HD Kumaraswamy: ಮೋದಿ ಬ್ರಹ್ಮಾಸ್ತ್ರ ಕರ್ನಾಟಕದಲ್ಲಿ ಕೆಲಸ ಮಾಡಲ್ಲ; 123 ಗುರಿ ಮುಟ್ಟುತ್ತೇವೆ ಎಂದ ಕುಮಾರಸ್ವಾಮಿ
ಕನ್ನಡ ಸುದ್ದಿ  /  ಕರ್ನಾಟಕ  /  Hd Kumaraswamy: ಮೋದಿ ಬ್ರಹ್ಮಾಸ್ತ್ರ ಕರ್ನಾಟಕದಲ್ಲಿ ಕೆಲಸ ಮಾಡಲ್ಲ; 123 ಗುರಿ ಮುಟ್ಟುತ್ತೇವೆ ಎಂದ ಕುಮಾರಸ್ವಾಮಿ

HD Kumaraswamy: ಮೋದಿ ಬ್ರಹ್ಮಾಸ್ತ್ರ ಕರ್ನಾಟಕದಲ್ಲಿ ಕೆಲಸ ಮಾಡಲ್ಲ; 123 ಗುರಿ ಮುಟ್ಟುತ್ತೇವೆ ಎಂದ ಕುಮಾರಸ್ವಾಮಿ

ಬೇರೆ ಪಕ್ಷಗಳಿಂದ 28 ನಾಯಕರು ಹೊಸದಾಗಿ ನಮ್ಮ ಪಕ್ಷ ಸೇರಿ ಅಭ್ಯರ್ಥಿಗಳಾಗಿದ್ದಾರೆ. ಈ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಮೊದಲ 93 ಅಭ್ಯರ್ಥಿಗಳ ಪಟ್ಟಿಯಲ್ಲಿ 90 ಕ್ಷೇತ್ರ ಗೆಲ್ಲುತ್ತೇವೆ. ಬಹುಮತದ ಸರ್ಕಾರ ಬರುತ್ತದೆ. 123 ಗುರಿ ಮುಟ್ಟುತ್ತೇವೆ ಎನ್ನುವ ನಂಬಿಕೆ ಇದೆ ಎಂದರು.

ಹೆಚ್‌ ಡಿ ಕುಮಾರಸ್ವಾಮಿ
ಹೆಚ್‌ ಡಿ ಕುಮಾರಸ್ವಾಮಿ (twitter)

ಬೆಂಗಳೂರು: ಪ್ರಧಾನಿ ಮೋದಿ (Narendra Modi) ಅವರು ಎಷ್ಟು ಸಲ ರಾಜ್ಯಕ್ಕೆ ಬಂದರೂ ಪ್ರಯೋಜನ ಇಲ್ಲ. ಬಿಜೆಪಿ (BJP) ಆಡಳಿತ ಎಂಥದ್ದು ಎನ್ನುವುದು ರಾಜ್ಯದ ಜನರಿಗೆ ಅರ್ಥವಾಗಿದೆ. ನರೇಂದ್ರ ಮೋದಿ ಅವರ ಬ್ರಹ್ಮಾಸ್ತ್ರಗಳು ಕರ್ನಾಟಕದಲ್ಲಿ ಕೆಲಸ ಮಾಡುವುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ (HD Kumaraswamy) ಟೀಕಿಸಿದ್ದಾರೆ.

ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದ ಮಾಜಿ ಶಾಸಕ ಪ್ರಸನ್ನ ಕುಮಾರ್ ಅವರನ್ನು ಬೆಂಗಳೂರಿನಲ್ಲಿ ಶುಕ್ರವಾರ(ಏಪ್ರಿಲ್‌ 21) ಸಂಜೆ ಜೆಡಿಎಸ್ ಪಕ್ಷಕ್ಕೆ ಬರಮಾಡಿಕೊಳ್ಳಲಾಯ್ತು. ಈ ವೇಳೆ ಮಾತನಾಡಿದ ಮಾಜಿ ಸಿಎಂ, ಬಿಜೆಪಿ ನಾಯಕರು ಮೋದಿ ಅವರ ಮುಖ ನೋಡಿ ಮತ ಹಾಕಿ ಎಂದು ಕೇಳುತ್ತಿದ್ದಾರೆ. ಹಾಗಾದರೆ ಇವರ ಸಾಧನೆ ಏನು? 'ನಮ್ಮ ಮುಖ ನೋಡಿ ಮತ ಹಾಕಿ' ಎಂದು ರಾಜ್ಯದ ಬಿಜೆಪಿ ನಾಯಕರು ಯಾಕೆ ಕೇಳುತ್ತಿಲ್ಲ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.

‘ಅಮಿತ್ ಶಾ ರೋಡ್ ಶೋ ರದ್ದಾಗಿರುವುದು ಜನರು ಬಾರದೆ’

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ದೇವನಹಳ್ಳಿ ರೋಡ್ ಶೋ ಮಳೆಯ ನೆಪದಿಂದ ರದ್ದಾಗಿದೆ. ಆಸಲಿ ವಿಷಯ ಅದಲ್ಲ, ಜನರೇ ರೋಡ್ ಶೋಗೆ ಬಂದಿಲ್ಲ. ಇವರು ಜನರಿಗೆ ಹಣ ಕೊಡಲು ಹೋದರೆ, 'ನೀವೇನು ನಮಗೆ ಹಣ ಕೊಡೋದು, ನಾವೇ ಕೊಡುತ್ತೇವೆ ತೆಗೆದುಕೊಳ್ಳಿ' ಎಂದು ಜನರು ತರಾಟೆಗೆ ತೆಗೆದುಕೊಂಡಿದ್ದಾರೆ. ಈ ಕಾರಣಕ್ಕೆ ಗೃಹ ಸಚಿವರ ರೋಡ್ ಶೋ ರದ್ದಾಗಿದೆ. ಹಳ್ಳಿಗಳಿಗೆ ಬಸ್ ಕಳಿಸಿದ್ದರೂ ಜನ ಬಂದಿಲ್ಲ. ಬಿಜೆಪಿಯ ಸ್ಥಿತಿ ಹೀಗಿದೆ ಎಂದು ಹೆಚ್‌ಡಿಕೆ ಟೀಕಿಸಿದರು.

ನಮಗೆ ಸ್ಪಷ್ಟ ಬಹುಮತ

ಗಾಂಧೀಜಿ ಮತ್ತು ಅಂಬೇಡ್ಕರ್ ಅವರ ಕನಸುಗಳನ್ನು ಪಂಚರತ್ನ ಯೋಜನೆಗಳು ನನಸು ಮಾಡುತ್ತವೆ. ಹೀಗಾಗಿ ಜೆಡಿಎಸ್ ಪರವಾಗಿ ಮತ ಪರಿವರ್ತನೆ ಆಗಲ್ಲ ಎನ್ನುವುದಕ್ಕೆ ಉತ್ತರ ಸಿಗಲಿದೆ. ಈ ಬಾರಿ ನಮಗೆ ಮತಗಳ ಪರಿವರ್ತನೆ ಆಗುತ್ತದೆ. ಪಂಚರತ್ನ ಯೋಜನೆಗಳ ಬಗ್ಗೆ ಜನತೆಗೆ ವಿಶ್ವಾಸ ಬಂದಿದೆ. ರಾಜ್ಯಕ್ಕೆ ಪ್ರಾದೇಶಿಕ ಪಕ್ಷದ ಅನಿವಾರ್ಯತೆ ಇದೆ. ಅದನ್ನು ಕೆಲವರು ಲಘುವಾಗಿ ನೋಡುತ್ತಿದ್ದಾರೆ. ಚುನಾವಣೆ ಫಲಿತಾಂಶ ಬಂದ ಮೇಲೆ ನಮ್ಮ ಪಕ್ಷದ ಶಕ್ತಿ ಏನೆಂಬುದು ಗೊತ್ತಾಗುತ್ತದೆ ಎಂದು ಅವರು ತಿಳಿಸಿದರು.

123 ಗುರಿ ಮುಟ್ಟುತ್ತೇವೆ

ಉತ್ತರ ಕರ್ನಾಟಕದಲ್ಲಿ 20ರಿಂದ 30ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ರಾಜ್ಯದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿಗಿಂತ ಹೆಚ್ಚು ಕ್ಷೇತ್ರಗಳಲ್ಲಿ ಗೆಲ್ಲುತ್ತೇವೆ. ಆ ವಿಶ್ವಾಸ ನಂಬಿಕೆಯಿಂದ ನಮ್ಮ ಪಕ್ಷಕ್ಕೆ ಹೆಚ್ಚು ನಾಯಕರು ಬರುತ್ತಿದ್ದಾರೆ. ಬೇರೆ ಪಕ್ಷಗಳಿಂದ 28 ನಾಯಕರು ಹೊಸದಾಗಿ ನಮ್ಮ ಪಕ್ಷ ಸೇರಿ ಅಭ್ಯರ್ಥಿಗಳಾಗಿದ್ದಾರೆ. ಈ ಎಲ್ಲ ಕ್ಷೇತ್ರಗಳನ್ನೂ ಗೆಲ್ಲುತ್ತೇವೆ. ಮೊದಲ 93 ಅಭ್ಯರ್ಥಿಗಳ ಪಟ್ಟಿಯಲ್ಲಿ 90 ಕ್ಷೇತ್ರ ಗೆಲ್ಲುತ್ತೇವೆ. ಬಹುಮತದ ಸರ್ಕಾರ ಬರುತ್ತದೆ. 123 ಗುರಿ ಮುಟ್ಟುತ್ತೇವೆ ಎನ್ನುವ ನಂಬಿಕೆ ಇದೆ ಎಂದರು.

ಶನಿವಾರದಿಂದ ಮೇ 8ರ ಸಂಜೆಯವರೆಗೆ ನಿರಂತರವಾಗಿ ಪ್ರವಾಸ ಮಾಡುತ್ತೇನೆ. ದಿನಕ್ಕೆ 8ರಿಂದ 10 ಕ್ಷೇತ್ರಗಳಿಗೆ ಹೋಗುತ್ತೇನೆ. ಮಾಜಿ ಪ್ರಧಾನಿಗಳಾದ ಹೆಚ್ ಡಿ ದೇವೇಗೌಡರು, ಪಕ್ಷದ ರಾಜ್ಯಾಧ್ಯಕ್ಷರಾದ ಸಿಎಂ ಇಬ್ರಾಹಿಂ ಅವರೂ ಪ್ರಚಾರಕ್ಕೆ ಹೋಗುತ್ತಾರೆ. 8ರಿಂದ 10 ವಿಧಾನಸಭೆ ಕ್ಷೇತ್ರಗಳನ್ನು ಬೆಂಗಳೂರಿನಲ್ಲಿಯೇ ಗೆಲ್ಲುತ್ತೇವೆ. ಬೆಳಗಾವಿಯಲ್ಲಿ ಕನಿಷ್ಠ 6 ಕ್ಷೇತ್ರ ಗೆಲ್ಲುತ್ತೇವೆ ಎಂದು ಕುಮಾರಸ್ವಾಮಿ ಹೇಳಿದರು.

ಸಿಎಂ ಬೊಮ್ಮಾಯಿಗೆ ತಿರುಗೇಟು

ಕಾಂಗ್ರೆಸ್ ಜತೆ ಜೆಡಿಎಸ್ ಒಳ ಒಪ್ಪಂದ ಮಾಡಿಕೊಂಡಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಹೇಳಿದ್ದಾರೆ. ಅದೇ ರೀತಿ ಬಿಜೆಪಿ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದೇವೆ ಎಂದು ಸಿದ್ದರಾಮಯ್ಯ ಅವರು ಅಪಪ್ರಚಾರ ಮಾಡುತ್ತಿದ್ದಾರೆ. ಯಾರು ಯಾರ ಜತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆ ಎಂಬುದು ಜನತೆಗೆ ಗೊತ್ತಿದೆ. ಬೊಮ್ಮಾಯಿ ಅವರು ಸ್ಪರ್ಧಿಸಿರುವ ಶಿಗ್ಗಾಂವಿಯಲ್ಲಿ ಒಳ್ಳೆಯ ಅಭ್ಯರ್ಥಿಯನ್ನೇ ಹಾಕಿದ್ದೇವೆ. ಕೇವಲ ರಾಜಕೀಯಕ್ಕಾಗಿ ನಮ್ಮ ಅಭ್ಯರ್ಥಿಗಳ ವಿರುದ್ಧ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಕಿಡಿ ಕಾರಿದರು.

ರಾಜ್ಯ ಚುನಾವಣಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್‌ ಮಾಡಿ

Whats_app_banner