ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ-harbhajan singh take on virat kohli future as he says even 19 year old cannot compete with team india star jra ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ

ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ

ಭಾರತದ ಅನುಭವಿ ಕ್ರಿಕೆಟಿಗರಾದ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಭವಿಷ್ಯದ ಬಗ್ಗೆ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡಿದ್ದಾರೆ. ಫಿಟ್‌ನೆಸ್‌ ವಿಚಾರದಲ್ಲಿ ಯಾರು ಕೂಡಾ ವಿರಾಟ್‌ ಮುಂದೆ ನಿಲ್ಲಲು ಸಾಧ್ಯವಿಲ್ಲ ಎಂದು ಹೇಳಿದ್ದಾರೆ.

ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ
ಫಿಟ್‌ನೆಸ್‌ ವಿಚಾರದಲ್ಲಿ ಕೊಹ್ಲಿಗೆ 19ರ ಯುವಕನೂ ಸರಿಸಾಟಿಯಲ್ಲ; ವಿರಾಟ್ ವಿಶ್ವಕಪ್ ಭವಿಷ್ಯದ ಕುರಿತು ದಿಗ್ಗಜನ ಮಾತು ಕೇಳಿ (AFP)

ಟಿ20 ವಿಶ್ವಕಪ್ ಪಂದ್ಯಾವಳಿಯ ಬೆನ್ನಲ್ಲೇ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಚುಟುಕು ಸ್ವರೂಪಕ್ಕೆ ವಿದಾಯ ಹೇಳಿದರು. ಸುದೀರ್ಘ ವರ್ಷಗಳ ಬಳಿಕ ಐಸಿಸಿ ಟ್ರೋಫಿ ಬರ ನೀಗಿಸಿದ ನಂತರ, ಏಕದಿನ ಮತ್ತು ಟೆಸ್ಟ್‌ ಕ್ರಿಕೆಟ್‌ನತ್ತ ಗಮನಹರಿಸಲು ಹಿರಿಯ ಕ್ರಿಕೆಟಿಗರು ಆದ್ಯತೆ ನೀಡಿದ್ದಾರೆ. ಹೀಗಾಗಿ, 2024ರ ಟಿ20 ವಿಶ್ವಕಪ್‌ ಪಂದ್ಯಾವಳಿಯೇ ಇವರಿಬ್ಬರ ಕೊನೆಯ ವಿಶ್ವಕಪ್‌ ಆಗಲಿದೆಯಾ ಎಂಬ ಬೇಸರ ಅಭಿಮಾನಿಗಳದ್ದು. 2025ರಲ್ಲಿ ಭಾರತವು ಚಾಂಪಿಯನ್ಸ್‌ ಟ್ರೋಫಿ ಆಡಲಿದೆ. ಆ ಬಳಿಕ ಏಕದಿನ ವಿಶ್ವಕಪ್‌ ಇರುವುದು 2027ರಲ್ಲಿ. ಹೀಗಾಗಿ ಉಭಯ ಆಟಗಾರರ ಫಿಟ್‌ನೆಸ್‌ ಆ ಸಮಯಕ್ಕೆ ಹೇಗಿರಲಿದೆ ಎಂಬುದು ಅಭಿಮಾನಿಗಳ ಮುಂದಿರುವ ಸದ್ಯದ ಗೊಂದಲ.

ಟಿ20 ವಿಶ್ವಕಪ್‌ ಗೆಲುವಿನ ನಂತರ, ಭಾರತ ಏಕದಿನ ತಂಡಕ್ಕೆ ಮರಳಿದ ಹಿಟ್‌ಮ್ಯಾನ್‌, ಶ್ರೀಲಂಕಾ ವಿರುದ್ಧದ ಸರಣಿಯಲ್ಲಿ ತಂಡವನ್ನು ಮುನ್ನಡೆಸಿದರು. ಅನುಭವಿ ಆಟಗಾರ ವಿರಾಟ್ ಕೊಹ್ಲಿ ಕೂಡಾ ಆಡಿದರು. ಗೌತಮ್ ಗಂಭೀರ್ ಅವರ ಕೋಚಿಂಗ್‌ನಲ್ಲಿ ಆಡಿದ ಮೊದಲ ಸರಣಿಯಲ್ಲಿ ಭಾರತ ಮುಗ್ಗರಿಸಿತು. ಸದ್ಯ ಗಂಭೀರ್‌ ಹಾಗೂ ರೋಹಿತ್‌ ಯುಗದಲ್ಲಿ ಭಾರತವು ಮುಂದಿನ ವರ್ಷದ ಐಸಿಸಿ ಚಾಂಪಿಯನ್ಸ್ ಟ್ರೋಫಿ ಮೇಲೆ ಕಣ್ಣಿಟ್ಟಿದೆ. ಆದರೆ, ಅದಕ್ಕೂ ಮೊದಲು ಭಾರತ ಆಡಲಿರುವುದು ಕೇವಲ ಮೂರು ಏಕದಿನ ಪಂದ್ಯಗಳನ್ನು ಮಾತ್ರ. ಆವರೆಗೆ ಹಿಟ್‌ಮ್ಯಾನ್‌ ಮತ್ತು ಕೊಹ್ಲಿ ತಂಡದಲ್ಲಿರುವುದು ಬಹುತೇಕ ಖಚಿತ.

ಇನ್ನೂ ಐದು ವರ್ಷ ಕೊಹ್ಲಿ ಸುಲಭವಾಗಿ ಆಡಬಹುದು

ಲಂಕಾ ಸರಣಿ ಬಳಿಕ ಸುದ್ದಿಸಂಸ್ಥೆ ಪಿಟಿಐ ಜೊತೆಗೆ ಮಾತನಾಡಿದ ಭಾರತದ ದಿಗ್ಗಜ ಕ್ರಿಕೆಟಿಗ ಹರ್ಭಜನ್ ಸಿಂಗ್, ಕೊಹ್ಲಿ ಇನ್ನೂ ಐದು ವರ್ಷಗಳ ಕಾಲ ಅತ್ಯುನ್ನತ ಮಟ್ಟದಲ್ಲಿ ಕ್ರಿಕೆಟ್‌ ಆಡಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ ರೋಹಿತ್ ಇನ್ನೂ ಎರಡು ವರ್ಷಗಳ ಕಾಲ ಸುಲಭವಾಗಿ ಆಡಬಹುದು ಎಂದು ಅವರು ಹೇಳಿದ್ದಾರೆ. ವಿರಾಟ್ ಕೊಹ್ಲಿ ಫಿಟ್ನೆಸ್ ಬಗ್ಗೆ ನಿಮಗೆ ತಿಳಿದಿಲ್ಲ. ಅವರು ಐದು ವರ್ಷಗಳ ಕಾಲ ಆಡುವುದನ್ನು ನೀವು ನೋಡಬಹುದು. ಭಾರತ ತಂಡದಲ್ಲಿ ಬಹುಶಃ ಅವರು ಅತ್ಯಂತ ಫಿಟ್ ವ್ಯಕ್ತಿ, ಎಂದು ಹರ್ಭಜನ್ ಹೇಳಿದ್ದಾರೆ.

ವಿರಾಟ್ ಜೊತೆಗೆ 19 ವರ್ಷದ ಯುವಕನಿಗೂ ಸ್ಪರ್ಧಿಸಲು ಸಾಧ್ಯವಿಲ್ಲ

“ಫಿಟ್‌ನೆಸ್‌ ವಿಚಾರದಲ್ಲಿ ವಿರಾಟ್ ಅವರೊಂದಿಗೆ 19 ವರ್ಷದ ಯಾವುದೇ ಯುವಕನನ್ನು ಸ್ಪರ್ಧಿಸಲು ಹೇಳಿ. ಅದು ಯಾರೇ ಆಗಿದ್ದರೂ ಅವರನ್ನು ವಿರಾಟ್ ಸೋಲಿಸುತ್ತಾರೆ. ಅವರು ಅಷ್ಟರ ಮಟ್ಟಿಗೆ ಫಿಟ್ ಆಗಿದ್ದಾರೆ. ವಿರಾಟ್ ಮತ್ತು ರೋಹಿತ್ ಅವರಲ್ಲಿ ಇನ್ನೂ ಸಾಕಷ್ಟು ಕ್ರಿಕೆಟ್ ಉಳಿದಿದೆ. ಆಡುವ ಅಥವಾ ಬಿಡುವ ನಿರ್ಧಾರ ಸಂಪೂರ್ಣವಾಗಿ ಅವರಿಗೆ ಬಿಟ್ಟದ್ದು. ಅವರು ಪ್ರದರ್ಶನ ನೀಡುತ್ತಿದ್ದಾರೆ ಮತ್ತು ಭಾರತ ತಂಡವು ಗೆಲ್ಲುತ್ತಿದೆ. ಹೀಗಾಗಿ ಅವರು ಇನ್ನೂ ಕೆಲವು ವರ್ಷಗಳ ಕಾಲ ಆಡುವುದನ್ನು ಮುಂದುವರೆಸಬೇಕು,” ಎಂದು ಹರ್ಭಜನ್ ಸಿಂಗ್ ಹೇಳಿದ್ದಾರೆ.

ಎಲ್ಲಾ ಸ್ವರೂಪಗಳಲ್ಲಿಯೂ ಅನುಭವ ಬೇಕು

ಟೆಸ್ಟ್‌ ಕ್ರಿಕೆಟ್‌ ಆಡಲು ಹೆಚ್ಚು ಅನುಭವ ಬೇಕು. ಹೀಗಾಗಿ ಭಾರತ ತಂಡಕ್ಕೆ ಈ ಇಬ್ಬರು ವ್ಯಕ್ತಿಗಳ ಅಗತ್ಯವಿದೆ. ಸೀಮಿತ ಓವರ್‌ಗಳ ಕ್ರಿಕೆಟ್ ಆಗಿರಲಿ ಅಥವಾ ಟೆಸ್ಟ್ ಕ್ರಿಕೆಟ್ ಆಗಿರಲಿ, ಎಲ್ಲಾ ಸ್ವರೂಪಗಳಲ್ಲಿ ಅನುಭವ ಬೇಕು. ಉದಯೋನ್ಮುಖ ಪ್ರತಿಭೆಗಳನ್ನು ಪೋಷಿಸಲು ಅನುಭವಿ ಕ್ರಿಕೆಟಿಗರ ಅಗತ್ಯವಿದೆ. ಹಿರಿಯ ಆಟಗಾರರಾಗಿರಲಿ ಅಥವಾ ಯುವ ಆಟಗಾರರಾಗಿರಲಿ. ಎಲ್ಲಿಯವರೆಗೆ ಅವರು ಫಿಟ್ ಆಗಿರುತ್ತಾರೋ ಅಲ್ಲಿಯವರೆಗೆ ಅವರು ತಂಡಕ್ಕೆ ಆಯ್ಕೆಯಾಗಲು ಸಾಧ್ಯವಾಗುತ್ತದೆ, ಎಂದು ಹರ್ಭಜನ್ ಹೇಳಿದ್ದಾರೆ.