ಸಮೀಪಿಸುತ್ತಿದೆ ಲೋಕಸಭಾ ಚುನಾವಣೆ; ರಾಜ್ಯದಲ್ಲಿ ಬಿಜೆಪಿಯ ಈ ಸದಸ್ಯರಿಗೆ ಕೊಕ್, ಕುಮಾರಸ್ವಾಮಿ ಕಣಕ್ಕೆ ಖಚಿತ, ಹೀಗಿದೆ ಕಾಂಗ್ರೆಸ್ ಸ್ಥಿತಿ
ಲೋಕಸಭಾ ಚುನಾವಣೆ ಸಮೀಪಿಸುತ್ತಿದೆ. ಈ ನಡುವೆ ಕರ್ನಾಟಕದಲ್ಲಿನ ರಾಷ್ಟ್ರೀಯ ಪಕ್ಷಗಳಲ್ಲಿ ಅಭ್ಯರ್ಥಿಗಳ ಆಯ್ಕೆ ತಲೆನೋವಾಗಿದೆ. ಹಲವು ಟಿಕೆಟ್ ಆಕಾಂಕ್ಷಿಗಳು ಈಗಾಗಲೇ ಪಕ್ಷಕ್ಕೆ ಬೇಡಿಕೆ ಇರಿಸಿದ್ದಾರೆ. ಬಿಜೆಪಿ, ಕಾಂಗ್ರೆಸ್ ಹಾಗೂ ಜೆಡಿಎಸ್ ಈ ಮೂರೂ ಪಕ್ಷದಲ್ಲಿ ಯಾರನ್ನು ಕಣಕ್ಕಿಳಿಸಬೇಕು ಎಂಬುದೇ ಸಮಸ್ಯೆಯಾಗಿ ಹೊರಹೊಮ್ಮಿದೆ. (ವರದಿ: ಮಾರುತಿ)
ಬೆಂಗಳೂರು: ಲೋಕಸಭಾ ಚುನಾವಣೆ ಹತ್ತಿರವಾಗುತ್ತಿದ್ದು ರಾಷ್ಟ್ರೀಯ ಪಕ್ಷಗಳಿಗೆ ಅಭ್ಯರ್ಥಿಗಳ ಆಯ್ಕೆಯೇ ಸಮಸ್ಯೆಯಾಗಿ ಹೊರಹೊಮ್ಮಿದೆ. ಎರಡೂ ಪಕ್ಷಗಳಲ್ಲಿ ವಿಶ್ವಾಸದ ಕೊರತೆ ಎದುರಾಗಿದ್ದು, ಬಿಜೆಪಿಯ ಹಲವು ಹಾಲಿ ಸದಸ್ಯರು ಮತೊಮ್ಮೆ ಕಣಕ್ಕಿಳಿಯಲು ಹಿಂದೇಟು ಹಾಕುತ್ತಿದ್ದರೆ ಕಾಂಗ್ರೆಸ್‌ನಲ್ಲಿ ಸಚಿವರು ಹಿಂದೆ ಸರಿಯುತ್ತಿದ್ದಾರೆ. ಉಭಯ ಪಕ್ಷಗಳಲ್ಲಿ ಆತ್ಮವಿಶ್ವಾಸದ ಕೊರತೆ ಎದುರಾಗಿದ್ದು ಆಡಳಿತ ವಿರೋಧಿ ಅಲೆ ಕಾಣಿಸುತ್ತಿದೆ.
14 ಹಾಲಿ ಸಂಸದರಿಗೆ ಬಿಜೆಪಿ ಕೊಕ್
ಹೊಸ ಸಮೀಕರಣದ ಪ್ರಯೋಗದಲ್ಲಿ ಯಶಸ್ವಿಯಾಗಿರುವ ಬಿಜೆಪಿ ಕರ್ನಾಟಕದಲ್ಲಿ ಅರ್ಧದಷ್ಟು ಹಾಲಿ ಸಂಸದರಿಗೆ ಬದಲಾಗಿ ಹೊಸಬರಿಗೆ ಆದ್ಯತೆ ನೀಡಲು ನಿರ್ಧಾರ ಮಾಡಿದೆ. ವಯಸ್ಸು ಮತ್ತು ಆಡಳಿತ ವಿರೋಧಿ ಅಲೆ ಟಿಕೆಟ್ ನಿರಾಕರಣೆಗೆ ಪ್ರಮುಖ ಕಾರಣವಾಗಿದೆ. ಈಗಾಗಲೇ ಆಂತರಿಕ ಸಮೀಕ್ಷೆ ನಡೆಸಿರುವ ಬಿಜೆಪಿ 14 ಸಂಸದರ ಕಾರ್ಯವೈಖರಿ ಕುರಿತು ಸಾರ್ವಜನಿಕರಲ್ಲಿ ಅಸಮಾಧಾನ ಮೂಡಿರುವುದು ಮತ್ತು ಜನಪ್ರಿಯತೆ ಕಡಿಮೆಯಾಗಿರುವುದನ್ನು ಗುರುತಿಸಿದೆ.
ಇತ್ತೀಚೆಗೆ ನಡೆದ ಮೂರು ರಾಜ್ಯಗಳ ವಿಧಾನಸಭಾ ಚುನಾವಣೆಯಲ್ಲಿ ಆಡಳಿತ ವಿರೋಧಿ ಅಲೆಯನ್ನು ಎದುರಿಸಲು ಅಷ್ಟೇನೂ ಜನಪ್ರಿಯತೆ ಹೊಂದಿಲ್ಲದ ಮುಖಗಳನ್ನು ಬಿಜೆಪಿ ಕಣಕ್ಕಿಳಿಸಿತ್ತು ಮತ್ತು ಯಶಸ್ವಿಯಾಗಿತ್ತು. ಆದರೆ ಕರ್ನಾಟಕದಲ್ಲಿ ಇಂತಹುದೇ ಪ್ರಯೋಗ ಮಾಡಲು ಹೊಗಿ ಎಡವಟ್ಟು ಮಾಡಿಕೊಂಡಿತ್ತು. ಬಹುಮತದ ಸರ್ಕಾರದಿಂದ ಕೇವಲ 65 ಸ್ಥಾನಗಳಿಗೆ ಕುಸಿದಿತ್ತು. ಬಿಜೆಪಿಯ ಉನ್ನತ ಮೂಲಗಳ ಪ್ರಕಾರ ಬೆಂಗಳೂರು ಉತ್ತರ, ವಿಜಯಪುರ, ಹಾವೇರಿ, ಉತ್ತರ ಕನ್ನಡ, ಚಿಕ್ಕಬಳ್ಳಾಪುರ, ಕೋಲಾರ, ಬಳ್ಳಾರಿ ಚಿಕ್ಕೋಡಿ, ಚಾಮರಾಜನಗರ ಮತ್ತು ಬೆಳಗಾವಿ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳನ್ನು ಬದಲಾಯಿಸಲು ತೀರ್ಮಾನಿಸಿದೆ.
ಇದನ್ನೂ ಓದಿ: Lok Sabha Elections : ಲೋಕಸಭಾ ಚುನಾವಣೆಗೆ ಕಮಲ ಸಖಿಯರು, ಕಮಲ ಶಕ್ತಿ ಯೋಧರಿಂದ ಬಿಜೆಪಿ ಪರ ಕೆಲಸ
ಚಾಮರಾಜನಗರ ಕ್ಷೇತ್ರದ ಸದಸ್ಯ ವಿ. ಶ್ರೀನಿವಾಸ ಪ್ರಸಾದ್ ಈಗಾಗಲೇ ನಿವೃತ್ತಿ ಘೋಷಿಸಿದ್ದಾರೆ. ಬೆಂಗಳೂರು ಉತ್ತರ ಕ್ಷೇತ್ರದ ಡಿ.ವಿ. ಸದಾನಂದಗೌಡ ಅವರೂ ನಿವೃತ್ತಿ ಘೋಷಿಸಿದ್ದರು. ಆದರೆ ಮತ್ತೆ ಸ್ಪರ್ಧೆ ಮಾಡುವ ಇಂಗಿತ ವ್ಯಕ್ತಪಡಿಸಿದ್ದಾರೆ. ಉತ್ತರಕನ್ನಡ ಕ್ಷೇತ್ರದ ಸಂಸದ ಅನಂತಕುಮಾರ್ ಹೆಗಡೆ ಮತ್ತೊಮ್ಮೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದು ಅಷ್ಟೊಂದು ಸುಲಭ ಅಲ್ಲ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ವಿಧಾನಭಾ ಚುನಾವಣೆಯಲ್ಲಿ ಸೋತ ಡಜನ್‌ಗೂ ಹೆಚ್ಚು ಅಭ್ಯರ್ಥಿಗಳು ಲೋಕಸಭಾ ಚುನಾವಣೆ ಟಿಕೆಟ್ ಪಡೆಯುವ ಪ್ರಯತ್ನ ನಡೆಸಿದ್ದಾರೆ. ವಿ.ಸೋಮಣ್ಣ, ಡಾ. ವಿ. ಸುಧಾಕರ್, ಸಿ.ಟಿ. ರವಿ, ಗೋವಿಂದ ಕಾರಜೋಳ, ಜೆ.ಸಿ.ಮಾಧುಸ್ವಾಮಿ ಪ್ರಯತ್ನ ನಡೆಸಿದ್ದಾರೆ. ಸಂಸತ್ ಭವನದ ಮೇಲೆ ದಾಳಿ ನಡೆದ ಹಿನ್ನೆಲೆಯಲ್ಲಿ ಮೈಸೂರು ಸಂಸದ ಪ್ರತಾಪ್ ಸಿಂಹ ಅವರಿಗೆ ಟಿಕೆಟ್ ನಿರಾಕರಿಸಲಾಗುತ್ತಿದೆ ಎಂದು ತಿಳಿದು ಬಂದಿದೆ. ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಕ್ಷೇತ್ರ ಬದಲಾವಣೆ ಬಯಸಿದ್ದು, ಚಿಕ್ಕಮಗಳೂರಿಗೆ ಬದಲಾಗಿ ಬೆಂಗಳೂರು ಉತ್ತರ ಕ್ಷೇತ್ರದಲ್ಲಿ ಕಣಕಿಳಿಯುವ ಬಯಕೆ ವ್ಯಕ್ತಪಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಎಸ್. ಎಂ. ಕೃಷ್ಣ ಅವರ ಮೊಮ್ಮಗಳು ಡಾ.ನಿರಂತರ ಗಣೇಶ್ ಅವರೂ ಟಿಕೆಟ್ ಇದೇ ಕ್ಷೇತ್ರದ ಆಕಾಂಕ್ಷಿಯಾಗಿದ್ದರೆ ಸಿಟಿ ರವಿ ಅವರೂ ಇಲ್ಲಿಂದಲೇ ಟಿಕೆಟ್ ಬಯಸಿದ್ದಾರೆ. ವಕೀಲರ ಸಂಘದ ಅಧ್ಯಕ್ಷ ಬಿಜೆಪಿ ಯುವ ಮುಖಂಡ ವಿವೇಕ್ ಸುಬ್ಬಾರೆಡ್ಡಿ ಅವರೂ ಟಿಕೆಟ್ ಬಯಸಿದ್ದು ಪ್ರಯತ್ನ ನಡೆಸಿದ್ದಾರೆ.
ಕಾಂಗ್ರೆಸ್‌ನಲ್ಲೂ ಸಮರ್ಥರಿಗಾಗಿ ಹುಡುಕಾಟ
ಕಾಂಗ್ರೆಸ್‌ನಲ್ಲೂ ಪರಿಸ್ಥಿತಿ ಭಿನ್ನವಾಗಿಲ್ಲ. ಇಲ್ಲಿ ಹೊಸಬರಿಗಿಂತ ಸಚಿವರು ಮತ್ತು ಶಾಸಕರು ತಮ್ಮ ರಕ್ತಸಂಬಂಧಿಗಳಿಗೆ ಟಿಕೆಟ್ ಕೊಡಿಸಲು ಆಸಕ್ತಿ ತೋರಿದ್ದಾರೆ. ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ತಮ್ಮ ಪುತ್ರಿ ಮೃಣಾಲ್ ಹೆಬ್ಬಾಳ್ಕರ್ ಅವರಿಗೆ ಟಿಕೆಟ್ ಕೇಳಿದ್ದಾರೆ. ಸತೀಶ್ ಜಾರಕಿಹೊಳಿ ತಮ್ಮ ಪುತ್ರಿಗೆ ಟಿಕೆಟ್ ನೀಡುವಂತೆ ಒತ್ತಡ ಹೇರುತ್ತಿದ್ದಾರೆ. ಹುಬ್ಬಳ್ಳಿ ಧಾರವಾಡ ಕ್ಷೇತ್ರದಲ್ಲಿ ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಅವರನ್ನು ಎದುರಿಸಲು ಸಮರ್ಥ ಅಭ್ಯರ್ಥಿಗಾಗಿ ಹುಡುಕಾಟ ನಡೆದಿದೆ. ಡಜನ್‌ಗೂ ಹೆಚ್ಚು ಆಕಾಂಕ್ಷಿಗಳು ಪ್ರಯತ್ನ ನಡೆಸಿದ್ದಾರೆ. ಬೆಂಗಳೂರು ಸೆಂಟ್ರಲ್ ಮತ್ತು ಹಾವೇರಿ ಕ್ಷೇತ್ರಗಳಿಂದ ಮುಸ್ಲಿಂ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವುದು ಸಂಪ್ರದಾಯವಾಗಿದೆ. ಬೆಂಗಳೂರು ಸೆಂಟ್ರಲ್‌ನಿಂದ ಎಐಸಿಸಿ ಪದಾಧಿಕಾರಿಗಳಾದ ಮನ್ಸೂರ್ ಆಲಿ ಖಾನ್ ಮತ್ತು ಸಯ್ಯದ್ ಅಹ್ಮದ್ ಖಾನ್ ಇಂಗಿತ ವ್ಯಕ್ತಪಡಿಸಿದ್ದಾರೆ.
ಬಿಜೆಪಿ ಶಾಸಕ ಎಸ್‌ಟಿ ಸೋಮಶೇಖರ್ (ಯಶವಂತಪುರ) ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಕಾಂಗ್ರೆಸ್‌ನಿಂದ ಬೆಂಗಳೂರು ಉತ್ತರ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಆಸಕ್ತಿ ತೋರಿಸಿದ್ದಾರೆ. ಇದೇ ರೀತಿ ಯಲ್ಲಾಪುರ ಶಾಸಕ ಶಿವರಾಂ ಹೆಬ್ಬಾರ್ ಕಾಂಗ್ರೆಸ್ ಸೇರಲು ನಿರ್ಧರಿಸಿದ್ದಾರೆ. ಒಂದು ವೇಳೆ ಅವರು ಸೇರ್ಪಡೆಯಾದರೆ ಕಾಂಗ್ರೆಸ್ ಅವರನ್ನು ಉತ್ತರಕನ್ನಡ ಕ್ಷೇತ್ರದಿಂದ ಕಣಕ್ಕಿಳಿಸಲಿದೆ. ಆರ್. ವಿ. ದೇಶಪಾಂಡೆ ತಮ್ಮ ಪುತ್ರನಿಗೆ ಟಿಕೆಟ್ ಕೊಡಿಸಲು ಪ್ರಯತ್ನ ಮಾಡುತ್ತಿದ್ದಾರೆ. ಮಾಜಿ ಶಾಸಕಿ ಅಂಜಲಿ ನಿಂಬಾಳ್ಕರ್ ಅವರೂ ಒಲವು ತೋರಿದ್ದಾರೆ.
ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿರುವ ಜೆಡಿಎಸ್ ಮಂಡ್ಯ, ಮೈಸೂರು, ಚಿಕ್ಕಬಳ್ಳಾಪುರ ಮತ್ತು ತುಮಕೂರು ಕ್ಷೇತ್ರಗಳನ್ನು ಕೇಳುತ್ತಿದೆ. ಕುಮಾರಸ್ವಾಮಿ ಸ್ಪರ್ಧಿಸುವುದು ಖಚಿತವಾಗಿದ್ದು, ಕ್ಷೇತ್ರ ನಿರ್ಧಾರವಾಗಿಲ್ಲ. ಒಂದು ವೇಳೆ ಮತ್ತೊಮ್ಮೆ ಎನ್‌ಡಿಎ ಸರ್ಕಾರ ರಚನೆಯಾದರೆ ಸಚಿವರಾಗುವ ಗುರಿ ಅವರದ್ದು. ಆ ಮೂಲಕ ಪಕ್ಷ ಸಂಘಟಿಸಬಹುದು ಎನ್ನುವುದು ಅವರ ಹೆಬ್ಬಯಕೆಯಾಗಿದೆ.
ವಿಭಾಗ