ಮಿಯಾಮಿ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ರೋಹನ್ ಬೋಪಣ್ಣ; ತಮ್ಮದೇ ಹಳೆಯ ದಾಖಲೆ ಬ್ರೇಕ್-tennis news rohan bopanna wins miami open mens doubles title with australian partner matthew ebden masters 1000 jra ,ಕ್ರೀಡೆ ಸುದ್ದಿ
ಕನ್ನಡ ಸುದ್ದಿ  /  ಕ್ರೀಡೆ  /  ಮಿಯಾಮಿ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ರೋಹನ್ ಬೋಪಣ್ಣ; ತಮ್ಮದೇ ಹಳೆಯ ದಾಖಲೆ ಬ್ರೇಕ್

ಮಿಯಾಮಿ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ರೋಹನ್ ಬೋಪಣ್ಣ; ತಮ್ಮದೇ ಹಳೆಯ ದಾಖಲೆ ಬ್ರೇಕ್

Rohan Bopanna: ಮಿಯಾಮಿ ಓಪನ್ ಪುರುಷರ ಡಬಲ್ಸ್ ಪ್ರಶಸ್ತಿ ಗೆಲುವಿನೊಂದಿಗೆ ಭಾರತದ ಹಿರಿಯ ಟೆನಿಸ್‌ ಆಟಗಾರ ರೋಹನ್ ಬೋಪಣ್ಣ ಇತಿಹಾಸ ನಿರ್ಮಿಸಿದ್ದಾರೆ. ಕಳೆದ ವರ್ಷದ ತಮ್ಮದೇ ಹಳೆಯ ದಾಖಲೆಯನ್ನು ಮುರಿದಿದ್ದಾರೆ.

ಮಿಯಾಮಿ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ರೋಹನ್ ಬೋಪಣ್ಣ
ಮಿಯಾಮಿ ಓಪನ್ ಡಬಲ್ಸ್ ಪ್ರಶಸ್ತಿ ಗೆದ್ದು ಇತಿಹಾಸ ಸೃಷ್ಟಿಸಿದ ರೋಹನ್ ಬೋಪಣ್ಣ (Getty Images via AFP)

ರೋಹನ್‌ ಬೋಪಣ್ಣ ಸಾಧನೆಯ ಹಿರಿಮೆಗೆ ಮತ್ತೊಂದು ಸೇರ್ಪಡೆಯಾಗಿದೆ. ಮಿಯಾಮಿ ಓಪನ್ (Miami Open) ಟೆನಿಸ್ ಟೂರ್ನಿಯ ಪುರುಷರ ಡಬಲ್ಸ್‌ನಲ್ಲೂ ಬೋಪಣ್ಣ ಜಯಭೇರಿ ಬಾರಿಸಿದ್ದಾರೆ. ಫೈನಲ್‌ ಪಂದ್ಯದಲ್ಲಿ ರೋಹನ್ ಬೋಪಣ್ಣ ಹಾಗೂ ಆಸ್ಟ್ರೇಲಿಯಾದ ಮ್ಯಾಥ್ಯೂ ಎಬ್ಡೆನ್ (Matthew Ebden) ಜೋಡಿಯು ಐತಿಹಾಸಿಕ ಗೆಲುವು ದಾಖಲಿಸಿದ್ದಾರೆ. ರೋಚಕ ಹೋರಾಟದಲ್ಲಿ ಖ್ಯಾತ ಇಂಡೋ-ಆಸ್ಟ್ರೇಲಿಯನ್ ಜೋಡಿಯು ಕ್ರೊಯೇಷಿಯಾದ ಇವಾನ್ ಡೊಡಿಕ್ ಮತ್ತು ಅಮೆರಿಕದ ಟೆನಿಸ್‌ ಆಟಗಾರ ಆಸ್ಟಿನ್ ಕ್ರಾಜಿಕ್ ಅವರನ್ನು 6-7, 6-3, 10-6 ಸೆಟ್‌ಗಳಿಂದ ಸೋಲಿಸಿ ಮತ್ತೊಂದು ಪ್ರತಿಷ್ಠಿತ ಪ್ರಶಸ್ತಿಯನ್ನು ಗೆದ್ದುಕೊಂಡಿದ್ದಾರೆ.

ಈ ಗೆಲುವಿನೊಂದಿಗೆ ಬೋಪಣ್ಣ ಮತ್ತೊಂದು ದಾಖಲೆ ನಿರ್ಮಿಸಿದ್ದಾರೆ. ತಮ್ಮ 44ನೇ ವಯಸ್ಸಿನಲ್ಲಿ ಎಟಿಪಿ ಸರ್ಕ್ಯೂಟ್‌ನಲ್ಲಿ ಮಾಸ್ಟರ್ಸ್ 1000 ಪ್ರಶಸ್ತಿ ಗೆದ್ದ ಅತ್ಯಂತ ಹಿರಿಯ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 44ರ ಹರೆಯದಲ್ಲೂ ಹೊಸ ಹುರುಪಿನೊಂದಿಗೆ ಆಡುತ್ತಿರುವ ಬೋಪಣ್ಣ, ಕಳೆದ ವರ್ಷ ಇಂಡಿಯನ್ ವೆಲ್ಸ್ ಪ್ರಶಸ್ತಿಗೆ ಮುತ್ತಿಡುವ ಮೂಲಕ ದಾಖಲೆ ನಿರ್ಮಿಸಿದ್ದರು. ಭಾರತದ ದಿಗ್ಗಜ ಟೆನ್ನಿಸ್‌ ಆಟಗಾರ ಲಿಯಾಂಡರ್ ಪೇಸ್ ನಂತರ, ಎಲ್ಲಾ ಒಂಬತ್ತು ಎಟಿಪಿ ಮಾಸ್ಟರ್ಸ್ 1000 ಸ್ಪರ್ಧೆಗಳಲ್ಲಿ ಫೈನಲ್ ತಲುಪಿದ ಎರಡನೇ ಭಾರತೀಯ ಎಂಬ ಹೆಗ್ಗಳಿಕೆಗೆ ಪಾತ್ರರಾದರು.

ಫೈನಲ್‌ ಪಂದ್ಯವು ರೋಚಕವಾಗಿ ಸಾಗಿತು. ಮೊದಲ ಸೆಟ್‌ ವೀಕ್ಷಿಸಿದವರು, ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು ಗೆಲ್ಲುತ್ತಾರೆ ಎಂದು ಊಹಿಸಿರಲಿಲ್ಲ. ಮೊದಲ ಸುತ್ತನ್ನು 6-7 ಅಂತರದಿಂದ ಕಳೆದುಕೊಂಡ ಜೋಡಿಯು, ತಾಳ್ಮೆಯಿಂದ ಆಟದಲ್ಲಿ ಪುಟಿದೆದ್ದರು. ಎರಡನೇ ಸೆಟ್‌ನಲ್ಲಿ ಪುನರಾಗಮನ ಮಾಡಿ 6-3 ಅಂತರದಿಂದ ಜಯಗಳಿಸಿದರು. ಆ ಬಳಿಕ ಮೂರನೇ ಹಾಗೂ ನಿರ್ಣಾಯಕ ಸೆಟ್‌ ಸುದೀರ್ಘ ಸಮಯದವರೆಗೆ ಸಾಗಿತು. ಟೈ ಬ್ರೇಕರ್‌ನಲ್ಲಿ ಖ್ಯಾತ ಜೋಡಿಯು 10-6 ಅಂತರದಲ್ಲಿ ಜಯ ಸಾಧಿಸಿದರು.

ಇದನ್ನೂ ಓದಿ | ಫುಟ್ಬಾಲ್‌ ಆಡೋ ಆಸಕ್ತಿಯೇ ಕುಂದಿದೆ ಎಂದು ಗಳಗಳನೆ ಅತ್ತ ಬ್ರೆಜಿಲ್ ಆಟಗಾರ; ವರ್ಣಭೇದ ನೀತಿಗೆ ಕೊನೆ ಎಂದು?

ಬೋಪಣ್ಣ ಮತ್ತು ಎಬ್ಡೆನ್ ಜೋಡಿಯು, ಸೆಮಿಫೈನಲ್‌ ಪಂದ್ಯದಲ್ಲಿ ಸ್ಪೇನ್‌ನ ಮಾರ್ಸೆಲ್ ಗ್ರಾನೋಲರ್ಸ್ ಮತ್ತು ಅರ್ಜೆಂಟೀನಾದ ಹೊರಾಸಿಯೊ ಜೆಬಲೋಸ್ ಜೋಡಿಯನ್ನು 6-1, 6-4 ಸೆಟ್‌ಗಳಿಂದ ಸೋಲಿಸಿದ್ದರು.

ಆಸ್ಟ್ರೇಲಿಯಾ ಓಪನ್‌ ಗೆಲುವು

ಇತ್ತೀಚೆಗಷ್ಟೇ ಆಸ್ಟ್ರೇಲಿಯಾದ ಮೆಲ್ಬೋರ್ನ್‌ನಲ್ಲಿ ನಡೆದ ಆಸ್ಟ್ರೇಲಿಯಾ ಓಪನ್‌ ಫೈನಲ್‌ನಲ್ಲಿ ಇಟಲಿಯ ಸಿಮೋನ್ ಬೊಲೆಲ್ಲಿ ಮತ್ತು ಆಂಡ್ರಿಯಾ ವವಾಸ್ಸರಿ ಅವರನ್ನು 7-6, 7-5 ನೇರ ಸೆಟ್‌ಗಳಿಂದ ಸೋಲಿಸಿದ್ದ ಬೋಪಣ್ಣ-ಎಬ್ಡೆನ್‌ ಜೋಡಿ ಚಾಂಪಿಯನ್ ಆಗಿ ಹೊರಹೊಮ್ಮಿದ್ದಾರೆ. ಅದು ಬೋಪಣ್ಣ ವೃತ್ತಿಜೀವನದ ಎರಡನೇ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ. ಅಲ್ಲದೆ ಪುರುಷರ ಡಬಲ್ಸ್‌ನಲ್ಲಿ ಅವರ ಮೊದಲ ಪ್ರಶಸ್ತಿಯಾಗಿದೆ.

ಮುಂದೆ ಈ ಜೋಡಿಯ ಚಿತ್ತವು ಫ್ರೆಂಚ್ ಓಪನ್‌ನತ್ತ ಮುಖ ಮಾಡಿದೆ. ಮೇ 20ರಿಂದ ಆರಂಭವಾಗಲಿರುವ ಫ್ರೆಂಚ್ ಓಪನ್‌ ಟೂರ್ನಿಯಲ್ಲಿ ಬೋಪಣ್ಣ ಹಾಗೂ ಎಬ್ಡೆನ್ ಪುರುಷರ ಡಬಲ್ಸ್ ಪ್ರಶಸ್ತಿಯನ್ನು ಗೆಲ್ಲುವ ನೆಚ್ಚಿನ ಜೋಡಿಯಾಗಿದ್ದಾರೆ.

ಬ್ಯಾಡ್ಮಿಂಟನ್, ಟೆನಿಸ್, ಕಬಡ್ಡಿ, ಫುಟ್ಬಾಲ್, ಆರ್ಚರಿ, ಶೂಟಿಂಗ್, ಒಲಿಂಪಿಕ್ಸ್, ಏಷ್ಯನ್ ಗೇಮ್ಸ್, ಅಥ್ಲೆಟಿಕ್ಸ್ ಸೇರಿದಂತೆ ಕ್ರೀಡಾ ಜಗತ್ತಿನ ಸಮಗ್ರ ವಿದ್ಯಮಾನಗಳನ್ನು ತಿಳಿಯಲು 'ಹಿಂದೂಸ್ತಾನ್ ಟೈಮ್ಸ್ ಕನ್ನಡ'ದ ಕ್ರೀಡಾ ವಿಭಾಗಕ್ಕೆ ಭೇಟಿ ನೀಡಿ.