ಜನರಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? ಮನದೊಳಗಿನ ಕಿಚ್ಚು ನಿಮ್ಮನ್ನೇ ಸುಟ್ಟೀತು ಜೋಕೆ -ಡಾ ರೂಪಾ ರಾವ್ ಬರಹ
ಕನ್ನಡ ಸುದ್ದಿ  /  ಜೀವನಶೈಲಿ  /  ಜನರಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? ಮನದೊಳಗಿನ ಕಿಚ್ಚು ನಿಮ್ಮನ್ನೇ ಸುಟ್ಟೀತು ಜೋಕೆ -ಡಾ ರೂಪಾ ರಾವ್ ಬರಹ

ಜನರಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? ಮನದೊಳಗಿನ ಕಿಚ್ಚು ನಿಮ್ಮನ್ನೇ ಸುಟ್ಟೀತು ಜೋಕೆ -ಡಾ ರೂಪಾ ರಾವ್ ಬರಹ

ಇನ್ನೊಬ್ಬರ ಏಳ್ಗೆ ಕಂಡು ಕರುಬುವ, ಹಳಹಳಿಸಿ ನೋವು ತಿನ್ನುವ, ಅವರನ್ನು ಕೆಳಗೆ ಬೀಳಿಸಿ ನೋವು ಕೊಡಬೇಕು ಎನ್ನಿಸುವ ಹೊಟ್ಟೆಕಿಚ್ಚಿನ ಬಗ್ಗೆ ವೈಜ್ಞಾನಿಕವಾಗಿ ತಿಳಿದುಕೊಳ್ಳಬೇಕಾದ ವಿಚಾರ ಸಾಕಷ್ಟು ಇದೆ. ನೆಮ್ಮದಿ ಕಂಡುಕೊಳ್ಳಲು ಆಸೆಪಡುವವರು ತಿಳಿಯಲೇಬೇಕಾದ ಮಾಹಿತಿ ಇದು. ಅಸಲಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? - ವಿವರಿಸಿದ್ದಾರೆ ಡಾ ರೂಪಾ ರಾವ್

ಜನರಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? ಡಾ ರೂಪಾ ರಾವ್ ಬರಹ
ಜನರಿಗೆ ಹೊಟ್ಟೆಕಿಚ್ಚು ಹೇಗೆ ಮತ್ತು ಏಕೆ ಉಂಟಾಗುತ್ತದೆ? ಡಾ ರೂಪಾ ರಾವ್ ಬರಹ

ನೆಮ್ಮದಿ ಹುಡುಕುವವರಿಗೆ ತಿಳಿದಿರಬೇಕಾದ ಮಾಹಿತಿ ಇದು. ಹೊಟ್ಟೆಕಿಚ್ಚು, ಅಸೂಯೆ, ಮತ್ಸರ ಇವೆಲ್ಲವೂ ಒಂದಕ್ಕೊಂದು ಹತ್ತಿರ. ಮತ್ಸರ ಯಾರಿಗಿಲ್ಲ ಹೇಳಿ? ಎಲ್ಲರಿಗೂ ಇದ್ದೇ ಇರುತ್ತದೆ. ಅದು ಮಾನವನ ಸಹಜ ಗುಣ. 'ಮತ್ಸರ ಅಥವಾ ಅಸೂಯೆ'ಯೇ ಮಾನವನ ಬೆಳವಣಿಗೆಗೆ ಮೂಲ ಎಂದು ಒಂದು ಕಡೆ ಹೇಳಲಾಗಿದೆ. ಹೌದು, ಬೆಳೆಯುತ್ತಿರುವ ವ್ಯಕ್ತಿಯನ್ನು ನೋಡಿ ತಾನೂ ಆ ಹಂತಕ್ಕೆ ಬೆಳೆಯಬೇಕೆನ್ನುವವರೆಗೆ ಮತ್ಸರ ಒಳ್ಳೆಯದೇ. ಅದು ರಜೋ ಗುಣ. ಆದರೆ ಬೆಳೆದ ವ್ಯಕ್ತಿಯ ಕಾಲನ್ನಾದರೂ ಕತ್ತರಿಸಿ ಅವರನ್ನು ಕೆಳಗೆ ತರಬೇಕೆಂಬ ಭಾವನೆ ತಮೋಗುಣದ್ದು. ಅದು ಒಳ್ಳೆಯದಲ್ಲ.

ಇದೀಗ ಅಸೂಯೆಯ ತಮೋಗುಣದ ಬಗ್ಗೆ ನೋಡೋಣ. ಯಾರೋ ಒಬ್ಬರು ತಮ್ಮವರೇ ಅಥವಾ ತಮ್ಮ ನೆಲೆಯವರೇ ಬೆಳೆದು ನಿಂತರು ಎಂದುಕೊಳ್ಳಿ. ಸೌಂದರ್ಯದಲ್ಲೋ ಅಥವಾ ಕೀರ್ತಿಯಲ್ಲೋ ಅಥವಾ ಬುದ್ದಿವಂತಿಕೆಯಲ್ಲೋ ಅದನ್ನು ನೋಡಿದ ಮತ್ಸರ ಗುಣದ ವ್ಯಕ್ತಿಯಲ್ಲಿ ಮೂರು ಹಂತದಲ್ಲಿ ಮತ್ಸರ ಬೆಳೆಯುತ್ತದೆ.

1. ಆ ವ್ಯಕ್ತಿ ಒಳ್ಳೆಯ ಪ್ರಸಿದ್ಧಿ / ಹಣ /ಸೌಂದರ್ಯ ಹೊಂದಿದ್ದಾರೆ ಅಥವಾ ಹೊಂದುತ್ತಿದ್ದಾರೆ.

2. ಆ ಪ್ರಸಿದ್ದಿ / ಸೌಂದರ್ಯ / ಹಣ ನನಗೆ ಈಗ ಇಲ್ಲ. ಮುಂದೆ ನನಗೆ ಸಿಗದಿರಬಹುದು.

3. (ಇದು ತಪ್ಪು) ಹೇಗಾದರೂ ಮಾಡಿ ಆ ವ್ಯಕ್ತಿಗೆ ಇವು (ಪ್ರಸಿದ್ಧಿ / ಹಣ / ಸೌಂದರ್ಯ) ಸಿಗದಂತೆ ಮಾಡಬೇಕು. ನನಗೆ ಸಿಗದಿದ್ದರೂ ಸರಿ.

ನೀವು ನೀಲಾಂಬರಿ ಸಿನಿಮಾ ನೋಡಿದ್ದರೆ ಅಲ್ಲಿಯೂ ಮತ್ಸರ ಒಬ್ಬರ ಕೊಲೆ ಮಾಡಿಸುವುದು. ಅದೇ ರೀತಿ, ಯಾರಾದರೂ ತಮಗೆ ಗೊತ್ತಿರುವವರು ಹೆಸರು ಅಥವಾ ಇನ್ನಾವುದೇ ಸಂಪನ್ಮೂಲಗಳನ್ನು ಹೊಂದತೊಡಗಿದಾಗ ಆ ವ್ಯಕ್ತಿಯನ್ನು ಮಾನಸಿಕವಾಗಿಯೋ, ದೈಹಿಕವಾಗಿಯೋ, ಇಲ್ಲ ಸಾಮಾಜಿಕವಾಗಿಯೋ ಕೊಲೆ ಮಾಡುವ ಹುನ್ನಾರಗಳು ಆ ವ್ಯಕ್ತಿಯ ಬೆನ್ನ ಹಿಂದೆ ಅವನಿಗೆ ಅರಿವೇ ಇಲ್ಲದಂತೆ ಸಾಗಿರುತ್ತದೆ.

ಹತ್ತಿರದವರಿಂದಲೇ ಅನಾಹುತ

ಇಲ್ಲಿ ನೆನಪಿಟ್ಟುಕೊಳ್ಳಬೇಕಾದ ವಿಷಯ ಎಂದರೆ, ನಿಮ್ಮ ಹೆಸರು ಹಾಳು ಮಾಡಲು / ಮನಃಶಾಂತಿ ಕದಡುವುದು ಯಾರೋ ಗೊತ್ತೇ ಇರದ ವ್ಯಕ್ತಿಯಲ್ಲ. ಬದಲಿಗೆ ಹತ್ತಿರದ, ನಿಮ್ಮದೇ ಸ್ಥಳದ ಇನ್ನಿತರ ವ್ಯಕ್ತಿಗಳು. ಮನುಷ್ಯನ ಹೋಲಿಕೆ ಯಾವಾಗಲೂ ತನ್ನ ವಲಯದಲ್ಲಿರುವರ ಜೊತೆಯೇ ಇರುತ್ತದೆ. ಆದ್ದರಿಂದಲೇ ಬಹುತೇಕ ಜನರು ತಮ್ಮ ಸುತ್ತಮುತ್ತಲಿರುವವರ ಕಾಕದೃಷ್ಟಿಗೆ ಬಿದ್ದು ಹಾನಿಗೊಳಗಾಗುತ್ತಾರೆ. ಈ ತಮೋಗುಣದ ಮತ್ಸರ ಇದೆಯಲ್ಲ ಇದು ಮನಃಶಾಸ್ತ್ರಜ್ಞರ ಪ್ರಕಾರ ಆಕ್ರಮಣಶೀಲತೆ, ದ್ವೇಷ, ಅಸಮಾಧಾನ, ಮೆಚ್ಚುಗೆ, ದುರಾಸೆ ಮತ್ತು ನಾರ್ಸಿಸಿಸಮ್ (ನಾಶಕಾರಕ ನಾರ್ಸಿಸಿಸಮ್) ಇವುಗಳೆಲ್ಲವುದರ ಮಿಶ್ರಣ.

ಈ ಮತ್ಸರದ ಮತ್ತೊಂದು ಆಸಕ್ತಿಕಾರಕ ವಿಷಯ ಅಂದ್ರೆ ಇದರ ಸುಲಭ ವೇಷಾಂತರ (Trancemutation). ಅಂದರೆ ತನ್ನಲ್ಲಿ ಹುಟ್ಟಿದ ಈ ಮತ್ಸರಕ್ಕೆ ಬೇರೊಂದು ಹೆಸರು ಕಟ್ಟಿಬಿಡುವುದು. ಮತ್ತು ಅದನ್ನು ತಾನೇ ನಂಬಿಬಿಡುವುದು. ಏಕೆಂದರೆ ಯಾರು ತಾನೇ ತಮಗೆ ಇನ್ನೊಬ್ಬರ ಮೇಲೇ ಮತ್ಸರ ಇದೆ ಎಂದು ತೋರಿಸಿಕೊಳ್ಳುತ್ತಾರೆ? ಆದ್ದರಿಂದಲೆ ಅವರು ತಮ್ಮ ಮತ್ಸರವನ್ನು ಸಾಮಾಜಿಕ ಒಳಿತೋ, ನ್ಯಾಯ-ಅನ್ಯಾಯಗಳ ತಕ್ಕಡಿಯನ್ನು ತೋರಿಸಿಯೋ, ಅಥವಾ ಅಸಹಾಯಕತೆಯ ಕೋಪ ಎಂದೋ ವೇಷ ಮರೆಸುತ್ತಾರೆ. ಮತ್ಸರದ ಜ್ವಾಲೆಯು ಅವರನ್ನೋ ಇಲ್ಲ ಎದುರಿರುವರನ್ನೋ ಸುಡಲು ಕಾಯುತ್ತಾ ಇದೆ ಎಂದು ಅವರಿಗೆ ಗೊತ್ತೇ ಆಗುವುದಿಲ್ಲ.

ಬಹಳ ಹಿಂದೆ ಒಂದು ಕತೆ ಕೇಳಿದ ನೆನಪು. ಆಕೆಗೆ ಮಕ್ಕಳಿರುವುದಿಲ್ಲ. ಆದರೇ ಆಕೆಯ ಪಕ್ಕದ ಮನೆಯವರಿಗೆ ಒಂದು ಮುದ್ದಾದ ಹೆಣ್ಣು ಮಗು ಇರುತ್ತದೆ. ಆ ಮಗು ನಕ್ಕಾಗೆಲ್ಲಾ ಈ ಹೆಂಗಸಿಗೆ ಅದೇನೋ ಕಸಿವಿಸಿ, ಸಂಕಟ, ಕೋಪ. ಇವುಗಳನ್ನು ತಡೆಯಲಾರದೆ ಒಮ್ಮೆ ಆ ಮುದ್ದಾದ ಮಗುವನ್ನು ಸಾಯಿಸಿ ಮಂಚದಡಿಯಲ್ಲಿ ಹೂತುಬಿಡುತ್ತಾಳೆ. ಪಕ್ಕದ ಮನೆಯವರು ಮಗುವನ್ನು ಹುಡುಕುವಾಗ ಆಕೆಗೆ ಏನೋ ಖುಷಿ. ಕೊನೆಗೂ ಆಕೆ ಸಿಕ್ಕಿ ಹಾಕಿಕೊಂಡು ಸೆರೆಮನೆಗೆ ಹೋಗುತ್ತಾಳೆ. ಇದರಿಂದ ಯಾರಿಗೆ ಲಾಭ?

ಈ ಕೆಟ್ಟ ಮತ್ಸರದಿಂದ ಮತ್ಸರ ಪಡುವ ವ್ಯಕ್ತಿಯ ಮೇಲೂ ಹಾನಿ ಆಗುತ್ತದೆ. ಇದುವರೆಗಿನ ಸಂಶೋಧನೆಯ ಪ್ರಕಾರ ಮತ್ಸರ ಪಟ್ಟು ಇನ್ನೊಬ್ಬರಿಗೆ ಕೇಡನ್ನು ಬಯಸುವ ಜನ ಒಳಗೊಳಗೆ ಮಾನಸಿಕ ಖಿನ್ನತೆಗೆ ಒಳಗಾಗುವರು. ಅನಗತ್ಯ ಕೋಪ, ಅದುಮಿಟ್ಟ ಆಕ್ರೋಶಗಳು ದೈಹಿಕ ಸ್ಥಿತಿಯನ್ನು ಹಾಳುಗೆಡವಬಲ್ಲದು. ಇನ್ನೊಬ್ಬರಿಗೆ ಕೇಡನ್ನು ತರುವ ಪ್ರಕಿಯೆಯಲ್ಲಿ ಅವರು ಕೆಟ್ಟದಾರಿ ತುಳಿದು ಸ್ವಯಂ ತೊಂದರೆಗೆ ಒಳಗಾಗುತ್ತಾರೆ.

ಮತ್ಸರ ಗುಣದ ಜನರನ್ನು ಹೇಗೆ ಗುರುತಿಸಬಹುದು?

1) ನಿಮ್ಮ ಪ್ರತಿ ಒಳ್ಳೆಯ ಸುದ್ದಿಯನ್ನೂ ಅವರು ವ್ಯಂಗ್ಯವೋ ಅಥವಾ ನೆಗೆಟೀವ್ ಆಗಿ ಸ್ವೀಕರಿಸುತ್ತಾರೆ. ಉದಾಹರಣೆ: ನಿಮಗೆ ಪ್ರಮೋಶನ್ ಸಿಕ್ಕಿತೆಂದರೆ. "ನಿನಗೇನು ಬಿಡು ಬಾಸ್‌ಗೆ ಬೆಣ್ಣೆ ಹಚ್ಚೊಕೆ ಬರುತ್ತೆ".

2) ನೀವೇನೊ ಒಳ್ಳೆಯ ಕೆಲಸ ಮಾಡಿದ್ದಿರೆಂದು ಹಂಚಿಕೊಂಡ ಕೂಡಲೇ ತಾನು ಅದಕ್ಕಿಂತಲೂ ಹೆಚ್ಚು ಮಾಡಿದ್ದೇನೆಂದು ಹೇಳಿಕೊಳ್ಳುವುದು.

3) ನಿಮ್ಮಲ್ಲಿ ಗಿಲ್ಟ್ ಮೂಡಿಸಲು ಪ್ರಯತ್ನಿಸುತ್ತಾರೆ

4) ಇವರು ನಿಮಗೆ ಯಾವುದೇ ಸಹಾಯ ಮಾಡುವುದಿಲ್ಲ

ಈ ರೀತಿಯ ಹಲವಾರು ಲಕ್ಷಣಗಳನ್ನು ಗುರುತಿಸಿದ ನಂತರ ನಿಮ್ಮ ಮನಸ್ಸು ನಿಮ್ಮನ್ನು ಅವರಿಂದ ದೂರ ಇಡಲು ಸಹಾಯ ಮಾಡುತ್ತದೆ. ಅಷ್ಟಲ್ಲದೇ ದಾಸರು ಸಹಾ, "ಮತ್ಸರಿಸುವ ಜನರು ಸೇರಿ ಮಾಡುವರೇನು ಅಚ್ಯುತಾ ನಿನ್ನ ದಯೆಯು ಒಂದಿರಲು" ಎಂದು ಹೇಳುತ್ತಾರೆಯೇ? 'ಈ ಮತ್ಸರಿಸುವ ಜನರು ದಾಸರಂತಹವರನ್ನೇ ಬಿಡಲಿಲ್ಲ. ಇನ್ನು ನಮ್ಮ ನಿಮ್ಮಂತಹ ಹುಲು ಮಾನವರನ್ನು ಬಿಡುತ್ತಾರೆಯೇ' ಎನ್ನುವುದು ಇದರ ಅರ್ಥ.

ನಮ್ಮಲ್ಲಿ ಹೊಟ್ಟೆಕಿಚ್ಚು ಮೂಡದ ಹಾಗೆ ತಡೆಯುವುದು ಹೇಗೆ?

ಆಗಲೇ‌ ಹೇಳಿದಂತೆ ಹೊಟ್ಟೆಕಿಚ್ಚು, ಅಸೂಯೆ ಇವುಗಳು ನಮ್ಮ ಮೇಲೆ ನಮಗಿರುವ ಕೀಳರಿಮೆಯ ಪರಿಣಾಮ. ನಮಗೆ ಸಿಕ್ಕಿರದ ಹೆಸರು‌, ಕೀರ್ತಿ, ವಸ್ತು, ಹಣ ಹೆಣ್ಣು / ಗಂಡು ಇವುಗಳು ತನಗೆ ಗೊತ್ತಿರುವ ಬೇರೆಯವರಿಗೆ ಸಿಕ್ಕಾಗ‌ ಅವುಗಳನ್ನು ಪಡೆಯಲಾಗದ ಅಸಹಾಯಕತೆಗೆ ಬರುವ ಕೋಪದ ಜೊತೆಗಿನ ಭಾವ. ಆ ವ್ಯಕ್ತಿ ತಮಗಿಂತ ಮೇಲೆ‌ ಹೋದ ಹಾಗೆ ನಮ್ಮ 'ಅಹಂ'ಗೆ (ಇಗೊ) ತಟ್ಟುವ ನೋವು.

ನಮ್ಮಲ್ಲಿ ಸ್ವಪ್ರತಿಷ್ಠೆ, ಆತ್ಮ ಪ್ರೀತಿ ಹಿಗ್ಗು ಆತ್ಮವಿಶ್ವಾಸಗಳನ್ನು (ಸೆಲ್ಫ್ ಎಸ್ಟೀಮ್) ಹೆಚ್ಚಿಸಿಕೊಂಡಂತೆಲ್ಲಾ ಇತರರ ಬಗ್ಗೆ ಹೊಟ್ಟೆಕಿಚ್ಚು ಉಂಟಾಗುವುದು ಕಡಿಮೆ ಆಗುತ್ತದೆ. ಹೊಟ್ಟೆಕಿಚ್ಚು ಮನುಷ್ಯನ ಆರೋಗ್ಯಕ್ಕೆ ಹಾಗೂ ದೇಹಕ್ಕೆ ಒಳ್ಳೆಯದಲ್ಲ. ಅದರಿಂದ ಹಲವು ಅನಾರೋಗ್ಯಕರ ಪರಿಣಾಮಗಳು ಉಂಟಾಗುತ್ತವೆ.

ಅಸೂಯೆಯನ್ನು ಕಡಿಮೆಗೊಳಿಸಿಕೊಳ್ಳುವುದು ‌ಹೇಗೆ?

1) ನಿಮ್ಮ ಬಲಗಳ ಆಗಾಗ ಪಟ್ಟಿ ಮಾಡಿ

2) ನಿಮ್ಮಲ್ಲಿರು‌ವ ಸುಗುಣಗಳ‌ನ್ನು ನೆನಪಿಸಿಕೊಳ್ಳಿ

3) ನಿಮ್ಮಲ್ಲಿರುವ ವಸ್ತುಗಳು, ನೀವು ಅನುಭವಿಸುತ್ತಿರುವ ಸೌಲಭ್ಯ, ಸವಲತ್ತುಗಳಿಗೆ, ತಂದೆ‌ತಾಯಂದಿರಿಗೆ, ಉಸಿರಾಡುವವ ಗಾಳಿಗೆ, ನೀರಿಗೆ‌ ಹಾಗೂ ನಿಮ್ಮ ಜೊತೆ ‌ಇರುವವರಿಗೆ ಎಲ್ಲರಿಗೂ ನಿತ್ಯ ಕೃತಜ್ಞತೆ ಅರ್ಪಿಸುತ್ತಿರಿ.

4) ಎಲ್ಲರೂ ಎಲ್ಲವನ್ನೂ ಹೊಂದಲೇಬೇಕಿಲ್ಲ ಎನ್ನುವ ಮಾತನ್ನು ನೆನಪಿಸಿಕೊಳ್ಳಿ.

5) ಬಹಳ‌ ಸಲ ಬೇರೆಯವರಿಗೆ ಸಿಕ್ಕಿದ್ದು ನಮಗೂ ಸಿಗಬೇಕಿತ್ತು‌ ಎಂಬ ಭಾವನೆ ಹೊಟ್ಟೆಕಿಚ್ಚಿಗೆ ಕಾರಣ ಎಂದುಕೊಳ್ಳುತ್ತೇವೆ. ಆದರೆ ನಿಜಕ್ಕೂ‌ಆ ವಸ್ತುವಿನ ಅಗತ್ಯ ನಮಗಿದೆಯೇ ಎಂದು ಯೋಚಿಸಿ.

6) ಯಾವುದೇ ವಸ್ತುವಾಗಲಿ, ಹೆಸರಾಗಲಿ, ಹಣ, ಅಂತಸ್ತಾಗಲಿ ನಮ್ಮ ಪರಿಶ್ರಮಕ್ಕೆ, ತೆಗೆದುಕೊಳ್ಳುವ ರಿಸ್ಕ್ ಹಾಗೂ‌ ಬುದ್ದಿಶಕ್ತಿಗೆ ಅನುಗುಣವಾಗಿ ದೊರೆಯುತ್ತದೆ. ಅಫ್‌ಕೋರ್ಸ್ 'ಲಕ್‌' (ಅದೃಷ್ಟ) ಎಂಬ ಎಲಿಮೆಂಟ್ ಇದ್ದರೆ ಒಳ್ಳೆಯದು.

ಹಾಗಾಗಿ ನಿಮ್ಮ ಪರಿಶ್ರಮ ನೀವು ಹಾಕುತ್ತಿರಿ. ಇನ್ನೊಬ್ಬರ ಯಶಸ್ಸಿಗೆ ನೀವೇಕೆ ಕಣ್ಣೀರು ಹಾಕುತ್ತೀರಿ? ಹಾಗೆ‌ ಮಾಡಿದರೆ‌ ಆ ಯಶಸ್ಸು ನಿಮ್ಮದಾಗಿಬಿಡುತ್ತದೆಯೇ ಯೋಚಿಸಿ. ಮನಸು ಆ ಇನ್ನೊಬ್ಬರಿಗೆ ಕೆಟ್ಟದ್ದು ಬಯಸುತ್ತಿದ್ದರೆ‌ ಕೂಡಲೇ ನೀವು ಕುಳಿತ ಸ್ಥಾನ ಬದಲಿಸಿ. ಒಳ್ಳೆಯ ಯೋಚನೆ‌ ಮಾಡಿ. ಮತ್ಸರಿಸುವ ಜನರಿಂದ ಹಾಗೂ ಮತ್ಸರದಿಂದ ಆದಷ್ಟೂ ದೂರವಿರಿ.

ಡಾ ರೂಪಾ ರಾವ್ ಪರಿಚಯ

ಮನಃಶಾಸ್ತ್ರಜ್ಞೆ ಮತ್ತು ಆಪ್ತ ಸಮಾಲೋಚಕಿ ಡಾ ರೂಪಾ ರಾವ್‌ ಬೆಂಗಳೂರು ವಾಸಿ. ಮನಃಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಕ್ಲಿನಿಕಲ್ ಸೈಕಾಲಜಿ ಹಾಗೂ ಕೌನ್ಸೆಲಿಂಗ್ ಸೈಕೊಥೆರಪಿಯಲ್ಲಿ ವಿಶೇಷ ತರಬೇತಿ ಮತ್ತು ಪರಿಣತಿ ಹೊಂದಿದ್ದಾರೆ. ಕೌನ್ಸೆಲಿಂಗ್‌ನಲ್ಲಿ ಇಪ್ಪತ್ತಕ್ಕೂ ಹೆಚ್ಚಿನ ವರ್ಷಗಳ ಅನುಭವ ಇದೆ. ಕಂಪ್ಯೂಟರ್ ಸೈನ್ಸ್‌ನಲ್ಲಿ ಡಾಕ್ಟರೇಟ್ ಮಾಡಿದ್ದಾರೆ. ವಿಶ್ವ ಮಾನ್ಯ ಐಸಿಎಫ್ ಸಂಸ್ಥೆಯಿಂದ ಕೋಚಿಂಗ್‌ನಲ್ಲಿ ಪಿಸಿಸಿ ಕ್ರೆಡೆನ್ಷಿಯಲ್ ಪಡೆದಿದ್ದಾರೆ. ಎನ್‌ಜೆನ್ ಸಾಫ್ಟ್ ಸಲ್ಯೂಶನ್ ಮತ್ತು ನೊಬೆಲ್ ಇನ್‌ಸ್ಟಿಟ್ಯೂಟ್‌ನ ಸಂಸ್ಥಾಪಕರು. ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ವಿವಿಧ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ. ಇವರ ಅನೂಹ್ಯ ಬೇಸಿಗೆ ಶಿಬಿರ ವರ್ಲ್ಡ್ ಬುಕ್ ಆಫ್ ರೆಕಾರ್ಡ್ಸ್‌ಗೆ ಸೇರ್ಪಡೆಯಾಗಿದೆ. 20 ವರ್ಷಗಳ ವೃತ್ತಿಜೀವನದಲ್ಲಿ ವೃತ್ತಿಪರರು, ತರಬೇತುದಾರರು, ವಿದ್ಯಾರ್ಥಿಗಳು, ಪೋಷಕರು ಸೇರಿದಂತೆ ಹತ್ತಾರು ಸಾವಿರ ಜನರಿಗೆ ತರಬೇತಿ, ಕೌನ್ಸೆಲಿಂಗ್ ನೀಡಿದ ಅನುಭವ ಇವರದು. ಸಂಪರ್ಕ ಸಂಖ್ಯೆ: 97408 66990.

Whats_app_banner