ಕನ್ನಡ ಸುದ್ದಿ  /  ಜೀವನಶೈಲಿ  /  ಬಣ್ಣ, ವಿನ್ಯಾಸ, ಬಾರ್ಡರ್‌ ಅಷ್ಟೇ ಅಲ್ಲ, ಹೆಣ್ಮಕ್ಕಳ ಸೀರೆಯ ನೆನಪಿನ ಆಪ್ತಕಥೆ ಕೂಡ ಅಷ್ಟೇ ಮಧುರ; ಹೀಗೊಂದು ಸೀರೆ ಕಥೆ

ಬಣ್ಣ, ವಿನ್ಯಾಸ, ಬಾರ್ಡರ್‌ ಅಷ್ಟೇ ಅಲ್ಲ, ಹೆಣ್ಮಕ್ಕಳ ಸೀರೆಯ ನೆನಪಿನ ಆಪ್ತಕಥೆ ಕೂಡ ಅಷ್ಟೇ ಮಧುರ; ಹೀಗೊಂದು ಸೀರೆ ಕಥೆ

ಹೆಣ್ಣುಮಕ್ಕಳ ಕಪಾಟಿನಲ್ಲಿನ ಪ್ರತಿ ಸೀರೆಗೂ ಅದರದ್ದೇ ಆದ ಹೆಸರಿರುತ್ತೆ. ನಾನು ಮೊದಲ ಸಲ ಉಟ್ಟ ಸೀರೆ, ಮದುವೆ ಸೀರೆ, ಮಂಗಳ ಸೀರೆ, ಎಂಗೇಜ್‌ಮೆಂಟ್‌ ಸೀರೆ, ದಾರೆ ಸೀರೆ, ಅಮ್ಮ ದೀಪಾವಳಿಗೆ ಕೊಟ್ಟ ಸೀರೆ ಹೀಗೆ ಸೀರೆಯ ಹೆಸರಿನೊಂದಿಗೆ ಅದರ ನೆನಪೂ ಕೂಡ ಮಧುರ.ಸೀರೆಯ ಆಪ್ತಭಾವದ ಬಗ್ಗೆ ವಾಟ್ಸ್‌ಆಪ್‌ನಲ್ಲಿ ಬಂದ ಬರಹವೊಂದನ್ನು ಹಂಚಿಕೊಂಡಿದ್ದಾರೆ ಗಣಪತಿ ಹೆಗಡೆ

ಬಣ್ಣ, ವಿನ್ಯಾಸ, ಬಾರ್ಡರ್‌ ಅಷ್ಟೇ ಅಲ್ಲ, ಹೆಣ್ಮಕ್ಕಳ ಸೀರೆಯ ನೆನಪಿನ ಆಪ್ತಕಥೆ ಕೂಡ ಅಷ್ಟೇ ಮಧುರ
ಬಣ್ಣ, ವಿನ್ಯಾಸ, ಬಾರ್ಡರ್‌ ಅಷ್ಟೇ ಅಲ್ಲ, ಹೆಣ್ಮಕ್ಕಳ ಸೀರೆಯ ನೆನಪಿನ ಆಪ್ತಕಥೆ ಕೂಡ ಅಷ್ಟೇ ಮಧುರ

ಸೀರೆ ಎಂದಾಕ್ಷಣ ಹೆಣ್ಣುಮಕ್ಕಳ ಒಲವು ಉಕ್ಕಿ ಹರಿಯುತ್ತದೆ. ಸೀರೆಗೂ ಹೆಣ್ಣುಮಕ್ಕಳಿಗೂ ಅವಿನಾಭವ ಸಂಬಂಧ. ಸೀರೆಗೆ ವಿವಿಧ ಹೆಸರುಗಳಿದ್ದರೂ ತಮ್ಮಲ್ಲಿರುವ ಪ್ರತಿ ಸೀರೆಗೂ ಹೆಣ್ಮಕ್ಕಳು ತಮ್ಮದೇ ಆದ ಇನ್ನೊಂದು ಹೆಸರು ಇಡುತ್ತಾರೆ. ಆ ಹೆಸರಿನ ಹಿಂದೆ ಒಂದೊಂದು ಕಥೆ ಇರುವುದು ಸುಳ್ಳಲ್ಲ. ಈ ಕಥೆಗಳನ್ನು ಕೇಳಿದಾಗ ಮನಸ್ಸಿಗೆ ಆಪ್ತಭಾವ ಮೂಡುತ್ತದೆ. ಹೆಣ್ಣುಮಕ್ಕಳ ಸೀರೆ ಕಥೆ, ಸೀರೆ ಒಲವಿನ ಬಗ್ಗೆ ವ್ಯಾಟ್ಸ್‌ಆಪ್‌ನಲ್ಲಿ ಬಂದ ಬರಹವೊಂದನ್ನು ಫೇಸ್‌ಬುಕ್ ಪುಟದಲ್ಲಿ ಹಂಚಿಕೊಂಡಿದ್ದಾರೆ ಗಣಪತಿ ಹೆಗಡೆ, ಆ ಬರಹವನ್ನು ನೀವೂ ಓದಿ

ಟ್ರೆಂಡಿಂಗ್​ ಸುದ್ದಿ

ಗಣಪತಿ ಹೆಗಡೆ ಅವರು ಹಂಚಿಕೊಂಡ ಬರಹ

ಸೀರೆಯಲ್ಲಿ ಎಷ್ಟು ತರದ ಸೀರೆ ಇದೆ ಅಂದ್ರೆ, ಕಾಟನ್, ಶಿಫಾನ್, ಜಾರ್ಜೆಟ್, ಸಿಲ್ಕ್, ಕ್ರೇಪ್, ಲೆನಿಲ್, ಹ್ಯಾಂಡ್‌ಲೂಮ್ ಇತ್ಯಾದಿ ಇತ್ಯಾದಿ... ಅಂತ ನೂರಾರು ಹೆಸರು, ಕಲರು, ಬಾರ್ಡರು ಅಂತ ಪಟ್ಟಂತ ನಿಮ್ಮ ಮನ್ಸಿಗೆ ಬರ್ಬಹುದು.

ಆದ್ರೆ ಹೆಂಗಸರ ಸೀರೆ ಕಪಾಟಿನಲ್ಲಿನ ಎಲ್ಲ ಸೀರೆಗೂ ಅದರದ್ದೇ ಆದ ಹೆಸರು ಇರುತ್ತೆ ಅಲ್ವಾ, ನಾನು ಮೊದಲ ಸಲ ಉಟ್ಟ ಸೀರೆ, ಮದುವೆ ಸೀರೆ, ಮಂಗಳ ಸೀರೆ, ಎಂಗೇಜ್ಮೆಂಟ್ ಸೀರೆ, ದಾರೆ ಸೀರೆ.., ಗಂಡ ಸರ್ಪ್ರೈಸ್ ಆಗಿ ಬರ್ತ್‌ಡೇಗೆ ಗಿಫ್ಟ್ ಕೊಟ್ಟ ಸೀರೆ, ಅಮ್ಮ ದೀಪಾವಳಿಗೆ ಕೊಟ್ಟ ಸೀರೆ, ತಮ್ಮ ಮೊದಲ ಸಂಬಳದಲ್ಲಿ ಕೊಟ್ಟ ಸೀರೆ, ಅಕ್ಕ ತಂಗಿಯರೆಲ್ಲ ಜೊತೆಗೆ ಹೋಗಿ ಚೌಕಾಸಿ ಮಾಡಿ ಒಂದೇ ತರ ತಂದ್ಕೊಂಡ ಸೀರೆ, ಅಜ್ಜಿ ಕೊಟ್ಟ ತಣ್ಣನೆಯ ಬೆಣ್ಣೆ ನುಣಪಿನ ಹಳೇ ರೇಷ್ಮೆ ಸೀರೆ, ಮದುವೆಯ ನಂತರ ಮೊದಲ ಹಬ್ಬಕ್ಕೆ ಹೋದಾಗ ಅಪ್ಪನೇ ಆರಿಸಿ ತಂದಿಟ್ಟಿದ್ದ ಆಪ್ತ ಸೀರೆ, ಹೊಟ್ಟೆಯಲ್ಲಿ ಮಗುವಿನ ಮಿಸುಕಾಟದಲ್ಲಿ ಉಟ್ಟಿದ್ದ ಸೀಮಂತದ ಸೀರೆ, ಹೀಗೆ ಕಾಪಾಟಿನಲ್ಲಿ ಪೇರಿಸಿಟ್ಟ ಪ್ರತೀ ಸೀರೆಗೂ ಅದರದ್ದೇ ಆದ ನೆನಪುಗಳು ಮತ್ತು ಅದಕ್ಕೊಂದು ಆಪ್ತ ಹೆಸರು. ವರ್ಷಕ್ಕೆ ಒಮ್ಮೆ ಕೂಡಾ ಎಲ್ಲ ಸೀರೆನೂ ಉಡೋಕೆ ಆಗದೇ ಇದ್ರೂ ಶತಮಾನಗಳ ಹಿಂದಿನ ಸೀರೆ ಕೂಡಾ ಯಾವಾಗಲೂ ಫುಲ್ ಸೆಕ್ಯೂರಿಟಿಯಲ್ಲಿ ಜೋಪಾನ ಮಾಡ್ತೀವಿ..

ಯಾವುದೇ ಬಟ್ಟೆ ಆಗಿರ್ಲಿ, ಒಂದಿಷ್ಟು ದಿನ ಆದ್ಮೇಲೆ ಹಳತಾಯ್ತು ಅಂತ ಬಿಟ್ಟು ಬಿಡ್ತೀವಿ. ಅಥವಾ ಬೋರ್ ಆಯ್ತು ಅಂತ ಇನ್ಯಾರಿಗೋ ಕೊಡ್ತೀವಿ, ಇಲ್ಲಾಂದ್ರೆ ಒಂದೆರಡು ವರ್ಷಕ್ಕೆ ಸೈಜ್ ಸಣ್ಣ ಆಗಿ ಹಾಕೋಕೆ ಆಗೋಲ್ಲ. ಆದ್ರೆ ಸೀರೆ ಹಾಗಲ್ಲ

ಸೀರೆ ಬಿಟ್ಟು ಇನ್ಯಾವುದೇ ಬಟ್ಟೆ ಇತಿಹಾಸ ಸೃಷ್ಟಿ ಮಾಡಿದ್ದು ಇಲ್ಲ. ನಮ್ಮ ಜೊತೆಗೆ ಬಹಳ ವರ್ಷಗಳವರೆಗೂ ಇದ್ದು ಒಂದು ಅವಿನಾಭಾವ ಸಂಬಂಧ ಹೆಣೆದುಕೊಂಡಿದ್ದು ಇಲ್ಲ. ತಲತಲಾಂತರದಿಂದ ಜೋಪಾನವಾಗಿ ಬಂದಿದ್ದು ಕೂಡ ಇಲ್ಲ.

ನಾವು ಅಜ್ಜಿ ಸೀರೆ ಉಡಬಹುದು, ಅಮ್ಮಂದು ಉಡಬಹುದು, ಅದೇ ಸೀರೆ ನಮ್ಮ ಮಗಳಿಗೂ ಕೊಡಬಹುದು. ಅಕ್ಕ, ತಂಗಿ, ನಾದಿನಿ ವಾರಗಿತ್ತಿಯರ, ಸ್ನೇಹಿತೆಯ ಸೀರೆ ಇಷ್ಟ ಆದ್ರೆ ಒಂದಿನ ಉಟ್ಟು ಕೊಡ್ತೀನಿ ಕೊಡೇ ಅಂತ ಹೇಳ್ಬಹುದು. ಈ ತರದ ಶೇರ್ ಆಪ್ಷನ್‌ನಲ್ಲೂ ಅಗ್ರಸ್ಥಾನ ಇರೋದು ಸೀರೆಗೆ ಮಾತ್ರ.

ಅಳುವಾಗ ಕಣ್ಣೀರು ಒರೆಸೋಕೆ ಖರ್ಚಿಪು ಬೇಕಿಲ್ಲ, ಸೀರೆ ಸೆರಗು ಸಹಾಯಕ್ಕೆ ಬರುತ್ತೆ. ಮಳೆಯಲ್ಲಿ ನೆನೆದು ಬಂದ ಮಗುವಿಗೆ ಅಮ್ಮನ ಸೀರೆ ಸೆರಗೇ ಟವಲ್ಲು.

ಅಮ್ಮನ, ಅಜ್ಜಿಯ, ಹಳೆಯ ಕಾಟನ್ ಸೀರೆ ಹಾಸಿ ಮಲಗಿದ್ರೆ ತಣ್ಣನೆಯ ನಿದ್ರೆ.

ಒಂದನ್ನೊಂದು ಸೇರಿಸಿ ಹೊಲಿದರೆ ಮೆತ್ತನೆಯ ಕೌದಿ. ಅಮ್ಮ ಅನ್ನೋ ಫೀಲ್ ಬರೋದು ಸೀರೆ ಉಟ್ಟಾಗ ಮಾತ್ರ. ಅಮ್ಮ ನೆನಪಾಗೋದೇ ಅವಳು ಉಡುವ ಸೀರೆಯಿಂದ. ನಾವು ನೀವೆಲ್ಲ ಅಮ್ಮನ ಸೆರಗಿನ ಹಿಂದೆ ಅಡಗಿಯೇ ಬೆಳೆದವರು.

ಅಮ್ಮ ಅಜ್ಜಿಯಂದಿರು ದಿನವೂ ಸೀರೆ ಉಡುತ್ತಿದ್ದ ಕಾರಣಕ್ಕೇ ಅವರ ಮಡಿಲಲ್ಲಿ ಒಂದು ರೀತಿಯ ಭದ್ರತೆಯ ಭಾವ ಇರ್ತಿತ್ತೇನೋ ಅನ್ಸುತ್ತೆ.

ಮನೆಯಲ್ಲಿ ಎಷ್ಟೊಂದು ಸೀರೆಗಳು ಇದ್ರೂ ಮದುವೆ ಮುಂಜಿಯಂತ ಮಂಗಳ ಕಾರ್ಯಕ್ಕೆ ಯಾವುದೋ ಉದ್ದ ಗೌನ್‌ನಂತಹ ಡ್ರೆಸ್ ಹಾಕಿ ಬರುವ ಸೊ ಕಾಲ್ಡ್ ಮಾಡ್ರನ್ ಹೆಂಗಸರ ನೋಡಿದಾಗ ಪಿಚ್ಚೆನಿಸುತ್ತೆ.

ಐದೂವರೆ ಅಡಿಯ ನಿಂಗೆ ಡ್ರೆಸ್‌ಗಿಂತ ಸೀರೆ ಉಟ್ಟರೇನೇ ಚೆನ್ನಾಗಿ ಕಾಣ್ತಿಯಾ ಯಾವ ಅಲಂಕಾರನೂ ಬೇಡ ಅಂತ ನನ್ನ ಹೊಗಳಿ ಅಟ್ಟಕ್ಕೆ ಏರಿಸಿದಾಗ ಸೀರೆ ಬಗ್ಗೆ ಮತ್ತಷ್ಟು ಲವ್ವಾಗುತ್ತೆ.

ಅಮ್ಮ ನಿನ್ ಸೀರೆ ಕೊಡು ಒಮ್ಮೆ ಉಟ್ಕೋತೀನಿ ಅಂತ ಮಗಳು ಉಟ್ಟಾಗ ನಮ್ಮದೇ ಪ್ರತಿರೂಪವೊಂದು ಬೆಳೆದಂತೆ. ಹೆಮ್ಮೆಯಾಗುತ್ತೆ, ಎಷ್ಟೊಂದು ಸೀರೆ ಇದೆಯಲ್ಲೇ ಆದ್ರೂ ಮತ್ತೆ ಸೀರೆ ಯಾಕೆ ತಗೋತಿಯ ಅಂತ ಗಂಡ ಅಂದ್ರೆ ನೀವು ಏನು ಬೇಕಾದ್ರೂ ಹೇಳಿ ನನ್ ಸೀರೆ ವಿಷಯಕ್ಕೆ ಮಾತ್ರ ಬರ್ಬೇಡಿ ಅಂತ ಮೂತಿ ಗುರ್ರ್ ಅನ್ನುತ್ತೆ.

ಎಷ್ಟೇ ಸೀರೆ ಇದ್ರೂ ಅತ್ತೆದು ಅಮ್ಮಂದು ತಂಗಿಯರದ್ದು ಸೀರೆ ಒಮ್ಮೆ ಉಟ್ಕೊಳ್ಳೋಣ ಅನ್ಸುತ್ತೆ. ಯಾವಾಗಲೂ ನಮ್ಮತ್ರ ಇರೋದಕ್ಕಿಂತ ಬೇರೆಯವರ ಸೀರೇನೇ ಚೆನ್ನಾಗಿ ಕಾಣುತ್ತೆ. ಅಚ್ಚುಕಟ್ಟಾಗಿ ಉಟ್ಟು ನಿಂತರೆ ಚೆಂದದ ಭಾರತೀಯ ನಾರಿ. ಸೆರಗು ಕಟ್ಟಿ ನೆರಿಗೆ ಎತ್ತಿ ಬಿಗಿದರೆ ಮುನಿದ ಮಾರಿ. ಹೀಗೆಲ್ಲ ಇದೆ ನೋಡಿ ಸೀರೆ ಕಥೆ.

(ವಾರ್ಡರೋಬ್‌ನಲ್ಲಿ ಹಳೆಯ ಸೀರೆಯೆಲ್ಲ ಸೇರಿಸಿ ಒಪ್ಪ ಮಾಡಿ ಮೈದಡವಿ ಇಡುವಾಗ ಸೀರೆಯ ಜೊತೆಗೆ ಅದೆಷ್ಟೋ ನೆನಪುಗಳು ಸಿಕ್ಕ ಫ್ಲೋನಲ್ಲಿ ಸೀರೆ ಬಗ್ಗೆ ಬರಿಬೇಕು ಅನ್ನಿಸ್ತು ಅಷ್ಟೇ)

ವಿಭಾಗ