ಮಕ್ಕಳ ಬೆಳವಣಿಗೆ ಜೊತೆಗೆ ತೂಕ ಇಳಿಕೆಗೂ ಈ ಉಪಹಾರ ಬೆಸ್ಟ್; ಪೌಷ್ಠಿಕಾಂಶಭರಿತ ಪ್ರೋಟೀನ್‌ ದೋಸೆ ರೆಸಿಪಿ ಇಲ್ಲಿದೆ
ಕನ್ನಡ ಸುದ್ದಿ  /  ಜೀವನಶೈಲಿ  /  ಮಕ್ಕಳ ಬೆಳವಣಿಗೆ ಜೊತೆಗೆ ತೂಕ ಇಳಿಕೆಗೂ ಈ ಉಪಹಾರ ಬೆಸ್ಟ್; ಪೌಷ್ಠಿಕಾಂಶಭರಿತ ಪ್ರೋಟೀನ್‌ ದೋಸೆ ರೆಸಿಪಿ ಇಲ್ಲಿದೆ

ಮಕ್ಕಳ ಬೆಳವಣಿಗೆ ಜೊತೆಗೆ ತೂಕ ಇಳಿಕೆಗೂ ಈ ಉಪಹಾರ ಬೆಸ್ಟ್; ಪೌಷ್ಠಿಕಾಂಶಭರಿತ ಪ್ರೋಟೀನ್‌ ದೋಸೆ ರೆಸಿಪಿ ಇಲ್ಲಿದೆ

ಮಕ್ಕಳ ಬೆಳವಣಿಗೆಗೆ ಪೌಷ್ಠಿಕಾಂಶ ಭರಿತ ಆಹಾರಗಳು ಅವಶ್ಯಕ. ಹಾಗಾಗಿ ಪೋಷಕರು ಆರೋಗ್ಯಕರ ಆಹಾರಗಳನ್ನೇ ಮಕ್ಕಳಿಗೆ ನೀಡಲು ಮುಂದಾಗುತ್ತಾರೆ. ಮಕ್ಕಳಿಗೆ ಚೈತನ್ಯ, ಶಕ್ತಿ ನೀಡುವಂತಹ, ಸುಲಭವಾಗಿ ತಯಾರಿಸಬಹುದಾದ ಪ್ರೋಟೀನ್ ದೋಸೆ ರೆಸಿಪಿ ಇಲ್ಲಿದೆ. ಇದು ಮಕ್ಕಳು ದಿನವಿಡೀ ಚಟುವಟಿಕೆಯಿಂದಿರಲು ಸಹಾಯ ಮಾಡುತ್ತದೆ.

 ಪ್ರೋಟೀನ್‌ ದೋಸೆ
ಪ್ರೋಟೀನ್‌ ದೋಸೆ (PC: Freepik)

ಮಕ್ಕಳಿಗೆ ಹೊಸ ಬಗೆಯ ತಿಂಡಿಗಳೆಂದರೆ ಬಹಳ ಇಷ್ಟ. ಅದರಲ್ಲೂ ಬೆಳಗ್ಗಿನ ತಿಂಡಿ ಅವರಿಷ್ಟದಂತೆ ಇದ್ದರೆ ದಿನಪೂರ್ತಿ ಸಂತೋಷದಿಂದಿರುತ್ತಾರೆ. ಹಾಗಂತ ಯಾವಾಗಲೂ ಅವರು ಹೇಳಿದ್ದನ್ನೇ ಮಾಡಿಕೊಡಲು ಸಾಧ್ಯವಿಲ್ಲ. ಮಕ್ಕಳು ಕೇಳುವ ಕೆಲವು ತಿಂಡಿಗಳು ಆರೋಗ್ಯಕ್ಕೆ ಉತ್ತಮವಾಗಿರುವುದಿಲ್ಲ. ದೇಹಕ್ಕೆ ಅಗತ್ಯವಿರುವ ಪೋಷಕಾಂಶಗಳನ್ನು ಒದಗಿಸುವಂತಹ ತಿಂಡಿಗಳು ಮಕ್ಕಳಿಗೆ ಬೇಕು. ಅವು ಮಕ್ಕಳಲ್ಲಿ ಶಕ್ತಿ ಮತ್ತು ಚೈತನ್ಯ ತುಂಬುತ್ತವೆ. ಮನೆಯಲ್ಲಿ ತಯಾರಿಸುವ ಇಡ್ಲಿ, ದೋಸೆ ಮುಂತಾದವುಗಳು ಮಕ್ಕಳ ಬೆಳವಣಿಗೆಗೆ ಉತ್ತಮವಾಗಿದೆ. ಕೆಲವು ಮಕ್ಕಳು ದೋಸೆಯನ್ನು ಬಹಳ ಇಷ್ಟಪಟ್ಟು ತಿನ್ನುತ್ತಾರೆ. ಯಾವಾಗಲೂ ಒಂದೇ ತರಹದ ದೋಸೆ ಮಾಡಿ ಬೇಸರ ಮೂಡಿಸುವ ಬದಲಿಗೆ ವಿಭಿನ್ನವಾಗಿ ಪ್ರೋಟೀನ್‌ ದೋಸೆಯನ್ನು ಪ್ರಯತ್ನಿಸಬಹುದು. ಇದು ಟೇಸ್ಟಿಯಾಗಿರುವುದರ ಜೊತೆಗೆ ದಿನವಿಡೀ ಮಕ್ಕಳಿಗೆ ಶಕ್ತಿ ನೀಡುತ್ತದೆ. ವೈದ್ಯರು ಮಕ್ಕಳಿಗೆ ಪ್ರೋಟೀನ್‌ ಭರಿತ ಆಹಾರಗಳನ್ನು ಸೇವಿಸಲು ಸಲಹೆ ನೀಡುತ್ತಾರೆ. ಇದು ಮಕ್ಕಳಿಗೆ ಮಾತ್ರವಲ್ಲ ತೂಕ ಇಳಿಸಿಕೊಳ್ಳಲು ಬಯಸುವವರಿಗೂ ಉತ್ತಮವಾಗಿದೆ. ಮಕ್ಕಳ ಬೆಳವಣಿಗೆಯ ಜೊತೆಗೆ ತೂಕ ಇಳಿಕೆಯ ಪ್ರಯತ್ನದಲ್ಲಿರುವವರಿಗೂ ಇದು ಬೆಸ್ಟ್‌ ತಿಂಡಿ. ಆರೋಗ್ಯಕ್ಕೆ ಉತ್ತಮವಾಗಿರುವ ಪ್ರೋಟೀನ್‌ ದೋಸೆ ತಯಾರಿಸುವುದು ಬಹಳ ಸುಲಭ.

ಪ್ರೋಟೀನ್‌ ದೋಸೆ ಮಾಡುವ ವಿಧಾನ ಇಲ್ಲಿದೆ

ಬೇಕಾಗುವ ಪದಾರ್ಥಗಳು: ದೋಸೆ ಅಕ್ಕಿ– ಒಂದು ಕಪ್‌, ಮೆಂತ್ಯ– ಅರ್ಧ ಕಪ್‌, ಉದ್ದಿನ ಬೇಳೆ– ಕಾಲು ಕಪ್‌, ತೊಗರಿ ಬೇಳೆ– ಕಾಲು ಕಪ್‌, ಕಡಲೆ ಬೇಳೆ – ಕಾಲು ಕಪ್‌, ಹೆಸರು ಬೇಳೆ– ಕಾಲು ಕಪ್‌, ಜೀರಿಗೆ – ಒಂದು ಚಮಚ, ಶುಂಠಿ– ಸಣ್ಣ ತುಂಡು, ಹಸಿರು ಮೆಣಸಿನಕಾಯಿ – ನಾಲ್ಕು, ಉಪ್ಪು– ರುಚಿಗೆ ತಕ್ಕಷ್ಟು.

ಪ್ರೋಟೀನ್‌ ದೋಸೆ ತಯಾರಿಸುವ ವಿಧಾನ: ಮೊದಲಿಗೆ ಅಕ್ಕಿ, ಮೆಂತ್ಯ, ಉದ್ದಿನ ಬೇಳೆ, ತೊಗರಿ ಬೇಳೆ, ಕಡಲೆ ಬೇಳೆ, ಹೆಸರು ಬೇಳೆಗಳನ್ನು ಚೆನ್ನಾಗಿ ತೊಳೆದು, ನೀರು ಹಾಕಿ ನೆನೆಸಿಡಿ. ಸುಮಾರು ಐದರಿಂದ ಆರು ಗಂಟೆಗಳ ಕಾಲ ನೆನಸಿ. ನಂತರ ಇದನ್ನು ಮಿಕ್ಸರ್‌ ಜಾರ್‌ಗೆ ಹಾಕಿ. ಅದಕ್ಕೆ ಹಸಿರು ಮೆಣಸಿನಕಾಯಿ, ಜೀರಿಗೆ ಮತ್ತು ಶುಂಠಿಯನ್ನು ಹಾಕಿ ನುಣ್ಣಗೆ ರುಬ್ಬಿಕೊಳ್ಳಿ. ಅದನ್ನು ಒಂದು ಪಾತ್ರೆಗೆ ವರ್ಗಾಯಿಸಿಕೊಳ್ಳಿ. ರುಚಿಗೆ ತಕ್ಕಷ್ಟು ಉಪ್ಪು ಹಾಕಿ ಚೆನ್ನಾಗಿ ಮಿಕ್ಸ್‌ ಮಾಡಿ. ಸ್ಟೌವ್‌ ಮೇಲೆ ತವಾ ಇಡಿ. ಅದು ಚೆನ್ನಾಗಿ ಕಾದ ನಂತರ ದೋಸೆ ಹಿಟ್ಟನ್ನು ಒಂದು ದೊಡ್ಡ ಚಮಚ ಅಥವಾ ಸ್ಟೀಲ್‌ ಲೋಟದ ಸಹಾಯದಿಂದ ದೋಸೆ ಮಾಡಿ. ಎಲ್ಲಾ ಕಡೆ ಒಂದೆ ರೀತಿಯಲ್ಲಿ ಹಿಟ್ಟನ್ನು ಹರಡಿ. ಎರಡೂ ಕಡೆ ಚೆನ್ನಾಗಿ ಬೇಯಿಸಿದರೆ ರುಚಿಯಾದ ಪ್ರೋಟೀನ್‌ ದೋಸೆ ಸವಿಯಲು ಸಿದ್ಧ. ಈ ದೋಸೆಗೆ ತೆಂಗಿನ ಕಾಯಿ ಚಟ್ನಿ ಅಥವಾ ಟೊಮೆಟೊ ಚಟ್ನಿ ಬೆಸ್ಟ್‌ ಕಾಂಬಿನೇಷನ್‌. ದೋಸೆ ಹಿಟ್ಟನ್ನು ರಾತ್ರಿ ಮಾಡಿಟ್ಟುಕೊಂಡರೆ ಉತ್ತಮ. ಮರುದಿನ ಹಿಟ್ಟು ಚೆನ್ನಾಗಿ ಉಬ್ಬಿ ಬಂದಿರುತ್ತದೆ. ಆಗ ದೋಸೆ ಮೃದುವಾಗಿ ಬರುತ್ತದೆ. ಈ ದೋಸೆಯನ್ನು ದಿಢೀರ್‌ ಅಂತಲೂ ತಯಾರಿಸಬಹುದು.

ಪ್ರೋಟೀನ್‌ ದೋಸೆ ಎಲ್ಲಾ ವಯಸ್ಸಿನವರಿಗೂ ಉತ್ತಮವಾಗಿದೆ. ಇದರಲ್ಲಿ ಹೆಸರು ಬೇಳೆ, ಉದ್ದಿನ ಬೇಳೆ, ಕಡಲೆ ಬೇಳೆ, ತೊಗರಿ ಬೇಳೆ ಮುಂತಾದ ಪ್ರೋಟೀನ್‌ ಸಮೃದ್ಧವಾಗಿರುವ ಧಾನ್ಯಗಳಿವೆ. ಇವು ದೇಹಕ್ಕೆ ಸಾಕಷ್ಟು ಶಕ್ತಿಯನ್ನು ನೀಡುತ್ತವೆ. ಬೆಳಗಿನ ಉಪಹಾರಕ್ಕೆ ಪ್ರೋಟೀನ್‌ ದೋಸೆ ತಿನ್ನುವುದರಿಂದ ದಿನವಿಡೀ ಚೈತನ್ಯದಿಂದಿರಲು ಸಾಧ್ಯ. ಮುಂದಿನ ಸಲ ದೋಸೆ ಮಾಡುವಾಗ ತಪ್ಪದೇ ಈ ಪ್ರೋಟೀನ್‌ ದೋಸೆ ಪ್ರಯತ್ನಿಸಿ.

Whats_app_banner