇಷ ಪ್ರೀತಿ, ವಾತ್ಸಲ್ಯ ಹಾಗೂ ಆತ್ಮೀಯ ಭಾವ ಆ ಮಗುವಿನ ಮೇಲಿರುತ್ತದೆ. ಅದು ಗಂಡು ಮಗು ಆದರೂ ಸರಿ, ಹೆಣ್ಣಾದರೂ ಸರಿ ಮೊದಲ ಮಗುವಿಗೆ ವಿಶೇಷ ಪ್ರಾಧಾನ್ಯ ಇದ್ದೇ ಇರುತ್ತದೆ. ಹಾಗಾದರೆ ನಂತರದ ಮಕ್ಕಳ ಮೇಲೆ ವಾತ್ಸಲ್ಯ, ಪ್ರೀತಿಯಿಲ್ಲದಿರುವುದಿಲ್ಲವೇ? -ಖಂಡಿತವಾಗಿಯೂ ಇರುತ್ತದೆ. ಮೊದಲನೆಯ ಮಗುವಿನಷ್ಟೇ ಎರಡನೇ ಮಗು ಅಥವಾ ಮಕ್ಕಳ ಮೇಲೆ ಪ್ರೀತಿಯೇನೋ ಇರುತ್ತದೆ. ಪ್ರೀತಿಯಲ್ಲಿ ಯಾವುದೇ ಭೇಧ–ಭಾವ ಇರುವುದಿಲ್ಲ. ಆದರೆ ಮೊದಲನೆಯ ಮಗುವಿನ ಮೊದಲ ಅನುಭವದ ಸೆಂಟಿಮೆಂಟ್ ಹಿರಿಯ ಮಗುವಿಗೆ ಇರುತ್ತದೆ ಅಷ್ಟೇ. ಇದರ ಕಾರಣ ಜವಾಬ್ದಾರಿಗಳೂ ಕೂಡ ಹಿರಿಯ ಮಗುವಿಗೆ ಹೆಚ್ಚು ಅನ್ವಯಿಸುತ್ತದೆ.

ಜವಾಬ್ದಾರಿಯ ಅಗತ್ಯಗಳು

ಪ್ರತಿಯೊಂದು ಮಗುವಿಗೂ ಪೋಷಕರಿಂದ ಪ್ರೀತಿ, ಮುದ್ದು, ಆತ್ಮೀಯತೆ, ಆರೈಕೆ, ಸ್ವಾತಂತ್ರ್ಯ ಸಿಗಲೇಬೇಕು. ಇವುಗಳಷ್ಟೇ ಜವಾಬ್ದಾರಿಯೂ ಮುಖ್ಯವಾಗುತ್ತದೆ. ಅದು ಹಿರಿಯ ಮಗುವೇ ಇರಬಹುದು, ಮಧ್ಯಮ ಅಥವಾ ಕಿರಿಯ ಮಗುವೇ ಇರಬಹುದು, ಪ್ರತಿಯೊಂದು ಮಕ್ಕಳಿಗೂ ಸಹ ಜವಾಬ್ದಾರಿ ಅಗತ್ಯವೂ ಹೌದು, ಅನಿವಾರ್ಯವೂ ಹೌದು.

ಹಿರಿಯ ಮಗುವಿನ ಜವಾಬ್ದಾರಿ, ವಿಶೇಷ ಸ್ಥಾನಮಾನ

ಹಿರಿಯ ಮಗು ವಯಸ್ಸಿನಲ್ಲಿ ದೊಡ್ಡದಾಗಿರುವ ಕಾರಣ ಜವಾಬ್ದಾರಿಗಳನ್ನು ನಿಭಾಯಿಸುವ ಬುದ್ಧಿ ಮತ್ತು ಪ್ರಬುದ್ಧತೆ ಬಂದಿರುತ್ತದೆ. ಹಿರಿಯ ಮಗುವಿನಿಂದ ಹೆಚ್ಚಿನ ಜವಾಬ್ದಾರಿಯನ್ನು ನಿರೀಕ್ಷಿಸಲಾಗುತ್ತದೆ. ತಂದೆ ತಾಯಿಯ ನಂತರ ಮಕ್ಕಳಲ್ಲಿ ಮೊದಲನೆಯ ಮಗುವೇ ಹಿರಿಯನಾದ್ದರಿಂದ ಜವಾಬ್ದಾರಿಯನ್ನು ತೆಗೆದುಕೊಳ್ಳಲಿ ಎಂಬ ಅಪೇಕ್ಷೆಯಿರುತ್ತದೆ.

ಇನ್ನು ಹಿರಿಯ ಮಗುವಿನ ಜವಾಬ್ದಾರಿಯ ಕುರಿತು ಮಾತನಾಡುವುದಾದರೆ, ಕುಟುಂಬದ ಯೋಗಕ್ಷೇಮ ಮತ್ತು ಬೆಳವಣಿಗೆ, ತಮ್ಮ–ತಂಗಿಯರ ಜವಾಬ್ದಾರಿಯನ್ನು ಹಿರಿಯ ಮಗು ಸ್ವಲ್ಪ ಹೆಚ್ಚೇ ಹೊರಬಹುದು. ಆದರೆ, ಇದರ ಜೊತೆಗೆ ಬರುವ ವಿಶೇಷ ಸ್ಥಾನಮಾನ, ಗೌರವ, ಸತ್ಕಾರವೂ ಕೂಡ ಕುಟುಂಬದವರಿಂದ ಲಭ್ಯವಾಗುತ್ತದೆ. ಇವುಗಳನ್ನು ಅನುಭವಿಸುವ ಅವಕಾಶವೂ ಕೂಡ ಮಾತ್ರ ಹಿರಿಯ ಮಗುವಿಗೆ ಮಾತ್ರ ಸಿಗುತ್ತದೆ.

ಹಿರಿಯ ಮಗು ತನ್ನ ಪೋಷಕರಿಗೆ ನೆರವಾಗಲಿ, ಅವರ ಸ್ಥಾನವನ್ನು ತುಂಬಲಿ, ತಮ್ಮ ತಂಗಿಯರಿಗೆ ಮಾದರಿಯಾಗಲಿ, ಮಾರ್ಗದರ್ಶನವಾಗಲಿ, ಬೆಂಬಲ, ಭರವಸೆ, ರಕ್ಷಣೆ ನೀಡಲೆಂದು ಪೋಷಕರು ಅಪೇಕ್ಷಿಸುವುದು ಸರ್ವೇಸಾಮಾನ್ಯ. ಇಂತಹ ಅಪೇಕ್ಷೆಗಳನ್ನು ಪೂರೈಸುವುದಕ್ಕೆ ಕೆಲ ಹಿರಿಯ ಮಕ್ಕಳಿಗೆ ಒತ್ತಡವೆನ್ನಿಸಬಹುದು. ಆದರೆ ‘ಹಿರಿಯ ಮಗು' ಎನ್ನುವ ಸ್ಥಾನವನ್ನು ಪಕ್ಕಕ್ಕೆ ಇಟ್ಟು ನೋಡುವುದಾದರೆ, ಈ ಅಪೇಕ್ಷೆಗಳು ಪ್ರತಿಯೊಂದು ಬೆಳೆದ ಮಕ್ಕಳ ಮೇಲೆಯೂ ಇರುತ್ತದೆ. ಇದು ಮಕ್ಕಳ ಜವಾಬ್ದಾರಿ ಹಾಗೂ ಕರ್ತವ್ಯವಾಗಿರುತ್ತದೆ. ಕಿರಿಯ ಮಗುವೇ ಆದರೂ ಸರಿ, ಹಿರಿಯ ಮಗುವೇ ಆದರೂ ಸರಿ, ಇದು ಎಲ್ಲಾ ಮಕ್ಕಳಿಗೂ ಸಹ ಅನ್ವಯವಾಗುತ್ತದೆ.

ಎಷ್ಟೋ ಮಕ್ಕಳು ತಮ್ಮ ಸ್ವಂತ ಇಚ್ಛೆಯಿಂದ ಇವುಗಳನ್ನು ಮಾಡಲು ಪ್ರಯತ್ನಿಸುತ್ತಾರೆ. ಪೋಷಕರು ಅಪೇಕ್ಷಿಸಿದಂತಹ ಈ ಜವಾಬ್ದಾರಿಗಳು ಭವಿಷ್ಯದಲ್ಲಿ ಮಕ್ಕಳಿಗೆ ತಮ್ಮ ಕುಟುಂಬವನ್ನು ನಿಭಾಯಿಸುವಲ್ಲಿ ಬಹಳ ಮಟ್ಟಿಗೆ ನೆರವಾಗುತ್ತದೆ.

ಒಂದೇ ಮಗುವಿನ ಕುಟುಂಬದಲ್ಲಿ ಜವಾಬ್ದಾರಿ

ಇನ್ನು ಒಂದೇ ಮಗುವಿರುವ ಕುಟುಂಬದಲ್ಲಿ ಹಿರಿಯ, ಕಿರಿಯ ಮಗುವು ಎಲ್ಲದರ ಸ್ಥಾನವನ್ನೂ ಅದೊಂದೇ ತೆಗೆದುಕೊಳ್ಳಬೇಕಾಗುತ್ತದೆ. ಇಲ್ಲಿ ಪ್ರೀತಿ, ಆತ್ಮೀಯತೆ, ಮುದ್ದು, ಆರೈಕೆ, ವಿಶೇಷ ಸ್ಥಾನಮಾನ, ಸತ್ಕಾರ ಎಷ್ಟು ಹೇರಳವಾಗಿರುತ್ತದೆಯೋ ಅಷ್ಟೇ ಜವಾಬ್ದಾರಿಗಳೂ ಇರುತ್ತವೆ. ಪೋಷಕರನ್ನು ಭವಿಷ್ಯದಲ್ಲಿ ನೋಡಿಕೊಳ್ಳುವ, ಅವರಿಗೆ ನೆರವು ನೀಡುವ ಕರ್ತವ್ಯ ಒಂದೇ ಮಗುವಿನದ್ದಾಗಿರುತ್ತದೆ.

ಈ ಪರಿಸ್ಥಿತಿಯಲ್ಲಿ ಪೋಷಕರೇ ಜವಾಬ್ದಾರಿ ಹಾಕಬೇಕೆಂದಿಲ್ಲ, ಹೆಣ್ಣಾಗಲಿ ಗಂಡಾಗಲಿ ಮಗುವಿಗೆ ತನ್ನದೇ ಆದ ಈ ಅಪೇಕ್ಷೆಗಳು ಉದ್ಭವವಾಗುತ್ತವೆ. ಭವಿಷ್ಯದಲ್ಲಿ ತನ್ನ ಸಂಸಾರವನ್ನು ನಿಭಾಯಿಸುವಲ್ಲಿ ಇವು ನೆರವಾಗುತ್ತದೆ.

ಹಾಗಾಗಿ ಮಗು ಹಿರಿಯ, ಮಧ್ಯಮ ಅಥವಾ ಕಿರಿಯದೇ ಆದರೂ ಜವಾಬ್ದಾರಿಗಳು ಸ್ವಾಭಾವಿಕ ಮತ್ತು ಅಗತ್ಯವೂ ಹೌದು. ಅನುಕೂಲ, ಅನಾನುಕೂಲಗಳು ಎರಡೂ ಇವೆ. ಭವಿಷ್ಯದಲ್ಲಿ ಹೆಚ್ಚಿನ ನೆರವಾಗುತ್ತದೆ. ಸದ್ಯಕ್ಕೆ ಸ್ವಲ್ಪ ಮಟ್ಟಿಗೆ ಒತ್ತಡವೆನ್ನಿಸಿದರೂ ಕೂಡ ಭವಿಷ್ಯದಲ್ಲಿ ಹೆಚ್ಚಿನ ನೆರವಾಗುತ್ತದೆ.

ಭವ್ಯಾ ವಿಶ್ವನಾಥ್
ಭವ್ಯಾ ವಿಶ್ವನಾಥ್

ಭವ್ಯಾ ವಿಶ್ವನಾಥ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತಸಮಾಲೋಚಕಿಯಾಗಿ ಬೆಂಗಳೂರಿನಲ್ಲಿ ಹಲವು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಭವ್ಯಾ ವಿಶ್ವನಾಥ್ ಜೀವನಕೌಶಲಗಳ ಮಾರ್ಗದರ್ಶಕಿಯಾಗಿ ಹಲವರಿಗೆ ನೆರವಾದವರು. ಕಾಲೇಜು ವಿದ್ಯಾರ್ಥಿಗಳು ಮತ್ತು ಕಾರ್ಪೊರೇಟ್ ಉದ್ಯೋಗಿಗಳಿಗೆ ಹಲವು ಹಂತಗಳಲ್ಲಿ ಮಾರ್ಗದರ್ಶನ ಮಾಡುತ್ತಿದ್ದಾರೆ. ಕೋವಿಡ್ ಪಿಡುಗು ವ್ಯಾಪಿಸಿದ್ದ ಸಮಯದಲ್ಲಿ ಹಲವು ರೋಗಿಗಳಿಗೆ, ಅವರ ಬಂಧುಗಳಿಗೆ ಆಪ್ತಸಮಾಲೋಚನೆಯ ಸೇವೆ ಒದಗಿಸಿದ್ದರು. 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ನಿಯತವಾಗಿ ಓದುಗರ ಪ್ರಶ್ನೆಗಳಿಗೆ ಉತ್ತರಿಸುತ್ತಿದ್ದಾರೆ.

ನಿಮ್ಮ ಮನಸ್ಸನ್ನು ಕಾಡುವ, ಯಾರೊಂದಿಗಾದರೂ ಹೇಳಿಕೊಳ್ಳಬೇಕು ಎನಿಸುವ ಪ್ರಶ್ನೆಗಳನ್ನು bhavya.dear@gmail.com ವಿಳಾಸಕ್ಕೆ ಇಮೇಲ್ ಮಾಡಿ ಉತ್ತರ ಪಡೆಯಬಹುದು. ಸಂಪರ್ಕ ಸಂಖ್ಯೆ: 99457 43542. ಬೆಳಿಗ್ಗೆ 10 ರಿಂದ ಸಂಜೆ 6 ರ ಒಳಗೆ ಮಾತ್ರ ಕರೆ, ಮೆಸೇಜ್ ಮಾಡಿ.

Whats_app_banner