ಕನ್ನಡ ಸುದ್ದಿ  /  Cricket  /  12 Captains To Lose Ipl Final Ms Dhoni Anil Kumble Sachin Tendulkar Sanju Samson Hardik Pandya Virat Kohli Vettori Prs

ಎಂಎಸ್ ಧೋನಿ, ವಿರಾಟ್ ಕೊಹ್ಲಿಯಿಂದ ಹಾರ್ದಿಕ್​​ ತನಕ; ಐಪಿಎಲ್ ಫೈನಲ್ ​ಸೋತಿರುವ 12 ನಾಯಕರು ಇವರೇ!

IPL Final : ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಫೈನಲ್​ ಪಂದ್ಯದಲ್ಲಿ ಸೋತಿರುವ 12 ನಾಯಕರ ಪಟ್ಟಿಯನ್ನು ಈ ವರದಿಯಲ್ಲಿದೆ. ಈ ಪೈಕಿ ಭಾರತೀಯ ನಾಯಕರೆಷ್ಟು, ವಿದೇಶಿ ನಾಯಕರೆಷ್ಟು ಎಂಬುದರ ಕುರಿತೂ ಮಾಹಿತಿ ಇದೆ.

ಎಂಎಸ್ ಧೋನಿ, ವಿರಾಟ್ ಕೊಹ್ಲಿಯಿಂದ ಹಾರ್ದಿಕ್​​ ತನಕ; ಐಪಿಎಲ್ ಫೈನಲ್ ​ಸೋತಿರುವ 12 ನಾಯಕರು ಇವರೇ!
ಎಂಎಸ್ ಧೋನಿ, ವಿರಾಟ್ ಕೊಹ್ಲಿಯಿಂದ ಹಾರ್ದಿಕ್​​ ತನಕ; ಐಪಿಎಲ್ ಫೈನಲ್ ​ಸೋತಿರುವ 12 ನಾಯಕರು ಇವರೇ!

ವಿಶ್ವ ಕ್ರಿಕೆಟ್​ನ ಶ್ರೀಮಂತ ಲೀಗ್​ ಎನಿಸಿಕೊಂಡಿರುವ ಐಪಿಎಲ್​ ಹಬ್ಬಕ್ಕೆ ಕೆಲವೇ ದಿನಗಳು ಬಾಕಿ ಇದೆ. ಮಾರ್ಚ್​ 22ರಂದು ಮಿಲಿಯನ್ ಡಾಲರ್ ಟೂರ್ನಿಗೆ ಅದ್ಧೂರಿ ಚಾಲನೆ ಸಿಗಲಿದೆ. ಈಗಾಗಲೇ 16 ಆವೃತ್ತಿಗಳನ್ನು ಪೂರ್ಣಗೊಳಿಸಿರುವ ಐಪಿಎಲ್​, 17ನೇ ಆವೃತ್ತಿಗೆ ಕಾಲಿಡುತ್ತಿದೆ. 2008 ರಿಂದ 2023 ರವರೆಗೂ ಮುಂಬೈ ಇಂಡಿಯನ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ತಂಡಗಳು ತಲಾ ಐದು ಬಾರಿ ಟ್ರೋಫಿ ಗೆದ್ದಿವೆ.

ಹಾಗೆಯೇ ಕೋಲ್ಕತ್ತಾ ನೈಟ್ ರೈಡರ್ಸ್ 2 ಬಾರಿ, ರಾಜಸ್ಥಾನ್ ರಾಯಲ್ಸ್, ಸನ್​ರೈಸರ್ಸ್ ಹೈದರಾಬಾದ್, ಡೆಕ್ಕನ್ ಚಾರ್ಜರ್ಸ್, ಗುಜರಾತ್ ಟೈಟಾನ್ಸ್ ತಂಡಗಳು ತಲಾ 1 ಬಾರಿ ಚಾಂಪಿಯನ್ ಆಗಿವೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು, ಪಂಜಾಬ್ ಕಿಂಗ್ಸ್, ಡೆಲ್ಲಿ ಕ್ಯಾಪಿಟಲ್ಸ್, ಲಕ್ನೋ ಸೂಪರ್ ಜೈಂಟ್ಸ್ ತಂಡಗಳು ಇನ್ನೂ ಒಂದು ಬಾರಿಯೂ ಚಾಂಪಿಯನ್ ಆಗಿಲ್ಲ. ಹಾಗಾದರೆ 2008ರಿಂದ 2023ರವರೆಗೂ ಫೈನಲ್​ ಪಂದ್ಯದಲ್ಲಿ ಸೋತಿರುವ ನಾಯಕರು ಯಾರು? ಇಲ್ಲಿದೆ ಪಟ್ಟಿ. ಈ ಪೈಕಿ 7 ಭಾರತೀಯ ನಾಯಕರು ಮತ್ತು ಐವರು ವಿದೇಶಿ ನಾಯಕರು ಐಪಿಎಲ್ ಫೈನಲ್ ಸೋತಿದ್ದಾರೆ.

1. ಎಂಎಸ್ ಧೋನಿ ಸಿಎಸ್​ಕೆ ನಾಯಕನಾಗಿ 5 ಐಪಿಎಲ್​ ಫೈನಲ್​ಗಳಲ್ಲಿ ಸೋತಿದ್ದಾರೆ. 2008ರಲ್ಲಿ ರಾಜಸ್ಥಾನ ರಾಯಲ್ಸ್, 2012ರಲ್ಲಿ ಕೆಕೆಆರ್​, 2013, 2015 ಮತ್ತು 2019ರಲ್ಲಿ ಮೂರು ಬಾರಿ ಮುಂಬೈ ಇಂಡಿಯನ್ಸ್ ವಿರುದ್ಧ ಸೋಲು ಅನುಭವಿಸಿದ್ದಾರೆ. ಹಾಗೆಯೇ ಚೆನ್ನೈಗಾಗಿ 5 ಟ್ರೋಫಿಗಳನ್ನೂ ಗೆದ್ದಿದ್ದಾರೆ.

2. 2009ರ ಐಪಿಎಲ್‌ನಲ್ಲಿ ಆರ್‌ಸಿಬಿ ತಂಡವನ್ನು ಮುನ್ನಡೆಸಿದ್ದ ಅನಿಲ್ ಕುಂಬ್ಳೆ ಅವರು ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಡೆಕ್ಕನ್ ಚಾರ್ಜರ್ಸ್ ವಿರುದ್ಧ 6 ರನ್‌ಗಳಿಂದ ಸೋತಿದ್ದರು. ಆರ್​ಸಿಬಿ ಚೊಚ್ಚಲ ಟ್ರೋಫಿ ಕನಸು ಭಗ್ನಗೊಂಡಿತ್ತು.

3. ಸಚಿನ್ ತೆಂಡೂಲ್ಕರ್ ನೇತೃತ್ವದ ಮುಂಬೈ ಇಂಡಿಯನ್ಸ್ ಐಪಿಎಲ್ 2010ರ ಫೈನಲ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ 22 ರನ್‌ಗಳಿಂದ ಸೋತಿತ್ತು. ಮುಂಬೈ​​ಗೂ ಇದು ಮೊದಲ ಐಪಿಎಲ್ ಫೈನಲ್​ ಆಗಿತ್ತು.

4. ಡೇನಿಯಲ್ ವೆಟ್ಟೋರಿ ಐಪಿಎಲ್-2011ರಲ್ಲಿ ಆರ್​ಸಿಬಿ ನಾಯಕರಾಗಿದ್ದರು. ಆದರೆ ಫೈನಲ್​ನಲ್ಲಿ ಸಿಎಸ್​ಕೆ ವಿರುದ್ಧ 58 ರನ್‌ಗಳಿಂದ ಸೋತರು. ಆರ್​​ಸಿಬಿ 2ನೇ ಬಾರಿಗೆ ಫೈನಲ್​​ ಗೆಲ್ಲಲು ವಿಫಲವಾಯಿತು.

5. ಜಾರ್ಜ್ ಬೈಲಿ ನೇತೃತ್ವದ ಕಿಂಗ್ಸ್ ಇಲೆವೆನ್ ಪಂಜಾಬ್ 2014ರಲ್ಲಿ ಮೊದಲ ಬಾರಿಗೆ ಐಪಿಎಲ್ ಫೈನಲ್​ಗೇರಿತ್ತು. ಆದರೆ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ 3 ವಿಕೆಟ್‌ಗಳಿಂದ ಸೋತು ಟ್ರೋಫಿ ಗೆಲ್ಲುವಲ್ಲಿ ವಿಫಲವಾಗಿತ್ತು.

6. 2016ರ ಐಪಿಎಲ್‌ನಲ್ಲಿ ಆರ್‌ಸಿಬಿ ಮೂರನೇ ಬಾರಿಗೆ ಫೈನಲ್ ಪ್ರವೇಶಿಸಿತು. ಆಗ ವಿರಾಟ್ ಕೊಹ್ಲಿ ತಂಡದ ಜವಾಬ್ದಾರಿ ಹೊತ್ತಿದ್ದರು. ಆದರೆ ಫೈನಲ್‌ನಲ್ಲಿ ಸನ್​ರೈಸರ್ಸ್ 8 ರನ್‌ಗಳ ಅಂತರದಿಂದ ಆರ್​ಸಿಬಿ ಅನ್ನು ಸೋಲಿಸಿತು.

7. ಐಪಿಎಲ್ 2017ರಲ್ಲಿ ಸ್ಟೀವ್ ಸ್ಮಿತ್ ನಾಯಕತ್ವದಲ್ಲಿ ರೈಸಿಂಗ್ ಪುಣೆ ಸೂಪರ್ ಜೈಂಟ್ಸ್ ತಂಡವು ಪ್ರಶಸ್ತಿ ಸುತ್ತಿಗೆ ಅರ್ಹತೆ ಪಡೆದಿತ್ತು. ಆದರೆ ಮುಂಬೈ ಇಂಡಿಯನ್ಸ್ ವಿರುದ್ಧ 1 ರನ್ನಿಂದ ಸೋತು ಹೊರಬಿತ್ತು.

8. 2018ರ ಐಪಿಎಲ್​ನಲ್ಲಿ ಸನ್​ರೈಸರ್ಸ್​ ಹೈದಾರಾಬಾದ್ ತಂಡವು ಕೇನ್ ವಿಲಿಯಮ್ಸನ್ ನಾಯಕತ್ವದಲ್ಲಿ ಫೈನಲ್​ಗೇರಿತ್ತು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ಎದುರು ಮಂಡಿಯೂರಿತ್ತು.

9. ಶ್ರೇಯಸ್ ಅಯ್ಯರ್ ನಾಯಕತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮೊದಲ ಬಾರಿಗೆ 2020ರಲ್ಲಿ ಐಪಿಎಲ್ ಫೈನಲ್‌ಗೆ ಅರ್ಹತೆ ಗಳಿಸಿತು. ಆದರೆ ಪ್ರಶಸ್ತಿ ಗೆಲ್ಲಲು ವಿಫಲವಾಯಿತು. ಮುಂಬೈ ಇಂಡಿಯನ್ಸ್ ಚಾಂಪಿಯನ್ ಆಯಿತು.

10. 2021ರಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ಐಪಿಎಲ್ ಫೈನಲ್​ಗೇರಿತ್ತು. ಇಯಾನ್ ಮಾರ್ಗನ್ ನಾಯಕನಾಗಿದ್ದರು. ಆದರೆ ಚೆನ್ನೈ ಸೂಪರ್ ಕಿಂಗ್ಸ್ ನಾಲ್ಕನೇ ಬಾರಿಗೆ ಚಾಂಪಿಯನ್ ಆಯಿತು.

11. ಸಂಜು ಸ್ಯಾಮ್ಸನ್ ರಾಜಸ್ಥಾನ ರಾಯಲ್ಸ್ ತಂಡವನ್ನು 2022 ರಲ್ಲಿ ಐಪಿಎಲ್ ಫೈನಲ್‌ಗೆ ಮುನ್ನಡೆಸಿದರು. ಆದರೆ ಅವರು ಗುಜರಾತ್ ಟೈಟಾನ್ಸ್ ವಿರುದ್ಧ ಸೋಲನುಭವಿಸಿದರು.

12. 2023ರ ಐಪಿಎಲ್​​ಗೆ ಫೈನಲ್‌ನಲ್ಲಿ ಸಿಎಸ್‌ಕೆ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಿದ್ದವು. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಸೋತು ರನ್ನರ್​ಅಪ್​ಗೆ ತೃಪ್ತಿಯಾಗಿತ್ತು.

IPL_Entry_Point