National Voters Day: ವೋಟ್ ಮಾಡುವ ಮುನ್ನ ರಾಷ್ಟ್ರೀಯ ಮತದಾರರ ದಿನದ ಇತಿಹಾಸ ಮಹತ್ವ ತಿಳಿಯಿರಿ
18 ವರ್ಷ ತುಂಬಿದವರು ಮತದಾನ ಹಕ್ಕು ಪಡೆಯುತ್ತಾರೆ. ವೋಟ್ ಮಾಡುವ ಮೂಲಕ ನಮ್ಮ ಪ್ರತಿನಿಧಿಯನ್ನು ಆರಿಸುವುದು ನಮ್ಮೆಲ್ಲರ ಕರ್ತವ್ಯವೂ ಹೌದು. ಮತದಾನನ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ಜನವರಿ 25 ರಂದು ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಮಹತ್ವ ಹಾಗೂ ಈ ವರ್ಷದ ಥೀಮ್ ಇಲ್ಲಿದೆ.
ಮತವು ಬುಲೆಟ್‌ಗಿಂತ ಬಲವಾದದ್ದೂ ಎಂಬ ಮಾತಿದೆ. ಮತದಾನವು ಪ್ರತಿಯೊಬ್ಬರ ಹಕ್ಕು, 18 ವರ್ಷ ತುಂಬಿದ ಪ್ರತಿಯೊಬ್ಬರೂ ವೋಟ್ ಮಾಡುವುದು ತಮ್ಮ ಕರ್ತವ್ಯ ಎಂದು ತಿಳಿಯಬೇಕು. ಏಕೆಂದರೆ ಗಣರಾಜ್ಯದ ಭವಿಷ್ಯವು ಮತದಾರರ ಕೈಯಲ್ಲಿದೆ. ಭಾರತೀಯ ಮತದಾರರ ಮೂಲಭೂತ ಹಕ್ಕುಗಳನ್ನು ಸಂವಿಧಾನದಲ್ಲಿ ಪ್ರತಿಪಾದಿಸಲಾಗಿದೆ. ಅದು ಮತದಾರರು ಮತದಾನಕ್ಕೂ ಮೊದಲು ಪರಿಗಣಿಸಬಹುದಾದ ಹಾಗೂ ಮತದಾನದ ನಂತರ ಪರಿಗಣಿಸಬೇಕಾದ ಜವಾಬ್ದಾರಿಗಳನ್ನು ಸಹ ಪಟ್ಟಿ ಮಾಡುತ್ತದೆ.
ಮತದಾನವು ನಮ್ಮ ನಾಗರಿಕ ಜವಾಬ್ದಾರಿಯಾಗಿದೆ ಮತ್ತು ನಮ್ಮ ರಾಷ್ಟ್ರವು ನಮ್ಮ ಇತಿಹಾಸದುದ್ದಕ್ಕೂ ನಮ್ಮ ಅಳಿಸಲಾಗದ ಹಕ್ಕುಗಳನ್ನು ಖಾತರಿಪಡಿಸುವ ಮೂಲಭೂತ ಸಾಧನಗಳಲ್ಲಿ ಒಂದಾಗಿದೆ. ಅಂದ ಹಾಗೆ ಇಷ್ಟೆಲ್ಲಾ ಇವತ್ತು ಯಾಕೆ ಹೇಳ್ತಾ ಇದಾರೆ ಅಂದ್ಕೋಬೇಡಿ, ಇಂದು (ಜ.25) ರಾಷ್ಟ್ರೀಯ ಮತದಾರರ ದಿನ. ಈ ದಿನ ಇತಿಹಾಸ, ಮಹತ್ವ ತಿಳಿಯಿರಿ.
ದಿನಾಂಕ
ಪ್ರತಿವರ್ಷ ಜನವರಿ 25 ರಂದು ಭಾರತದಲ್ಲಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಗುತ್ತದೆ. ಆ ಮೂಲಕ ಚುನಾವಣಾ ಪ್ರಕ್ರಿಯೆಯಲ್ಲಿ ಭಾಗವಹಿಸಲು ದೇಶದ ಜನರನ್ನು (ಮತದಾರರನ್ನು) ಉತ್ತೇಜಿಸುವ ಕೆಲಸ ಮಾಡಲಾಗುತ್ತದೆ. ಈ ವರ್ಷ ಮತದಾರರ ದಿನ 14ನೇ ಆವೃತ್ತಿಯನ್ನು ಆಚರಿಸಲಾಗುತ್ತಿದೆ.
ಇತಿಹಾಸ, ಮಹತ್ವ
2011ರ ಜನವರಿ 25 ರಂದು ಮೊದಲ ಬಾರಿ ರಾಷ್ಟ್ರೀಯ ಮತದಾರರ ದಿನವನ್ನು ಆಚರಿಸಲಾಯಿತು. ಹೆಚ್ಚು ಹೆಚ್ಚು ಯುವ ಮತದಾರರನ್ನು ಚುನಾವಣಾ ಪ್ರಕ್ರಿಯೆಯನ್ನು ಭಾಗವಹಿಸುವಂತೆ ಉತ್ತೇಜಿಸಲು ಆಗ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರವು ಕಾನೂನು ಸಚಿವಾಲಯದ ಪ್ರಸ್ತಾವನೆಯನ್ನು ಅನುಮೋದಿಸಿತು. ಅಂದಿನಿಂದ ಈ ದಿನದ ಆಚರಣೆ ಜಾರಿಗೆ ಬಂದಿತು.
18 ವರ್ಷ ತುಂಬಿದ ಹೊಸ ಮತದಾರರು ಮತದಾರರ ಪಟ್ಟಿ ತಮ್ಮ ಹೆಸರು ನೋಂದಾಯಿಸಲು ನಿರಾಸಕ್ತಿ ತೋರುತ್ತಿದ್ದಾರೆ ಎಂಬ ಅಂಶವನ್ನಯ ತಿಳಿಸುವ ಮೂಲಕ ಮಾಹಿತಿ ಮತ್ತು ಪ್ರಸಾರ ಖಾತೆಯ ಮಾಜಿ ಸಚಿವೆ ಅಂಬಿಕಾ ಸೋನಿ ಆ ಸಮಯದಲ್ಲಿ ಎಲ್ಲ ಗಮನ ಸೆಳೆದಿದ್ದರು.
ಈ ಸಮಸ್ಯೆಯನ್ನು ಬಗೆಹರಿಸಲು ಚುನವಣಾ ಆಯೋಗವು ಭಾರತದಾದ್ಯಂತ ಎಲ್ಲಾ ಮತಗಟ್ಟೆಗಳಲ್ಲಿ ಪ್ರತಿವರ್ಷ ಜನವರಿ 1 ರಂದು 18 ವರ್ಷ ತುಂಬಿದ ಅರ್ಹ ಮತದಾರರನ್ನು ಗುರುತಿಸಲು ರಾಷ್ಟ್ರವ್ಯಾಪಿ ಪ್ರಯತ್ನ ಮಾಡಲು ಪ್ರಾರಂಭಿಸಲು ನಿರ್ಧರಿಸಲಾಯಿತು. ಹೀಗೆ ಯುವ ಮತದಾರರನ್ನು ನೋಂದಾಯಿಸಿ ಜನವರಿ 25 ರಂದು ಅವರಿಗೆ ಚುನಾವಣಾ ಗುರುತಿನ ಚೀಟಿ (EPIC) ನೀಡಲಾಗುವುದು.
ಈ ವರ್ಷದ ಥೀಮ್
ಪ್ರತಿವರ್ಷದ ಥೀಮ್ ಅನ್ನು ಮತದಾರಿಗೆ ಅರ್ಪಿಸಲಾಗುತ್ತದೆ. ಎನ್‌ವಿಡಿ 2024ರ ಥೀಮ್ ʼಮತದಾನದಂತೆ ಯಾವುದೂ ಇಲ್ಲ, ನಾನು ಖಚಿತವಾಗಿ ಮತ ಚಲಾಯಿಸುತ್ತೇನೆʼ ಎಂಬುದಾಗಿದೆ. ಇದು ಕಳೆದ ವರ್ಷದ ಥೀಮ್‌ನ ಮುಂದುವರಿಕೆಯಾಗಿದೆ. ಈ ವರ್ಷ ನವದೆಹಲಿಯಲ್ಲಿ ಭಾರತದ ಚುನಾವಣಾ ಆಯೋಗ ಆಯೋಜಿಸಿರುವ ರಾಷ್ಟ್ರೀಯ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾರತದ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾಗವಹಿಸಲಿದ್ದಾರೆ. ಕೇಂದ್ರ ಕಾನೂನು ಸಚಿವ ಅರ್ಜುನ್ ರಾಮ್ ಮೇಘವಾಲ್ ಈ ಸಮಾರಂಭದಲ್ಲಿ ಗೌರವ ಅತಿಥಿಯಾಗಿ ಭಾಗವಹಿಸಲಿದ್ದಾರೆ.
ಈ ಕಾರ್ಯಕ್ರಮದಲ್ಲಿ ಮಾಲ್ಡೀವ್ಸ್, ಫಿಲಿಪ್ಪೈನ್ಸ್, ರಷ್ಯಾ, ಶ್ರೀಲಂಕಾ ಹಾಗೂ ಉಜ್ಬೇಕಿಸ್ತಾನದ ಚುನವಣಾ ನಿರ್ವಹಣಾ ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ.
ಈ ರಾಷ್ಟ್ರೀಯ ಮತದಾರರ ದಿನದ ಇತಿಹಾಸ, ಮಹತ್ವ ತಿಳ್ಕೊಂಡ್ರಿ ಅಲ್ವಾ... 18 ವರ್ಷ ತುಂಬಿದ್ರೆ ಮತದಾನದ ಪಟ್ಟಿಯಲ್ಲಿ ಹೆಸರು ನೋಂದಾಯಿಸೋಕೆ ಹಿಂಜರಿಬೇಡಿ, ವೋಟ್ ಮಾಡೋದು ಮರೀಬೇಡಿ.
(This copy first appeared in Hindustan Times Kannada website. To read more like this please logon to kannada.hindustantimes.com )