Opening Bell: ಏಷ್ಯಾ ಷೇರುಗಳಿಗೆ ಚೀನಾದ ಚಿಂತೆ, ವಾಲ್ ಸ್ಟ್ರೀಟ್‌ಗೆ ಬಡ್ಡಿ ಭಯ, ಭಾರತದ ನಿಫ್ಟಿ ಸೆನ್ಸೆಕ್ಸ್‌ನಲ್ಲಿ ಈ ಷೇರುಗಳನ್ನು ಗಮನಿಸಿ
Stock Market Opening Bell: ಎನ್‌ಎಸ್‌ಇ ಅಂತಾರಾಷ್ಟ್ರೀಯ ಷೇರುಪೇಟೆಯಲ್ಲಿ ಭಾರತದ ಗಿಫ್ಟ್ ನಿಫ್ಟಿಯು ಬೆಳಗ್ಗೆ 7:54 ಗಂಟೆಗೆ ಶೇಕಡ 0.07ರಷ್ಟು ಇಳಿಕೆ ಕಂಡು 19,398.50ಕ್ಕೆ ವಹಿವಾಟು ಮುಗಿಸಿದೆ.
ಬೆಂಗಳೂರು: ಗುರುವಾರದ ವಹಿವಾಟಿನಲ್ಲಿ ಭಾರತೀಯ ಷೇರುಗಳು ಮಂದಗತಿಯ ಆರಂಭಕ್ಕೆ ಮುನ್ನುಡಿ ಬರೆಯುವ ಸಾಧ್ಯತೆಯಿದೆ. ಚೀನಾದ ಆರ್ಥಿಕತೆ ಕುರಿತು ಏಷ್ಯಾ ಷೇರುಪೇಟೆಯಲ್ಲಿ ಆತಂಕ ಉಂಟಾಗಿರುವುದು ಮತ್ತು ಅಮೆರಿಕದ ಕೇಂದ್ರ ಬ್ಯಾಂಕ್ ಬಡ್ಡಿದರ ಹೆಚ್ಚಿಸಬಹುದು ಎಂದು ವಾಲ್ ಸ್ಟ್ರೀಟ್ ಷೇರುಪೇಟೆ ಭಯದಲ್ಲಿರುವುದು ಭಾರತದ ಫ್ಲಾಟ್ ಆರಂಭಕ್ಕೆ ಕಾರಣವಾಗುವ ಸಾಧ್ಯತೆಯಿದೆ.
ಎನ್‌ಎಸ್‌ಇ ಅಂತಾರಾಷ್ಟ್ರೀಯ ಷೇರುಪೇಟೆಯಲ್ಲಿ ಭಾರತದ ಗಿಫ್ಟ್ ನಿಫ್ಟಿಯು ಬೆಳಗ್ಗೆ 7:54 ಗಂಟೆಗೆ ಶೇಕಡ 0.07ರಷ್ಟು ಇಳಿಕೆ ಕಂಡು 19,398.50ಕ್ಕೆ ವಹಿವಾಟು ಮುಗಿಸಿದೆ.
ಫೆಡರಲ್ ರಿಸರ್ವ್ ಬ್ಯಾಂಕ್‌ನ ಇತ್ತೀಚಿನ ಹಣಕಾಸು ನೀತಿ ಸಭೆಯಲ್ಲಿ ಸದಸ್ಯರು "ಭವಿಷ್ಯದಲ್ಲಿ ಬಡ್ಡಿದರ ಹೆಚ್ಚಿಸುವ ಅವಶ್ಯಕತೆ ಇದೆ" ಎಂದು ಅಭಿಪ್ರಾಯಪಟ್ಟ ಕೆಲವೇ ನಿಮಿಷಗಳಲ್ಲಿ ಅಮೆರಿಕದ ಷೇರುಪೇಟೆ ನಿನ್ನೆ ರಾತ್ರಿಯ ವಹಿವಾಟಿನಲ್ಲಿ ಕುಸಿತವಾಗಿದೆ.
ಚೀನಾದ ಅರ್ಥವ್ಯವಸ್ಥೆಯ ಕುರಿತು ಚಿಂತೆ ಉಂಟಾಗಿರುವುದರಿಂದ ಏಷ್ಯಾ ಷೇರುಪೇಟೆಯೂ ನಿನ್ನೆಯ ವಹಿವಾಟಿನಲ್ಲಿ ಇಳಿಕೆ ಕಂಡಿದೆ. ಎಂಎಸ್‌ಸಿಐ ಏಷ್ಯಾ ಎಕ್ಸ್ ಜಪಾನ್ ಸೂಚ್ಯಂಕವು ಶೇಕಡ 0.95ರಷ್ಟು ಇಳಿಕೆ ಕಂಡಿದೆ.
ಕಳೆದ ಎರಡು ಋತುವಿನಲ್ಲಿ ಭಾರತದ ನಿಫ್ಟಿ 50 ಮತ್ತು ಸೆನ್ಸೆಕ್ಸ್ ಸೂಚ್ಯಂಕಗಳು ಕೊಂಚ ಏರಿಕೆ ದಾಖಲಿಸಿವೆ. ಜಾಗತಿಕ ಮಾರುಕಟ್ಟೆಯ ತಲ್ಲಣಗಳಿಗೆ ಕಿವಿಮುಚ್ಚಿದಂತೆ ಭಾರತದ ಷೇರುಪೇಟೆಗಳು ಕಳೆದ ಎರಡು ಅವಧಿಯಲ್ಲಿ ವರ್ತಿಸಿದ್ದು ವಿಶೇಷ.
ಹೀಗಿದ್ದರೂ, ಭಾರತದ ಷೇರುಪೇಟೆ ಕಳೆದ ಮೂರು ವಾರಗಳಲ್ಲಿ ನಷ್ಟ ಅನುಭವಿಸಿದೆ. ಈ ಕಷ್ಟದ ಸಮಯದಲ್ಲಿಯೂ ಸ್ಮಾಲ್‌ಕ್ಯಾಪ್ ಮತ್ತು ಮಿಡ್‌ಕ್ಯಾಪ್ ಷೇರುಗಳು ತಮ್ಮ ಗೆಲುವಿನ ಸರಣಿಯನ್ನು ಮುಂದುವರೆಸಿವೆ.
ಜಾಗತಿಕ ಷೇರುಗಳಲ್ಲಿನ ಅಪಾಯ ಮತ್ತು ದೇಶೀಯ ಹಣದುಬ್ಬರ ಕಳವಳು ನಿವಾರಣೆಯಾಗುವ ತನಕ ಭಾರತದ ಷೇರುಪೇಟೆ ಇನ್ನೂ ಕೆಲವು ದಿನ ಇದೇ ರೀತಿ ಇರಲಿದೆ ಎಂದು ವಿಶ್ಲೇಷಕರು ಅಂದಾಜಿಸಿದ್ದಾರೆ.
ವಿದೇಶಿ ಸಾಂಸ್ಥಿಕ ಹೂಡಿಕೆದಾರರು ಬುಧವಾರ ನಿವ್ವಳ ಆಧಾರದ ಮೇಲೆ ಭಾರತೀಯ ಷೇರುಗಳನ್ನು ಖರೀದಿಸಿದ್ದಾರೆ. ನಿನ್ನೆ ವಿದೇಶಿ ಸಾಂಸ್ಥಿಕ ಹೂಡಿಕೆದಾರರು 7.23 ಶತಕೋಟಿ ರೂಪಾಯಿ (86.88 ದಶಲಕ್ಷ ಡಾಲರ್) ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ. ದೇಶೀಯ ಸಾಂಸ್ಥಿಕ ಹೂಡಿಕೆದಾರರು 24.06 ಶತಕೋಟಿ ರೂಪಾಯಿ ಮೌಲ್ಯದ ಷೇರುಗಳನ್ನು ಖರೀದಿಸಿದ್ದಾರೆ.
ಇಂದು ಈ ಷೇರುಗಳನ್ನು ಗಮನಿಸಿ
ಅದಾನಿ ಪವರ್: ಅದಾನಿ ಪವರ್‌ನ ಶೇಕಡ 8.1ರಷ್ಟು ಷೇರುಗಳನ್ನು 1.1 ಶತಕೋಟಿ ಡಾಲರ್‌ಗೆ ಬ್ಲಾಕ್ ಡೀಲ್ ಮೂಲಕ ಜಿಕ್ಯುಜಿ ಪಾರ್ಟರ್ನ್ಸ್ ಖರೀದಿಸಿದೆ ಎಂದು ಮೂಲಗಳು ತಿಳಿಸಿವೆ.
ಅರಬಿಂದೊ ಫಾರ್ಮಾ: ಔಷಧ ತಯಾರಿಕಾ ಕಂಪನಿಯು ವಿಐಐವಿ ಹೆಲ್ತ್‌ಕೇರ್‌ನಿಂದ ವಾಲೆಂಟರಿ ಲೈಸನ್ಸ್‌ನಡಿ ಎಚ್‌ಐವಿ ಟ್ರಿಪಲ್ ಕಾಂಬಿನೇಷನ್ ಉತ್ಪನ್ನವನ್ನು ಪರಿಚಯಿಸಿದೆ.
ಜೆಎಸ್‌ಡಬ್ಲ್ಯು ಎನರ್ಜಿ: ಜಿಕ್ಯುಜಿ ಪಾಟ್ನರ್ಸ್ ಕಂಪನಿಯು ಪ್ರತಿಷೇರಿಗೆ ಸರಾಸರಿ 341.7 ರೂಪಾಯಿ ದರದಲ್ಲಿ 10.28 ದಶಲಕ್ಷ ಷೇರುಗಳನ್ನು ಅಂದರೆ ಕಂಪನಿಯ ಶೇಕಡ 0.62ರಷ್ಟು ಷೇರುಗಳನ್ನು ಖರೀದಿಸಿದೆ.
ಪವರ್ ಗ್ರಿಡ್ ಕಾರ್ಪೊರೇಷನ್ ಆಫ್ ಇಂಡಿಯಾ: ಕಂಪನಿಯು ಈಶಶಾನ್ಯ ಪ್ರದೇಶದ ಬಲವರ್ಧನೆಗಾಗಿ ಸ್ಕೀಮ್ 5 ಆರಂಭಿಸುತ್ತಿದ್ದು, ವಾಣಿಜ್ಯ ವ್ಯವಹಾರ ಆರಂಭಿಸುತ್ತಿದೆ.
ಕರೆನ್ಸಿ ಮೌಲ್ಯ: 1 ಡಾಲರ್ = 83.2173 ರೂಪಾಯಿ
ಸುದ್ದಿ ಮೂಲ: ರಾಯಿಟರ್ಸ್, ಕನ್ನಡಕ್ಕೆ: ಹಿಂದೂಸ್ತಾನ್ ಟೈಮ್ಸ್ ಕನ್ನಡ