ಕಟ್ಟಡ ಕುಸಿತದ ಬೆನ್ನಿಗೆ ಬೆಂಗಳೂರಲ್ಲಿರುವ ಅಕ್ರಮ ನಿರ್ಮಾಣ ಪತ್ತೆಗೆ ಹೊರಟಿದೆ ಬಿಬಿಎಂಪಿ, ಸೋಮವಾರದಿಂದಲೇ ಸಮೀಕ್ಷೆ ಶುರು
ಬಾಬುಸಾಪಾಳ್ಯ ಕಟ್ಟಡ ಕುಸಿತ ಪ್ರಕರಣದಲ್ಲಿ ಎಂಟು ಕಾರ್ಮಿಕರು ಮೃತಪಟ್ಟ ಬೆನ್ನಿಗೆ ಬೆಂಗಳೂರಲ್ಲಿರುವ ಅಕ್ರಮ ನಿರ್ಮಾಣ ಪತ್ತೆಗೆ ಹೊರಟಿದೆ ಬಿಬಿಎಂಪಿ. ಸೋಮವಾರದಿಂದಲೇ ಈ ಸಮೀಕ್ಷೆ ಶುರುವಾಗಲಿದ್ದು, ಅದರ ವಿವರ ಇಲ್ಲಿದೆ.
ಬೆಂಗಳೂರು: ಬಾಬುಸಾಪಾಳ್ಯದ ಕಟ್ಟಡ ಕುಸಿತ ಪ್ರಕರಣದ ಬೆನ್ನಿಗೆ ಎಚ್ಚೆತ್ತುಕೊಂಡ ಬಿಬಿಎಂಪಿ, ತನ್ನ ವ್ಯಾಪ್ತಿಯಲ್ಲಿ ನಗರದೊಳಗೆ ಮತ್ತು ಹೊರವಲಯದಲ್ಲಿರುವ ಅಕ್ರಮ ನಿರ್ಮಾಣಗಳ ಪತ್ತೆಗೆ ಮುಂದಾಗಿದೆ. ಸೋಮವಾರದಿಂದಲೇ ಸಮೀಕ್ಷೆ ಶುರುವಾಗಲಿದೆ. ಬೆಂಗಳೂರು ಉಸ್ತುವಾರಿ ಸಚಿವರೂ ಆಗಿರುವ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಸೂಚನೆ ಮೇರೆಗೆ ಬಿಬಿಎಂಪಿ ಅಧಿಕಾರಿಗಳು ಕಾರ್ಯಪ್ರವೃತ್ತರಾಗಿದ್ದಾರೆ. ಗುರುವಾರ (ಅಕ್ಟೋಬರ್ 24) ಬಿಬಿಎಂಪಿ ಅಧಿಕಾರಿಗಳ ಜತೆಗೆ ಸಭೆ ನಡೆಸಿದ ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, “ವಿಪತ್ತು ನಿರ್ವಹಣಾ ಕಾಯ್ದೆ ಅಡಿ ಅಗತ್ಯ ಕ್ರಮ ಕೈಗೊಳ್ಳುವ ಸಂಪೂರ್ಣ ಅಧಿಕಾರವಿದೆ. ಇಂತಹ ಪರಿಸ್ಥಿತಿಯಲ್ಲಿ ಸರ್ಕಾರ ಯಾವುದೇ ಆಸ್ತಿಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಬಹುದು” ಎಂದು ಹೇಳಿದರು.
ಅಪಾಯಕಾರಿ ಕಟ್ಟಡ ತೆರವಿಗೆ ಕಾಯ್ದೆ ತಿದ್ದುಪಡಿ ಸುಳಿವು ನೀಡಿದ ಉಪ ಮುಖ್ಯಮಂತ್ರಿ
ವಿಪತ್ತು ನಿರ್ವಹಣಾ ಕಾಯ್ದೆಗೆ ತಿದ್ದುಪಡಿ ತಂದು ಬಿಎಂಟಿಎಫ್, ಬಿಡಿಎ, ಬಿಬಿಎಂಪಿ, ಬಿಎಂಆರ್‌ಡಿಎಗೆ ಹೆಚ್ಚಿನ ಅಧಿಕಾರ ನೀಡಲಾಗುವುದು. ಅಪಾಯಕಾರಿ, ಶಿಥಿಲಗೊಂಡ ಹಾಗೂ ಅನಧಿಕೃತ ಕಟ್ಟಡ ತೆರವಿಗೆ ಕಾನೂನು ತಿದ್ದುಪಡಿ ಅಥವಾ ಸುಗ್ರೀವಾಜ್ಞೆ ತರಬೇಕು ಎಂದು ಉಪ ಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರ ಜೊತೆಗೆ ಮಾತಾನಾಡುತ್ತ ಹೇಳಿದರು.
ಮಳೆ ನೀರು ಮತ್ತು ಕೆರೆಗಳ ನಡುವೆ ಸಂಪರ್ಕ ಜಾಲದ ಕುರಿತು ಮಾತನಾಡಿದ ಅವರು, ಬರಗಾಲದಲ್ಲಿ ಕೆರೆಗಳು ಬತ್ತಿ ಹೋಗಿದ್ದವು. ಕೆರೆಗಳು ತುಂಬಬೇಕು, ಅಂತರ್ಜಲದ ಪುನಶ್ಚೇತನವಾಗಬೇಕು. ಎಲ್ಲ ಕೆರೆಗಳ ನಡುವೆ ಸಂಪರ್ಕ ಏರ್ಪಡಿಸಿ ಮಳೆ ನೀರು ಸರಾಗವಾಗಿ ಹರಿಯುವಂತೆ ಮಾಡಲು ಮಾಸ್ಟರ್ ಪ್ಲಾನ್ ಸಿದ್ದಪಡಿಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಪ್ರವಾಹದ ನೀರು ಕೂಡ ಕೆರೆಗೆ ಹೋಗಬೇಕು. ಕೆರೆಯಿಂದ ಕೋಡಿ ಬೀಳುವ ನೀರು ಸರಾಗವಾಗಿ ಹೋಗುವುದಕ್ಕೆ ಗೇಟ್ ಅಳವಡಿಸಬೇಕು. ಇದಕ್ಕೆ ಬೇಕಾಗಿರುವ ಮೂಲಸೌಕರ್ಯ ರೂಪಿಸಲು ಕ್ರಮ ತೆಗೆದುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಹೇಳಿದರು.
ಇನ್ನು, ಯಲಹಂಕ ಭಾಗದಲ್ಲಿ ಜಲಾವೃತವಾಗಿದ್ದ ಕೇಂದ್ರೀಯ ವಿಹಾರ ಸೇರಿ ಕೆಲವು ಪ್ರದೇಶಗಳ ನಿವಾಸಿಗಳನ್ನು ಸ್ಥಳಾಂತರ ಮಾಡಲಾಗುತ್ತಿದೆ. ಕೇಂದ್ರೀಯ ವಿಹಾರ ಅಪಾರ್ಟ್‌ಮೆಂಟ್‌ನ ಕೆಲವು ಕುಟುಂಬದವರು ಸ್ಥಳಾಂತರಗೊಳ್ಳಲು ಒಪ್ಪುತ್ತಿಲ್ಲ. ಹೀಗಾಗಿ, ಆ ಕುಟುಂಬದವರಿಂದ ಮುಚ್ಚಳಿಕೆ ಪತ್ರ ಬರೆಸಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ಉಪಮುಖ್ಯ ಮಂತ್ರಿ ಡಿ.ಕೆ.ಶಿವಕುಮಾರ್ ಸುದ್ದಿಗಾರರಿಗೆ ತಿಳಿಸಿದರು.
ಸೋಮವಾರದಿಂದಲೇ ಅಕ್ರಮ ನಿರ್ಮಾಣ, ನಿರ್ಮಾಣ ಹಂತದ ಕಟ್ಟಡಗಳ ಸಮೀಕ್ಷೆ
ಬೆಂಗಳೂರು ನಗರ ಮತ್ತು ಹೊರ ವಲಯದಲ್ಲಿರುವ ನಿರ್ಮಾಣ ಹಂತದ ಕಟ್ಟಡಗಳ ಸಮೀಕ್ಷೆ ಸೋಮವಾರದಿಂದ ಶುರುವಾಗಲಿದೆ. ಖಾಸಗಿಯಾಗಿ ಹಾಗೂ ಪಾಲಿಕೆಯಿಂದ ಈ ಸಮೀಕ್ಷೆ ನಡೆಸಲಾಗುವುದು. ಯಾವುದಾದರೂ ಕಟ್ಟಡ ಕಾನೂನುಬಾಹಿರವಾಗಿ ನಿರ್ಮಾಣವಾಗುತ್ತಿದೆಯೇ ಎಂದು ಪತ್ತೆ ಮಾಡಿ, ಅಂತಹ ನಿರ್ಮಾಣ ತಡೆಗಟ್ಟಲಾಗುವುದು. ಪ್ರತಿ ಕಟ್ಟಡದ ಫೋಟೋ ಹಾಗೂ ವಿಡಿಯೋ ಚಿತ್ರೀಕರಣ ಮಾಡಲಾಗುತ್ತದೆ. ಜಂಟಿ ಆಯುಕ್ತರ ನೇತೃತ್ವದಲ್ಲಿ ಈ ಕಾರ್ಯಾಚರಣೆ ನಡೆಯಲಿದ್ದು, ಡ್ರೋನ್ ಮೂಲಕ ಕಾರ್ಯಾಚರಣೆಯ ಮೇಲೆ ಪೂರ್ಣ ನಿಗಾವಹಿಸಲಾಗುವುದು ಎಂದು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಹೇಳಿದರು.
ಮಂಗಳವಾರ ಬಾಬುಸಾಪಾಳ್ಯದಲ್ಲಿ ನಿರ್ಮಾಣ ಹಂತದ ಕಟ್ಟಡ ಕುಸಿದು ಎಂಟು ಕಾರ್ಮಿಕರು ಮೃತಪಟ್ಟು, ಹಲವರು ಗಾಯಗೊಂಡಿದ್ದರು. ‘ಬಿ’ ಖರಾಬ್ ಭೂಮಿಯಲ್ಲಿ ಕಟ್ಟಡ ನಿರ್ಮಿಸಿದ್ದರಿಂದ ಅನಧಿಕೃತ ನಿರ್ಮಾಣಗಳ ಮೇಲೆ ಗಮನಹರಿಸುವಂತೆ ಮಾಡಿದೆ. ಬಿಬಿಎಂಪಿಯ ಟೌನ್ ಪ್ಲಾನಿಂಗ್ ವಿಭಾಗದಿಂದ ಬಾಬುಸಾಪಾಳ್ಯ ಕಟ್ಟಡ ನಿರ್ಮಾಣಕ್ಕೆ ಮಂಜೂರಾತಿ ಕೊಟ್ಟಿರಲಿಲ್ಲ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ.