Munirathna: ಸಿವಿಲ್ ಕಾಂಟ್ರ್ಯಾಕ್ಟರ್, ಸಿನಿಮಾ ಮತ್ತು ರಾಜಕೀಯ; ಬಂಧನದಲ್ಲಿರುವ ಮುನಿರತ್ನಗೆ ವಿವಾದಗಳು ಹೊಸದೇನಲ್ಲ!
ಕನ್ನಡ ಸುದ್ದಿ  /  ಕರ್ನಾಟಕ  /  Munirathna: ಸಿವಿಲ್ ಕಾಂಟ್ರ್ಯಾಕ್ಟರ್, ಸಿನಿಮಾ ಮತ್ತು ರಾಜಕೀಯ; ಬಂಧನದಲ್ಲಿರುವ ಮುನಿರತ್ನಗೆ ವಿವಾದಗಳು ಹೊಸದೇನಲ್ಲ!

Munirathna: ಸಿವಿಲ್ ಕಾಂಟ್ರ್ಯಾಕ್ಟರ್, ಸಿನಿಮಾ ಮತ್ತು ರಾಜಕೀಯ; ಬಂಧನದಲ್ಲಿರುವ ಮುನಿರತ್ನಗೆ ವಿವಾದಗಳು ಹೊಸದೇನಲ್ಲ!

Munirathna Controversy: ಹಲವು ಪ್ರಕರಣಗಳಲ್ಲಿ ಬಿಜೆಪಿ ಶಾಸಕ ಮುನಿರತ್ನ ಬಂಧನದಲ್ಲಿದ್ದಾರೆ. ಆದರೆ ಅವರು ಒಂದರ ಮೇಲೊಂದು ವಿವಾದಕ್ಕೆ ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ತಾನು ರಾಜಕೀಯಕ್ಕೆ ಪ್ರವೇಶಿಸಿದ ದಿನದಿಂದ ಇಲ್ಲಿಯವರೆಗೂ ಒಂದಲ್ಲ, ಒಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಮುನಿರತ್ನ ಬೆಳೆದು ಬಂದ ವಿವಾದಗಳ ಹಾದಿ ಹೇಗಿದೆ ನೋಡಿ.

ಬಿಜೆಪಿ ಶಾಸಕ ಮುನಿರತ್ನ.
ಬಿಜೆಪಿ ಶಾಸಕ ಮುನಿರತ್ನ.

ಬೆಂಗಳೂರು: ರಾಜರಾಜೇಶ್ವರಿ ನಗರದ ಬಿಜೆಪಿ ಶಾಸಕ ಮುನಿರತ್ನ (Munirathna) ಪ್ರಸ್ತುತ ಜೈಲುವಾಸ ಅನುಭವಿಸುತ್ತಿದ್ದಾರೆ. ಕೆಲವೇ ದಿನಗಳಲ್ಲಿ ಅವರ ವಿರುದ್ಧ ದಾಖಲಾಗಿದ್ದು ಒಂದೆರಡಲ್ಲ ಹಲವು ಪ್ರಕರಣಗಳು. ಬಿಬಿಎಂಪಿ ಗುತ್ತಿಗೆದಾರ ಚೆಲುವರಾಜು ಎನ್ನುವವರು ಮುನಿರತ್ನ ವಿರುದ್ಧ ವೈಯಾಲಿಕಾವಲ್ ಪೊಲೀಸ್ ಠಾಣೆಯಲ್ಲಿ ಜಾತಿನಿಂದನೆ ಮತ್ತು ಜೀವ ಬೆದರಿಕೆ ಪ್ರಕರಣಗಳನ್ನು ದಾಖಲಿಸಿದ್ದರೆ, ಬಿಜೆಪಿ ಕಾರ್ಯಕರ್ತೆಯೊಬ್ಬರು ರಾಮನಗರದ ಕಗ್ಗಲೀಪುರದ ಪೊಲೀಸ್ ಠಾಣೆಯಲ್ಲಿ ಅತ್ಯಾಚಾರ ಪ್ರಕರಣ ದಾಖಲಿಸಿದ್ದಾರೆ. ಮೊದಲ ಪ್ರಕರಣದಲ್ಲಿ ಜಾಮೀನು ಪಡೆದು ಇನ್ನೇನು ಹೊರಗಡೆ ಹೊರಬೇಕು ಎನ್ನುವಷ್ಟರಲ್ಲಿ ಅತ್ಯಾಚಾರ ಪ್ರಕರಣದಲ್ಲಿ ಮತ್ತೆ ಜೈಲುಪಾಲಾದರು. ಮುನಿರತ್ನ ಒಂದರ ಮೇಲೊಂದು ವಿವಾದಕ್ಕೆ (Munirathna Controversy) ಗುರಿಯಾಗುತ್ತಿರುವುದು ಇದೇ ಮೊದಲಲ್ಲ. ತಾನು ರಾಜಕೀಯಕ್ಕೆ ಪ್ರವೇಶಿಸಿದ ದಿನದಿಂದ ಇಲ್ಲಿಯವರೆಗೂ ಒಂದಲ್ಲ, ಒಂದು ವಿವಾದಕ್ಕೆ ಗುರಿಯಾಗುತ್ತಿದ್ದಾರೆ. ಮುನಿರತ್ನ ಬೆಳೆದು ಬಂದ ವಿವಾದಗಳ ಹಾದಿ ಹೇಗಿದೆ ನೋಡಿ.

ಮುನಿರತ್ನ ಸಾರ್ವಜನಿಕ ಜೀವನ ಬರೀ ವಿವಾದಗಳಿಂದಲೇ ಕೂಡಿದೆ. ಬಿಬಿಎಂಪಿ ಸಿವಿಲ್ ಗುತ್ತಿಗೆದಾರರಾಗಿದ್ದ ಮುನಿರತ್ನ, 2010ರಲ್ಲಿ ಮೊದಲ ಬಾರಿಗೆ ಯಶವಂತಪುರ ವಾರ್ಡ್ ನಂ. 37 ರಿಂದ ಕಾರ್ಪೊರೇಟರ್ ಆಗಿ ಆಯ್ಕೆಯಾದರು. ಆದರೆ ಅದೇ ವರ್ಷ ಮುನಿರತ್ನ ವಿರುದ್ಧ ಪ್ರಕರಣವೊಂದು ದಾಖಲಾಯಿತು. 17 ವರ್ಷದ ವಿದ್ಯಾರ್ಥಿನಿಯೊಬ್ಬಳ ಸಾವಿಗೆ ಕಾರಣವಾದ ಕಾಂಪೌಂಡ್ ಗೋಡೆಯ ಕುಸಿತಕ್ಕೆ ಸಂಬಂಧಿಸಿದಂತೆ ಪ್ರಕರಣ ದಾಖಲಾಯಿತು. ಇದಾಗಿ ಮೂರೇ ವರ್ಷಗಳ ನಂತರ ಕಾಂಗ್ರೆಸ್ ಟಿಕೆಟ್‌ ಪಡೆದು ವಿಧಾನಸಭಾ ಚುನಾವಣೆಗೆ ಪದಾರ್ಪಣೆ ಮಾಡಿ ಗೆದ್ದರು. ಆದರೆ ಕರ್ತವ್ಯದಲ್ಲಿದ್ದ ಚುನಾವಣಾ ಅಧಿಕಾರಿಗೆ 'ಬೆದರಿಕೆ' ಹಾಕಿದ ಆರೋಪದಡಿ ಅವರ ವಿರುದ್ಧ ಮತ್ತೊಂದು ಪ್ರಕರಣ ದಾಖಲಾಯಿತು. ಈ ಚುನಾವಣೆಯಲ್ಲಿ 37ರಷ್ಟು ಮತ ಪಡೆದು ಶಾಸಕರಾದರು. 2018ರ ವಿಧಾನಸಭೆಯಲ್ಲಿ ಮತ್ತೊಮ್ಮೆ ಗೆದ್ದು ಬೀಗಿದರು. ಆದರೆ ಈ ಬಾರಿ ಕಳೆದ ಬಾರಿಗಿಂತ ಮತಗಳ ಸಂಖ್ಯೆ ಹೆಚ್ಚಿಸಿಕೊಂಡಿದ್ದರು. 42 ರಷ್ಟು ಮತ ಪಡೆದರು.

ಮುನಿರತ್ನ ಅವರ ಸಹೋದರ, ದಿವಂಗತ ಎಸ್ ಕೃಷ್ಣಮೂರ್ತಿ ಅಲಿಯಾಸ್ ಕೊರಂಗು ಕೃಷ್ಣ ಅವರು 1980 ಮತ್ತು 90 ರ ದಶಕದಲ್ಲಿ ಬೆಂಗಳೂರಿನಲ್ಲಿ ರೌಡಿ ಶೀಟರ್ ಆಗಿದ್ದರು. ತನ್ನ ಸಹೋದರನ ರೌಡಿಶೀಟರ್​ ಬ್ಯಾಕ್​​ಗ್ರೌಂಡ್ ಹಿನ್ನೆಲೆ ಹೊರತಾಗಿಯೂ ಮುನಿರತ್ನ ರಾಜಕೀಯವಾಗಿ ಬಹುಬೇಗನೇ ಉನ್ನತ ಸ್ಥಾನಕ್ಕೇರಿದರು. ರಾಜಕೀಯ ಮಾತ್ರವಲ್ಲ, ಅವರು ಕನ್ನಡ ಚಿತ್ರ ರಂಗದಲ್ಲೂ ಯಶಸ್ಸನ್ನು ತನ್ನದಾಗಿಸಿಕೊಂಡರು. ರಕ್ತ ಕಣ್ಣೀರು, ಅನಾಥರು, ಕಟಾರಿ ವೀರ ಸುರಸುಂದರಾಂಗಿ, ಕುರುಕ್ಷೇತ್ರದಂತಹ ಸೂಪರ್ ಹಿಟ್​ ಸಿನಿಮಾಗಳಿಗೆ ಬಂಡವಾಳ ಹೂಡಿದ್ದಾರೆ. ಚಿತ್ರಗಳ ನಿರ್ಮಾಣದ ಹೊರತಾಗಿ ಮುನಿರತ್ನ ಕ್ಷೇತ್ರದ ಜನರಿಗೆ ಹೆಚ್ಚಾಗಿ ಚಿರಪರಿಚಿತರಾಗಿದ್ದರು. ಮೇ 2017ರಲ್ಲಿ ಕಾರ್ಪೊರೇಟರ್ ಮಂಜುಳಾ ನಾರಾಯಣಸ್ವಾಮಿ ಮೇಲೆ ಮುನಿರತ್ನ ಬೆಂಬಲಿಗರು ಅಮಾನುಷವಾಗಿ ಹಲ್ಲೆ ನಡೆಸಿದ್ದರು. ಇದು ದೊಡ್ಡ ಸುದ್ದಿಯಾಗಿತ್ತು. ಅಂದು ಮಂಜುಳಾ, ಮತ್ತಿಬ್ಬರು ಮಹಿಳಾ ಕಾರ್ಪೊರೇಟರ್ಸ್ ಸೇರಿ ಶಾಸಕರ ವಿರುದ್ಧ ಪ್ರತಿಭಟನೆ ನಡೆಸಿದ್ದರು.

ಎರಡು ಹಗರಣಗಳು, ಬಿಜೆಪಿ ಸೇರಿದ್ರು

ಅಲ್ಲದೆ, 2018ರಲ್ಲಿ ಗೆದ್ದಿದ್ದರೂ ಚುನಾವಣೆಗೂ ಮುನ್ನ ಭಾರಿ ದೊಡ್ಡ ಹಗರಣಗಳಲ್ಲಿ ಸಿಲುಕಿದ್ದರು. ಆ ವರ್ಷ ಮಾರ್ಚ್‌ನಲ್ಲಿ ಅವರ ವಿರುದ್ಧದ 1,500 ಕೋಟಿ ರೂಪಾಯಿ ನಕಲಿ ಬಿಲ್ ಹಗರಣದಲ್ಲಿ ಸಿಐಡಿಯಿಂದ ಚಾರ್ಜ್ ಶೀಟ್ ದಾಖಲಾಗಿತ್ತು. ವಿಧಾನಸಭಾ ಚುನಾವಣೆಗೆ ಕೆಲವು ದಿನಗಳಿಗೂ ಮುನ್ನ ಮುನಿರತ್ನಗೆ ಲಿಂಕ್ ಹೊಂದಿರುವ ಅಪಾರ್ಟ್​ಮೆಂಟ್‌ನಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದವು. ಈ ಕಾರಣದಿಂದ ಕ್ಷೇತ್ರದ ಚುನಾವಣೆ ಮುಂದೂಡಲಾಗಿತ್ತು. ಆದರೆ ಈ ವಿವಾದಗಳ ನಂತರವೂ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್​ ಪರ 1,08,065 ಮತಗಳಿಂದ ಗೆದ್ದಿದ್ದರು. ಆದರೆ, ಬದಲಾದ ರಾಜಕೀಯ ಬೆಳವಣಿಗೆಗಳಿಂದ 2019ರಲ್ಲಿ ಮುನಿರತ್ನ ಅವರು ಕಾಂಗ್ರೆಸ್ ತೊರೆದು ಬಿಜೆಪಿ ಸೇರಿದರು. ಬಳಿಕ 2020ರ ಉಪಚುನಾವಣೆಯಲ್ಲಿ ಬಿಜೆಪಿಯ ಮುನಿರತ್ನ ಅವರು ಕಾಂಗ್ರೆಸ್‌ನ ಕುಸುಮಾ ವಿರುದ್ಧ ಭರ್ಜರಿ ಗೆಲುವು ಸಾಧಿಸಿ ತೋಟಗಾರಿಕಾ ಸಚಿವರಾದರು. ಇಲ್ಲಿಂದ ಕಾಂಗ್ರೆಸ್​​ನ ಡಿಕೆ ಸಹೋದರರಾದ ಶಿವಕುಮಾರ್ ಮತ್ತು ಸುರೇಶ್ ಅವರ ಮತ್ತು ಮುನಿರತ್ನ ನಡುವೆ ಪೈಪೋಟಿಯನ್ನು ಪ್ರಾರಂಭಿಸಿತು.

2019ರ ಜುಲೈನಲ್ಲಿ ದೊಡ್ಡ ಬಜೆಟ್​ನ ದರ್ಶನ್ ಅಭಿನಯದ ಕುರುಕ್ಷೇತ್ರ ಬಿಡುಗಡೆಗೆ ಸಜ್ಜಾಗುತ್ತಿರುವ ವೇಳೆ ಆ ಚಿತ್ರದ ನಿರ್ಮಾಪಕರೂ ಆಗಿದ್ದ ಮುನಿರತ್ನ, ಹೆಚ್​​ಡಿ ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರ್ಕಾರದ ಪತನಕ್ಕೆ ಕಾರಣರಾಗಿದ್ದರು. ಪಕ್ಷಗಳನ್ನು ಬದಲಾಯಿಸಿದ ಮುನಿರತ್ನ ಅವರು ಸೈದ್ಧಾಂತಿಕ ಸ್ಥಿರತೆಯ ಅಗತ್ಯವನ್ನು ವಿರಳವಾಗಿ ಕಂಡುಕೊಂಡಿದ್ದಾರೆ. ಕಾಂಗ್ರೆಸ್‌ನಲ್ಲಿದ್ದಾಗ ಪ್ರಧಾನಿ ನರೇಂದ್ರ ಮೋದಿ ಅವರನ್ನು ತೀವ್ರವಾಗಿ ಟೀಕಿಸುತ್ತಿದ್ದ ಮುನಿರತ್ನ, ಶೀಘ್ರದಲ್ಲೇ ಬಿಜೆಪಿಯ ರಾಜಕೀಯ ವಾಕ್ಚಾತುರ್ಯವನ್ನು ಅಳವಡಿಸಿಕೊಂಡರು. 2023ರ ಚುನಾವಣೆಗೆ ಮುನ್ನ ಮುನಿರತ್ನ ಅವರು ಡಿಕೆ ಬ್ರದರ್ಸ್ ವಿರುದ್ಧ ತೊಡೆತಟ್ಟಿ ನಿಂತರು. ಪ್ರತಿಸ್ಪರ್ಧಿ ಕುಸುಮಾ ಆಗಿದ್ದರೂ ಪೈಪೋಟಿ ಇದ್ದದ್ದು ಡಿಕೆ ಬ್ರದರ್ಸ್ ಮತ್ತು ಮುನಿರತ್ನ ನಡುವೆ. ಈ ಹೋರಾಟದಲ್ಲಿ ಮುನಿರತ್ನ, ಕುಸುಮಾ ಅವರನ್ನು ಕೇವಲ 10,000 ಮತಗಳಿಂದ ಸೋಲಿಸಿದರು. ಲೋಕಸಭೆ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಬಿಜೆಪಿ ಪರ ಸಿಎನ್​ ಮಂಜುನಾಥ್ ಕಣಕ್ಕಿಳಿದಿದ್ದರೂ ಮತ್ತೆ ಪೈಪೋಟಿ ಏರ್ಪಟ್ಟಿದ್ದು, ಸುರೇಶ್ ಮತ್ತು ಮುನಿರತ್ನ ನಡುವೆ. ಒಂದೂವರೆ ದಶಕದ ರಾಜಕೀಯ ಜೀವನದಲ್ಲಿ ಹಲವು ವಿವಾದ ಎದುರಿಸಿರುವ ಮುನಿರತ್ನ ಪ್ರಸ್ತುತ ಜೈಲು ಸೇರಿದ್ದಾರೆ. ಇದು ಮುಂದಿನ ರಾಜಕೀಯ ಬೆಳವಣಿಗೆಗೆ ಯಾವ ರೀತಿಯ ಪರಿಣಾಮ ಬೀರಲಿದೆ ಎಂಬುದನ್ನು ಕಾದುನೋಡೋಣ.

Whats_app_banner