ಕನ್ನಡ ಸುದ್ದಿ  /  ಜೀವನಶೈಲಿ  /  ಮಳೆಯಲ್ಲಿ ಜಾಲಿರೈಡ್‌ ಹೋಗೋದು ನಿಮ್ಗೂ ಇಷ್ಟನಾ? ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 12 ಜಾಗಗಳಿವು

ಮಳೆಯಲ್ಲಿ ಜಾಲಿರೈಡ್‌ ಹೋಗೋದು ನಿಮ್ಗೂ ಇಷ್ಟನಾ? ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 12 ಜಾಗಗಳಿವು

ಜೂನ್‌ ತಿಂಗಳು ಬರುವುದನ್ನೇ ಹಲವರು ಕಾಯುತ್ತಿರುತ್ತಾರೆ. ಕಾರಣ ವರುಣರಾಯನ ಆಗಮನ. ಜೂನ್‌ ತಿಂಗಳಿನಲ್ಲಿ ಮಳೆ ಸುರಿಯಲು ಆರಂಭವಾಗುವುದು ಮಾತ್ರವಲ್ಲ, ರಾಜ್ಯದ ಹಲವು ಪ್ರವಾಸಿ ತಾಣಗಳು ನಮ್ಮನ್ನು ಕೈಬೀಸಿ ಕರೆಯುತ್ತವೆ. ಇನ್ನೇನು ಜೂನ್‌ ತಿಂಗಳಿಗೆ ಕೆಲವೇ ದಿನಗಳು ಬಾಕಿ ಇದ್ದು ಟ್ರಿಪ್‌ ಮಾಡಲು ಬೆಸ್ಟ್‌ ಎನ್ನಿಸುವ ತಾಣಗಳ ಪಟ್ಟಿ ಇಲ್ಲಿದೆ.

ಮಳೆಯಲ್ಲಿ ಜಾಲಿರೈಡ್‌ ಹೋಗೋದು ನಿಮಗೂ ಇಷ್ಟನಾ? ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 12 ಜಾಗಗಳಿವು
ಮಳೆಯಲ್ಲಿ ಜಾಲಿರೈಡ್‌ ಹೋಗೋದು ನಿಮಗೂ ಇಷ್ಟನಾ? ಜೂನ್‌ ತಿಂಗಳಲ್ಲಿ ಪ್ರವಾಸ ಮಾಡಲು ಬೆಸ್ಟ್‌ ಎನ್ನಿಸುವ ಕರ್ನಾಟಕದ 12 ಜಾಗಗಳಿವು

ಮಳೆಗಾಲ ಎಂದರೆ ಯಾರಿಗಿಷ್ಟವಿಲ್ಲ ಹೇಳಿ. ತಣ್ಣನೆಯ ವಾತಾವರಣ, ಹಸಿರು ಹಾಸಿದ ಬೆಟ್ಟ ಗುಡ್ಡಗಳು, ಗುಡುಗಿನ ಸದ್ದಿಗೆ ನಲಿದಾಡುವ ನವಿಲು-ಸಾರಂಗ, ಮೈದುಂಬಿ ಹರಿಯುವ ಜಲಪಾತಗಳು, ಬಳಕುವ ಬಳ್ಳಿಯಂತೆ ಸಾಗುವ ನದಿ ಹೀಗೆ ಪ್ರಕೃತಿಯೇ ನಲಿದಾಡುವ ಈ ಸಮಯದಲ್ಲಿ ಪ್ರವಾಸ ಹೋಗಲು ಮನಸ್ಸು ಹಾತೊರೆಯುತ್ತದೆ. ತಣ್ಣನೆ ಜಿನುಗುವ ಮಳೆಯಲ್ಲಿ, ಮಂಜು ಮುಸುಕಿದ ವಾತಾವರಣದಲ್ಲಿ ಫ್ರೆಂಡ್ಸ್‌ ಜೊತೆ ಜಾಲಿರೈಡ್‌ ಹೋಗೋ ಮಜಾನೇ ಬೇರೆ. ಇನ್ನೇನು ಕಣ್ಮುಚ್ಚಿ ತೆರೆಯುವುದರಲ್ಲಿ ಜೂನ್‌ ತಿಂಗಳು ಬಂದೇ ಬಿಡುತ್ತದೆ. ನೀವು ಪ್ರವಾಸ ಪ್ರಿಯರಿರಾಗಿದ್ದರೆ ಜೂನ್‌ ತಿಂಗಳ ಪ್ರವಾಸವನ್ನು ಈಗಲೇ ಪ್ಲಾನ್‌ ಮಾಡಿ. ಜೂನ್‌ನಲ್ಲಿ ಕರ್ನಾಟಕದಲ್ಲಿ ನೋಡಬಹುದಾದ ಬೆಸ್ಟ್‌ ತಾಣಗಳ ಪಟ್ಟಿ ಇಲ್ಲಿದೆ ನೋಡಿ.

ಟ್ರೆಂಡಿಂಗ್​ ಸುದ್ದಿ

ಸಕಲೇಶಪುರ

ಹಾಸನ ಜಿಲ್ಲೆಯ ಸಕಲೇಶಪುರ ಜೂನ್‌ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ. ಇಲ್ಲಿನ ಶೆಟ್ಟಿಹಳ್ಳಿ ಚರ್ಚ್‌, ಮಂಜರಾಬಾದ್‌ ಕೋಟೆ, ಜೇನುಕಲ್ಲು ಗುಡ್ಡ ಸೇರಿದಂತೆ ಹಲವು ಬೆಟ್ಟ-ಗುಡ್ಡಗಳು, ಜಲಪಾತಗಳಿಂದ ಕೂಡಿರುವ ಸುಂದರ ಪ್ರವಾಸಿ ತಾಣವಿದು. ಹಸಿರು ಪ್ರಕೃತಿಯ ನಡುವೆ ಇರುವ ಸಕಲೇಶಪುರ ಜೂನ್‌ ತಿಂಗಳ ಪ್ರವಾಸಕ್ಕೆ ಹೇಳಿ ಮಾಡಿಸಿದ ತಾಣ.

ಸಕಲೇಶಪುರ ಬೆಂಗಳೂರಿನಿಂದ 220 ಕಿಲೋಮೀಟರ್‌ ದೂರದಲ್ಲಿದೆ. ಇಲ್ಲಿಗೆ ಬಸ್‌, ರೈಲ್‌, ಸ್ವಂತ ವಾಹನದ ಮೂಲಕವೂ ಹೋಗಬಹುದು.

ಕೊಡಗು

ಕರ್ನಾಟಕ ಕಾಶ್ಮೀರ ಎಂದೇ ಖ್ಯಾತಿ ಆಗಿರುವ ಕೊಡುಗ ಅಥವಾ ಕೂರ್ಗ್‌ಗೆ ನೀವು ಜೂನ್‌ ತಿಂಗಳಿನಲ್ಲಿ ಪ್ರವಾಸ ಆಯೋಜಿಸಿದ್ದರೆ ಸ್ವರ್ಗವನ್ನೇ ಕಣ್ತುಂಬಿಕೊಳ್ಳಬಹುದು. ಸುತ್ತಲೂ ಮಂಜು ಹಾಸಿರುವ ಹಸಿರು ಗುಡ್ಡ ಬೆಟ್ಟ ನಡುವೆ ಹರಿಯುವ ಜರಿ ತೊರೆಗಳು ನಿಮ್ಮನ್ನು ಅನ್ಯಲೋಕಕ್ಕೆ ಹೋದಂತ ಅನುಭವ ಸಿಗುತ್ತವೆ ಮಾಡುತ್ತದೆ.

ಆಗುಂಬೆ

ಕರ್ನಾಟಕದ ಚಿರಾಪುಂಜಿ ಎಂದು ಕರೆಯುವ ಆಗುಂಬೆ ಮಳೆಗಾಲದ ಟ್ರಿಪ್‌ಗೆ ಹೇಳಿ ಮಾಡಿಸಿದ ಜಾಗ. ದಟ್ಟ ಕಾಡು, ಜೀರುಂಡೆಗಳ ಸದ್ದು, ಜೋರಾಗಿ ಸುರಿಯುವ ಮಳೆ ಇವೆಲ್ಲವೂ ನಿಮ್ಮ ಕಣ್ಮನ ತುಂಬುವಂತೆ ಮಾಡುವುದು ಸುಳ್ಳಲ್ಲ.

ಹಂಪಿ

ಹಂಪಿ ಪ್ರವಾಸಕ್ಕೆ ಜೂನ್‌ ತಿಂಗಳು ಹೇಳಿ ಮಾಡಿಸಿದ್ದು. ಬೇಸಿಗೆಯಲ್ಲಿ ನೀವು ಹಂಪಿಯಲ್ಲಿ ಸುತ್ತಾಡುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಜೂನ್‌ ಪ್ಲಾನ್‌ ಮಾಡಿ. ತಂಪಾದ ವಾತಾವರಣ, ಸಣ್ಣಗೆ ಜಿನುಗುವ ಮಳೆಯ ನಡುವೆ ಈ ಐತಿಹಾಸಿಕ ತಾಣವನ್ನು ನೋಡುವ ಖುಷಿಯೇ ಬೇರೆ.

ಮೈಸೂರು

ಮೈಸೂರಿನಲ್ಲೂ ಕೂಡ ಮಳೆಗಾಲದಲ್ಲಿ ನೋಡಲು ಬೆಸ್ಟ್‌ ಎನ್ನಿಸುವ ತಾಣಗಳಿವೆ. ಇಲ್ಲಿನ ಬಂಡೀಪುರ ಅಭಯಾರಣ್ಯ, ಹಿಮವದ್‌ ಗೋಪಾಲಸ್ವಾಮಿ ಬೆಟ್‌, ಊಟಿ ಮೈಸೂರ ಹೆದ್ದಾರಿ ಹೀಗೆ ಮಳೆ ಸರಿಯುವ ಜೂನ್‌ ತಿಂಗಳನಲ್ಲಿ ಈ ಸ್ಥಳಗಳಿಗೆ ತಪ್ಪದೇ ಭೇಟಿ ನೀಡಬೇಕು.

ಜೋಗ ಜಲಪಾತ

ಶಿವಮೊಗ್ಗ ಜಿಲ್ಲೆಯ ಜೋಗ ಜಲಪಾತ ಜಗದ್ವಿಖ್ಯಾತ. ಇಲ್ಲಿ ಎತ್ತರದಿಂದ ಧುಮುಕುವ ರಾಜ, ರಾಣಿ, ರೋರರ್‌, ರಾಕೆಟ್‌ ಅನ್ನು ನೋಡಲು ನೀವು ಜೂನ್‌ ತಿಂಗಳಲ್ಲಿ ಭೇಟಿ ನೀಡಬಹುದು. ಮಳೆ ಸರಿಯುವಾಗ ಮಲೆನಾಡಿನ ಸೌಂದರ್ಯವನ್ನು ನೋಡುವುದೇ ಚೆಂದ.

ಬಂಡೀಪರ

ಕಾಡು, ಪ್ರಾಣಿ-ಪಕ್ಷಿಗಳ ಜೊತೆ ಸಮಯ ಕಳೆಯುವುದು ನಿಮಗೆ ಇಷ್ಟ ಎಂದಾದರೆ ನೀವು ಬಂಡೀಪುರಕ್ಕೆ ಟ್ರಿಪ್‌ಗೆ ಹೋಗಬಹುದು. ಹುಲಿ, ಆನೆಯಂತಹ ಪ್ರಾಣಿಗಳನ್ನು ಇಲ್ಲಿ ಕಣ್ತುಂಬಿಕೊಳ್ಳಬಹುದು. ಹಸಿರಿನ ಜೊತೆಗೆ ಮಂಜು ಮುಸುಕಿದ ವಾತಾವರಣ ನಿಮ್ಮ ಮನಸ್ಸಿಗೆ ಇಷ್ಟ ಆಗೋದ್ರಲ್ಲಿ ಅನುಮಾನವಿಲ್ಲ. ಅಷ್ಟೇ ಅಲ್ಲ ಶ್ರೀಗಂದ ಸೇರಿದಂತೆ ವಿವಿಧ ರೀತಿಯ ಮರಗಳು ಇಲ್ಲಿನ ಸೌಂದರ್ಯವನ್ನು ಇನ್ನಷ್ಟು ಹೆಚ್ಚಿಸಿವೆ.

ಚಿಕ್ಕಮಗಳೂರು

ಕಾಫಿನಾಡು ಚಿಕ್ಕಮಗಳೂರು ಕೂಡ ಜೂನ್‌ ತಿಂಗಳ ಟ್ರಿಪ್‌ಗೆ ಹೇಳಿ ಮಾಡಿಸಿದ ತಾಣ. ಇಲ್ಲಿ ನೋಡಲು ಒಂದಲ್ಲ ಎರಡಲ್ಲ ಹತ್ತಾರು ತಾಣಗಳಿದ್ದು ನಿಮಗೆ ಸಖತ್‌ ಥ್ರಿಲ್ಲಿಂಗ್‌ ಎಕ್ಸ್‌ಪೀರಿಯೆನ್ಸ್‌ ಸಿಗುವುದರಲ್ಲಿ ಎರಡು ಮಾತಿಲ್ಲ.

ಚಾರ್ಮಾಡಿ

ರಸ್ತೆಯ ಇಕ್ಕೆಲಗಳಲ್ಲೂ ಹಸಿರ ಬೆಟ್ಟಗಳು, ಮಧ್ಯೆ ಮಧ್ಯೆ ಹರಿಯುವ ಝರಿ, ಇಬ್ಬನಿ ತುಂಬಿದ ವಾತಾವರಣದಲ್ಲಿ ನೀವು ಜಾಲಿ ರೈಡ್‌ ಹೋಗಬೇಕು ಅಂತಿದ್ರೆ ನಿಮಗೆ ಬೆಸ್ಟ್‌ ತಾಣ ಚಾರ್ಮಾಡಿ. ಮಳೆಗಾಲದಲ್ಲಿ ಚಾರ್ಮಾಡಿಯ ಸೊಬಗನ್ನು ಸವಿದವರಿಗಷ್ಟೇ ಗೊತ್ತು.

ಕುದುರೆಮುಖ

ಪ್ರಕೃತಿಯ ವಿಸ್ಮಯಗಳನ್ನು ನೀವು ಕಣ್ತುಂಬಿಕೊಳ್ಳಲು ಬಯಸಿದರೆ ಕುದುರೆಮುಖಕ್ಕೆ ಭೇಟಿ ನೀಡಬೇಕು. ಸದಾ ಮಂಜು ಮುಸುಕಿರುವ ಬೆಟ್ಟ ಗುಡ್ಡಗಳ ಮಧ್ಯೆ ಒಂದಿಷ್ಟು ಹೊತ್ತು ಸಮಯ ಕಳೆದರೆ ಜಗತ್ತೇ ಬೇಡ ಗುರು, ಇಲ್ಲೇ ಇದ್ದು ಬಿಡೋಣ ಎಂದು ಅನ್ನಿಸದೇ ಇರದು.

ಬಾದಾಮಿ

ಐತಿಹಾಸಿಕ ತಾಣಗಳನ್ನು ನೋಡುವುದು ನಿಮಗೆ ಇಷ್ಟ ಎಂದಾದರೆ ನೀವು ಬಾದಾಮಿಗೂ ಭೇಟಿ ನೀಡಬಹುದು. ಇದು ಕೂಡ ಜೂನ್‌ ತಿಂಗಳಿನಲ್ಲಿ ಭೇಟಿ ನೀಡಲು ಬೆಸ್ಟ್‌ ಎನ್ನಿಸುವ ಪ್ರವಾಸಿ ತಾಣ.

ದಾಂಡೇಲಿ

ಮಳೆ ಆರಂಭವಾಗುವ ಈ ಹೊತ್ತಿನಲ್ಲಿ ದಾಂಡೇಲಿಯ ಕಾಡುಗಳಲ್ಲಿ ಕಾಲ ಕಳೆಯುವ ಮಜಾವೇ ಬೇರೆ. ಮಳೆಗಾಲದಲ್ಲಿ ಅದರಲ್ಲೂ ಜೂನ್‌ ತಿಂಗಳಲ್ಲಿ ಭೇಟಿ ನೀಡಲು ಹೇಳಿ ಮಾಡಿಸಿದ ತಾಣ ದಾಂಡೇಲಿ.

ಕಪ್ಪತಗುಡ್ಡ

ನೀವು ಉತ್ತರ ಕರ್ನಾಟಕ ಭಾಗದಲ್ಲಿದ್ದೂ ಮಲೆನಾಡಿನ ಸೌಂದರ್ಯವನ್ನು ಸವಿಬೇಕು ಅಂದ್ರೆ ಕಪ್ಪತಗುಡ್ಡಕ್ಕ ಭೇಟಿ ನೀಡಬೇಕು. ಈ ಹಸಿರು ಬೆಟ್ಟ ನಿಜಕ್ಕೂ ಉತ್ತರ ಕರ್ನಾಟಕದಲ್ಲಿ ಇದ್ಯಾ ಎಂದು ನಿಮಗೆ ಅನ್ನಿಸದೇ ಇರದು.

 

(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್‌. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)