Honda Activa EV: ನ 27ರಂದು ಹೋಂಡಾ ಆಕ್ಟಿವಾ ಇವಿ ಅನಾವರಣ; ಭಾರತದ ವಾಹನ ಮಾರುಕಟ್ಟೆಯಲ್ಲಿ ಸದ್ಯ ಇದರದ್ದೇ ಬಿಸಿಬಿಸಿ ಚರ್ಚೆ
Honda Activa Electric Scooter : ಸದ್ಯ ಭಾರತದ ವಾಹನಲೋಕದಲ್ಲಿ ಹೋಂಡಾ ಆಕ್ಟಿವಾ ಇವಿ ಸ್ಕೂಟರ್‌ನದ್ದೇ ಚರ್ಚೆ. ಈ ಸ್ಕೂಟರ್ ಆಗಮನವು ಇತರೆ ಸ್ಕೂಟರ್‌ಗಳ ಮಾರಾಟದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಬನ್ನಿ ಮುಂಬರುವ ಆಕ್ಟಿವಾ ಇವಿ ಬಗ್ಗೆ ಸದ್ಯ ಲಭ್ಯವಿರುವ ಮಾಹಿತಿ ತಿಳಿದುಕೊಳ್ಳೋಣ.
Honda Activa Electric Scooter : ಹೋಂಡಾ ಮೋಟಾರ್ ಕಂಪನಿ ಶೀಘ್ರದಲ್ಲೇ ಭಾರತದಲ್ಲಿ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಬಿಡುಗಡೆ ಮಾಡಲಿದೆ. ಹೋಂಡಾ ಆಕ್ಟಿವಾದ ಇವಿ ಆವೃತ್ತಿಯನ್ನು ಪರಿಚಯಿಸುವ ಸೂಚನೆ ನೀಡಿದೆ. ಭಾರತೀಯ ಮಾರುಕಟ್ಟೆಯಲ್ಲಿ ಇವಿ ಬಿಡುಗಡೆ ದಿನಾಂಕವನ್ನೂ ತಿಳಿಸಿದೆ. ಹೋಂಡಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ನವೆಂಬರ್ 27 ರಂದು ಭಾರತೀಯ ಮಾರುಕಟ್ಟೆಗೆ ಪರಿಚಯಿಸಲಿದೆ. ಇದಕ್ಕೆ ಸಂಬಂಧಪಟ್ಟಂತೆ ಮಾಧ್ಯಮಗಳಿಗೂ ಆಹ್ವಾನ ಕಳುಹಿಸಲಾಗಿದೆ. ಈ ಎಲೆಕ್ಟ್ರಿಕ್ ಸ್ಕೂಟರ್ ಜನವರಿಯಲ್ಲಿ ನಡೆಯಲಿರುವ ಇಂಡಿಯಾ ಮೊಬಿಲಿಟಿ ಗ್ಲೋಬಲ್ ಎಕ್ಸ್‌ಪೋ 2025ನಲ್ಲಿ ಜಾಗತಿಕವಾಗಿ ಲಾಂಚ್ ಆಗುವ ನಿರೀಕ್ಷೆಯಿದೆ.
ಈ ಆಕ್ಟಿವಾ ಇವಿ ಕುರಿತು ನವೆಂಬರ್ 27ರಂದು ಹೆಚ್ಚಿನ ವಿವರ ತಿಳಿದುಬರಲಿದೆ. Activa EV ಈಗ ಆಟೋಮೊಬೈಲ್ ಜಗತ್ತಿನಲ್ಲಿ ಹಾಟ್ ಟಾಪಿಕ್ ಆಗಿದೆ. ಆದರೆ ಈ ಎಲೆಕ್ಟ್ರಿಕ್ ಸ್ಕೂಟರ್ ಆಕ್ಟಿವಾ ಇವಿ ಆವೃತ್ತಿಯಾಗಿರುತ್ತದೆ ಎಂದು ಕಂಪನಿಯು ಇನ್ನೂ ಹೇಳಿಲ್ಲ. ಆದರೆ ಇದು ಬಹುತೇಕ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಎನ್ನುತ್ತಾರೆ ಮಾರುಕಟ್ಟೆ ತಜ್ಞರು. ಹೊಸ ಹೆಸರು, ಹೊಸ ರೂಪ, ಹೊಸ ವಿನ್ಯಾಸದೊಂದಿಗೆ ನೂತನ ಇವಿ ಬಂದರೂ ಅಚ್ಚರಿಯಿಲ್ಲ.
ಸದ್ಯಕ್ಕೆ ಈ ಎಲೆಕ್ಟ್ರಿಕ್ ದ್ವಿಚಕ್ರ ವಾಹನದ ಬಗ್ಗೆ ಹೆಚ್ಚಿ ವಿವರಗಳು ಲಭ್ಯವಿಲ್ಲ. ಅದರ ಕಾರ್ಯಕ್ಷಮತೆ ತನ್ನ 110cc ಸ್ಕೂಟರ್‌ನಂತೆಯೇ ಇರುತ್ತದೆ ಎಂದು ಕಂಪನಿ ಹೇಳಿಕೊಂಡಿದೆ. ಇದು ಆಕ್ಟಿವಾ 110 ಎಲೆಕ್ಟ್ರಿಕ್ ರೂಪಾಂತರವಾಗಿ ಬಿಡುಗಡೆಯಾಗುವ ನಿರೀಕ್ಷೆಯಿದೆ. ಈ ಎಲೆಕ್ಟ್ರಿಕ್ ಸ್ಕೂಟಿಯ ಅಂದಾಜು ಬೆಲೆ ಮತ್ತು ಫೀಚರ್‌ಗಳು ಏನೇನೂ ಇರಬಹುದು ಎಂದು ಆಟೋ ಮಾರುಕಟ್ಟೆಯಲ್ಲಿ ಚರ್ಚೆಯಾಗುತ್ತಿದೆ.
ಹೋಂಡಾ ಆಕ್ಟಿವಾ ಇವಿಯ ಪ್ರಮುಖ ವೈಶಿಷ್ಟ್ಯವೆಂದರೆ ಬ್ಯಾಟರಿ ಸೈಕಲ್ ವ್ಯವಸ್ಥೆ. ಅಂದರೆ, ನೀವು ಖಾಲಿ ಬ್ಯಾಟರಿಯನ್ನು ನೀಡಿ ಸಂಪೂರ್ಣವಾಗಿ ಚಾರ್ಜ್ ಮಾಡಿರುವ ಬ್ಯಾಟರಿಯನ್ನು ಹಾಕಿಕೊಳ್ಳಬಹುದು. ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಒಂದು ಸಂಪೂರ್ಣ ಚಾರ್ಜ್‌ನಲ್ಲಿ 100 ರಿಂದ 150 ಕಿಲೋಮೀಟರ್ ವ್ಯಾಪ್ತಿಯನ್ನು ನೀಡುವ ನಿರೀಕ್ಷೆಯಿದೆ. ಅಷ್ಟೇ ಅಲ್ಲ, ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಸಂಪೂರ್ಣ ಡಿಜಿಟಲ್ ಟಚ್‌ಸ್ಕ್ರೀನ್ ಇನ್‌ಸ್ಟ್ರುಮೆಂಟಲ್ ಕನ್ಸೋಲ್, ಕೀಲೆಸ್ ಸ್ಟಾರ್ಟ್, ಸ್ಟಾಪ್ ಮುಂತಾದ ಫೀಚರ್‌ಗಳನ್ನೂ ಹೊಂದಿರಬಹುದು. ಇದರ ಎಕ್ಸ್ ಶೋ ರೂಂ ಬೆಲೆ 1 ಲಕ್ಷದಿಂದ 1.20 ಲಕ್ಷ ರೂ ಆಸುಪಾಸಿನಲ್ಲಿ ಇರಬಹುದು.
ಹೋಂಡಾ ಆಕ್ಟಿವಾ ಎಲೆಕ್ಟ್ರಿಕ್ ಸ್ಕೂಟರ್ ಮಾರಾಟವು 2025ರಲ್ಲಿ ಪ್ರಾರಂಭವಾಗುವ ಸಾಧ್ಯತೆಯಿದೆ. ಇದು ಭಾರತೀಯ ಮಾರುಕಟ್ಟೆಯಲ್ಲಿ ಮೊದಲು ಬಿಡುಗಡೆಯಾಗಲಿದೆ. ನಂತರ ಇಂಡೋನೇಷ್ಯಾ, ಜಪಾನ್ ಮತ್ತು ಐರೋಪ್ಯ ದೇಶಗಳಲ್ಲಿ ಮಾರಾಟವಾಗುವ ಸೂಚನೆಯಿದೆ. ಭಾರತೀಯ ಮಾರುಕಟ್ಟೆಯಲ್ಲಿ ಬಿಡುಗಡೆಯಾದ ನಂತರ ದೇಶದ ಎಲೆಕ್ಟ್ರಿಕ್ ಸ್ಕೂಟರ್ ಮಾರುಕಟ್ಟೆಯು ಮತ್ತಷ್ಟು ಪ್ರಗತಿ ಕಾಣುವ ಸಾಧ್ಯತೆಯಿದೆ. ಹೋಂಡಾ ಆಕ್ಟಿವಾ ಇವಿ ಅಸ್ತಿತ್ವದಲ್ಲಿರುವ ಎಲೆಕ್ಟ್ರಿಕ್ ಸ್ಕೂಟರ್‌ಗಳಿಗೆ ಕಠಿಣ ಸ್ಪರ್ಧೆಯನ್ನು ನೀಡಲಿದೆ. ಈಗಾಗಲೇ ಮಾರುಕಟ್ಟೆಯಲ್ಲಿ ಓಲಾ ಇ ಸ್ಕೂಟರ್‌ಗಳ, ಟಿವಿಎಸ್ ಇಸ್ಕೂಟರ್ ಸೇರಿದಂತೆ ಹಲವು ಸ್ಕೂಟರ್‌ಗಳಿವೆ. ಸದ್ಯದ ಪೆಟ್ರೋಲ್ ದುಬಾರಿಯಾಗಿರುವುದರಿಂದ ಜನರಿಗೆ ಎಲೆಕ್ಟ್ರಿಕ್ ಸ್ಕೂಟರ್‌ಗಳೇ ಆಪ್ತವಾಗಿ ಕಾಣಿಸುತ್ತಿವೆ.