ಕನ್ನಡ ಸುದ್ದಿ  /  Lifestyle  /  Women Health What Is The Reason For White Discharge Issue Home Remedy To Get Rid Of Health Issue Rsm

Women Health: ಬಹುತೇಕ ಮಹಿಳೆಯರು ಎದುರಿಸುವ ಬಿಳಿ ಮುಟ್ಟಿನ ಸಮಸ್ಯೆಗೆ ಕಾರಣಗಳೇನು? ಮನೆಮದ್ದಿನಿಂದ ಪರಿಹಾರ ಸಾಧ್ಯವೇ?

Women Health: ಬಿಳಿ ಮುಟ್ಟು, ಗರ್ಭಕೋಶದ ಸಮಸ್ಯೆ, ಬ್ರೆಸ್ಟ್‌ ಕ್ಯಾನ್ಸರ್‌ ಸೇರಿದಂತೆ ಮಹಿಳೆಯರನ್ನು ಅನೇಕ ಸಮಸ್ಯೆಗಳು ಕಾಡುತ್ತವೆ. ಆದರೆ ಕೆಲವೊಂದು ಗಂಭೀರವಾಗಿದ್ದರೆ, ಇನ್ನೂ ಕೆಲವೊಂದು ಆರಂಭಿಕ ಹಂತದಲ್ಲೇ ತಿಳಿಯುತ್ತದೆ. ಇದರಿಂದ ನಾವು ಸುಲಭವಾಗಿ ಮನೆಮದ್ದುಗಳಿಂದಲೇ ಸಮಸ್ಯೆ ಪರಿಹರಿಸಿಕೊಳ್ಳಬಹುದು.

ಬಿಳಿಮುಟ್ಟಿನ ಸಮಸ್ಯೆಗೆ ಮನೆಮದ್ದು
ಬಿಳಿಮುಟ್ಟಿನ ಸಮಸ್ಯೆಗೆ ಮನೆಮದ್ದು (PC:‍ Freepik)

Women Health: ಮಹಿಳೆಯರು ಎದುರಿಸುವ ಸಮಸ್ಯೆಗಳಲ್ಲಿ ವೈಟ್‌ ಡಿಸ್ಚಾರ್ಜ್‌ ಸಮಸ್ಯೆ ಕೂಡಾ ಒಂದು. ಬಿಳಿ ಮುಟ್ಟು ಅಥವಾ ಬಿಳಿ ಸೆರಗು ಎಂದೇ ಕರೆಯಲಾಗುವ ಈ ಸಮಸ್ಯೆಯಿಂದ ಮಹಿಳೆಯರು ಇನ್ನಷ್ಟು ಸಮಸ್ಯೆಗಳನ್ನು ಎದುರಿಸುತ್ತಾರೆ ಆದರೆ ಇವುಗಳನ್ನು ಆರಂಭದಲ್ಲೇ ಪತ್ತೆ ಹಚ್ಚಿ ಚಿಕಿತ್ಸೆ ನೀಡದಿದ್ದರೆ ಸೋಂಕು ಇನ್ನಷ್ಟು ಹೆಚ್ಚಾಗುತ್ತದೆ.

ಈ ರೀತಿಯ ಸಮಸ್ಯೆಗಳು ಕಾಣಿಸಿಕೊಳ್ಳಲು ನಾನಾ ಕಾರಣಗಳಿವೆ. ಪೋಷಕಾಂಶಗಳ ಕೊರತೆ, ಯೋನಿ ಪ್ರದೇಶವನ್ನು ಸ್ವಚ್ಛವಾಗಿಟ್ಟುಕೊಳ್ಳುವ ಕಾರಣ, ಹಾರ್ಮೋನ್ಸ್‌ ವ್ಯತ್ಯಾಸದಿಂದ ಕೂಡಾ ಈ ಸಮಸ್ಯೆ ಉದ್ಭವಿಸಬಹುದು. ಇದರಿಂದ ತೀವ್ರ ಆಲಸ್ಯ, ತಲೆ ತಿರುಗುವಿಕೆ, ಯೋನಿ ಪ್ರದೇಶದಲ್ಲಿ ತುರಿಕೆ, ದೌರ್ಬಲ್ಯ, ಖಾಸಗಿ ಭಾಗಗಳಿಂದ ವಾಸನೆ, ತಲೆನೋವು, ಮಲಬದ್ಧತೆ ಹಾಗೂ ಇನ್ನಿತರ ಸಮಸ್ಯೆಗಳು ಕಾಡಬಹುದು.

ಬಿಳಿ ಮುಟ್ಟು ಕೆಲವೊಂದು ಸಂದರ್ಭಗಳಲ್ಲಿ ಒಳ್ಳೆಯದೆಂದೇ ಹೇಳಬೇಕು. ಏಕೆಂದರೆ ಇದು ಯೋನಿಯಲ್ಲಿ ಬ್ಯಾಕ್ಟೀರಿಯಾ ಮತ್ತು ಶಿಲೀಂಧ್ರಗಳ ಬೆಳವಣಿಗೆಯನ್ನು ಕಡಿಮೆ ಮಾಡುತ್ತದೆ. ಸಂಭೋಗದ ಸಮಯದಲ್ಲಿ ಲೂಬ್ರಿಕೇಶನ್ ಆಗಿ ಕಾರ್ಯ ನಿರ್ವಹಿಸುತ್ತದೆ. ಆದರೆ ಇದು ಹೆಚ್ಚಾದರೆ ಅಪಾಯ.

ವೈಟ್‌ ಡಿಸ್ಚಾರ್ಜ್‌ ಸಮಸ್ಯೆಗೆ ಸುಲಭವಾದ ಮನೆಮದ್ದುಗಳು ಈ ರೀತಿ ಇದೆ

ತುಳಸಿ: ನಾವು ದೇವರೆಂದು ಪೂಜಿಸುವ ತುಳಸಿಯಲ್ಲಿ ನಾನಾ ಆರೋಗ್ಯ ಪ್ರಯೋಜನಗಳಿವೆ. ತುಳಸಿಯನ್ನು ಹಲವಾರು ಸಮಸ್ಯೆಗಳಿಗೆ ಮನೆಮದ್ದಾಗಿ ಬಳಸಬಹುದು. ತುಳಸಿ ಎಲೆಗಳನ್ನು ಶುದ್ಧೀಕರಿಸಿ ನೀರಿನೊಂದಿಗೆ ಪೇಸ್ಟ್‌ ಮಾಡಿಕೊಳ್ಳಿ. ಅದರೊಂದಿಗೆ ಸ್ವಲ್ಪ ಜೇನುತುಪ್ಪ ಬೆರೆಸಿ ವಾರಕ್ಕೆ ಎರಡು ಬಾರಿ ಕುಡಿಯಿರಿ. ಅಥವಾ ತುಳಸಿ ಎಲೆಗಳನ್ನು ಹಾಲಿನಲ್ಲಿ ಸೇರಿಸಿ ಕುಡಿಯಬಹುದು. ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಇದನ್ನು ತಿನ್ನುವುದರಿಂದ ನಮ್ಮ ದೇಹವು ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ. ರೋಗನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಪ್ರತಿದಿನ 2-3 ತುಳಸಿ ಎಲೆಗಳನ್ನು ಜಗಿದು ತಿಂದರೆ ಇನ್ನೂ ಒಳ್ಳೆಯದು.

ಆಮ್ಲಾ: ಇದರಲ್ಲಿ ವಿಟಮಿನ್ ಸಿ ಸಮೃದ್ಧವಾಗಿದೆ. ಪ್ರತಿದಿನ ಆಮ್ಲಾ ಸೇವಿಸುವುದರಿಂದ ನಮ್ಮ ದೇಹದಲ್ಲಿ ಸಾಕಷ್ಟು ಪೋಷಕಾಂಶಗಳು ದೊರೆಯುತ್ತದೆ. ರೋಗ ನಿರೋಧಕ ಶಕ್ತಿಯೂ ಹೆಚ್ಚುತ್ತದೆ. ಆಮ್ಲಾ ಜ್ಯೂಸ್‌ ಕೂಡಾ ಸೇವಿಸಬಹುದು. ಇದರಿಂದ ಮಹಿಳೆಯರಿಗೆ ಬಿಳಿ ಮುಟ್ಟಿನ ಸಮಸ್ಯೆ ಕಡಿಮೆಯಾಗುತ್ತದೆ.

ಮೆಂತ್ಯ: ಬಿಳಿಮುಟ್ಟಿನ ಸಮಸ್ಯೆಯನ್ನು ಕಡಿಮೆ ಮಾಡಲು ಮೆಂತ್ಯ ಕೂಡಾ ಸಹಕಾರಿ. ಅರ್ಧ ಲೀಟರ್‌ ನೀರಿನಲ್ಲಿ ಮೆಂತ್ಯ ಕಾಳುಗಳನ್ನು ಸೇರಿಸಿ, ಅರ್ಧದಷ್ಟು ಕುದಿಸಿ. ಬೆಚ್ಚಗಿರುವಾಗಲೇ ನೀರನ್ನು ಕುಡಿಯಿರಿ. ಶೀತದ ಸಮಸ್ಯೆ ಇರುವವರು ಪ್ರತಿದಿನ ಮೆಂತ್ಯ ನೀರು ಸೇವಿಸುವುದು ಬೇಡ.

ಸೀಬೆ ಎಲೆಗಳು: ಸೀಬೆ ಎಲೆಗಳನ್ನು ಸ್ವಚ್ಛವಾಗಿ ತೊಳೆದು ಅದನ್ನು ಒಂದಿಷ್ಟು ನೀರಿನಲ್ಲಿ ಕುದಿಸಿ, ದಿನಕ್ಕೆ 2 ಬಾರಿ ಕುಡಿದರೆ ಸಮಸ್ಯೆ ಕಡಿಮೆ ಆಗುತ್ತದೆ.

ಸಮಸ್ಯೆ ಆರಂಭಿಕ ಹಂತದಲ್ಲಿದ್ದರೆ ನೀವು ಈ ಮನೆಮದ್ದುಗಳನ್ನು ಪ್ರಯತ್ನಿಸಬಹುದು. ಹೆಚ್ಚಾಗಿದ್ದರೆ ತಪ್ಪದೆ ವೈದ್ಯರನ್ನು ಸಂಪರ್ಕಿಸಿ.