ಕರ್ನಾಟಕದಲ್ಲಿ ಡ್ರಗ್ಸ್ ಕೇಸ್, ಆನ್‌ಲೈನ್ ವಂಚನೆ ಹೆಚ್ಚಳ ತಡೆಗೆ ಕಠಿಣ ಕ್ರಮ; ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಪರಮೇಶ್ವರ ವಿವರಣೆ
ಕರ್ನಾಟಕದಲ್ಲಿ2023 ರಲ್ಲಿ 10 ಟನ್ ಗಾಂಜಾ, 250 ಕೆಜಿ ಡ್ರಗ್ಸ್ ಸುಟ್ಟು ಹಾಕಲಾಗಿದೆ. 150 ವಿದೇಶಿ ವಿದ್ಯಾರ್ಥಿಗಳ ಬಂಧನವಾಗಿದೆ. ರಾಜ್ಯದಲ್ಲಿ ಡ್ರಗ್ಸ್ ಕೇಸ್, ಆನ್‌ಲೈನ್ ವಂಚನೆ ಹೆಚ್ಚಳ ತಡೆಗೆ ಕಠಿಣ ಕ್ರಮ ಜರುಗಿಸುವುದಾಗಿ ವಿಧಾನ ಪರಿಷತ್‌ನಲ್ಲಿ ಗೃಹ ಸಚಿವ ಪರಮೇಶ್ವರ ವಿವರಿಸಿ ಭರವಸೆ ನೀಡಿದರು. (ವರದಿ- ಎಚ್.ಮಾರುತಿ, ಬೆಂಗಳೂರು)
ಬೆಂಗಳೂರು: ಕರ್ನಾಟಕದಲ್ಲಿ 2023ರಲ್ಲಿ 10 ಟನ್ ಗಾಂಜಾ, 250 ಕೆಜಿ ಸಿಂಥೆಟಿಕ್ ಡ್ರಗ್ಸ್ ಸೇರಿ 150 ಕೋಟಿ ರೂ. ಮೌಲ್ಯದ ಡ್ರಗ್ಸ್ ಅನ್ನು ಸುಟ್ಟು ಹಾಕಲಾಗಿದೆ. ವಿದ್ಯಾರ್ಥಿ ವೀಸಾ ಮೇಲೆ ಆಗಮಿಸಿದ 150 ವಿದೇಶಿ ವಿದ್ಯಾರ್ಥಿಗಳನ್ನು ಬಂಧಿಸಲಾಗಿದೆ ಎಂದು ವಿಧಾನಪರಿಷತ್‌ಗೆ ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.
ರಾಜ್ಯದ 2,409 ಶಾಲಾ ಕಾಲೇಜುಗಳಲ್ಲಿ ಸುಮಾರು 3.95 ಲಕ್ಷ ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸಲಾಗಿದೆ. ಯಾವುದೇ ಕಾರಣಕ್ಕೂ ರಾಜ್ಯವನ್ನು ಉಡ್ತಾ ಕರ್ನಾಟಕ ಮಾಡಲು ಬಿಡುವುದಿಲ್ಲ ಎಂದು ಅವರು ಇದೇ ವೇಳೆ ತಿಳಿಸಿದರು.
ಯಾವುದೇ ಕಾರಣಕ್ಕೂ ಕರ್ನಾಟಕವನ್ನು ಪಂಜಾಬ್ ಹಾದಿಯಲ್ಲಿ ಸಾಗಲು ಬಿಡುವುದಿಲ್ಲ ಮತ್ತು ಡ್ರಗ್ಸ್ ವಿರುದ್ಧ ಸಮರ ನಿಲ್ಲುವುದಿಲ್ಲ ಎಂದು ಅವರು ಘೋಷಿಸಿದರು.
ಡ್ರಗ್ಸ್ ಸಾವು ಪ್ರಕರಣ; ಕರ್ನಾಟಕಕ್ಕೆ ಎರಡನೇ ಸ್ಥಾನ
ಡ್ರಗ್ಸ್ ಸಾವುಗಳಿಗೆ ಸಂಬಂಧಪಟ್ಟಂತೆ ರಾಜ್ಯ ಎರಡನೇ ಸ್ಥಾನದಲ್ಲಿದೆ ಎಂದು ಕೆಲವು ಸದಸ್ಯರು ಆತಂಕ ವ್ಯಕ್ತಪಡಿಸಿದರು. 2017ರಲ್ಲಿ ದೇಶದಲ್ಲಿ 745 ಸಾವುಗಳು ಡ್ರಗ್ಸ್ ಗಳಿಂದ ಸಂಭವಿಸಿದ್ದು, 81 ಸಾವುಗಳು ಕರ್ನಾಟಕದಲ್ಲಿ ಸಂಭವಿಸಿವೆ. 2018ರಲ್ಲಿ ದೇಶದಲ್ಲಿ 875 ಸಾವುಗಳು ಸಂಭವಿಸಿದ್ದು, 91 ಕರ್ನಾಟಕದಲ್ಲಿ ನಡೆದಿವೆ. 2019ರಲ್ಲಿ 704 ಸಾವುಗಳು ಸಂಭವಿಸಿದ್ದು, ರಾಜ್ಯದಲ್ಲಿ 67 ಮಂದಿ ಕರ್ನಾಟಕದಲ್ಲಿ ಅಸುನೀಗಿದ್ದಾರೆ ಎಂದು ಬಿಜೆಪಿಯ ಡಾ.ಧನಂಜಯ ಸರ್ಜಿ ಮಾಹಿತಿ ಹಂಚಿಕೊಂಡರು.
2024 ರಲ್ಲಿ ರಾಜ್ಯದಲ್ಲಿ ಜುಲೈ 10ರವರೆಗೆ 1,791 ಡ್ರಗ್ಸ್ ಸಂಬಂಧಿ ಪ್ರಕರಣಗಳು ದಾಖಲಾಗಿದ್ದು, 884 ಪ್ರಕರಣಗಳು ನ್ಯಾಯಾಲಯಗಳಲ್ಲಿ ವಿಚಾರಣೆಯ ಹಂತದಲ್ಲಿವೆ. 189 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2022ರಲ್ಲಿ 6,406 ಪ್ರಕರಣಗಳು ದಾಖಲಾಗಿದ್ದು, 2,365 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. 2023ರಲ್ಲಿ 6,764 ಪ್ರಕರಣಗಳು ದಾಖಲಾಗಿದ್ದು, 2,280 ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ ಎಂದು ಸದನಕ್ಕೆ ತಿಳಿಸಲಾಗಿದೆ.
ಇದೇ ಸಂದರ್ಭದಲ್ಲಿ ಪ್ರತಿಯೊಂದು ಪ್ರಾಥಮಿಕ ಆರೋಗ್ಯ ಕೇಂದ್ರ ಮತ್ತು ಸಮುದಾಯ ಆರೋಗ್ಯ ಕೇಂದ್ರಗಳಿಗೆ ಗಾಂಜಾ ಪರೀಕ್ಷಾ ಕಿಟ್ ಗಳನ್ನು ನೀಡಬೇಕು ಎದು ಸರ್ಜಿ ಆಗ್ರಹಪಡಿಸಿದರು.
ಕರ್ನಾಟಕದಲ್ಲಿ ಆನ್ ಲೈನ್ ವಂಚನೆ ಪ್ರಕರಣ ಹೆಚ್ಚಳ
ರಾಜ್ಯದಲ್ಲಿ 2020 ರಿಂದ ಇದುವರೆಗೆ 8,231 ಆನ್ ಲೈನ್ ವಂಚನೆ ಪ್ರಕರಣಗಳು ವರದಿಯಾಗಿದ್ದು, ನಾಗರಿಕರು 566.97 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಇದರಲ್ಲಿ ಕೇವಲ 69.4 ಕೋಟಿ ರೂ.ಗಳನ್ನು ಮಾತ್ರ ವಸೂಲಿ ಮಾಡಲಾಗಿದೆ. ಅಚ್ಚರಿ ಎಂದರೆ 2020ರಲ್ಲಿ 394 ಪ್ರಕರಣಗಳು ವರದಿಯಾಗಿದ್ದು, ಸಾರ್ವಜನಿಕರು 5.67 ಕೋಟಿ ರೂ. ಹಣವನ್ನು ಮಾತ್ರ ಕಳೆದುಕೊಂಡಿದ್ದಾರೆ. 2023ರಲ್ಲಿ 4460 ಪ್ರಕರಣಗಳು ದಾಖಲಾಗಿದ್ದು ಸಾರ್ವಜನಿಕರು 347 ಕೋಟಿ ರೂ. ಹಣವನ್ನು ಕಳೆದುಕೊಂಡಿದ್ದಾರೆ. 2023ರಲ್ಲಿ ದಾಖಲಾದ ಪ್ರಕರಣಗಳಲ್ಲಿ 1,039 ಪ್ರಕರಣಗಳನ್ನು ಬಗೆಹರಿಸಿದ್ದು, 47.67 ಕೋಟಿ ರೂ, ಹಣವನ್ನು ವಸೂಲಿ ಮಾಡಲಾಗಿದೆ. 2024ರಲ್ಲಿ ಇದುವರೆಗೆ 1,820 ಆನ್ ಲೈನ್ ವಂಚನೆ ಪ್ರಕರಣಗಳು ಇದುವರೆಗೂ ದಾಖಲಾಗಿದ್ದು, 178.18 ಕೋಟಿ ರೂ. ಹಣವನ್ನು ಸಾರ್ವಜನಿಕರು ಕಳೆದುಕೊಂಡಿದ್ದಾರೆ. 15.71 ಕೋಟಿ ರೂ. ಹಣವನ್ನು ವಸೂಲಿ ಮಾಡಲಾಗಿದೆ.
ಸಾಲ ನೀಡುವ ನಕಲಿ ಆಪ್ ಗಳ ಮೂಲಕ ನಡೆಯುವ ವಂಚನೆಗಳಲ್ಲೂ ಹೆಚ್ಚಳವಾಗಿದೆ. 2020ರಲ್ಲಿ 51 ಸಾಲ ನೀಡುವ ನಕಲಿ ಆಪ್ ವಂಚನೆಗಳು ದಾಖಲಾಗಿ 98 ಲಕ್ಷ ರೂ. ವಂಚನೆಯಾಗಿದ್ದರೆ 2023ರಲ್ಲಿ 517 ಪ್ರಕರಣಗಳು ದಾಖಲಾಗಿ 6.88 ಕೋಟಿ ರೂ. ಹಣದ ಮೋಸ ನಡೆದಿದೆ. 2024ರಲ್ಲಿ ಇದುವರೆಗೂ 134 ಪ್ರಕರಣಗಳು ದಾಖಲಾಗಿ ಸಾರ್ವಜನಿಕರು 4.61 ಕೋಟಿ ರೂ. ಹಣ ಕಳೆದುಕೊಂಡಿದ್ದಾರೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.
ಪೊಲೀಸ್ ಸಹಾಯವಾಣಿಯಲ್ಲಿ 59 ಮಂದಿ ಕೆಲಸ ಮಾಡುತ್ತಿದ್ದು ದಿನಂಪ್ರತಿ 3,019 ಕರೆಗಳನ್ನು ಸ್ವೀಕರಿಸುತ್ತಿದ್ದಾರೆ. ಇವರಿಗೆ ಒತ್ತಡ ಹೆಚ್ಚುತ್ತಿದ್ದು, ಹೆಚ್ಚಿನ ಸಿಬ್ಬಂದಿಯನ್ನು ನೇಮಕ ಮಾಡುವಂತೆ ಉಮಾಶ್ರೀ ಆಗ್ರಹಪಡಿಸಿದ್ದಾರೆ.
(ವರದಿ- ಎಚ್.ಮಾರುತಿ, ಬೆಂಗಳೂರು)
ಕರ್ನಾಟಕದ ಮತ್ತಷ್ಟು ತಾಜಾ ಸುದ್ದಿ, ಕ್ರೈಮ್ ಸುದ್ದಿ, ಬೆಂಗಳೂರು ನಗರ ಸುದ್ದಿ, ರಾಜಕೀಯ ವಿಶ್ಲೇಷಣೆ ಓದಿ.