Year in Review 2022: ಭೀಕರ ನೈಸರ್ಗಿಕ ವಿಕೋಪಗಳಿಗೆ ಜಗತ್ತು ಸಾಕ್ಷಿಯಾದ ವರ್ಷವಿದು.. ಪ್ರಕೃತಿಯ ಮುನಿಸಿಗೆ ಬಲಿಯಾದವರೆಷ್ಟು?
2022ಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಕಳೆದ 12 ತಿಂಗಳುಗಳಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುವ ಸಮಯವಿದು. ಕೆಲವು ಭಯಾನಕ ನೈಸರ್ಗಿಕ ವಿಕೋಪಗಳಿಗೆ ಈ ವರ್ಷವು ಸಾಕ್ಷಿಯಾಗಿದೆ. ಪ್ರವಾಹ, ಭೂಕಂಪ, ಬರಗಾಲ, ಚಂಡಮಾರುತ, ಜ್ವಾಲಾಮುಖಿ ಬಿಸಿಗಾಳಿಗೆ ಹಲವು ರಾಷ್ಟ್ರಗಳು ತತ್ತರಿಸಿದೆ. ಈ ಪೈಕಿ ಹೆಚ್ಚು ಜನರನ್ನು ಬಲಿಪಡೆದ ನೈಸರ್ಗಿಕ ವಿಕೋಪಗಳ ಬಗ್ಗೆ ಇಲ್ಲಿದೆ ಒಂದಿಷ್ಟು ಮಾಹಿತಿ.
2022ಕ್ಕೆ ಅಂತ್ಯ ಹಾಡುವ ಸಮಯ ಬಂದಿದೆ. ಕಳೆದ 12 ತಿಂಗಳುಗಳಲ್ಲಿ ನಡೆದ ಕೆಲವು ಪ್ರಮುಖ ಘಟನೆಗಳನ್ನು ನೆನಪಿಸಿಕೊಳ್ಳುವ ಸಮಯವಿದು. ಕೆಲವು ಭಯಾನಕ ನೈಸರ್ಗಿಕ ವಿಕೋಪಗಳಿಗೆ ಈ ವರ್ಷವು ಸಾಕ್ಷಿಯಾಗಿದೆ. ಪ್ರವಾಹ, ಭೂಕಂಪ, ಬರಗಾಲ, ಚಂಡಮಾರುತ, ಜ್ವಾಲಾಮುಖಿ ಬಿಸಿಗಾಳಿಗೆ ಹಲವು ರಾಷ್ಟ್ರಗಳು ತತ್ತರಿಸಿದೆ. ಈ ಪೈಕಿ ಹೆಚ್ಚು ಜನರನ್ನು ಬಲಿಪಡೆದ ನೈಸರ್ಗಿಕ ವಿಕೋಪಗಳ ಬಗ್ಗೆ ಇಲ್ಲದೆ ಒಂದಿಷ್ಟು ಮಾಹಿತಿ.
ಅಸ್ಸಾಂ ಪ್ರವಾಹ
ಈ ವರ್ಷ ಮಳೆಗಾಲದಲ್ಲಿ ಭಾರತದ ಅಸ್ಸಾಂನಲ್ಲಿ ಸುರಿದ ಭಾರೀ ಮಳೆ ಪ್ರವಾಹ ಪರಿಸ್ಥಿತಿಯನ್ನು ತಂದಿಟ್ಟಿತ್ತು. ಪ್ರವಾಹ ಸಂಬಂಧಿತ ಅವಘಡಗಳಲ್ಲಿ 192 ಮಂದಿ ಬಲಿಯಾಗಿದ್ದರು. ಲಕ್ಷಾಂತರ ಜನರು ತಮ್ಮ ಮನೆ-ಮಠಗಳನ್ನು ಕಳೆದುಕೊಂಡಿದ್ದರು. ಸಾವಿರಾರು ಮಂದಿ ಗಾಯಗೊಂಡಿದ್ದರು. ಪ್ರವಾಹ ಪೀಡಿತ 28 ಜಿಲ್ಲೆಗಳಲ್ಲಿ 43,338.39 ಹೆಕ್ಟೇರ್‌ನಷ್ಟು ಬೆಳೆ ಮುಳುಗಡೆಯಾಗಿದೆ. ರಾಜ್ಯದಲ್ಲಿ ಒಟ್ಟು 18.94 ಲಕ್ಷ ಜನರು ಪ್ರವಾಹ ಪರಿಸ್ಥಿತಿಯಿಂದ ಸಂತ್ರಸ್ತರಾಗಿದ್ದರು.
ಇಂಡೋನೇಷ್ಯಾ ಭೂಕಂಪ
ನವೆಂಬರ್ನಲ್ಲಿ ಇಂಡೋನೇಷ್ಯಾ ಭೂಕಂಪ ಪಶ್ಚಿಮ ಜಾವಾ ಪ್ರದೇಶದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಿಂದ ಸುಮಾರು 334 ಜನರು ಬಲಿಯಾಗಿದ್ದು, 1000ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೆ (ಯುಎಸ್‌ಜಿಎಸ್) ಪ್ರಕಾರ ರಿಕ್ಟರ್ ಮಾಪಕದಲ್ಲಿ ಭೂಕಂಪದ ತೀವ್ರತೆ 5.6 ರಷ್ಟು ದಾಖಲಾಗಿದೆ. ಜಕಾರ್ತಾದ ಆಗ್ನೇಯಕ್ಕೆ 75 ಕಿಮೀ ದೂರದಲ್ಲಿರುವ ಸಿಯಾಂಜೂರ್ನಲ್ಲಿ ಮತ್ತು 10 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರಬಿಂದುವಿದೆ. ಹಲವು ಮನೆಗಳು, ಕಟ್ಟಡಗಳು ಹಾನಿಯಾಗಿವೆ.
ಪಾಕಿಸ್ತಾನ ಪ್ರವಾಹ
ಈ ವರ್ಷ ಪ್ರವಾಹಕ್ಕೆ ಪಾಕಿಸ್ತಾನ ತತ್ತರಿಸಿ ಹೋಗಿದೆ. ಜೂನ್‌ನಿಂದ ಅಕ್ಟೋಬರ್‌ವರೆಗೆ ಸುರಿದ ಭಾರೀ ಮಳೆಯಿಂದ ಉಂಟಾದ ಅವಘಡಗಳಲ್ಲಿ ಕನಿಷ್ಠ 1,739 ಜನರು ಪ್ರಾಣ ಕಳೆದುಕೊಂಡಿದ್ದಾರೆ. ಪ್ರವಾಹದ ನೀರಿನಲ್ಲಿ ಸಾವಿರಾರು ಮನೆಗಳು ಕೊಚ್ಚಿಕೊಂಡು ಹೋಗಿವೆ. ಸ್ಥಳೀಯ ಅಧಿಕಾರಿಗಳು ಹೇಳುವಂತೆ ಪ್ರವಾಹದ ನೀರು ಸಂಪೂರ್ಣವಾಗಿ ಇಳಿಮುಖವಾಗಲು ಆರು ತಿಂಗಳವರೆಗೆ ತೆಗೆದುಕೊಳ್ಳಬಹುದು.
ಅಫ್ಘಾನಿಸ್ತಾನ ಭೂಕಂಪ
ಕಳೆದ ಜೂನ್ನಲ್ಲಿ ಪೂರ್ವ ಅಫ್ಘಾನಿಸ್ತಾನದ ಪಕ್ಟಿಕಾ ಪ್ರಾಂತ್ಯದಲ್ಲಿ ಸಂಭವಿಸಿದ ಪ್ರಬಲ ಭೂಕಂಪದಲ್ಲಿ 1000ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು,, 1,500ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. ಘಟನೆಯಿಂದ ನೂರಾರು ಮನೆಗಳು ಕುಸಿದು ಹೋಗಿತ್ತು. ಅನೇಕರು ಬೀದಿ ಪಾಲಾಗಿ, ತಮ್ಮ ಕುಟುಂಬ ಸದಸ್ಯರನ್ನು ಕಳೆದುಕೊಂಡಿದ್ದರು. ರಿಕ್ಟರ್ ಮಾಪಕದಲ್ಲಿ 6.1ರಷ್ಟು ಭೂಕಂಪದ ತೀವ್ರತೆ ದಾಖಲಾಗಿದ್ದು, 50 ಕಿಲೋ ಮೀಟರ್ ಆಳದಲ್ಲಿ ಭೂಕಂಪದ ಕೇಂದ್ರ ಬಿಂದು ದಾಖಲಾಗಿತ್ತು.
ಅಫ್ಘಾನಿಸ್ತಾನ ಪ್ರವಾಹ
ಅಫ್ಘಾನಿಸ್ತಾನದಲ್ಲಿ ಆಗಸ್ಟ್ ತಿಂಗಳಾದ್ಯಂತ ಸುರಿದ ಭಾರೀ ಮಳೆ ಪ್ರವಾಹ ಪರಿಸ್ಥಿತಿ ಸೃಷ್ಟಿಸಿತ್ತು. ಪ್ರವಾಹದ ಅವಾಂತರಕ್ಕೆ 182 ಮಂದಿ ತಮ್ಮ ಪ್ರಾಣಗಳನ್ನು ಕಳೆದುಕೊಂಡಿದ್ದರು. 250ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದರು. 3000ಕ್ಕೂ ಹೆಚ್ಚು ಮನೆಗಳು ಸಂಪೂರ್ಣ ನಾಶವಾಗಿದ್ದವು. ಸಾವಿರಾರು ಎಕರೆ ಜಮೀನು ನಾಶವಾಗಿದ್ದು, ನೂರಾರು ಜಾನುವಾರುಗಳು ಮೃತಪಟ್ಟಿದ್ದವು. ಎರಡು ತಿಂಗಳ ಮುಂಚೆ ಭೂಕಂಪದಿಂದ ತತ್ತರಿಸಿದ್ದ ದೇಶಕ್ಕೆ ಮತ್ತೆ ವಿಪತ್ತು ಒದಗಿದಾಗ ತಾಲಿಬಾನ್ ಸರ್ಕಾರವು ಸಹಾಯಕ್ಕಾಗಿ ಅಂತಾರಾಷ್ಟ್ರೀಯ ಸಮುದಾಯವನ್ನು ಬೇಡಿಕೊಂಡಿತ್ತು.
ಪೂರ್ವ ಆಫ್ರಿಕಾ ಬರಗಾಲ
ಪೂರ್ವ ಆಫ್ರಿಕಾವು ಈ ಬಾರಿ ಕಳೆದ 40 ವರ್ಷಗಳಲ್ಲಿ ಅತ್ಯಂತ ಭೀಕರ ಬರಗಾಲವನ್ನು ಎಸುರಿಸಿದೆ. ಲಕ್ಷಾಂತರ ಜನರು ಹಸಿವಿನಿಂದ ಬಳಲುತ್ತಿದ್ದು, ಈಶಾನ್ಯ ಉಗಾಂಡಾದಲ್ಲಿ 200ಕ್ಕೂ ಹೆಚ್ಚು ಮಂದಿ ಸಾವನ್ನಪ್ಪಿದ್ದಾರೆ. ಕೆಲವು ಪ್ರದೇಶಗಳಲ್ಲಿ ಬೆಳೆ ಉತ್ಪಾದನೆಯು ಅರ್ಧದಷ್ಟು ಕಡಿಮೆಯಾಗುವುದರೊಂದಿಗೆ, ಹೆಚ್ಚಿನ ಮಟ್ಟದ ಅಪೌಷ್ಟಿಕತೆ 2023 ರವರೆಗೂ ಮುಂದುವರಿಯುವ ನಿರೀಕ್ಷೆಯಿದೆ ಎಂದು ಯುರೋಪಿಯನ್ ಕಮಿಷನ್ ಹೇಳಿದೆ.
ಬ್ರೆಜಿಲ್ ಪ್ರವಾಹ
ಈ ವರ್ಷ ಕೇವಲ ಎರಡು ತಿಂಗಳುಗಳಲ್ಲಿ ಸುರಿದ ಭಾರೀ ಮಳೆಯಿಂದಾಗಿ ಬ್ರೆಜಿಲ್ ಭೀಕರ ಪ್ರವಾಹವನ್ನು ಎದುರಿಸಿದೆ. ಪ್ರವಾಹದ ಅಪಘಡಗಳಲ್ಲಿ ಕನಿಷ್ಠ 233 ಮಂದಿ ಬಲಿಯಾಗಿದ್ದಾರೆ. ಅನೇಕ ದಿನಗಳ ಬಳಿಕ ವಿನಾಶಕಾರಿ ಪ್ರವಾಹದಿಂದ ಬ್ರೆಜಿಲ್ ಚೇತರಿಸಿಕೊಂಡಿದೆ.
ದಕ್ಷಿಣ ಆಫ್ರಿಕಾ ಪ್ರವಾಹ
ಏಪ್ರಿಲ್ ಆರಂಭದಲ್ಲಿ, ದಕ್ಷಿಣ ಆಫ್ರಿಕಾದ ಪೂರ್ವ ಕೇಪ್‌ನಲ್ಲಿ ಭಾರೀ ಮಳೆಯಾಗಿದ್ದು, ದೇಶದ ಮೂರನೇ ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ನಗರವಾದ ಡರ್ಬನ್ನಲ್ಲಿ ಭೀಕರ ಪ್ರವಾಹ ಉಂಟಾಗಿತ್ತು. 461 ಜನರು ಸಾವನ್ನಪ್ಪಿದ್ದು, 70ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದರು. ಸಾವಿರಾರು ಜನರು ಮನೆಗಳನ್ನು ಕಳೆದುಕೊಂಡಿದ್ದರು.
ನೈಜೀರಿಯಾ ಪ್ರವಾಹ
ನೈಜೀರಿಯಾದಲ್ಲಿ ಈ ವರ್ಷ ಉಂಟಾದ ಭೀಕರ ಪ್ರವಾಹದಲ್ಲಿ 612 ಮಂದಿ ಮೃತಪಟ್ಟಿದ್ದು, 1.4 ಮಿಲಿಯನ್ ಜನರನ್ನು ಸ್ಥಳಾಂತರಿಸಲಾಗಿದೆ ಎಂದು ನೈಜೀರಿಯಾದ ಅಧಿಕಾರಿಗಳು ತಿಳಿಸಿದ್ದಾರೆ.