ಕನ್ನಡ ಸುದ್ದಿ  /  ಕರ್ನಾಟಕ  /  Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

Prajwal Revanna: ಪ್ರಜ್ವಲ್‌ ರೇವಣ್ಣ ಬಂಧಿಸಿ ಕರೆ ತನ್ನಿ; ಸಿಎಂಗೆ ಪತ್ರ ಬರೆದ ಕರ್ನಾಟಕದ ಚಿಂತಕರು, ಸಾಹಿತಿಗಳು

ಹಾಸನ ಸಂಸದ ಪ್ರಜ್ವಲ್‌ ರೇವಣ್ಣ( Prajwal Revanna) ಅವರನ್ನು ಲೈಂಗಿಕ ದೌರ್ಜನ್ಯ ಪ್ರಕರಣದ ಹಿನ್ನೆಲೆಯಲ್ಲಿ ಬಂಧಿಸಿ ಕರೆತರಬೇಕು ಎಂದು ಕರ್ನಾಟಕದ ಲೇಖಕರು, ಚಿಂತಕರು, ಸಾಹಿತಿಗಳು ಸಿಎಂ ಸಿದ್ದರಾಮಯ್ಯ( CM Siddaramaiah) ಅವರಿಗೆ ಪತ್ರ ಬರೆದಿದ್ದಾರೆ.

ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಒತ್ತಡ ಹೆಚ್ಚುತ್ತಿದೆ.
ಪ್ರಜ್ವಲ್‌ ರೇವಣ್ಣ ಬಂಧನಕ್ಕೆ ಒತ್ತಡ ಹೆಚ್ಚುತ್ತಿದೆ.

ಬೆಂಗಳೂರು: ಹಾಸನದಲ್ಲಿ ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ನಡೆಸಿರುವ ಆರೋಪ ಎದುರಿಸುತ್ತಿರುವ ಸಂಸದ ಪ್ರಜ್ವಲ್ ರೇವಣ್ಣ ಅವರು ವಿದೇಶಕ್ಕೆ ಪರಾರಿಯಾಗಿದ್ದು. ಅವರನ್ನು ಬಂಧಿಸಿ ಕರೆ ತರುವಂತೆ ಕರ್ನಾಟಕದ ಪ್ರಗತಿಪರ ಚಿಂತಕರು, ಸಾಹಿತಿಗಳು, ಮಹಿಳಾ ಸಂಘಟನೆಗಳ ಪ್ರಮುಖರು ಒತ್ತಾಯಿಸಿದ್ದಾರೆ. ಈ ಕುರಿತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಹಿರಂಗ ಪತ್ರ ಬರೆದಿರುವ ಕರ್ನಾಟಕದ ನಾನಾ ಭಾಗಗಳ 107 ಮಂದಿ ಸಾಹಿತಿಗಳು, ಚಿಂತಕರು, ಹೋರಾಟಗಾರರು, ವಿಡಿಯೋಗಳ ಮೂಲಕ ಮಹಿಳೆಯರ ಮಾನ ಹರಣ ಮಾಡಿರುವವರ ವಿರುದ್ದ ಕಠಿಣ ಕ್ರಮ ಆಗಬೇಕು ಎಂದು ಆಗ್ರಹಿಸಿದ್ದಾರೆ.

ಟ್ರೆಂಡಿಂಗ್​ ಸುದ್ದಿ

ಹಿರಿಯ ಲೇಖಕರಾದ ಡಾ. ವಿಜಯಾ, ಸಾಹಿತಿ ಡಾ.ಜಿ ರಾಮಕೃಷ್ಣ, ಡಾ.ವಸುಂಧರಾ ಭೂಪತಿ, ಕೆ, ನೀಲಾ, ಕೆ.ಎಸ್ ವಿಮಲಾ,ಮೀನಾಕ್ಷಿ ಬಾಳಿ, ಕುಂ. ವೀರಭದ್ರಪ್ಪ,‌ ಪ್ರೊ.ಮುಜಾಫರ್ ಅಸ್ಸಾದಿ ಸಹಿ ಮಾಡಿರುವ ಪ್ರಮುಖರು.

ಪ್ರಕರಣ ಹೊರ ಬಂದ ತಕ್ಷಣ ಚುನಾವಣಾ ಸ್ಪರ್ಧೆಗೆ ಅವಕಾಶ ನೀಡಬಾರದಾಗಿತ್ತು. ಹಗರಣ ಬಯಲಾಗಿ ಐದು ದಿನಗಳಾದರೂ ಆರೋಪಿಯನ್ನು ಸ್ವತಂತ್ರವಾಗಿ ಬಿಟ್ಟಿದ್ದು, ಆತನ ಮೇಲೆ‌ ಕಣ್ಗಾವಲು ಹಾಕಿಲ್ಲ. ಇದರಿಂದ ಸರ್ಕಾರದ ಮೇಲೆ ವಿಶ್ವಾಸವಿಟ್ಟು, ಮಹಿಳೆಯರು ಸುರಕ್ಷಿತವಾಗಿರಲು ಸಾಧ್ಯವೇ ಎಂಬ ಪ್ರಶ್ನೆ ಮೂಡಿದೆ. ಸಂತ್ರಸ್ತರ ಕುಟುಂಬಗಳು ಮಾನಸಿಕ ಯಾತನೆಗಳಿಗೆ ಗುರಿಯಾಗಿವೆ. ಅಲ್ಲದೆ ವಿಡಿಯೋಗಳು ಲಕ್ಷಾಂತರ ಜನರಿಗೆ ತಲುಪಿವೆ. ಇದರಿಂದ ಯುವಜನರು, ಕಾಮುಕರು, ಮಕ್ಕಳ ಮೇಲೆ ಪರಿಣಾಮ ಬೀರಬಹುದಾಗಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ರಾಜಕಾರಣಿಗಳ ಮೇಲೆ ಕಿಡಿ

ಅನೇಕ ವರ್ಷಗಳಿಂದ ನಡೆದುಕೊಂಡ ಬಂದ ಹಗರಣವಿದು. ರಾಜಕೀಯ ನಾಯಕರು ತಮ್ಮ ಹಿತಾಸಕ್ತಿಗೆ, ಚುನಾವಣೆ ಲಾಭಕ್ಕಾಗಿ ಬಳಸುತ್ತಿರುವುದು ಆಘಾತಕಾರಿಯಾಗಿದೆ. ಸಂತ್ರಸ್ತರ ಪೋಟೋ, ವಿಡಿಯೋ ದಾಖಲಿಸಿ ಇಟ್ಟುಕೊಂಡಿರುವುದು, ದೂರು ಕೊಡದಂತೆ ಬೆದರಿಸುವುದು, ಅಪಹರಿಸುವ ಹಂತಕ್ಕೆ ಹೋಗಿರುವುದು ನಿಜಕ್ಕೂ ಆತಂಕಕಾರಿ. ಸರ್ಕಾರ ಕೂಡ ಕಠಿಣ ಕ್ರಮ ಕೈಗೊಳ್ಳಬೇಕು. ರಾಜಕೀಯ ನೇತಾರರು ಇಂತ ವಿಚಾರದಲ್ಲಿ ಸೂಕ್ಷ್ಮವಾಗಿ ವರ್ತಿಸಬೇಕು ಎಂದು ಸಲಹೆ ನೀಡಿದ್ದಾರೆ.

ಪ್ರಜಲ್ ತಾತ, ತಂದೆ, ತಾಯಿ, ಚಿಕ್ಕಪ್ಪ, ಚಿಕ್ಕಮ್ಮ, ಅಣ್ಣ ಎಲ್ಲರೂ ಪ್ರಜಾಪ್ರಭುತ್ವದ ಎಲ್ಲಾ ಹುದ್ದೆಗಳನ್ನು, ಸವಲತ್ತುಗಳನ್ನು ಬಳಸಿಕೊಂಡಿದ್ದಾರೆ. ಪ್ರಜ್ವಲ್ ರೇವಣ್ಣ ಮತ್ತು ಅವರ ಕುಟುಂಬ ಪ್ರಜಾಪ್ರಭುತ್ವದ ಮುಸುಕಿನೊಳಗೆ ಪ್ರಜಾಪ್ರತಿನಿಧಿಗಳೆಂಬ ದಿರಿಸು ಧರಿಸಿದ್ದಾರೆ. ಇಂತವರು ತಪ್ಪು ಮಾಡಿದಾಗಲೂ ಕಠಿಣ ಕ್ರಮ ಆಗದೇ ಇದ್ದಾಗ ಜನ ವಿಶ್ವಾಸ ಕಳೆದುಕೊಳ್ಳುವ ಸಾಧ್ಯತೆಯೇ ಹೆಚ್ಚಿರುವುದರಿಂ ಕ್ರಮ ಆಗಲೇಬೇಕು ಎಂದು ಒತ್ತಾಯಿಸಿದ್ದಾರೆ.

ನಮಗೆ ಎಚ್ಚರಿಕೆ: ಪರಮೇಶ್ವರ್

ಸಂಸದ ಪ್ರಜ್ವಲ್ ರೇವಣ್ಣ ಅವರ ಪ್ರಕರಣವನ್ನು ಈಗಾಗಲೇ ಸರ್ಕಾರ ಗಂಭೀರವಾಗಿ ಪರಿಗಣಿಸಿದ್ದು, ಸಾಹಿತಿಗಳು ಪತ್ರ ಬರೆದಿರುವುದರಿಂದ ಎಚ್ಚರಿಸಿದಂತಾಗುತ್ತದೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ ಅವರು ಹೇಳಿದ್ದಾರೆ.

ಬೆಂಗಳೂರಿನ ಸದಾಶಿವನಗರದ ತಮ್ಮ ನಿವಾಸದ ಬಳಿ ಬುಧವಾರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ಸಾಹಿತಿಗಳು ಸಮಾಜದ ಕಳಕಳಿ ಇರುವಂತವರು. ನಿತ್ಯ ಅನೇಕ ವಿಷಯಗಳನ್ನು ಅವರು ಗಮನಿಸುತ್ತಿರುತ್ತಾರೆ. ಆ ನಿಟ್ಟಿನಲ್ಲಿ ಸರ್ಕಾರಕ್ಕೆ ಪತ್ರ ಬರೆದಿದ್ದಾರೆ. ಸಾಹಿತಿಗಳು ಪತ್ರದ ಮೂಲಕ ವ್ಯಕ್ತಪಡಿಸಿರುವ ಅಭಿಪ್ರಾಯವನ್ನು ಸರ್ಕಾರ ತೆಗೆದುಕೊಳ್ಳುತ್ತದೆ ಎಂದರು.

ಶಾಸಕ ಹೆಚ್.ಡಿ.ರೇವಣ್ಣ ಅವರೇ ಹಳೇ ವಿಡಿಯೋ ಎಂದು ಹೇಳಿಕೊಂಡಿದ್ದಾರೆ. ಅವರ ಕುಟುಂಬಕ್ಕೆ ಇದೆಲ್ಲವೂ ಗೊತ್ತಿದ್ದು ಮುಂದುವರಿಯಲು ಬಿಟ್ಟಿರುವ, ಕುಟುಂಬದ ವಿರುದ್ಧವೂ ಕ್ರಮ ಜರುಗಿಸಬೇಕು ಎಂದು ಸಾಹಿತಿಗಳು ಒತ್ತಾಯಿಸಿದ್ದಾರೆ ಎಂದು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅದೆಲ್ಲವನ್ನು ಎಸ್ಐಟಿ ಕ್ರಮ ತೆಗೆದುಕೊಳ್ಳುತ್ತದೆ. ತನಿಖೆ ಹಂತದಲ್ಲಿ ಯಾವ ವಿಚಾರಗಳನ್ನು ನಾವು ಹೇಳಲು ಬರುವುದಿಲ್ಲ. ಇದೆಲ್ಲವನ್ನು ಎಸ್ಐಟಿ ಅವರು ಗಮನಕ್ಕೆ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.

ಹಾಸನ ಸಂಸದ ಪ್ರಜ್ವಲ್ ರೇವಣ್ಣ ವಿದೇಶದಿಂದ ವಾಪಸ್ ಆಗುತ್ತಿರುವ ಮಾಹಿತಿ ನನಗಿಲ್ಲ. ಆಧಿಕಾರಿಗಳಿಗೆ ಮಾಹಿತಿ ಇರುತ್ತದೆ. ತನಿಖೆ ನಡೆಯುವಾಗ ಯಾವ ವಿಷಯವನ್ನು ಹೇಳಬೇಕು, ಹೇಳಬಾರದು ಎಂಬುದು ಅವರಿಗಿರುತ್ತದೆ. ಕೆಲವು ಸಂದರ್ಭದಲ್ಲಿ ಇಂಟಲಿಜೆನ್ಸ್ ಅವರಿಗೆ ಗೊತ್ತಿರುವುದಿಲ್ಲ. ಆದರೆ, ಬೇರೆಯವರಿಗೆ ಗೊತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ಹೇಳಿದರೆ ಸಹಾಯವಾಗುತ್ತದೆ ಎಂದು ತಿಳಿಸಿದರು.

IPL_Entry_Point