Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು
ಕನ್ನಡ ಸುದ್ದಿ  /  ಕರ್ನಾಟಕ  /  Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

Bengaluru Rains; ಬೆಂಗಳೂರಲ್ಲಿ ಮತ್ತೆ ಮಳೆರಾಯನ ಅಬ್ಬರ, ಭಾರಿ ಮಳೆಗೆ ರಸ್ತೆ ಜಲಾವೃತವಾಗಿ ವಾಹನ ಸವಾರರು ಕಂಗಾಲು

ಬೆಂಗಳೂರಿನಲ್ಲಿ ಇಂದು (ಆಗಸ್ಟ್ 29) ಅಪರಾಹ್ನ ಸುರಿದ ಭಾರಿ ಮಳೆಗೆ ರಸ್ತೆಗಳು ಜಲಾವೃತವಾಗಿದ್ದು, ಸಂಚಾರ ಅಸ್ತವ್ಯಸ್ತವಾಗಿದೆ. ವಿವಿಧೆಡೆ ವಾಹನ ಸವಾರರು ಪರದಾಡಿದ ದೃಶ್ಯಗಳು ಸಾಮಾನ್ಯವಾಗಿದ್ದವು.

ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ, ಕೆಳಸೇತುವೆ ಜಲಾವೃತವಾಗಿರುವ ದೃಶ್ಯ
ಬೆಂಗಳೂರಲ್ಲಿ ಭಾರಿ ಮಳೆಗೆ ರಸ್ತೆ, ಕೆಳಸೇತುವೆ ಜಲಾವೃತವಾಗಿರುವ ದೃಶ್ಯ

ಬೆಂಗಳೂರು: ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು (ಆಗಸ್ಟ್ 29) ಅಪರಾಹ್ನ ದಿಢೀರ್ ಮಳೆ ಸುರಿದ ಕಾರಣ ಬನ್ನೇರುಘಟ್ಟ ರಸ್ತೆ, ಮೆಜೆಸ್ಟಿಕ್‌, ಕೋರಮಂಗಲ, ಆಡುಗೋಡಿ, ಮಡಿವಾಳ ಸೇರಿ ಬಹುತೇಕ ಕಡೆ ರಸ್ತೆ ಜಲಾವೃತವಾಗಿ ಸಂಚಾರ ಅಸ್ತವ್ಯಸ್ತವಾಯಿತು. ಪಾಣತ್ತೂರು ಕೆಳಸೇತುವೆ ಜಲಾವೃತವಾಗಿದ್ದು, ವಾಹನ ಸವಾರರು ಪರದಾಡಿದ ವಿಡಿಯೋ ವೈರಲ್ ಆಗಿದೆ.

ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾದ ಕಾರಣ ಬೆಂಗಳೂರಿನಲ್ಲಿ ಮತ್ತೆ ಮಳೆರಾಯನ ಆಗಮನವಾಗಿದೆ. ಅಪರಾಹ್ನ ಮಳೆಯಾದ ಬೆನ್ನಿಗೆ ಸಂಚಾರಕ್ಕೆ ಅಡ್ಡಿ ಉಂಟಾಗಿದ್ದು, ಬೆಂಗಳೂರು ಸಂಚಾರ ಪೊಲೀಸರು ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿಕೊಡಲು ಹರಸಾಹಸ ಮಾಡಿದರು.

ಇದೇ ವೇಳೆ ಬೆಂಗಳೂರು ಸಂಚಾರ ಪೊಲೀಸರು ತತ್‌ಕ್ಷಣದ ಮಾಹಿತಿಗಳನ್ನು ಸೋಷಿಯಲ್ ಮೀಡಿಯಾ ಮೂಲಕ ಜನರಿಗೆ ತಲುಪಿ, ಜಾಗೃತಿ ಮೂಡಿಸುತ್ತಿದ್ದರು.

ಬೆಂಗಳೂರು ಭಾರಿ ಮಳೆಗೆ ಎಲ್ಲೆಲ್ಲಿ ಸಂಚಾರ ವ್ಯತ್ಯಯ

ಪಾಣತ್ತೂರು ಸೇತುವೆ ಬಳಿ ಜಲಾವೃತವಾಗಿರುವ ನಿಧಾನಗತಿಯ ಸಂಚಾರವಿರುತ್ತದೆ, ದಯಮಾಡಿ ಸಹಕರಿಸಿ ಎಂದು ಬೆಂಗಳೂರು ಸಂಚಾರ ಪೊಲೀಸರು ವಿಡಿಯೋ ಶೇರ್ ಮಾಡಿದ್ದರು. ಇದೇ ರೀತಿ, ಕಮಾಂಡ್ ಆಸ್ಪತ್ರೆ ಯಿಂದ ವಿಮಾನ ನಿಲ್ದಾಣ ರಸ್ತೆಯ ಕಡೆಗೆ ರಸ್ತೆ ಜಲಾವೃತವಾಗಿದ್ದು ನಿಧಾನಗತಿಯ ವಾಹನ ಸಂಚಾರವಿತ್ತು.

ಇನ್ನೊಂದೆಡೆ, ಬೆಳ್ಳಂದೂರು ಕೋಡಿ ಬಳಿ ಜಲಾವೃತವಾಗಿರುವ ಕಾರಣ ಸಕ್ರಾ ಆಸ್ಪತ್ರೆ ರಸ್ತೆ ಕಡೆಗೆ ನಿಧಾನಗತಿಯ ಸಂಚಾರವಿತ್ತು. ಅದೇ ರೀತಿ, ಕಾಡುಬೀಸನಹಳ್ಳಿ ಹತ್ತಿರ ನೀರು ನಿಂತಿರುವುದರಿಂದ ಮಾರತ್ತಹಳ್ಳಿ (ಎರಡೂ ಬದಿಯ) ಕಡೆಗೆ ನಿಧಾನಗತಿಯ ಸಂಚಾರವಿತ್ತು. ಹೊರ ವರ್ತುಲ ರಸ್ತೆಯ ರೈಬೋ ಜಂಕ್ಷನ್ ಹತ್ತಿರ ಸೇಲಂ ಬ್ರಿಡ್ಜ್ ಕೆಳಗೆ ಸ್ವಲ್ಪ ವಾಟರ್ ಲಾಗಿನ್ ಆಗಿದ್ದು ಮಾರತಳ್ಳಿ ಕಡೆಗೆ ಸಂಚಾರವು ನಿಧಾನಗತಿಯಲ್ಲಿತ್ತು. ಹೆಬ್ಬಾಳ ಪೋಲೀಸ್ ಠಾಣೆ ಹತ್ತಿರ ನೀರು ನಿಂತಿರುವುದರಿಂದ ವಿಮಾನ ನಿಲ್ದಾಣ ಮೇಲ್ಸೇತುವೆ ಕಡೆಗೆ ನಿಧಾನಗತಿಯ ಸಂಚಾರವಿತ್ತು ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ಹಾಗೆಯೇ, ಮಾರತಹಳ್ಳಿ ಸರ್ವೀಸ್ ರಸ್ತೆಯಿಂದ ಕಾಡುಬೀಸನಹಳ್ಳಿ ಕಡೆಗೆ, ಅನಿಲ್ ಕುಂಬ್ಳೆ ವೃತ್ತದಬಳಿ, ಸಿಬಿಐ ಮೇಲ್ಸೇತುವೆಯಿಂದ ವಿಮಾನ ನಿಲ್ದಾಣ ರಸ್ತೆ ಕಡೆಗೆ, ಎಸ್‌ಜೆಪಿ ರಸ್ತೆಯಿಂದ ಟೌನ್‌ಹಾಲ್ ಜಂಕ್ಷನ್ ಕಡೆಗೆ ಮಳೆಯ ಕಾರಣ ವಾಹನ ಸಂಚಾರ ನಿಧಾನಗತಿಯಲ್ಲಿತ್ತು.

ಮಹದೇವಪುರ ಪೊಲೀಸ್ ಠಾಣಾವ್ಯಾಪ್ತಿಯ ಲೌರಿ ರೈಲ್ವೆ ಅಂಡರ್ ಪಾಸ್ ಹತ್ತಿರ ವಾಟರ್ ಲಾಗಿನ್ ಆಗಿದ್ದು ಮಾರತಹಳ್ಳಿ ಹಾಗೂ ಐಟಿಪಿಎಲ್ ಕಡೆಗೆ ಸಂಚಾರ ದಟ್ಟಣೆ ಉಂಟಾಗಿದೆ ಎಂದು ಬೆಂಗಳೂರು ಸಂಚಾರ ಪೊಲೀಸರು ತಿಳಿಸಿದ್ದಾರೆ.

ವಿಲ್ಸ‌ನ್ ಗಾರ್ಡ್‌ನನ ಸಿದ್ದಯ್ಯ ರಸ್ತೆಯಲ್ಲಿ ಮಳೆ ನೀರು ನಿಂತ ಪರಿಣಾಮ‌ ಟ್ರಾಫಿಕ್‌ ಜಾಮ್ ಆಗಿದೆ. ಚರಂಡಿ ಕ್ಲೀನ್ ಮಾಡದ ಹಿನ್ನಲೆ ರಸ್ತೆ ಮೇಲೆ‌ ನೀರು ನಿಂತುಕೊಂಡಿದ್ದು, ಸಾರ್ವಜನಿಕರು ಬಿಬಿಎಂಪಿಗೆ ಹಿಡಿಶಾಪ ಹಾಕಿದ್ದಾರೆ.

ಸಿಲ್ಕ್ ಬೋರ್ಡ್ ಬೊಮ್ಮನಹಳ್ಳಿ ಜಂಕ್ಷನ್‌ನಲ್ಲಿ ರಾತ್ರಿ ಸಂಚಾರ ದಟ್ಟಣೆ ತೀವ್ರಗೊಂಡಿತ್ತು. ಎಕ್ಸ್‌ ಬಳಕೆದಾರರೊಬ್ಬರು ಅಲ್ಲಿನ ಫೋಟೋ, ವಿಡಿಯೋವನ್ನು ಶೇರ್ ಮಾಡಿಕೊಂಡಿದ್ದಾರೆ.

ನೇರಳೆ ಮೆಟ್ರೋ ಮಾರ್ಗದಲ್ಲಿ ವಾಲಿದ ಮರ, ರೈಲು ಸಂಚಾರ ವ್ಯತ್ಯಯ

ಬೆಂಗಳೂರಿನ ಭಾರಿ ಮಳೆಯ ಸಂದರ್ಭದಲ್ಲಿ ಮರ ಒಂದು ಮೆಟ್ರೋ ಹಳಿಗೆ ವಾಲಿದ ಕಾರಣ ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಕೆಲಕಾಲ ವ್ಯತ್ಯಯವಾಯಿತು. ಮಹಾತ್ಮ ಗಾಂಧಿ ರಸ್ತೆಯ ಮೆಟ್ರೋ ನಿಲ್ದಾಣ ಸಮೀಪ ಮರ ಹಳಿಗೆ ವಾಲಿದ ಕಾರಣ ಸಂಜೆ 4.50ರ ಸುಮಾರಿಗೆ 15 ನಿಮಿಷ ರೈಲು ಸಂಚಾರ ಸ್ಥಗಿತವಾಗಿತ್ತು. ನಮ್ಮ ಮೆಟ್ರೋ ಸಿಬ್ಬಂದಿ ಕೂಡಲೇ ಮರ ತೆರವುಗೊಳಿಸಿ ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದರು.

Whats_app_banner