ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ
ಕನ್ನಡ ಸುದ್ದಿ  /  ಚುನಾವಣೆಗಳು  /  ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತಕ್ಕೆ 5 ಕಾರಣಗಳು ಹೀಗಿವೆ

ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದಲ್ಲಿ ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಇನ್ನಷ್ಟು ಕುಸಿತ ಕಂಡಿವೆ. ಬೆಂಗಳೂರು ಗ್ರಾಮಾಂತರದಲ್ಲಿ ಸುಧಾರಣೆ ಕಂಡುಬಂದಿದೆ. ಬೆಂಗಳೂರು ನಗರ ಕ್ಷೇತ್ರಗಳ ಮತದಾನ ಪ್ರಮಾಣ ಕುಸಿತಕ್ಕೆ 5 ಕಾರಣಗಳು ಹೀಗಿವೆ ನೋಡಿ.

ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತ ಕಂಡಿವೆ. (ಸಾಂಕೇತಿಕ ಚಿತ್ರ)
ಲೋಕಸಭಾ ಚುನಾವಣೆ; ಬೆಂಗಳೂರು ನಗರ ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣ ಇನ್ನಷ್ಟು ಕುಸಿತ ಕಂಡಿವೆ. (ಸಾಂಕೇತಿಕ ಚಿತ್ರ) (H Maruti )

ಬೆಂಗಳೂರು: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನ ಶುಕ್ರವಾರ (ಏಪ್ರಿಲ್ 26) ನಡೆಯಿತು. ದಕ್ಷಿಣ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳ ಒಟ್ಟಾರೆ ಮತದಾನ ಪ್ರಮಾಣ (ಶೇಕಡ 69.2) ದಲ್ಲಿ ಸುಧಾರಣೆ ಕಂಡರೂ, ಬೆಂಗಳೂರು ನಗರದ ಮೂರು ಕ್ಷೇತ್ರಗಳಲ್ಲಿ ಮತದಾನ ಪ್ರಮಾಣ ಕುಸಿತ ಕಂಡಿದೆ. 2019ರ ಲೋಕಸಭಾ ಚುನಾವಣೆಯ ಮತದಾನ ಪ್ರಮಾಣಕ್ಕೆ ಹೋಲಿಸಿದರೆ ಇಳಿಕೆಯಾಗಿರುವುದು ಕಳವಳ ಮೂಡಿಸಿದೆ. ಇನ್ನೊಂದೆಡೆ ಬೆಂಗಳೂರು ಗ್ರಾಮಾಂತರದಲ್ಲಿ ಮತದಾನ ಪ್ರಮಾಣದಲ್ಲಿ ಸುಧಾರಣೆ ಕಂಡುಬಂದಿದೆ.

ಮತದಾನ ಕುಸಿತಕ್ಕೆ ಕಾರಣವೇನು ಎಂಬ ವಿಶ್ಲೇಷಣೆ ನಡೆದಿದ್ದು, ತಜ್ಞರು ಮತದಾರರ ಪಟ್ಟಿಗಳಲ್ಲಿನ ವ್ಯತ್ಯಾಸಗಳನ್ನು ಉಲ್ಲೇಖಿಸುತ್ತಾರೆ. ವಿಶೇಷವಾಗಿ ಬೆಂಗಳೂರು ಕಾಸ್ಮೋಪಾಲಿಟನ್ ನಗರ. ಅಂದರೆ ದೇಶದ ನಾನಾ ಭಾಗಗಳ ಜನರೇ ಹೆಚ್ಚಿರುವ ನಗರ. ಇಲ್ಲಿ ಹೆಚ್ಚಿನ ಪ್ರಮಾಣದ ನಾಗರಿಕರು ಹೊರಗಿನವರು, ಅದೇ ರೀತಿ ಇಲ್ಲಿದ್ದವರು ಅನೇಕರು ಉದ್ಯೋಗ, ವಿದ್ಯಾಭ್ಯಾಸಕ್ಕಾಗಿ ಅನ್ಯಕಡೆ ವಲಸೆ ಹೋಗಿರುವುದೂ ಇದೆ. ಹೀಗಾಗಿ ಸಹಜವಾಗಿಯೇ ಮತದಾನ ಪ್ರಮಾಣ ಕಡಿಮೆಯಾಗುತ್ತದೆ.

2019ರ ಲೋಕಸಭೆ ಚುನಾವಣೆಗೆ ಹೋಲಿಸಿದರೆ 2024ರ ಮತದಾನ ಪ್ರಮಾಣ ಹೀಗಿದೆ

ಚುನಾವಣಾ ಆಯೋಗ ಪ್ರಕಟಿಸಿರುವ ತಾತ್ಕಾಲಿಕ ಅಂಕಿ ಅಂಶ ಪ್ರಕಾರ, ಬೆಂಗಳೂರು ಉತ್ತರದಲ್ಲಿ ಶೇಕಡ 54.42 ( 2019ಕ್ಕೆ ಹೋಲಿಸಿದರೆ ಶೇ 0.34 ಕಡಿಮೆ) ಮತದಾನ ಪ್ರಮಾಣ ದಾಖಲಾಗಿದೆ. ಈ ಕ್ಷೇತ್ರದಲ್ಲಿ 2019ರ ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಶೇಕಡ 54.76 ಮತದಾನವಾಗಿತ್ತು. ಇನ್ನು ಬೆಂಗಳೂರು ಸೆಂಟ್ರಲ್‌ನಲ್ಲಿ ಈ ಬಾರಿ ಶೇಕಡ 53.81 ಮತದಾನವಾಗಿದೆ. 2019ರಲ್ಲಿ ಶೇಕಡ 55.32 ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾರಿ ಶೇಕಡ 1.51ರಷ್ಟು ಮತದಾನ ಕಡಿಮೆಯಾಗಿದೆ.

ದಕ್ಷಿಣ ಬೆಂಗಳೂರಿನಲ್ಲಿ ಈ ಬಾರಿ ಶೇಕಡ 53.15 ಮತದಾನವಾಗಿದೆ. ಕಳೆದ ಬಾರಿ ಇಲ್ಲಿ ಶೇಕಡ 54.7 ಮತದಾನವಾಗಿತ್ತು. ಈ ಕ್ಷೇತ್ರದಲ್ಲಿ ಕಳೆದ ಬಾರಿಗೆ ಹೋಲಿಸಿದರೆ ಈ ಬಾರಿ ಶೇಕಡ 1.55 ರಷ್ಟು ಮತದಾನ ಪ್ರಮಾಣ ಕಡಿಮೆಯಾಗಿದೆ. ಆದಾಗ್ಯೂ, ಅಂಕಿಅಂಶಗಳನ್ನು ಸೂಕ್ಷ್ಮವಾಗಿ ಗಮನಿಸಿದರೆ, ರಾಜರಾಜೇಶ್ವರಿನಗರ ಮತ್ತು ಬೆಂಗಳೂರು ದಕ್ಷಿಣದ ಎರಡು ನಗರ ವಿಧಾನಸಭಾ ಕ್ಷೇತ್ರಗಳು ಕಳಪೆ ಪ್ರದರ್ಶನ ಕಂಡುಬಂದಿದೆ. ಇಲ್ಲಿ ಸುಮಾರು 55 ಪ್ರತಿಶತದಷ್ಟು ಮತದಾನವಾಗಿದೆ. ಆನೇಕಲ್‌ನಲ್ಲಿ ಶೇ.60ರಷ್ಟು ಮತದಾನವಾಗಿದ್ದರೆ, ಉಳಿದ ಎಲ್ಲ ಕ್ಷೇತ್ರಗಳಲ್ಲಿ ಶೇ.80ಕ್ಕೂ ಹೆಚ್ಚು ಮತದಾನವಾಗಿದೆ.

ಇನ್ನು ಬೆಂಗಳೂರು ಗ್ರಾಮಾಂತರದಲ್ಲಿ ಈ ಬಾರಿ ಶೇಕಡ 67.29 ಮತದಾನ ಪ್ರಮಾಣ ದಾಖಲಾಗಿದೆ. 2019ರ ಲೋಕಸಭೆ ಚುನಾವಣೆಯಲ್ಲಿ ಶೇಕಡ 64.9 ಮತದಾನವಾಗಿತ್ತು. ಇದಕ್ಕೆ ಹೋಲಿಸಿದರೆ ಈ ಬಾಗಿ 2.31 ಮತದಾನ ಹೆಚ್ಚಳವಾಗಿದೆ.

ಬೆಂಗಳೂರಲ್ಲಿ ಮತದಾನ ಪ್ರಮಾಣ ಕುಸಿತಕ್ಕೆ ಕಾರಣಗಳಿವು

1) ಮತದಾರರ ಪಟ್ಟಿಯಲ್ಲಿ ಮೃತರ ಹೆಸರು ಡಿಲೀಟ್ ಆಗಿಲ್ಲ. ಊರುಬಿಟ್ಟವರ ಹೆಸರು ರದ್ದುಗೊಳಿಸಿಲ್ಲ. ಉದ್ಯೋಗ, ಶಿಕ್ಷಣ ನಿಮಿತ್ತ ಬೇರೆ ದೇಶ, ರಾಜ್ಯಗಳಿಗೆ ಹೋದವರು ಮತದಾನಕ್ಕೆ ಬಂದಿಲ್ಲ ಎಂಬುದನ್ನು ಅನೇಕರು ಉಲ್ಲೇಖಿಸುತ್ತಾರೆ.

2) ಇನ್ನು ಕೆಲವರ ಬಳಿ ಮತದಾರರ ಗುರುತಿನ ಚೀಟಿ ಇದ್ದರೂ, ಮತದಾರರ ಪಟ್ಟಿಯಲ್ಲಿ ಅವರ ಹೆಸರು ಇಲ್ಲದೇ ಇರುವ ಕಾರಣ ಮತದಾನ ಮಾಡಲು ಸಾಧ್ಯವಾಗಿಲ್ಲ. ಈ ಸಮಸ್ಯೆ ಪ್ರತಿಬಾರಿ ಕಾಡುವಂಥದ್ದು. ಚುನಾವಣಾ ಆಯೋಗ ಇದನ್ನು ಗಂಭೀರವಾಗಿ ತೆಗೆದುಕೊಂಡಂತೆ ಇಲ್ಲ.

3) ಮತದಾನ ದಿನ ಶುಕ್ರವಾರ ಬಂದಿದ್ದು, ವಾರಾಂತ್ಯವಾದ ಕಾರಣ ಅನೇಕರು ವಾರಾಂತ್ಯದ ರಜೆ ನೆಪದಲ್ಲಿ ಊರು, ಪ್ರವಾಸಕ್ಕೆ ಹೋಗಿದ್ದಾರೆ.

4) ಬೆಂಗಳೂರಿನಲ್ಲಿ ಹಿಂದೆಂದೂ ಅನುಭವಿಸಿ ಅರಿಯದ ತಾಪಮಾನ, ಉಷ್ಣಾಂಶದ ಕಾರಣ ಅನೇಕರು ಮನೆಬಿಟ್ಟು ಹೊರಗೆ ಬಂದಿಲ್ಲ. ಇದು ಮತದಾನ ಕಡಿಮೆಯಾಗಲು ಕಾರಣ ಎಂಬುದೂ ಉಲ್ಲೇಖವಾಗುತ್ತಿದೆ.

5) ನೀರಿನ ಕೊರತೆ, ಮೂಲಸೌಕರ್ಯ ಕೊರತೆ ಕಾರಣ ನೊಂದವರು ಕೂಡ ಮತದಾನಕ್ಕೆ ಬಂದಿಲ್ಲ ಎಂಬ ಮಾತುಗಳೂ ಕೇಳಿಬಂದಿದೆ.

Whats_app_banner