ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ: ಚುನಾವಣೆ ಮೇಲೆ ಮೋದಿ ಕಣ್ಣು, ಆತಂಕದಲ್ಲಿ ಮುಸ್ಲಿಮರು
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ: ಚುನಾವಣೆ ಮೇಲೆ ಮೋದಿ ಕಣ್ಣು, ಆತಂಕದಲ್ಲಿ ಮುಸ್ಲಿಮರು

ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ: ಚುನಾವಣೆ ಮೇಲೆ ಮೋದಿ ಕಣ್ಣು, ಆತಂಕದಲ್ಲಿ ಮುಸ್ಲಿಮರು

ಅಯೋಧ್ಯೆ ರಾಮ ಮಂದಿರ ಉದ್ಘಾಟನೆಯನ್ನು ಜಗತ್ತೇ ಕಾತರದಿಂದ ನೋಡುತ್ತಿದೆ. ವಿದೇಶಗಳಲ್ಲಿರುವ ಭಾರತೀಯರು ಸಂಭ್ರಮದಲ್ಲಿದ್ದಾರೆ. ಇದೇ ಸಂದರ್ಭದಲ್ಲಿ ಪಾಕಿಸ್ತಾನದ ಡಾನ್‌, ಅಮೆರಿಕದ ಎನ್‌ಬಿಸಿ, ಜಾಗತಿಕ ಮಾಧ್ಯಮ ಸಂಸ್ಥೆಯಾದ ಬಿಬಿಸಿ ಮುಂತಾದ ಮಾಧ್ಯಮಗಳು ರಾಮ ಮಂದಿರ ಪ್ರಾಣ ಪ್ರತಿಷ್ಠೆಯನ್ನು ವರದಿ ಮಾಡುತ್ತಿವೆ.

ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ
ವಿದೇಶಿ ಮಾಧ್ಯಮಗಳ ಕಣ್ಣಲ್ಲಿ ಅಯೋಧ್ಯೆ ರಾಮಮಂದಿರ ಉದ್ಘಾಟನೆ

ಅಯೋಧ್ಯೆಯಲ್ಲಿ ಇಂದು ಭವ್ಯ ರಾಮ ಮಂದಿರದಲ್ಲಿ ಬಾಲರಾಮನ ಪ್ರಾಣ ಪ್ರತಿಷ್ಠೆ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ನರೇಂದ್ರ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಈ ಮಹತ್ವದ ಕ್ಷಣಕ್ಕೆ ಸಾಕ್ಷಿಯಾಗಲಿದ್ದಾರೆ. ಅಯೋಧ್ಯೆ ಮಾತ್ರವಲ್ಲದೆ ಭಾರತದ ಎಲ್ಲೆಡೆ ಅಯೋಧ್ಯೆ ರಾಮ ಮಂದಿರ ಉದ್ಗಾಟನೆಯ ಸಂಭ್ರಮ ಕಾಣಿಸುತ್ತಿದೆ. ಕರ್ನಾಟಕದಲ್ಲೂ ಬಾಲರಾಮನ ಪ್ರಾಣ ಪ್ರತಿಷ್ಠೆಯ ಸಂಭ್ರಮ ಮನೆ ಮಾಡಿದೆ. ಜಗತ್ತಿನಾದ್ಯಂತ ಇರುವ ಭಾರತೀಯರೂ ಸಂಭ್ರಮಿಸುತ್ತಿದ್ದಾರೆ. ಅಯೋಧ್ಯೆ ರಾಮ ಮಂದಿರ ಉದ್ಘಾಟನೆ ಕಾರ್ಯಕ್ರಮ ಜಗತ್ತಿನ ಗಮನ ಸೆಳೆದಿದೆ. ಇದೇ ಸಂದರ್ಭದಲ್ಲಿ ಜಗತ್ತಿನ ವಿವಿಧ ಮಾಧ್ಯಮಗಳು ರಾಮ ಮಂದಿರ ಪ್ರಾಣ ಪ್ರತಿಷ್ಠೆಯ ಕಾರ್ಯಕ್ರಮದ ಕುರಿತು ಹೇಗೆ ವರದಿ ಮಾಡುತ್ತಿವೆ ಎಂಬ ಕೆಲವು ಸ್ಯಾಂಪಲ್‌ ಇಲ್ಲಿ ನೀಡಲಾಗಿದೆ.

ಭಯದಿಂದ ನೆರೆ ಪಟ್ಟಣಗಳಿಗೆ ಹೋದ ಮುಸ್ಲಿಂ ಸಮುದಾಯ- ಪಾಕಿಸ್ತಾನದ ಡಾನ್‌ ವರದಿ

ಪಾಕಿಸ್ತಾನ್‌ ಪ್ರಮುಖ ಸುದ್ದಿ ಪತ್ರಿಕೆಯಾದ ಡಾನ್‌.ಕಾಂನಲ್ಲಿ ಅಯೋಧ್ಯೆಯ ರಾಮಮಂದಿರದ ಸುದ್ದಿಯನ್ನು ತನ್ನ ದೇಶದ ದೃಷ್ಟಿಕೋನಕ್ಕೆ ತಕ್ಕಂತೆ ಪ್ರಕಟಿಸಿದೆ. ಇಂದು ಬೆಳಗ್ಗೆ ಡಾನ್‌.ಕಾಂನ ಡಿಜಿಟಲ್‌ ಆವೃತ್ತಿಯಲ್ಲಿ ಪ್ರಕಟವಾದ ಸುದ್ದಿಯೊಂದರಲ್ಲಿ "ಅಯೋಧ್ಯೆಯಲ್ಲಿ ನಿರ್ಮಿಸಲಾದ ಹೊಸ ದೇಗುಲವನ್ನು ಪ್ರಧಾನಿ ನರೇಂದ್ರ ಮೋದಿ ಇಂದು ಉದ್ಘಾಟಿಸಲಿದ್ದಾರೆ. ಅಯೋಧ್ಯೆ ನಗರದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಅಯೋಧ್ಯೆಯಲ್ಲಿರುವ ಮುಸ್ಲಿಮರು ಹಿಂಸಾಚಾರದ ಭಯದಿಂದ ತಮ್ಮ ಮಕ್ಕಳು ಮತ್ತು ಮಹಿಳೆಯರನ್ನು ನೆರೆಯ ನಗರಗಳಿಗೆ ಕಳುಹಿಸಿದ್ದಾರೆ" ಎಂದು ವರದಿ ಮಾಡಿದೆ. ವರದಿಯಲ್ಲಿ ಎಲ್ಲೂ ರಾಮ್‌, ರಾಮ ಇತ್ಯಾದಿ ಪದಗಳನ್ನು ಬಳಸದೆ ಅಯೋಧ್ಯೆ ಹೊಸ ಟೆಂಪಲ್‌ ಎಂದಷ್ಟೇ ಬರೆದಿದೆ. ಇನ್ನುಳಿದಂತೆ ವರದಿಯಲ್ಲಿ "1992ರ ಡಿಸೆಂಬರ್‌ 6ರಂದು ಹಿಂದೂ ಗುಂಪು 16ನೇ ಶತಮಾನದ ಬಾಬ್ರಿ ಮಸೀದಿಯನ್ನು ಕೆಡವಿ.... " ಎಂದೆಲ್ಲ ಬರೆದು "ಮೋದಿ ದೇಗುಲ ಉದ್ಘಾಟಿಸಲಿದ್ದಾರೆ, ಮುಸ್ಲಿಂ ಸಮುದಾಯ ಭದ್ರತೆ ಬಯಸುತ್ತಿದೆ" ಎಂದು ವರದಿ ಮಾಡಿದೆ.

ಭಾರತದ ಪ್ರಧಾನಿ ಮೋದಿಯಿಂದ ಧ್ವಂಸಗೊಂಡ ಬಾಬರಿ ಮಸೀದಿ ಸ್ಥಳದಲ್ಲಿ ಹಿಂದೂ ದೇವಾಲಯ ಉದ್ಗಾಟನೆ

ಬಿಬಿಸಿ ವರದಿಯು ರಾಮಮಂದಿರಕ್ಕೆ ಸಂಬಂಧಪಟ್ಟಂತೆ ಕೆಲವೊಂದು ಸುದ್ದಿಗಳನ್ನು ಪ್ರಕಟಿಸಿದೆ. ಇಂದು ಬೆಳಗ್ಗೆ ಬಿಬಿಸಿ ಈ ರೀತಿ ವರದಿ ಪ್ರಕಟಿಸಿದೆ. "ಭಾರತದ ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆ ನಗರದಲ್ಲಿ ಜನಪ್ರಿಯ ಹಿಂದೂ ದೇವರು ರಾಮನ ಭವ್ಯವಾದ ದೇವಾಲಯವನ್ನು ಉದ್ಘಾಟಿಸಲಿದ್ದಾರೆ. ಇದು 1992 ರಲ್ಲಿ ಹಿಂದೂ ಗುಂಪುಗಳಿಂದ ಧ್ವಂಸಗೊಂಡ 16 ನೇ ಶತಮಾನದ ಮಸೀದಿಯ ಸ್ಥಳದಲ್ಲಿ ನಿರ್ಮಾಣವಾದ ದೇವಾಲಯ. ಈ ಘಟನೆಯು ರಾಷ್ಟ್ರವ್ಯಾಪಿ ಗಲಭೆಗಳನ್ನು ಹುಟ್ಟುಹಾಕಿತು, ಇದರಲ್ಲಿ ಸುಮಾರು 2,000 ಜನರು ಮೃತಪಟ್ಟಿದ್ದಾರೆ. ಈ ನಗರದಲ್ಲಿ ಭಗವಾನ್ ರಾಮನ ದೇವಾಲಯವನ್ನು ನಿರ್ಮಿಸುವ ಹಲವು ದಶಕಗಳ ಹಿಂದೂ ರಾಷ್ಟ್ರೀಯತಾವಾದಿ ಪ್ರತಿಜ್ಞೆಯನ್ನು ಈ ಮೂಲಕ ಪೂರೈಸಲಾಗುತ್ತದೆ. ಕೆಲವು ಹಿಂದೂಗಳು, ಹೆಚ್ಚಿನ ವಿರೋಧ ಪಕ್ಷಗಳು ಈ ಸಮಾರಂಭದಿಂದ ದೂರ ಉಳಿದಿದ್ದಾರೆ. ಶ್ರೀ ಮೋದಿಯವರು ಅಯೋಧ್ಯೆ ರಾಮ ಮಂದಿರವನ್ನು ರಾಜಕೀಯ ಲಾಭಕ್ಕಾಗಿ ಬಳಸುತ್ತಿದ್ದಾರೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. ಅಯೋಧ್ಯೆಯು ರಾಮನ ಜನ್ಮಸ್ಥಳ ಎಂದು ಅನೇಕ ಹಿಂದೂಗಳು ನಂಬುತ್ತಾರೆ. ಹಿಂದೂ ದೇವರು ಹುಟ್ಟಿದ ನಿಖರವಾದ ಸ್ಥಳದಲ್ಲಿ ರಾಮಮಂದಿರದ ಅವಶೇಷಗಳ ಮೇಲೆ ಮುಸ್ಲಿಂ ಆಕ್ರಮಣಕಾರರು ಬಾಬರಿ ಮಸೀದಿಯನ್ನು ನಿರ್ಮಿಸಿದರು. ಬಳಿಕ ಬಿಜೆಪಿ... ಹೀಗೆ ವರದಿ ಮುಂದುವರೆದಿದೆ.

ಮುಂಬರುವ ಚುನಾವಣೆ ಮೇಲೆ ಕಣ್ಣಿಟ್ಟು ಮೋದಿಯಿಂದ ಮಂದಿರ ಉದ್ಘಾಟನೆ- ಎನ್‌ಬಿಸಿ ನ್ಯೂಸ್‌

ಅಮೆರಿಕದ ಪ್ರಮುಖ ಬ್ರಾಡ್‌ಕಾಸ್ಟ್‌ ಮಾಧ್ಯಮ ಎನ್‌ಬಿಸಿ ನ್ಯೂಸ್‌ ಈ ರೀತಿ ವರದಿ ಮಾಡಿದೆ. "ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ದೇಶದಲ್ಲಿ, ಧಾರ್ಮಿಕ ಉದ್ವಿಗ್ನತೆಗಳ ಸಂಕೇತವಾಗಿರುವ ವಿವಾದಿತ ಪವಿತ್ರ ಸ್ಥಳದಲ್ಲಿ, ಭವ್ಯವಾದ ಹಿಂದೂ ದೇವಾಲಯವನ್ನು ಪ್ರಧಾನಿ ನರೇಂದ್ರ ಮೋದಿ ಅವರು ಸೋಮವಾರದಂದು ಉದ್ಘಾಟನೆ ಮಾಡಲಿದ್ದಾರೆ.

217 ದಶಲಕ್ಷದ ರಾಮಮಂದಿರವು ಹಿಂದೂ ಧರ್ಮದ ಅತ್ಯಂತ ಪೂಜ್ಯ ದೇವರಾದ ಭಗವಾನ್‌ ರಾಮನನ್ನು ಆರಾಧಿಸುತ್ತದೆ. ಉತ್ತರ ಪ್ರದೇಶದ ಸುಮಾರು 30 ಲಕ್ಷ ಜನಸಂಖ್ಯೆಯ ನಗರವಾದ ಅಯೋಧ್ಯೆಯನ್ನು ಪ್ರವಾಸಿ ಕೇಂದ್ರವಾಗಿ ಪರಿವರ್ತಿಸುತ್ತದೆ. ಇದು ವ್ಯಾಟಿಕನ್‌ನ ಹಿಂದೂ ಆವೃತ್ತಿಯಾಗಬಹುದು ಎಂದು ಜನರು ಮಾತನಾಡಿಕೊಳ್ಳುತ್ತಿದ್ದಾರೆ. 1992ರಲ್ಲಿ ಹಿಂದೂ ರಾಷ್ಟ್ರೀಯವಾದಿಗಳಿಂದ ಧ್ವಂಸಗೊಂಡ 16 ನೇ ಶತಮಾನದ ಬಾಬರಿ ಮಸೀದಿಯ ಸ್ಥಳದಲ್ಲಿ ಈ ದೇವಾಲಯ ನಿರ್ಮಿಸಲಾಗಿದೆ. ಈ ಸಂದರ್ಭದಲ್ಲಿ ದೇಶಾದ್ಯಂತ 2 ಸಾವಿರ ಜನರು ಮೃತಪಟ್ಟರು. ಇವರಲ್ಲಿ ಹೆಚ್ಚಿನವರು ಮುಸ್ಲಿಮರು. 2019ರಲ್ಲಿ ಸುಪ್ರೀಂ ಕೋರ್ಟ್‌.... " " ಪ್ರಧಾನಿ ನರೇಂದ್ರ ಮೋದಿಯು ಮುಂಬರುವ ಚುನಾವಣೆಯನ್ನು ಗಮನದಲ್ಲಿಟ್ಟುಕೊಂಡು ದೇಗುಲವನ್ನು ಉದ್ಘಾಟನೆ ಮಾಡುತ್ತಿದ್ದಾರೆ" ಎಂದು ವರದಿ ತಿಳಿಸಿದೆ.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.