ಇಶಾನ್ ಅರ್ಧಶತಕಕ್ಕೆ ಧೋನಿ ದಾಖಲೆ ಬ್ರೇಕ್; ಪಾಂಡ್ಯ-ಕಿಶನ್ ರೆಕಾರ್ಡ್ ಬ್ರೇಕಿಂಗ್ ಜೊತೆಯಾಟ
Ishan Kishan: ಶಾಹೀನ್ ಶಾ ಆಫ್ರಿದಿ ಮಾರಕ ದಾಳಿಗೆ ಭಾರತದ ಅಗ್ರ ಕ್ರಮಾಂಕವು ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾಗ 82 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ ಇಶಾನ್ ಕಿಶನ್, ಭಾರತಕ್ಕೆ ಆಸರೆಯಾದರು.
ಪಾಕಿಸ್ತಾನ ವಿರುದ್ಧದ ಏಷ್ಯಾಕಪ್ 202ರ ಪಂದ್ಯದಲ್ಲಿ, ಧೂಳಿಪಟವಾಗುತ್ತಿದ್ದ ಭಾರತದ ಬ್ಯಾಟಿಂಗ್ ಲೈನಪ್‌ಗೆ ಬಲ ತುಂಬಿದವರು ಇಶಾನ್ ಕಿಶನ್ (Ishan Kishan). ಮೇಲಿಂದ ಮೇಲೆ ಅಗ್ರ ಕ್ರಮಾಂಕದ ನಾಲ್ವರು ಬ್ಯಾಟರ್‌ಗಳ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ತಂಡಕ್ಕೆ ಇಶಾನ್ ಆಸರೆಯಾದರು. ಅವರೊಂದಿಗೆ ಜೊತೆಯಾದವರು ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ. ಇವರಿಬ್ಬರೂ ತಲಾ ಅರ್ಧಶತಕ ಸಿಡಿಸುವುದರೊಂದಿಗೆ, 138 ರನ್‌ಗಳ ಅಮೋಘ ಜೊತೆಯಾಟವಾಡಿ, ಟೀಮ್ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದರು. ಇವರ ಅಮೋಘ ಬ್ಯಾಟಿಂಗ್ ನೆರವಿನಿಂದ ಭಾರತ ತಂಡವು 200 ರನ್‌ಗಳ ಗಡಿ ದಾಟಿತು.
2023ರ ಏಷ್ಯಾಕಪ್ ಪಂದ್ಯಾವಳಿಗೆ ಭಾರತ ತಂಡದ ಬ್ಯಾಕ್-ಅಪ್ ಆಯ್ಕೆಯಾಗಿ ಸ್ಥಾನ ಪಡೆದವರು ಇಶಾನ್ ಕಿಶನ್. ಕೆಎಲ್ ರಾಹುಲ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಆಗಿದ್ದರು. ಆದರೆ, ರಾಹುಲ್ ಸಂಪೂರ್ಣ ಫಿಟ್ ಇಲ್ಲದ ಕಾರಣ ಶನಿವಾರದಂದು ಪಾಕಿಸ್ತಾನದ ವಿರುದ್ಧದ ಬ್ಲಾಕ್‌ಬಸ್ಟರ್ ಪಂದ್ಯದಲ್ಲಿ ಆಡುವ ಬಳಗದಲ್ಲಿ ಇಶಾನ್ ಸ್ಥಾನ ಪಡೆದರು. ಶಾಹೀನ್ ಶಾ ಆಫ್ರಿದಿ ಮಾರಕ ದಾಳಿಗೆ ಭಾರತದ ಅಗ್ರ ಕ್ರಮಾಂಕವು ಬ್ಯಾಟ್ ಬೀಸಲು ಹೆಣಗಾಡುತ್ತಿದ್ದಾಗ 82 ರನ್‌ಗಳ ಅಮೂಲ್ಯ ಕಾಣಿಕೆ ನೀಡಿದ ಕಿಶನ್, ಭಾರತಕ್ಕೆ ಆಸರೆಯಾದರು.
ರೋಹಿತ್ ಶರ್ಮಾ ಟಾಸ್ ಗೆದ್ದು ತಂಡದ ಬ್ಯಾಟಿಂಗ್ ಕ್ರಮಾಂಕವನ್ನು ಪ್ರಕಟಿಸಿದಾಗ, ಇಶಾನ್ 3ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಬೇಕಿತ್ತು. ಆದರೆ, ಇಶಾನ್ 5ನೇ ಕ್ರಮಾಂಕದಲ್ಲಿ ಮೈದಾನಕ್ಕಿಳಿದರು.
ಪಾಕ್ ವಿರುದ್ಧ ಚೊಚ್ಚಲ ಏಕದಿನ ಪಂದ್ಯದಲ್ಲೇ ಅರ್ಧಶತಕ
ವೆಸ್ಟ್ ಇಂಡೀಸ್ ಸರಣಿಯಲ್ಲಿ 52, 55, ಮತ್ತು 77 ರನ್‌ಗಳೊಂದಿಗೆ ಸತತ ಅರ್ಧಶತಕ ಗಳಿಸಿದ್ದ ಕಿಶನ್, ಇಂದು ಪಾಕ್ ವಿರುದ್ದವೂ ಅರ್ಧಶತಕ ಸಿಡಿಸಿದರು. ಆ ಮೂಲಕ ಏಕದಿನ ಸ್ವರೂಪದಲ್ಲಿ ಇದು ಅವರ ಸತತ ನಾಲ್ಕನೇ ಹಾಫ್ ಸೆಂಚುರಿಯಾಗಿದೆ. ತಮ್ಮ ಏಕದಿನ ವೃತ್ತಿಜೀವನದಲ್ಲಿ ಇದೇ ಮೊದಲ ಬಾರಿಗೆ 5ನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಇಶಾನ್, ಪಾಕಿಸ್ತಾನದ ವಿರುದ್ಧ ಏಕದಿನ ಮಾದರಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಅರ್ಧಶತಕ ಸಿಡಿಸಿದ ಒಂಬತ್ತನೇ ಭಾರತೀಯ ಬ್ಯಾಟರ್ ಎಂಬ ಖ್ಯಾತಿಗೆ ಕಿಶನ್ ಪಾತ್ರರಾದರು.
ಗರಿಷ್ಠ ಜೊತೆಯಾಟ
81 ಎಸೆತಗಳಲ್ಲಿ 82 ರನ್ ಗಳಿಸಿದ ಕಿಶನ್, ಅಂತಿಮವಾಗಿ ಹ್ಯಾರಿಸ್ ಎಸೆತಕ್ಕೆ ಔಟಾದರು. ಒಂದು ಹಂತದಲ್ಲಿ 4 ವಿಕೆಟ್ ನಷ್ಟಕ್ಕೆ 66 ರನ್ ಗಳಿಸಿದ್ದ ಭಾರತವು, ಐದು ವಿಕೆಟ್ ಪತನವಾಗುವಷ್ಟರಲ್ಲಿ 204 ರನ್ ಕಲೆ ಹಾಕಿತು. ಇದರಲ್ಲಿ ಕಿಶನ್ ಮತ್ತು ಹಾರ್ದಿಕ್ ಪಾಂಡ್ಯ ಪ್ರಮುಖ ಪಾತ್ರ ವಹಿಸಿದರು. 138 ರನ್‌ಗಳ ಜೊತೆಯಾಟವಾಡಿದ ಈ ಜೋಡಿ ದಾಖಲೆಯೊಂದನ್ನು ನಿರ್ಮಿಸಿದರು. ಪಾಕಿಸ್ತಾನದ ವಿರುದ್ಧ ಏಕದಿನ ಸ್ವರೂಪದಲ್ಲಿ ಐದನೇ ವಿಕೆಟ್‌ಗೆ ಭಾರತದ ಪರ ಗರಿಷ್ಠ ಜೊತೆಯಾಟ ಇದಾಗಿದೆ. ಇದೇ ವೇಳೆ ಏಷ್ಯಾಕಪ್‌ನಲ್ಲಿ 5 ಅಥವಾ ಅದಕ್ಕಿಂತ ಕೆಳಕ್ರಮಾಂಕದಲ್ಲಿ ಇದು ಈವರೆಗಿನ ಮೂರನೇ ಅತ್ಯುತ್ತಮ ಜೊತೆಯಾಟವಾಗಿದೆ. ನೇಪಾಳ ವಿರುದ್ಧದ ಏಷ್ಯಾಕಪ್ ಚೊಚ್ಚಲ ಪಂದ್ಯದಲ್ಲಿ ಪಾಕಿಸ್ತಾನ ತಂಡದ ಬಾಬರ್ ಅಜಮ್ ಮತ್ತು ಇಫ್ತಿಕರ್ ಅಹ್ಮದ್ ಗಳಿಸಿದ 214 ರನ್ ಮೊದಲನೇ ಉತ್ತಮ ಜೊತೆಯಾಟವಾಗಿದೆ.
ಧೋನಿ ದಾಖಲೆ ಬ್ರೇಕ್
ಇದರೊಂದಿಗೆ, ಪಾಕಿಸ್ತಾನದ ವಿರುದ್ಧದ ಏಷ್ಯಾಕಪ್ ಪಂದ್ಯದಲ್ಲಿ ಭಾರತೀಯ ವಿಕೆಟ್‌ಕೀಪರ್ ಹಾಗೂ ಬ್ಯಾಟರ್ ಗಳಿಸಿದ ಅತಿ ಹೆಚ್ಚು ಸ್ಕೋರ್ ಎಂಬ ದಾಖಲೆಗೆ ಇಶಾನ್ ಪಾತ್ರರಾಗಿದ್ದಾರೆ. ಅಲ್ಲದೆ ದಿಗ್ಗಜ ನಾಯಕ ಎಂಎಸ್ ಧೋನಿ ದಾಖಲೆ ಮುರಿದಿದ್ದಾರೆ. ಭಾರತದ ಮಾಜಿ ನಾಯಕ 2008ರಲ್ಲಿ ನಡೆದ ಪಂದ್ಯದಲ್ಲಿ 76 ರನ್ ಗಳಿಸಿದ ದಾಖಲೆಯನ್ನು ಇದೀಗ ಕಿಶನ್ ಬ್ರೇಕ್ ಮಾಡಿದ್ದಾರೆ