ಕನ್ನಡ ಸುದ್ದಿ  /  Cricket  /  Not Csk Or Rcb South Africa Ex Captain Graeme Smith Picks Former Champions Rr Mi As Favourites For Ipl 2024 Title Prs

ಆರ್​​ಸಿಬಿ-ಸಿಎಸ್​ಕೆ ಅಲ್ಲ; ಐಪಿಎಲ್ ಟ್ರೋಫಿ ಗೆಲ್ಲೋ ತಾಕತ್ತಿರೋದು ಈ 2 ತಂಡಗಳಿಗೆ ಮಾತ್ರ ಎಂದ ಸೌತ್ ಆಫ್ರಿಕಾ ಲೆಜೆಂಡ್

Graeme Smith : 17ನೇ ಆವೃತ್ತಿಯ ಐಪಿಎಲ್​ನಲ್ಲಿ ಚಾಂಪಿಯನ್ ಆಗುವ ಅವಕಾಶ ಯಾವ ತಂಡಗಳಿದೆ ಎಂಬುದನ್ನು ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಹಾಗೂ ಮಾಜಿ ನಾಯಕ ಗ್ರೇಮ್​ ಸ್ಮಿತ್​ ಬಹಿರಂಗಪಡಿಸಿದ್ದಾರೆ.

ಪ್ರಸಕ್ತ ಐಪಿಎಲ್​ನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ಗೆಲ್ಲಲ್ಲ ಎಂದ ಸೌತ್ ಆಫ್ರಿಕಾದ ಮಾಜಿ ಆಟಗಾರ ಗ್ರೇಮ್ ಸ್ಮಿತ್.
ಪ್ರಸಕ್ತ ಐಪಿಎಲ್​ನಲ್ಲಿ ಆರ್​​ಸಿಬಿ ಮತ್ತು ಸಿಎಸ್​ಕೆ ಗೆಲ್ಲಲ್ಲ ಎಂದ ಸೌತ್ ಆಫ್ರಿಕಾದ ಮಾಜಿ ಆಟಗಾರ ಗ್ರೇಮ್ ಸ್ಮಿತ್.

2024ರ ಇಂಡಿಯನ್ ಪ್ರೀಮಿಯರ್​ ಲೀಗ್​ನಲ್ಲಿ (IPL 2024) ಯಾವ ತಂಡ ಪ್ರಶಸ್ತಿ ಗೆಲ್ಲುವ ಫೇವರಿಟ್ ತಂಡಗಳ ಕುರಿತು ಮಾಜಿ ಕ್ರಿಕೆಟರ್​​ಗಳು ಭವಿಷ್ಯ ನುಡಿಯಲು ಆರಂಭಿಸಿದ್ದಾರೆ. ಒಬ್ಬೊಬ್ಬರು ಒಂದೊಂದು ತಂಡಕ್ಕೆ ಮತ ಹಾಕುತ್ತಿದ್ದಾರೆ. ಹಲವರಂತೂ ಚೆನ್ನೈ ಸೂಪರ್ ಕಿಂಗ್ಸ್ (Chennai Super Kings)​ ಟ್ರೋಫಿ ಗೆಲ್ಲುವುದು ಫಿಕ್ಸ್ ಎನ್ನುತ್ತಿದ್ದರೆ, ಇನ್ನೂ ಕೆಲವರು ಈ ಬಾರಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bengaluru) ಚೊಚ್ಚಲ ಟ್ರೋಫಿ ಗೆಲ್ಲುವುದನ್ನು ನಾವು ನೋಡಲಿದ್ದೇವೆ ಎಂದು ಅಭಿಪ್ರಾಯಪಟ್ಟಿದ್ದಾರೆ. ಅಭಿಮಾನಿಗಳು ತಮ್ಮ ನೆಚ್ಚಿನ ತಂಡಗಳನ್ನೇ ಬೆಂಬಲಿಸಿ ಹೇಳಿಕೆ ನೀಡುತ್ತಿದ್ದಾರೆ.

17ನೇ ಆವೃತ್ತಿಯ ಐಪಿಎಲ್​ನಲ್ಲಿ ಚಾಂಪಿಯನ್ ಆಗುವ ಅವಕಾಶ ಯಾವ ತಂಡಗಳಿದೆ ಎಂಬುದನ್ನು ದಕ್ಷಿಣ ಆಫ್ರಿಕಾದ ಲೆಜೆಂಡರಿ ಆಟಗಾರ ಹಾಗೂ ಮಾಜಿ ನಾಯಕ ಗ್ರೇಮ್​ ಸ್ಮಿತ್ (Graeme Smith)​ ಬಹಿರಂಗಪಡಿಸಿದ್ದಾರೆ. ಆರ್​ಸಿಬಿ ಮತ್ತು ಸಿಎಸ್​ಕೆ​ ತಂಡಗಳು ಈ ಸಲ ಟ್ರೋಫಿ ಗೆಲ್ಲಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ. ಆದರೆ ಐದು ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್ (Mumbai Indians) ಮತ್ತು ಉದ್ಘಾಟನಾ ಆವೃತ್ತಿಯ ಚಾಂಪಿಯನ್ ರಾಜಸ್ಥಾನ್ ರಾಯಲ್ಸ್ (Rajasthan Royals) ತಂಡಗಳು ಈ ಬಾರಿ ಪ್ರಶಸ್ತಿ ಗೆಲ್ಲುವ ಸಾಧ್ಯತೆ ಹೆಚ್ಚಿದೆ ಎಂದಿದ್ದಾರೆ.

‘ಮುಂಬೈ ಇಂಡಿಯನ್ಸ್​ - ರಾಜಸ್ಥಾನ ರಾಯಲ್ಸ್​ಗೆ ನೇರಾನೇರ ಪೈಪೋಟಿ’

ಸಂದರ್ಶನವೊಂದರಲ್ಲಿ ಮಾತನಾಡಿರುವ ಗ್ರೇಮ್ ಸ್ಮಿತ್, ‘ಮುಂಬೈ ಮತ್ತು ರಾಜಸ್ಥಾನ್ ತಂಡಗಳ ನಡುವೆ ಪ್ರಶಸ್ತಿಗೆ ಪೈಪೋಟಿ ನಡೆಯಲಿದೆ’ ಎಂದು ಭವಿಷ್ಯ ನುಡಿದಿದ್ದಾರೆ. ‘ಏಕೆಂದರೆ ಉಭಯ ತಂಡಗಳೂ ಸಮತೋಲಿತವಾಗಿ ಕಂಡು ಬರುತ್ತಿದ್ದು, ನೇರಾನೇರಾ ಪೈಪೋಟಿ ನಡೆಸುವುದು ಖಚಿತ. ಬ್ಯಾಟಿಂಗ್ ಮತ್ತು ಬೌಲಿಂಗ್​ ವಿಭಾಗದಲ್ಲಿ ಎರಡು ತಂಡಗಳಲ್ಲಿ ಅನುಭವಿಗಳೇ ತುಂಬಿದ್ದಾರೆ. ಪ್ರತಿ ಆವೃತ್ತಿಯಂತೆ ಈ ಸಲವೂ ರೋಚಕತೆ ಸೃಷ್ಟಿಸಿರುವ ಐಪಿಎಲ್​ನಲ್ಲಿ ಈ ತಂಡಗಳು ಟ್ರೋಫಿಗೆ ಮುತ್ತಿಕ್ಕಲಿವೆ’ ಎಂದು ಹೇಳಿದ್ದಾರೆ.

‘ಎಂಐ ಮತ್ತು ಆರ್​ಆರ್​ ತಂಡಗಳಲ್ಲಿ ಭಾರತದ ಪ್ರತಿಭಾವಂತ ಮತ್ತು ಅನುಭವಿ ವಿದೇಶಿ ಆಟಗಾರರು ದಂಡೇ ಇದೆ. ಇದು ಟೂರ್ನಿಯುದ್ದಕ್ಕೂ ನೆರವು ನೀಡುತ್ತದೆ’ ಎಂದಿರುವ ಸೌತ್ ಆಫ್ರಿಕಾ ಲೆಜೆಂಡ್, ‘ಮುಂಬೈ ಫ್ರಾಂಚೈಸಿ ರೋಹಿತ್​ ಶರ್ಮಾ ಕೆಳಗಿಳಿಸಿ ಹಾರ್ದಿಕ್ ಪಾಂಡ್ಯಗೆ ಪಟ್ಟ ಕಟ್ಟಿದೆ. ಆದರೆ, ಹಾರ್ದಿಕ್ ಮೊದಲ ಎರಡು ಪಂದ್ಯಗಳು ಸೋತ ಮಾತ್ರಕ್ಕೆ ಎಲ್ಲವೂ ಮುಗಿದಿದೆ ಎಂದಲ್ಲ. ಎರಡು ಸೋಲುಗಳು ಅವರಿಗೆ ಯಾವುದೇ ಸಮಸ್ಯೆ ಕೂಡ ಆಗುವುದಿಲ್ಲ’ ಎಂದು ಸ್ಮಿತ್ ಆತ್ಮವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಮುಂಬೈಗೆ ಸೋತರೂ ಸಮಸ್ಯೆಯಾಗಲ್ಲ ಎಂದ ಗ್ರೇಮ್ ಸ್ಮಿತ್

‘ನೂತನ ನಾಯಕ ಹಾರ್ದಿಕ್ ಪಾಂಡ್ಯ, ಮತ್ತು ಮಾಜಿ ನಾಯಕ ರೋಹಿತ್ ಶರ್ಮಾ ಇಬ್ಬರು ಸಹ ಅನುಭವಿ ಆಟಗಾರರು. ತಂಡಕ್ಕೆ ಬೇಕಿರುವುದೇನು? ಯಾವುದು ಉತ್ತಮ ಎಂಬುದರ ಅರಿವು ಇಬ್ಬರಿಗೂ ಇದೆ. ಮಾರಕ ವೇಗಿ ಜಸ್ಪ್ರೀತ್ ಬುಮ್ರಾ ಸೇರಿದಂತೆ ಪ್ರಮುಖ ವೇಗಿಗಳು ಮುಂಬೈ ತಂಡದ ಬಲವಾಗಿದ್ದಾರೆ’ ಎಂದು ಮುಂಬೈ ಗೆಲ್ಲಲು ಕಾರಣ ಏನೆಂಬುದನ್ನು ಅವರು ವಿವರಿಸಿದ್ದಾರೆ.

ಅದೇ ರೀತಿ ಗ್ರೇಮ್​ ಸ್ಮಿತ್ ತನ್ನ ಮಾಜಿ ತಂಡ ರಾಜಸ್ಥಾನ ತಂಡದ ಬಲಾಬಲಾ ವಿವರಿಸಿದ್ದಾರೆ. ‘ತಂಡದಲ್ಲಿ ಯುವ ಆಟಗಾರರು ಸಂಖ್ಯೆ ಹೆಚ್ಚಾಗಿದೆ. ಒಬ್ಬರಿಗಿಂತ ಒಬ್ಬರು ಪ್ರತಿಭಾನ್ವಿತ ಆಟಗಾರರು. ಸಂಜು ಸ್ಯಾಮ್ಸನ್, ಯಶಸ್ವಿ ಜೈಸ್ವಾಲ್, ಧ್ರುವ್ ಜುರೆಲ್, ರಿಯಾನ್ ಪರಾಗ್​ರಂತಹ ಆಟಗಾರರು ತಂಡದ ಬಲ ಎನಿಸಿದ್ದಾರೆ. ಬೌಲಿಂಗ್​​ನಲ್ಲಿ ಟ್ರೆಂಟ್ ಬೌಲ್ಟ್, ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಹಲ್ ಅವರಂತಹ ಅನುಭವಿಗಳಿದ್ದಾರೆ. ಇದು ಪ್ರಶಸ್ತಿ ಗೆಲ್ಲುವ ಸಾಮರ್ಥ್ಯ ಹೆಚ್ಚಿಸಿದೆ’ ಎಂದು ಸ್ಮಿತ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.