India Canada row: ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣ, ಭಾರತ ಕೆನಡಾ ರಾಜತಾಂತ್ರಿಕ ಬಿಕ್ಕಟ್ಟಿನ ಅವಲೋಕನ
India Canada row: ಭಾರತ ಮತ್ತು ಕೆನಡಾ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಏರ್ಪಟ್ಟಿದೆ. ಈ ವಿದ್ಯಮಾನಕ್ಕೆ ಕೆನಡಾದಲ್ಲಿನ ಭಾರತ ವಿರೋಧಿ ಖಲಿಸ್ತಾನಿ ಚಳವಳಿಯ ನಂಟೂ ಇದೆ. ಜೂನ್ ತಿಂಗಳಲ್ಲಿ ಖಲಿಸ್ತಾನಿ ಉಗ್ರ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಇದಕ್ಕೆ ಪ್ರಮುಖ ಕಾರಣ. ಅಲ್ಲಿಂದೀಚೆಗೆ ನಡೆದ ಪ್ರಮುಖ ವಿದ್ಯಮಾನಗಳ ಅವಲೋಕನ ಹೀಗಿದೆ..
ಭಾರತದ ರಾಜಧಾನಿ ನವದೆಹಲಿಯಲ್ಲಿ ಸೆಪ್ಟೆಂಬರ್ 9 ಮತ್ತು 10ರಂದು ಜಿ20 ಶೃಂಗ ನಡೆಯಿತು. ಈ ಸಭೆಯ ಬಳಿಕ ಭಾರತ ಮತ್ತು ಕೆನಡಾ ನಡುವಿನ ರಾಜತಾಂತ್ರಿಕ ಸಂಬಂಧ ಪೂರ್ಣ ಹದಗೆಟ್ಟಿದೆ. ಜಿ20 ಶೃಂಗಕ್ಕೆ ಆಗಮಿಸಿದ ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಮತ್ತು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ವೇಳೆ ಕೆನಡಾದ ವಿದ್ಯಮಾನದ ವಿಚಾರವಾಗಿ ಗಂಭೀರ ಮಾತುಕತೆ ನಡೆಯಿತು.
ಶೃಂಗ ಮುಗಿಸಿ ಕೆನಡಾಕ್ಕೆ ಮರಳಿದ ಜಸ್ಟಿನ್ ಟ್ರುಡೊ ಕಳೆದ ಸೋಮವಾರ (ಸೆ.16) ಖಲಿಸ್ತಾನಿ ಪ್ರತ್ಯೇಕತಾವಾದಿ ನಾಯಕ ಹರ್ದೀಪ್ ಸಿಂಗ್ ನಿಜ್ಜರ್ ಅವರ ಹತ್ಯೆಯಲ್ಲಿ ಭಾರತ ಸರ್ಕಾರ ಪ್ರಮುಖ ಪಾತ್ರವಹಿಸಿದೆ ಎಂದು ಆರೋಪಿಸಿದರು. ಇದು ಎರಡು ರಾಷ್ಟ್ರಗಳ ನಡುವಿನ ರಾಜತಾಂತ್ರಿಕ ಬಿಕ್ಕಟ್ಟಿಗೆ ಬುನಾದಿಯಾಯಿತು. ಹಲವು ನಾಟಕೀಯ ವಿದ್ಯಮಾನಗಳು ಕಳೆದ ನಾಲ್ಕು ದಿನಗಳ ಅವಧಿಯಲ್ಲಿ ನಡೆದಿವೆ.
ಹರ್ದೀಪ್ ಸಿಂಗ್ ನಿಜ್ಜರ್ ಯಾರು, ಆತನ ಹತ್ಯೆ ಪ್ರಕರಣ ಕಾರಣದ ರಾಜತಾಂತ್ರಿಕ ಬಿಕ್ಕಟ್ಟು
ಹರ್ದೀಪ್ ಸಿಂಗ್ ನಿಜ್ಜರ್, ಖಲಿಸ್ತಾನ ಪರ ಹೋರಾಟಗಾರ, ಸಿಖ್ ಸಮುದಾಯಕ್ಕಾಗಿ ಪ್ರತ್ಯೇಕ ದೇಶ ಬೇಕು ಎಂದು ಪ್ರತಿಪಾದಿಸುತ್ತ ಬಂದ ವ್ಯಕ್ತಿ. ವ್ಯಾಂಕೋವರ್‌ನಲ್ಲಿ ಜೂನ್ 19ರಂದು ಸಿಖ್ ದೇಗುಲದ ಹೊರಗೆ ಇಬ್ಬರು ಅಪರಿಚಿತ ದುಷ್ಕರ್ಮಿಗಳ ಗುಂಡಿನ ದಾಳಿಗೆ ಸಿಲುಕಿ ಮೃತಪಟ್ಟಿದ್ದ. ಆತನಿಗೆ 45 ವರ್ಷ ವಯಸ್ಸಾಗಿತ್ತು.
ಹರ್ದೀಪ್ ಸಿಂಗ್ ನಿಜ್ಜರ್ ಖಲಿಸ್ತಾನ್ ಟೈಗರ್ ಫೋರ್ಸ್ (ಕೆಟಿಎಫ್)ನ ಮುಖ್ಯಸ್ಥನಾಗಿದ್ದ. ಭಾರತ ಸರ್ಕಾರದ ಗೃಹ ಸಚಿವಾಲಯವು ಈ ಸಂಘಟನೆಯನ್ನು ಉಗ್ರ ಸಂಘಟನೆ ಪಟ್ಟಿಗೆ ಸೇರಿಸಿದೆ. ಹರ್ದೀಪ್ ಸಿಂಗ್ ಸಿಖ್ ಫಾರ್ ಜಸ್ಟೀಸ್ ಜತೆಗೂ ಕೆಲಸ ಮಾಡುತ್ತಿದ್ದ. ಈ ಸಂಘಟನೆಯೂ ಭಾರತದಲ್ಲಿ ನಿಷೇಧಿಸಲ್ಪಟ್ಟ ಸಂಘಟನೆ.
ಭಾರತದಲ್ಲಿ ಹಲವು ಪ್ರಕರಣಗಳಲ್ಲಿ ಆರೋಪಿ ಈ ನಿಜ್ಜರ್. 2007ರಲ್ಲಿ ಪಂಜಾಬ್‌ನಲ್ಲಿ ಸಂಭವಿಸಿದ ಸಿನಿಮಾ ಬಾಂಬ್ ಸ್ಫೋಟ ಪ್ರಕರಣದ ಆರೋಪಿ. ಈ ದಾಳಿಯಲ್ಲಿ ಆರು ಜನ ಮೃತಪಟ್ಟಿದ್ದು, 40 ಜನ ಗಾಯಗೊಂಡಿದ್ದರು. ಇದೇ ರೀತಿ 2009ರಲ್ಲಿ ಸಿಖ್ ರಾಜಕಾರಣಿ ರುಲ್ದಾ ಸಿಂಗ್ ಹತ್ಯೆಯಲ್ಲೂ ಈತ ಭಾಗಿಯಾಗಿದ್ದ. 2021ರಲ್ಲಿ ಜಲಂಧರ್‌ನಲ್ಲಿ ಹಿಂದು ಪುರೋಹಿತರೊಬ್ಬರ ಹತ್ಯೆ ಪ್ರಕರಣದಲ್ಲೂ ಭಾಗಿಯಾಗಿದ್ದ. ನ್ಯಾಷನಲ್ ಇನ್‌ವೆಸ್ಟಿಗೇಶನ್ ಏಜೆನ್ಸಿ (ಎನ್‌ಐಎ) ಈತನ ವಿರುದ್ಧ 10 ಲಕ್ಷ ರೂಪಾಯಿ ಇನಾಮು ಘೋಷಿಸಿತ್ತು.
ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ನಡೆದ ಸಂದರ್ಭದಲ್ಲಿ ಕೆನಡಾದ ತನಿಖಾಧಿಕಾರಿಗಳು ಆ ಹತ್ಯೆ ಹಿಂದಿನ ಉದ್ದೇಶ ಏನು ಎಂಬುದು ದೃಢೀಕರಿಸಲು ಸಾಧ್ಯವಾಗುತ್ತಿಲ್ಲ. ಯಾವುದೇ ಕ್ಲೂ, ಸಾಕ್ಷ್ಯಗಳು ಸಿಕ್ಕಿಲ್ಲ ಎಂದು ಹೇಳಿದ್ದರು. ಈ ಹತ್ಯೆಯನ್ನು ಅವರು ಟಾರ್ಗೆಟೆಡ್ ಇನ್ಸಿಡೆಂಟ್ ಎಂಬ ಕೆಟಗರಿಗೆ ಸೇರಿಸಿದ್ದರು. ರಾಯಲ್ ಕೆನಡಿಯನ್ ಮೌಂಟೆಡ್ ಪೊಲೀಸರು ಈ ಪ್ರಕರಣದ ತನಿಖೆ ನಡೆಸುತ್ತಿರುವುದಾಗಿ ಬಿಬಿಸಿ ವರದಿ ಮಾಡಿದೆ.
ಭಾರತದ ವಿರುದ್ಧ ಆರೋಪ ಮಾಡಿದ ಜಸ್ಟಿನ್ ಟ್ರೂಡ್
ಕೆನಡಾದ ಪ್ರಧಾನಿ ಜಸ್ಟಿನ್ ಟ್ರೂಡ್ ಅವರು ಸೋಮವಾರ (ಸೆ.18) ಹೌಸ್ ಆಫ್ ಕಾಮನ್ಸ್‌ನಲ್ಲಿ ಮಾತನಾಡುತ್ತ, ಕಳೆದ ಕೆಲವು ವಾರಗಳಿಂದ ಕೆನಡಾದ ಭದ್ರತಾ ಏಜೆನ್ಸಿಗಳು ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿವೆ. ಈ ಹತ್ಯೆ ಪ್ರಕರಣದಲ್ಲಿ ಭಾರತ ಸರ್ಕಾರದ ಪ್ರತಿನಿಧಿಗಳು ಹಸ್ತಕ್ಷೇಪ ಮಾಡಿರುವುದಕ್ಕೆ ವಿಶ್ವಸನೀಯ ಆರೋಪಗಳು ಎದುರಾಗಿವೆ. ಹರ್ದೀಪ್ ಸಿಂಗ್ ನಿಜ್ಜರ್ ಕೆನಡಾದ ಪ್ರಜೆ. ಕೆನಡಾದ ನೆಲದಲ್ಲೇ ಆತನ ಹತ್ಯೆ ಆಗಿದೆ. ಕೆನಡಾಕ್ಕೆ ತನ್ನದೇ ಆದ ಕಾನೂನುಗಳಿವೆ. ಅದರ ಕಠಿಣ ಅನುಷ್ಠಾನವೂ ಚಾಲ್ತಿಯಲ್ಲಿದೆ ಎಂದು ಹೇಳಿದ್ದರು.
ಜಿ20 ಶೃಂಗದ ವೇಳೆ ಹರ್ದೀಪ್ ಹತ್ಯೆ ವಿಚಾರ ಪ್ರಸ್ತಾಪಿಸಿದ್ದ ಟ್ರೂಡ್
ಜಿ20 ಶೃಂಗದ ದ್ವಿಪಕ್ಷೀಯ ಮಾತುಕತೆ ಸಂದರ್ಭದಲ್ಲಿ ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ ಅವರು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಜತೆಗೆ ಹರ್ದೀಪ್ ಸಿಂಗ್ ನಿಜ್ಜರ್ ಹತ್ಯೆ ವಿಚಾರ ಪ್ರಸ್ತಾಪಿಸಿ, ಭಾರತ ಸರ್ಕಾರದ ಪ್ರತಿನಿಧಿಗಳ ಹಸ್ತಕ್ಷೇಪವನ್ನು ಖಂಡಿಸಿದ್ದರು. ಇದಲ್ಲದೆ, ಈ ವಿಚಾರವನ್ನು ಅವರು ಬ್ರಿಟನ್ ಪ್ರಧಾನಿ ರಿಷಿ ಸುನಕ್ ಮತ್ತು ಅಮೆರಿಕ ಅಧ್ಯಕ್ಷ ಜೋ ಬಿಡೆನ್ ಜತೆಗೂ ಪ್ರಸ್ತಾಪಿಸಿದ್ದಾಗಿ ಫ್ರಾನ್ಸ್‌ನ ಮಾಧ್ಯಮಗಳು ವರದಿ ಮಾಡಿವೆ.
ರಾಜತಾಂತ್ರಿಕ ಅಧಿಕಾರಿಗಳ ಉಚ್ಚಾಟನೆ
ಭಾರತದ ಹಿರಿಯ ರಾಜತಾಂತ್ರಿಕ ಅಧಿಕಾರಿಯನ್ನು ದೇಶಬಿಟ್ಟು ಹೊರಡುವಂತೆ ಕೆನಡಾ ಸರ್ಕಾರ ಸೂಚಿಸಿರುವುದಾಗಿ ಕೆನಡಾದ ವಿದೇಶಾಂಗ ಸಚಿವರಾದ ಮೆಲನಿ ಜೋಲಿ ಸುದ್ದಿಗೋಷ್ಠಿಯಲ್ಲಿ ಹೇಳಿದ್ದರು. ಇದಾದ ಬೆನ್ನಿಗೆ ಭಾರತವೂ ಕೆನಡಾದ ರಾಜತಾಂತ್ರಿಕ ಅಧಿಕಾರಿಗೆ ದೇಶ ಬಿಟ್ಟು ಹೊರಡುವಂತೆ ಸೂಚಿಸಿದೆ.
ಜಸ್ಟಿನ್ ಟ್ರೂಡ್ ಆರೋಪ ಅಸಮಂಜಸ ಎಂದು ಖಡಾಖಂಡಿತವಾಗಿ ನಿರಾಕರಿಸಿರುವ ಭಾರತ
ಕೆನಡಾ ಪ್ರಧಾನಿ ಜಸ್ಟಿನ್ ಟ್ರುಡೊ ಅವರ ಆರೋಪ ಅಸಮಂಜಸ ಮತ್ತು ದುರುದ್ದೇಶಪೂರಿತವಾದುದು ಎಂದು ಭಾರತ ಸರ್ಕಾರ ಟೀಕಿಸಿದೆ. ಕೆನಡಾ ಪ್ರಧಾನಿ ಜಸ್ಟಿನ್ ಟ್ರೂಡ್ ಅವರ ಸಂಸತ್ತಿನಲ್ಲಿ ಮಾಡಿರುವ ಆರೋಪವನ್ನು ಭಾರತ ಸರ್ಕಾರ ತಿರಸ್ಕರಿಸುತ್ತದೆ. ಕೆನಡಾ ವಿದೇಶಾಂಗ ಸಚಿವರ ಹೇಳಿಕೆ ಕೂಡ ಸತ್ಯಕ್ಕೆ ದೂರವಾದುದು. ಭಾರತದ ಯಾವ ಅಧಿಕಾರಿಯೂ ಕೆನಡಾದಲ್ಲಿ ಯಾವುದೇ ಹಿಂಸಾಚಾರದಲ್ಲಿ ಯಾವುದೇ ರೀತಿಯಲ್ಲೂ ಭಾಗಿಯಾಗಿಲ್ಲ ಎಂದು ಸ್ಪಷ್ಟಪಡಿಸಿದೆ.
ವಿಭಾಗ