Microsoft Edge: ಮೈಕ್ರೊಸಾಫ್ಟ್ ಬ್ರೌಸರ್ ಬಳಸುವಿರಾ? ಭಾರತ ಸರಕಾರದಿಂದ ಭದ್ರತಾ ಎಚ್ಚರಿಕೆ, ರಿಸ್ಕ್ ತಪ್ಪಿಸಲು ಹೀಗೆ ಮಾಡಿ
ಮೈಕ್ರೊಸಾಫ್ಟ್ ಎಡ್ಜ್ ಎಂಬ ಬ್ರೌಸರ್ ಅನ್ನು ಕಂಪ್ಯೂಟರ್ ಅಥವಾ ಮೊಬೈಲ್‌ನಲ್ಲಿ ಸಾಕಷ್ಟು ಜನರು ಬಳಸುತ್ತಿದ್ದಾರೆ. ಇದು ಜಗತ್ತಿನಲ್ಲಿ ಹೆಚ್ಚು ಜನರು ಬಳಸುವ ಬ್ರೌಸರ್‌ಗಳಲ್ಲಿ ಒಂದಾಗಿದೆ. ಮೈಕ್ರೊಸಾಫ್ಟ್ ಎಡ್ಜ್ ಬಳಕೆದಾರರಿಗೆ ಒಂದು ಎಚ್ಚರಿಕೆಯ ಸೂಚನೆ ಇದೆ.
ಮೈಕ್ರೊಸಾಫ್ಟ್ ಎಡ್ಜ್ ಎನ್ನುವುದು ಜಗತ್ತಿನಾದ್ಯಂತ ಸಾಕಷ್ಟು ಜನರು ಬಳಸುವ ವೆಬ್ ಬ್ರೌಸರ್ ಆಗಿದೆ. ಗೂಗಲ್ ಕ್ರೋಮ್ ಬಳಿಕ ಹೆಚ್ಚು ಜನರು ಎಡ್ಜ್ ಬಳಸುತ್ತಾರೆ. ವಿಂಡೋಸ್ ಯೂಸರ್‌ಗಳು ಆಗಾಗ ಎಡ್ಜ್ ಬ್ರೌಸರ್ ಬಳಸುವುದುಂಟು. ಆದರೆ, ನೀವಿನ್ನೂ ಹಳೆಯ ವರ್ಷನ್ ಎಡ್ಜ್ ಬಳಸುತ್ತಿದ್ದರೆ ಒಂದಿಷ್ಟು ಭದ್ರತಾ ಅಪಾಯಗಳು ಇವೆ. ಈ ಇಂಟರ್‌ನೆಟ್ ಜಗತ್ತಿನಲ್ಲಿ ಬ್ಯಾಂಕಿಂಗ್ ವಿವರ, ಜನ್ಮ ದಿನಾಂಕ, ಸ್ಥಳ ಇತ್ಯಾದಿಗಳು ಬ್ರೌಸರ್ ಹಿಸ್ಟರಿಯಲ್ಲಿ ದಾಖಲಾಗುತ್ತದೆ. ಬಳಕೆದಾರರ ಮಾಹಿತಿ ಸುರಕ್ಷಿತವಾಗಿಸಲು ಮೈಕ್ರೊಸಾಫ್ಟ್ ಆಗಾಗ ಎಡ್ಜ್ ಬ್ರೌಸರ್ ಅಪ್‌ಡೇಟ್ ಮಾಡುತ್ತಿದೆ. ಬಳಕೆದಾರರು ತಮ್ಮ ಬ್ರೌಸರ್ ಅನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳುವಂತೆ ಮೈಕ್ರೊಸಾಫ್ಟ್ ತಿಳಿಸುತ್ತದೆ. ಇತ್ತೀಚೆಗೆ ಮೈಕ್ರೊಸಾಫ್ಟ್ ಹೊಸ ಅಪ್‌ಡೇಟ್ ಮಾಡಿದ್ದು, ಎಡ್ಜ್ ಬ್ರೌಸರ್ ಬಳಸುವವರು ಅಪ್‌ಡೇಟ್ ಮಾಡಿಕೊಳ್ಳಿ. ಕೆಲವರು ನಮಗೆ ಹಳೆಯ ವರ್ಷನ್ ಇರಲಿ, ಬಳಕೆ ಚೆನ್ನಾಗಿರುತ್ತದೆ ಎಂದು ಹಳೆಯ ವರ್ಷನ್ ಬ್ರೌಸರ್ ಬಳಸುತ್ತಾರೆ. ಇದೀಗ ಭಾರತ ಸರಕಾರವು 129.0.2792.52ಗಿಂತ ಮೊದಲ ಎಡ್ಜ್ ಬಳಕೆದಾರರಿಗೆ ಎಚ್ಚರಿಕೆ ನೀಡಿದೆ. ಇದರಲ್ಲಿ ಸಾಕಷ್ಟು ಭದ್ರತಾ ಅಪಾಯಗಳು ಕಾಣಿಸಿವೆ.
ಭಾರತದ ಎಡ್ಜ್ ಬಳಕೆದಾರರಿಗೆ ಅಪಾಯ
ಭಾರತ ಸರಕಾರದ ಎಲೆಕ್ಟ್ರಾನಿಕ್ಸ್ ಆಂಡ್ ಇನ್ ಫಾರ್ಮೆಷನ್ ಟೆಕ್ನಾಲಜಿ ಸಚಿವಾಲಯದಡಿ ಬರುವ ಇಂಡಿಯನ್ ಕಂಪ್ಯೂಟರ್ ಎಮರ್ಜೆನ್ಸಿ ರೆಸ್ಪಾನ್ಸ್ ಟೀಮ್ (ಸಿಇಆರ್‌ಟಿ-ಇನ್) ಮೈಕ್ರೊಸಾಫ್ಟ್ ಎಡ್ಜ್‌ನಲ್ಲಿ ಹಲವು ದುರ್ಬಲತೆ (vulnerabilities) ಗುರುತಿಸಿದೆ. ಇದು ದೋಷಗಳಿಂದ ರಿಮೋಟ್ ದಾಳಿಕೋರರು ಕೋಡ್ ಎಕ್ಸಿಕ್ಯುಷನ್ ಮಾಡಬಹುದು, ಯುಐ ಸ್ಪೂಪಿಂಗ್, ಸ್ಟಾಕ್, ಹೀಪ್ ಕರೆಕ್ಷನ್ ಇತ್ಯಾದಿಗಳನ್ನು ಮಾಡಬಹುದು. ಈ ಮೂಲಕ ಕಂಪ್ಯೂಟರ್ ಮೇಲೆ ಹ್ಯಾಕರ್‌ಗಳು ಲಗ್ಗೆಯಿಡುವ ಅಪಾಯವಿದೆ ಎಂದು ಎಚ್ಚರಿಸಿದೆ.
ಈ ದೋಷಗಳು ಮೈಕ್ರೊಸಾಫ್ಟ್ ಎಡ್ಜ್‌ನ (ಕ್ರೋಮಿಯಂ ಆಧರಿತ) ಹಳೆಯ ಆವೃತ್ತಿಗಳಲ್ಲಿ ಇರಬಹುದು. ಯುಐ, ಆಟೋಫಿಲ್ ಆಂಡ್ ವಿ8, ಓಮ್ನಿಬಾಕ್ಸ್‌ನಲ್ಲಿ ಡೇಟಾ ವ್ಯಾಲಿಡೇಷನ್ ಮಾಡದೆ ಇರುವುದು, ವಿ8 ಟೈಪ್ ಕನ್‌ಫ್ಯೂಷನ್, ಡೌನ್‌ಲೋಡ್‌ನಲ್ಲಿರುವ ಭದ್ರತಾ ಯುಐನ ಅಸರ್ಮಪಕತೆ, ವೆಬ್ ಪುಟ ರಚನೆ ಸಮಯದಲ್ಲಿ ಅಸರ್ಮಪಕ ನ್ಯೂಟ್ರಲೈಜೇಷನ್... ಹೀಗೆ ಸಾಕಷ್ಟು ತಾಂತ್ರಿಕ ದೋಷಗಳಿಂದ ಭದ್ರತಾ ದೌರ್ಬಲ್ಯ ಕಾಣಸಿಕೊಂಡಿದೆ. ಈ ರೀತಿ ದೋಷವಿರುವುದರಿಂದ ರಿಮೋಟ್ ಅಟ್ಯಾಕರ್‌ಗಳು ನಿರ್ದಿಷ್ಟ ಕಂಪ್ಯೂಟರ್‌ಗಳ ಮೇಲೆ ದಾಳಿ ನಡೆಸಿ ಬಳಕೆದಾರರ ವೈಯಕ್ತಿಕ ಮತ್ತು ಬ್ಯಾಂಕಿಂಗ್ ಮಾಹಿತಿ ಪಡೆಯುವ ಅಪಾಯವಿದೆ.
ಬಳಕೆದಾರರು ಏನು ಮಾಡಬೇಕು?
ಸೆಕ್ಯುರಿಟಿ ಪ್ಯಾಚಸ್ ಇರುವ ಇತ್ತೀಚಿನ ಮೈಕ್ರೊಸಾಫ್ಟ್ ಎಡ್ಜ್ ಆಪ್ ಡೌನ್‌ಲೋಡ್ ಮಾಡಿಕೊಳ್ಳಿ. ಸಿಇಆರ್‌ಟಿ-ಇನ್ ಎಚ್ಚರಿಕೆಯ ಪ್ರಕಾರ "ಎಡ್ಜ್ ಬಳಕೆದದಾರರು ತಮ್ಮ ಎಡ್ಜ್ ಬ್ರೌಸರ್ ಅನ್ನು ಅಪ್‌ಡೇಟ್ ಮಾಡಿಕೊಳ್ಳಬೇಕು".
ಆಪ್ ಅಪ್‌ಡೇಟ್ ಮಾಡಿಕೊಳ್ಳಿ
ಮೈಕ್ರೊಸಾಫ್ಟ್ ಎಡ್ಜ್ ಎಂದಲ್ಲ. ನಿಮ್ಮ ಮೊಬೈಲ್ ಅಥವಾ ಕಂಪ್ಯೂಟರ್‌ನಲ್ಲಿರುವ ಆಪ್‌ಗಳನ್ನು, ಸಾಫ್ಟ್‌ವೇರ್‌ಗಳನ್ನು ಕಾಲಕಾಲಕ್ಕೆ ಅಪ್‌ಡೇಟ್ ಮಾಡಿಕೊಳ್ಳಬೇಕು. ನಿಮ್ಮ ಮೊಬೈಲ್‌ನಲ್ಲಿ ಹತ್ತು ಹಲವು ಅಪ್ಲಿಕೇಷನ್‌ಗಳು ಇರಬಹುದು. ಇವುಗಳಲ್ಲಿ ಭದ್ರತಾ ದೋಷಗಳು ಕಂಡುಬಂದಾಗ ಆಪ್ ನಿರ್ಮಿಸಿದ ಕಂಪನಿಗಳು ಅಂತಹ ತೊಂದರೆಗಳನ್ನು ಸರಿಪಡಿಸಿ ಅಪ್‌ಡೇಟೆಡ್ ಆಪ್‌ಗಳನ್ನು ಹೊರಬಿಡುತ್ತಾ ಇರುತ್ತವೆ. ಬಳಕೆದಾರರು ಆಗಾಗ ಪ್ಲೇ ಸ್ಟೋರ್‌ಗೆ ಹೋಗಿ ಎಲ್ಲಾ ಆಪ್‌ಗಳನ್ನು ಅಪ್‌ಡೇಟ್ ಮಾಡುತ್ತ ಇರಬೇಕು.