Abhishek Ambareesh wedding Date: ಅಭಿಷೇಕ್ ಅಂಬರೀಶ್- ಅವಿವಾ ಬಿದ್ದಪ್ಪ ಮದುವೆಗೆ ದಿನಾಂಕ ನಿಗದಿ
ಅಭಿಷೇಕ್ ಅಂಬರೀಶ್ ಮತ್ತು ಅವೀವಾ ಬಿದ್ದಪ್ಪ ಜೋಡಿ ಇದೀಗ ಹಸೆಮಣೆ ಏರಲು ಸಿದ್ಧತೆ ನಡೆಸಿದ್ದಾರೆ. ತೆರೆಮರೆಯಲ್ಲಿ ಮದುವೆ ಕೆಲಸಗಳಿಗೆ ಚಾಲನೆ ನೀಡಿದ್ದು, ಆಮಂತ್ರಣ ನೀಡುವ ಕೆಲಸ ಚಾಲ್ತಿಯಲ್ಲಿದೆ.
Abhishek Ambareesh wedding Date: ಸ್ಯಾಂಡಲ್‌ವುಡ್ ನಟ, ಜೂನಿಯರ್ ಅಂಬಿ ಅಭಿಷೇಕ್ ಅಂಬರೀಶ್ (Abhishek Ambareesh) ಮದುವೆ ತಯಾರಿಯಲ್ಲಿದ್ದಾರೆ. ಅವಿವಾ ಬಿದ್ದಪ್ಪ ಅವರ ಜತೆಗೆ ಸಪ್ತಪದಿ ತುಳಿಯುವ ಕಾತರದಲ್ಲಿದ್ದಾರೆ. ಕಳೆದ ವರ್ಷ ಅದ್ದೂರಿಯಾಗಿ ನಿಶ್ಚಿತಾರ್ಥ ನೆರವೇರಿಸಿಕೊಂಡಿದ್ದ ಈ ಜೋಡಿ, ಈಗ ಮದುವೆಯ ದಿನಾಂಕ ನಿಗದಿಪಡಿಸಿದ್ದು, ಆಮಂತ್ರಣ ಪತ್ರಿಕೆ ನೀಡಿ ಮದುವೆಗೆ ಆಹ್ವಾನಿಸುವ ಕೆಲಸವೂ ಶುರುವಾಗಿದೆ.
ಡಿಸೆಂಬರ್‌ನಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಸಿನಿಮಾ ಸೇರಿ ರಾಜಕೀಯ ಗಣ್ಯರು ಎರಡೂ ಕುಟುಂಬಗಳ ಆಪ್ತರು ಭಾಗವಹಿಸಿ, ನವ ಜೋಡಿಗೆ ಶುಭ ಕೋರಿದ್ದರು. ಈಗ ಅದೇ ರೀತಿ ಮದುವೆಯನ್ನೂ ಅಷ್ಟೇ ಅದ್ದೂರಿಯಾಗಿ ನೆರವೇರಿಸಲಿದ್ದಾರೆ ಸುಮಲತಾ ಅಂಬರೀಶ್. ಹಾಗಾದರೆ ಮದುವೆ ಯಾವಾಗ? ಸದ್ಯದ ಮಾಹಿತಿ ಪ್ರಕಾರ ಜೂನ್ 9 ಮತ್ತು 10ರಂದು ನಡೆಯಲಿದೆ. ಬೆಂಗಳೂರಿನ ಪ್ಯಾಲೆಸ್ ಗ್ರೌಂಡ್ಸ್‌ನಲ್ಲಿ ಈ ಜೋಡಿಯ ಮದುವೆ ನೆರವೇರಲಿದೆ.
ರಾಜಕೀಯ ಗಣ್ಯರಿಗೆ ಆಮಂತ್ರಣ
ಕೆಲ ದಿನಗಳ ಹಿಂದಷ್ಟೇ ಸಂಸದೆ ಸುಮಲತಾ ಅಂಬರೀಶ್ ಮತ್ತು ಅಭಿಷೇಕ್ ಒಟ್ಟಿಗೆ ದೆಹಲಿಗೆ ತೆರಳಿ ಪ್ರಧಾನಿ ಮೋದಿ ಸೇರಿ ಹಲವು ಕೇಂದ್ರ ಸಚಿವರಿಗೆ ಆಮಂತ್ರಣ ಪತ್ರಿಕೆ ನೀಡಿದ್ದರು. ಆ ಫೋಟೋಗಳನ್ನೂ ಸುಮಲತಾ ಅಂಬರೀಶ್ ಹಂಚಿಕೊಂಡಿದ್ದರು. ಅದೇ ರೀತಿ ಸೌತ್ ಸಿನಿಮಾ ರಂಗದ ಚಿರಂಜೀವಿ, ರಜನಿಕಾಂತ್, ನಾಗಾರ್ಜುನ್, ಬಾಲಿವುಡ್ ನಟ ಅಮಿತಾಬ್ ಬಚ್ಚನ್‌ಗೂ ಆಮಂತ್ರಣ ನೀಡಲಿದ್ದಾರೆ.
ಮಂಡ್ಯದಲ್ಲಿ ಬೀಗರ ಊಟ..
ರೆಬೆಲ್‌ಸ್ಟಾರ್ ಅಂಬರೀಶ್ ಅವರದ್ದು ಮೂಲ ಮಂಡ್ಯ ಜಿಲ್ಲೆಯವರು. ಹಾಗಾಗಿ ಮಂಡ್ಯ ಸೊಗಡಿನಲ್ಲಿಯೇ ಅಲ್ಲಿನ ಜನರಿಗೂ ಮದುವೆಯ ವಿಶೇಷ ಕಾರ್ಯಕ್ರಮ ಆಯೋಜಿಸಿದ್ದಾರೆ. ಜೂ. 12 ರಂದು ಬೀಗರ ಊಟವನ್ನು ಮಂಡ್ಯದಲ್ಲಿಯೇ ಆಯೋಜಿಸಲಾಗಿದೆ.